Friday 10 February 2012

ಪ್ರಣಯ ಚರಿತ್ರೆ


ಒಮ್ಮೆ ನಾನೆಂದೋ ಒಂದು ಬಾರಿ 

ಬಿದ್ದಿದ್ದೆ ಗಾಢ ಪ್ರೇಮದಲಿ ಜಾರಿ 
ಶುದ್ಧ ಅಂತಃಕರಣದಿಂದ ಪ್ರೀತಿಸಿದ್ದೆ 
ಕೇಳದೆಯೇ ಮನವೆನ್ನ ಅರ್ಪಿಸಿದ್ದೆ. 



ಪ್ರತಿ ಅಗಲಿಕೆಯೆಲ್ಲೂ ಒಂದು ನೋವಿತ್ತು 
ಸದಾ ಸನಿಹವೇ ಇರಬಾರದೇ ಎನಿಸಿತ್ತು 
ನಾನೇನೋ ಮನದಾಸೆ ಬಿಚ್ಚಿ ಇಟ್ಟಿದ್ದೆ 
ಪದರ ಪದರಗಳನ್ನೆಲ್ಲ ತೆರೆದುಬಿಟ್ಟಿದ್ದೆ 

ಸುಮ್ಮನೆ ನಡೆದಿತ್ತು ನಮ್ಮ ಒಡನಾಟ 
ಅವಳ ಮನವನರಿಯಲು ನನ್ನ ಪರದಾಟ 
ಬಿಗಿದ ತುಟಿ ತೆರೆದು ಬಾಯಿ ಬಿಡಳವಳು 
ಇಂಗಿತವನರುಹೆ ಮನವ ತೆರೆಯಳವಳು 

" ಹೇಳು, ನಿನಗೆ ಪ್ರೇಮವು೦ಟೆ" ಎಂದು 
ಕೇಳಲಾತುರ ಪಡಬಾರದೆಂದು 
ಕಷ್ಟದಲಿ ಹಿಡಿದಿಟ್ಟೆ ಎನ್ನ ಮನವಂದು 
ಪರಿತಪಿಸಿ ಪರದಾಡಿ ಮನದೊಳಗೆನೊಂದು 

ಕೇಳಿದರೆ ಏನ ಹೇಳುವಳೋ ಎಂಬ ಆತಂಕ
ಕಾದು ನೋಡುವಾ ಎಂದು ಕಡೆಯ ತನಕ 
ದಿನ ವಾರ ತಿಂಗಳು ವರುಷಗಳುರುಳಿದರೂ
ಅರಿಯದಾದೆ ನಾನವಳ ಮನವನಿನಿತಾದರೂ 

ವರುಷ ಏಳಾದರೂ ವಯಸು ಮುಂದಾದರೂ 
ಕುಗ್ಗದಾ ಹರುಷದಿ ನಾನವಳ ಹಿಂದೆ ಸುತ್ತಿದರೂ 
ಕಲ್ಲು ಮನ ಕರಗಲಿಲ್ಲ ನಾನವಳ ಬಿಡಲಿಲ್ಲ. 
ಎನ್ನ ರೋದನಕೀಗ ಮೊದಲಿಲ್ಲ ಕೊನೆಯಿಲ್ಲ 

ನಾ ಇದ್ದ ಊರಿಂದ ಅವಳೂರಿಗೆ ಬಂದೆ 
ಮೊಂಡು ಹಿಡಿದವನಂತೆ ನಿಂತೆನವಳಾ ಮುಂದೆ
ಮತ್ತದೇ ಮೌನ ನಿಶ್ಶಬ್ದ ಬಿಗುಮಾನ 
ಹೇಳಲೊಳ್ಳಲು ಮಾತು ಸುಮ್ಮನೆ ಸುಮ್ಮಾನ. 

ಒಂದು ದಿನ ಹೊರಟೆ ನಾನವರ ಮನೆಗೆ 
ಮುಟ್ಟಿಸಲು ಈ ಕಥೆಯನೊಂದು ಕೊನೆಗೆ 
ಅವಳಿಲ್ಲ, ತಾಯಿಂದ ಸ್ವಾಗತವು ಎನಗೆ 
ನೋಟದಲೆ ಹಚ್ಚಿದರು ಅವರೆನ್ನ ಒರೆಗೆ

"ನೇರ ಹೇಳಿಹಳವಳು ನೀ ಒಲ್ಲೆಯಂದು, 
ಬುದ್ಧಿಯಲಿ, ನೀ ಅವಳಿಗಿಂತ ಕಮ್ಮಿಯಂದು"
ತಾಯಿ ಎಂದರು" ಒಲ್ಲದ ಬಂಧವು ನಿನಗೇಕೆ" ಎಂದು
ಪೆಚ್ಚಾಗಿ, ಹೊರಟೆ ನಾ ಬಂದ ದಾರಿಗೆ ಸುಂಕವಿಲ್ಲವೆಂದು

ಎರಡು ಮೂರು ದಿನ ನಾ ಬೆಪ್ಪಾಗಿ ಹೋದೆ
ಮುಂದಿನಾ ದಾರಿ ಹೇಗೆ-ಏನು ಎಂದು ತಿಳಿಯದೆ
ಜೀವನದ ಅಂತ್ಯಕ್ಕೆ ಕಾರಣವಿದಲ್ಲ,
ಯೋಚಿಸೆ ತೋಚಿತು, ಬೇರೆ ಯಾರೋ ಇಹರಲ್ಲ.

