Wednesday 21 March 2012

ಜೀವನ ಪಯಣ



ಹುಟ್ಟು ಸಾವುಗಳ ನಡುವೆ 
ನನ್ನದೂ ಒಂದು ಬಾಳುವೆ. 
ರೂಪ ಮಾತ್ರ ಬೇರೆ 
ಸ್ವ-ರೂಪಮಾತ್ರ ಅದುವೇ.

ಐವತ್ತೇಳು ವಸಂತಗಳು
ಇಪ್ಪತು ಸಾವಿರ
ಎಂಟುನೂರೈದು ದಿನಗಳು
ಕೂಡಿದ್ದು ಕಳೆದಿದ್ದು
ಗುಣಿಸಿ ಬಾಗಿಸಿದ್ದು
ನಂತರ ಉಳಿದಿದ್ದು
ಏನೋ ಲೆಕ್ಕಕ್ಕಳವದ್ದು

ಕಾಯ ಪ್ರೌಢಿಮೆ ಬಂದರೂ
ಭಾವ ಪ್ರೌಢಿಮೆ ಸಿಗದಿದ್ದರೂ
"ಅಹಂ"ಕಾರಕ್ಕೆ ಕೊರೆಯಿರದಿದ್ದರೂ
ಗುರಿ ಅರಿಯದಿದ್ದರೂ, ಬೇಕೆಂದರೂ
ಬೇಡವೆಂದರೂ ನಡೆದಿದೆ ಬಾಳು.

ಎನ್ನ ಗುಟ್ಟುಗಳೆಲ್ಲ ಮನದಲ್ಲೇ ತಂಗಿಹವು
ಅನುಭವಿಸಿದ ನೋವೆಲ್ಲ ಅಡಿಯಲ್ಲಿ ಇಂಗಿಹುದು
ಗಾಯ ಗೋಳಾಟವೆಲ್ಲ ಒಣಮಾಗಿ ಹೋಗಿಹುದು
ಹಿಂತಿರುಗಿ ನೋಡಿದರೆ ಗತವೆಲ್ಲ ಕಾಣುವುದು

ಕಂಡ ಪ್ರೀತಿ ಪ್ರೇಮಕ್ಕೇನೂ ಕೊರತೆ ಇಲ್ಲ.
ಮೋಸ ಹೋದ ದಿನಗಳ ನಾ ಮರೆತಿಲ್ಲ.
ಒದಗಿದವರ ಒತ್ತಾಸೆ ನೆನೆಯದಾ ದಿನವಿಲ್ಲ .
ಒಟ್ಟುಗೂಡಿಸಿದ ಸ್ನೇಹಿತರ ಲೆಕ್ಕವೆನಗಿಲ್ಲ

ಶುದ್ಧನಾಗಬೇಕೆನ್ನುವ ಆಸೆ.
ಮುಕ್ತನಾಗಬೇಕೆನ್ನುವ ಆಸೆ.
"ವಿರಕ್ತಿ"ಯಲಿ ರಕ್ತಿಯಿಂದಿರುವಾಸೆ
ಆನಂದಿಸುತ ಪಯಣ ಮುಗಿಸುವಾಸೆ.

No comments:

Post a Comment