Friday 16 March 2012








ವನಸುಮದೊಲೆನ್ನ ಜೀವನವು


ವನಸುಮದೊಲೆನ್ನ ಜೀವನವು ವಿಕಸಿಸುವಂತೆ
ಮನವನನು ಗೊಳಿಸು ಗುರುವೇ ಹೇ ದೇವ!

ಜಗಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು ಮೌನದಿಂ ಬಿರುದು
ನಿಜ ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನ್ನು ತೊರೆದು
ಕೃತಕೃತ್ಯತೆಯ ನೆಸೆವಂತೆ

ಉಪಕಾರಿ ನಾನು ಎನ್ನುಪಕೃತಿಯು
ಜಗಕೆಂಬ, ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ ಸುಫಲ
ಸುಮಭರಿತ ಪಾದಪದಂತೆ
ನೈಜಮಾದೊಳ್ಪಿನಿಂ ಬಾಲ್ವವೊಳು

ಎಂತಹ  ಅದ್ಭುತ ಭಾವ . ಈ ಪದ್ಯ ನನ್ನನ್ನು  'ನನ್ನ' ಆಂತರ್ಯಕ್ಕೆ ತಳ್ಳಿದ ಪದ್ಯ. ಇದರ ಅರ್ಥ ವ್ಯಾಪ್ತಿ ವೇದಾಂತಕ್ಕೆ ಕೊಂಡು ಒಯ್ಯುತ್ತದೆ.

ಕಾಡಿನಲ್ಲಿ ಅರಳುವ ಹೂವಿನಂತೆ ಎನ್ನ ಜೀವನವು ಅರಳುವಂತೆ ನಾ ಬೆಳೆಯಲು ಎನ್ನ ಮನವನ್ನು ಸಿದ್ಧಗೊಳಿಸು ಗುರುವೇ ಹೇ ದೇವ ಎಂದು ಬೇಡುತ್ತಾರೆ. ಏಕೆ ಕಾಡಿನಲ್ಲಿ ಅರಳುವ ಹೂಗಳು ಎಂದರೆ,  ಕಾಡಿನಲ್ಲಿ ಅರಳುವ ಹೂ ಯಾರಿಗೂ ಕಾಣದಿದ್ದರೂ ತನ್ನ ಸುಗಂಧವನ್ನು ವನವೆಲ್ಲ ಪಸರಿಸಿ ಆಹ್ಲಾದವನ್ನುಂಟುಮಾಡುತ್ತದೆ. ಅಂದರೆ ನಾನು ಯಾರ ಕಣ್ಣಿಗೂ ಬೀಳದೆ ಇದ್ದು ನನ್ನ ಕಾರ್ಯ ಕ್ಷಮತೆಯ ಫಲ ಎಲ್ಲರಿಗೂ ಲಭಿಸಲಿ ಎನ್ನುವ ಸದಾಶಯವೇ ಈ ಸಾಲುಗಳ ಅರ್ಥ.  ಹಾಗೆ "ನಾನಿದ್ದೇನೆ ಎಂಬುದು ಗೊತ್ತಾಗದಿದ್ದರೂ ಸಹ ನನ್ನ ಕೈಂಕರ್ಯದ ಫಲ ಎಲ್ಲರಿಗೂ ಸಿಗುವಂತೆ ಕೆಲಸ ಮಾಡುವಂತೆ ನನ್ನ ಮನಸನ್ನು ಸಿದ್ಧಗೊಳಿಸು" ಎಂದು ಆ ಪರಮಾತ್ಮನಲ್ಲಿ ಬೇಡಿಕೆ.