ತಟ್ಟನೆ ಮೂಡಿತು, ನಿರ್ಲಿಪ್ತ ಭಾವ,
ಲೋಕದೊಳು ಉಂಟೆ ಹುಡುಗಿಯರಿಗಭಾವ 
ಪತ್ರವೊಂದನು ಬರೆದೆ ನಾ ಎನ್ನ ತಂದೆಗೆ
"ಹುಡುಕಿರೊಂದು ಹೆಣ್ಣನ್ನು ಸಿದ್ಧ ನಾ ಮದುವೆಗೆ".

ಹೇಳಿದ್ದೆ ಸಾಕೆಂದು ತ್ವರೆ ಮಾಡಿದರವರು 
ಹುಡುಕಿ ಎಲ್ಲೆಲ್ಲೋ,ಹುಡುಗಿಯರ ನೋಡಿದರವರು 
ಅನುರೂಪಳಾದವಳು ಸಾದ್ವಿ ಸುಮನಸ್ಸಿನವಳು 
ಬಂದಳೆನ್ನ ಮಡದಿ ಮನ ಮನೆಯ ತುಂಬಿದಳು 

ಹತ್ತು ಹದಿನೈದು ದಿನ ಕಳೆದಿರಬೇಕು 
ಗತವನೆಲ್ಲವ ನಾ ಮರೆತಿರಬೇಕು 
ಬಂತಾಗ ಸುದ್ದಿಬಂದಿಹಳು ಎಂದು 
ಮನಗೆ ನನ್ನ ಮಾಜಿ ಪ್ರಿಯತಮೆಯು ಇಂದು 

ಕಾಣ ಹೋದೆ ನಾ ಬಲು ಸಮದಾನದಿಂದ 
ಸಾವಕಾಶದಿ ಸಾಗಿತು ಮಾತು ನಿಧಾನದಿಂದ 
ತಟ್ಟನೆ ಅವಳ ಮಾತಿನಾ ಬಾಂಬೊಂದು ಬಿತ್ತು 
" ನೀ ಇನ್ನೂ ಸ್ವಲ್ಪ ದಿನ ಕಾಯಬಹುದಿತ್ತು" 

ಗೆಳೆಯರೇ,ಇದ ಕೇಳಿದಾ ಎನಗೆ ಮೈಯಲ್ಲ ಬೆವರಿತ್ತು 
ಹೇಳಿ ನಾ ಆಗ ಏನು ಮಾಡಬಹುದಿತ್ತು, ಏನು ಮಾಡಬಹುದಿತ್ತು 

1 comment:

  1. ಸರ್ ಪ್ರಣಯ ಚರಿತ್ರೆ ಓದಿದತಕ್ಷಣ ನನಗೆ ಅನ್ನಿಸಿದ್ದು........ನನಗೇಕೆ ಹೊಳೆಯಲಿಲ್ಲ ಇಂತಹ ಸಾಲುಗಳು....? ನಿಮ್ಮ ಕವನದ ಕೊನೆಯ ತಿರುವು ಅಂತು ತುಂಬಾ ರೋಮಾಂಚನ ಉಂಟು ಮಾಡುವಂತಹದ್ದು ...ಹುಡುಗರ ಮನಸಿನ ಜೊತೆಗೆ ಚೆಲ್ಲಾಟ ಆಡುವವರಿಗೆ ಅದೇ ಗತಿ....ಒಳ್ಳೆಯ ಮನಸಿನಿಂದ ಪ್ರೀತಿ ಮಾಡುವ ಹುಡುಗನನ್ನು ಕಳೆದುಕೊಂಡೆನು ಅನ್ನುವ ಅವಳ ಅಳುವಿಗೆ ಸರಿಯಾದ ತಿರುವು..ಹುಡುಗ ತನ್ನ ಹಿಂದೆ ಸುತ್ತುತ್ತಾನೆ ಅಂತ ತಿಳಿದ ಹುಡುಗೀಯರು ತಾವು ಬಹಳ ಸುಂದರವಾಗಿದ್ದೇವೆ ಎನ್ನುವ ಅಹಂ ಬೆಳೆಸಿ ಕೊಂಡಿರುತ್ತಾರೆ ...ಇಂತಹ ಜನರಿಗೆ ಕೊನೆಗೆ ಪಶ್ಚ್ಯಾತಾಪವೇ ಖಂಡಿತ. ಕೊನೆಯಲ್ಲಿ ಪ್ರಶ್ನೆ ಕೇಳಿದ್ದಿರಿ ಅದಕ್ಕೆ ಇಲ್ಲಿದೆ ನನ್ನ ಉತ್ತರ.... " ನನ್ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದಕ್ಕೆ ಧನ್ಯವಾದಗಳು..,ಇವಳು (ಪತ್ನಿಯನ್ನು ಪರಿಚಯಿಸುತ್ತಾ) ನನ್ನ ತುಂಬು ಹೃದಯದಿಂದ ಮೆಚ್ಚಿಕೊಂಡು ಕೈ ಹಿಡಿದವಳು ಎಂದು ಹೇಳಿ... ಅವಳಿಗೆ ಒಂದು ಕುಪ್ಪು ಚಹಾ ಕುಡಿಸಿ....ಅವಳ ಮನೆಕಡೆ ದಾರಿ ತೋರಿಸಬೇಕಿತ್ತು...!!

    ReplyDelete