ಗುರುವೇ ಹೇ ದೇವ  ಎನ್ನುತ್ತಾರೆ. ಹೌದು ಗುರು ಬ್ರಹ್ಮ ಎಂದಮೇಲೆ ನಮ್ಮ ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿಗೆ ಆ ದೇವರ ಸ್ಥಾನ. ದ್ವಿಜನನ್ನಾಗಿ ಮಾಡುವವನೇ ಆ ಗುರು. ಅದಕ್ಕೆ ನಮ್ಮ್ಮಲ್ಲಿ " ಲಕ್ಷ್ಮೀನಾಥ ಸಮಾರಭ್ಯ ನಾಥಯಾಮುನ ಮಧ್ಯಮಾಂ ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಂ"  ಎನ್ನುತ್ತಾರೆ.  ನಾವು ನಮ್ಮ ಗುರುಗಳ, ಗುರುಗಳ, ಗುರುಗಳ ಜಾಡನ್ನು ಹಿಡಿದು ಹೋದರೆ ನಮಗೆ ಆದಿಯಲ್ಲಿ ಸಿಗುವುದೇ ಆ ಶ್ರೀಮನ್ನಾರಾಯಣ ಎನ್ನುವುದು ಇದರ ಅರ್ಥ. ಹಾಗಾಗಿ ಗುರುವೇ ಹೇ ದೇವ, ದೈವವೇ ಗುರುವು ಮತ್ತು ಗುರುವೇ ದೈವವು.

ಈ  ಜಗಕ್ಕೆ  ಸಂತೋಷವನ್ನು  ಕೊಡುವ  ಅಥವಾ ಉಪಕಾರವನ್ನು ಮಾಡುವ ಘನತೆವೆತ್ತವನು ನಾನು ಎಂದು ನಾನು ನೆನೆಯದೆ, ಮತ್ತು ನಾನು ಮಾಡಿದ ಕೆಲಸದಿಂದ ನನ್ನನ್ನು ಜಗದ ಜನರೆಲ್ಲಾ ಹೊಗಳಬೇಕು ಎಂದು ಆಶಿಸದೆ ಕಾಡಿನಲ್ಲಿ  ಬೆಳೆದು ಅರಳಿದ, ಮಲ್ಲಿಗೆ ಹೂ ಹೇಗೆ ತಾನು ಎಲೆ ಹಿಂದೆ ನಿಂತಿದ್ದರೂ, ಯಾರ ಕಣ್ಣಿಗೂ ಕಾಣದೆ ಇದ್ದರೂ ತನ್ನ  ಅರಳುವಿಕೆಯಿಂದ ಪರಿಮಳವನ್ನು ಹೇಗೆ ಕಾಡಿನಲೆಲ್ಲಾ ಪಸರಿಸಿದರೂ ಅಭಿಮಾನ ಅಹಂಕಾರಪಡದೆ ತನ್ನ ಜೀವನ್ನು ಸಾರ್ಥಕ್ಯಗೊಳಿಸುತ್ತದೋ, ಹಾಗೆ ನನ್ನ ಜೀವನವೂ ಅರಳಲೆಂದು ಮಾನ್ಯ  ಡಿ.ವಿ .ಜಿ ಯವರು  ಆ 'ಗುರು' ರೂಪದ ದೇವನನ್ನುಮತ್ತು 'ದೇವ' ರೂಪದ ಗುರುವನ್ನು  ಬೇಡುತ್ತಾರೆ. ಇಂತಹ ಅದ್ಭುತವಾದ ಸ್ವಾರ್ಥರಹಿತವಾದ, ಲೋಕೋಪಯೋಗಿ ಬೇಡಿಕೆಯನ್ನು ಅಂತಹ ಮಹಿಮಾನ್ವಿತರು ಮಾತ್ರ ಮಾಡಲು ಸಾಧ್ಯ, ಅಲ್ಲವೆ?

ನಾನು ಉಪಕಾರಿ, ನಾನು ಎಲ್ಲರಿಗೂ ಉಪಕಾರವನ್ನು ಮಾಡುವವನು, ನಾ ಮಾಡುವ ಉಪಕಾರವೇ ಈ ಜಗಕ್ಕೆ ಎಂದು
"ಸೋಮನಹಳ್ಳಿಯ ಮುದುಕಿಯ ತರಹ" ಅತಿ ಬುದ್ಧಿಯನ್ನು ಪ್ರದರ್ಶಿಸದೆ, ಜಂಬವನ್ನು ತೋರದೆ,  ಅಂಥಹ ಭಾವಗಳನ್ನೆಲ್ಲ ಮನಸ್ಸಿನಿಂದ ಅಳಿಸಿ, ಪಕ್ಷಿ, ಕ್ರಿಮಿ ಕೀಟ, ಹಾವು ಹುಳ ಹುಪ್ಪಟೆ, ಹೀಗೆ ಎಲ್ಲರಿಗೂ ಆಶ್ರಯವನ್ನು ನೀಡುವ,  ಮತ್ತು  ಸುಗಂಧಭರಿತ ಹೂಗಳು, ಸವಿಯಾದ ಹಣ್ಣುಗಳು, ತಾನು ಬಿಸಿಲಲ್ಲಿ ಸುಡುತ್ತಿದ್ದರೂ ತನ್ನಾಶ್ರಯಕ್ಕೆ ಬಂದವರಿಗೆ ತಂಪಾದ ನೆರಳನ್ನು ಕೊಡುವಂತಹ ಮರವು, ಎಂದಾದರೂ ತಾನೇ ಇದನ್ನು ಕೊಟ್ಟಿದ್ದೇನೆ  ಎಂದು ಹೇಳುತ್ತದೆಯೇ ಎಂದು ಒಂದು ಉಪಮೆಯನ್ನು ಕೊಟ್ಟು, ನಾವು ಅಹಂಕಾರವನ್ನು ತೊರೆದು, ಎಲ್ಲರೊಳಗೆ ಒಂದಾಗಿ ಎಲೆ  ಮರೆಯ ಕಾಯಿಯಂತೆ, ತಾ ಸುಟ್ಟು, ಲೋಕವ ಬೆಳಗಿಸುವ ಸೂರ್ಯನಂತೆ, ಅಥವಾ ತಾ ಉರಿದು ಮನೆಯನ್ನು ಬೆಳಗುವ   ದೀಪದ ಸೊಡರಿನಂತೆ ಬಾಳಲು ಬೇಕಾದ ಮನಸ್ತತ್ವವನ್ನು ನನಗೆ ನೀಡು ಪ್ರಭುವೇ, ಹೇ ದೇವ ಹೇ ಗುರುವೇ ಎಂದು ಮನವಿ ಮಾಡುತ್ತಾರೆ ಶ್ರೀ ಗುಂಡಪ್ಪನವರು.

ಎಂತಹ ಉದಾತ್ತ ಭಾವನೆ. ಇಂದಿನ ಸಮಾಜದಲ್ಲಿ, ಬೇಕಾದಷ್ಟು ಅವ್ಯವಹಾರಗಳನ್ನು , ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಮಾಡುತ್ತಾ, ನೂರರಲ್ಲಿ ಹತ್ತು ವ್ಯಯ ಮಾಡಿ ತೊಂಬತ್ತನ್ನು ಸ್ವಾಹಾ ಮಾಡುವ ನಮ್ಮ ನಾಯಕರ ಅಟ್ಟಹಾಸವನ್ನು ನೋಡಿ. ಎಲ್ಲೆಂದರಲ್ಲಿ ಅವರ ನಾಮ ಪಲಕಗಳು. ಸರ್ಕಾರದ ಕರ್ಚಿನಿಂದ ಮಾಡಿಸಿದ ಪ್ರತಿಯೊಂದು ಕೆಲಸದಲ್ಲೂ, ಏನೋ ತಾವೇ ತಮ್ಮ ಸ್ವಂತ ಸಂಪಾದನೆಯ ಹಣದಿಂದ ಇದನ್ನು ಮಾಡಿಸಿದ್ದೇವೆ ಎನ್ನುವ ರೀತಿಯಲ್ಲಿ, ತಮ್ಮ  ಹೆಸರನ್ನು ಗ್ರಾನೈಟ್ ಕಲ್ಲಿನ ಮೇಲೆ ಶಿಲಾ ಶಾಸನವನ್ನು  ಕೆತ್ತಿಸಿಕೊಳ್ಳುವ ನಾಯಕರುಗಳಿಗೆ ಈ ಪದ್ಯದ ಭಾವ ಅರ್ಥವಾದರೆ ನಾಚಿಕೆಯಿಂದ ಭೂಮಿಯ ಒಳಗೆ ತಮ್ಮ ಮುಖ ತೂರಿಸಿ, ಸಾಯಬೇಕು. ಆದರೆ ಇವರಿಗೆ "ನಾಚಿಕೆ /ಮಾನ /ಮರ್ಯಾದೆ "  ಯಾವುದೂ ಇಲ್ಲವಲ್ಲ. ಕನಕಪುರದ ಕರಿಯಪ್ಪನಂಥಾ ಒಂದು ವ್ಯಕ್ತಿಯನ್ನೂ ಅವರಾದಮೇಲೆ ನಾವು ನೋಡಲೇ ಇಲ್ಲವಲ್ಲ!!!.

ವಾಚಕರೆ ಭ್ರಷ್ಟ ಮನಸ್ಸು ಏನಿದ್ದರೂ ವ್ಯಥೆ ಪಡುತ್ತಾ ಇರುತ್ತದೆ. ಅಹಂಕಾರ ಅದನ್ನು ಮುಚ್ಚಿಬಿಡುತ್ತದೆ. ಸತ್ಯದಿಂದ ನಡೆದ ಮನಸ್ಸು, ನಿಸ್ವ್ವಾರ್ಥ ಸೇವೆಮಾಡಿದ ಮನಸ್ಸು ನಿರ್ಮಲವಾಗಿ ಆನಂದವಾಗಿ ಇರುತ್ತೆ. ಈ ಪದ್ಯ ಓದಿ ನಮಗೇನು ಬೇಕೋ ಅದನ್ನು ನಾವು ನಿರ್ಧರಿಸಬಹುದು.

 ರವಿ ತಿರುಮಲೈ

4 comments:

  1. ಇಲ್ಲಿ ನಾನು ಗಮನಿಸಿದ್ದು ಮಲ್ಲಿಗೆಯ ಅರಳುವಿಕೆ ಮತ್ತು ಅದರ ಸುಗಂಧ ಪಸರಿಸುವಿಕೆಯಲ್ಲಿನ ಕ್ಲಿಷ್ಟತೆ! ಯಾಕೆಂದರೆ ನಮ್ಮಂತ ಎಷ್ಟೋ ಕಾಡ ಹೂಗಳು ದೇವರ ಮುಡಿ ಏರುವುದೇ ಇಲ್ಲ... ವೇದಾಂತ ಮತ್ತು ಅಲೌಕಿಕ ಪ್ರಭೆ ಹೊಳೆಹೊಳೆವ ಪದ್ಯ...

    ಗುರುವನ್ನು ನೆನೆಯದೇ ಬದುಕನ್ನು ನಡೆಸಿದರೆ ಅದಕಿಂತ ದ್ರೋಹ ಉಂಟೆ? ಗುರುವಿನ ಗುಲಾಮನಾಗುವ ತನಕ...

    ಕವನದ ವಸ್ತು ವೈಶಿಷ್ಟುತೆ ಇರುವುದು ಅದರ ವಿಶಾಲ ರೆಂಬೆ ಕೊಂಬೆಗಳಲ್ಲಿ. ಅರ್ಥ ವ್ಯಾಪ್ತಿಯಲ್ಲಿ ಅನನ್ಯತೆ ಇಲ್ಲಿನ ವೈಶಿಷ್ಟ್ಯ. ವಿಡಂಬನೆ ಮತ್ತು ಬುದ್ದಿ ಹೇಳುವ ಪರಿ ಮೆಚ್ಚುಗೆಯಾಯಿತು.

    ReplyDelete
  2. ಡಿ ವಿ ಜಿ ದಾರ್ಶನಿಕ ಕವಿ.. ಒಪ್ಪಬೇಕು ಅಷ್ಟೆ.

    ವಿವರಣೆ ಚೆನ್ನಾಗಿದೆ ರವಿ ಸರ್.

    ReplyDelete
  3. The blatancy, with which the rudimentary truth forbears life's purpose, us brought out immensely and intently . I enjoy singing this poem in Atlanta raaga, urge, surge and edge of thoughts are transported effectively ...

    ReplyDelete
  4. ನಮ್ಮ ಮನಸ್ಸನ್ನು ಸರಳತೆಗೆ ಅಣಿಗೊಳಿಸಿತು.

    ReplyDelete