Saturday 7 January 2012

ಆನಂದ ಮತ್ತು ಮನಸ್ಸು



ಆನಂದ ಮತ್ತು ಮನಸ್ಸು  
ಎಲ್ಲಾ  ಮಾನವರೂ ಆನಂದದಿಂದ ಇರಲು ಇಚ್ಚಿಸುತ್ತಾರೆ.ಯಾರಿಗೂ ದುಃಖವಾಗಲೀ ಚಿಂತೆಯಾಗಲೀ ಅಸಂತೋಷವಾಗಲೀ ಬೇಡ. ಆದರೆ ಆ ಆನಂದದ ಅಥವಾ ಸಂತೋಷದ ಪ್ರಮಾಣ ಮತ್ತು ಪರಿಮಾಣ ಆಯಾಯ ವ್ಯಕ್ತಿಯ ಮನೋಭಾವದಮೇಲೆ ನಿರ್ಭರವಾಗಿರುತ್ತದೆ. ಆನಂದವು , ಬಹುಪಾಲು ವಸ್ತು ವಿಷಯ ಸಂಬಂಧವಾದ ಆಸ್ತಿ, ಆರೋಗ್ಯ ಮತ್ತು ಅಂತಸ್ತಿಗೆ ಸಂಬಂಧಿಸದೆ, ಮಾತ್ರ ಮನೋಭಾವಕ್ಕೆ ಸಂಬಂಧಿಸಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಆನಂದವೆನ್ನುವುದು, ಮಾತ್ರ ಮನಸ್ಸಿಗೆ ಮತ್ತು ಮನೋಭಾವಕ್ಕೆ ಸಂಬಂಧಿಸಿದ್ದು ಎಂಬುದು ಸತ್ಯ. 

ಒಬ್ಬ ವ್ಯಕ್ತಿ ತನ್ನ ಅಭಿರುಚಿಗೆ ಹೊಂದುವಂತ ವಸ್ತು,ವಿಷಯ ಅಥವಾ ವ್ಯಕ್ತಿಗಳ ಸಂಪರ್ಕದಲ್ಲಿ ಮತ್ತು ಸಹವಾಸದಲ್ಲಿದ್ದಾಗ ಆನಂದವನ್ನು ಹೊಂದುತ್ತಾನೆ ಮತ್ತು ಅವನ ಮನೋಭಿಲಾಷೆಗೆ ವಿರುಧ್ಧವಾದ ವಿಷಯ ಅಥವಾ ವ್ಯಕ್ತಿಗಳ ಸಂಪರ್ಕದಲ್ಲಿದ್ದಾಗ ಆ ಆನಂದವನ್ನು ಅಥವಾ ಸಂತೋಷವನ್ನು ಕಳೆದುಕೊಳ್ಳುತ್ತಾನೆ. ಈ ವಿಷಯವನ್ನು ಸೂಕ್ಷ್ಮವಾಗಿ ನೋಡಿದರೆ, ನಮಗೆ ಒಂದು ವಿಷಯ ವೇದ್ಯವಾಗುತ್ತದೆ. ಅದೇನೆಂದರೆ ಆ  ವಸ್ತುಗಳೋ, ಸಂದರ್ಭಗಳೋ ಅಥವಾ ವ್ಯಕ್ತಿಗಳೋ ನಮಗೆ ಆನಂದವನ್ನೋ ದು:ಖವನ್ನೋ ಕೊಡುವುದಿಲ್ಲ. ಆ ವಸ್ತು,ವಿಷಯ ಅಥವಾ ವ್ಯಕ್ತಿಗಳೊಡನೆ ಮಾನಸಿಕವಾಗಿ ನಾವು ಯಾವರೀತಿಯ ಸಂಪರ್ಕ ಅಥವಾ ಅಪೇಕ್ಷೆ ಇಟ್ಟುಕೊಂಡಿರುತ್ತೇವೆ ಎನ್ನುವುದರ ಮೇಲೆ ನಮ್ಮ ಆನಂದವೋ ದು:ಖವೋ ನಿರ್ಭರವಾಗಿರುತ್ತದೆ.ಉದಾಹರಣೆಗೆ, ಅತಿ ದಾಹದಿಂದ ಸಂತ್ರಸ್ತ ವ್ಯಕ್ತಿಗೆ, ಒಂದು ಲೋಟ ತಣ್ಣನೆಯ ನೀರು ಬೇಸಿಗೆ ಕಾಲದಲ್ಲಿ ಆನಂದವನ್ನು ನೀಡುತ್ತದೆ. ಆದರೆ ಅದೇ ಒಂದು ಲೋಟ ತಣ್ಣನೆಯ ನೀರು ಆ ವ್ಯಕ್ತಿಗೆ,ಚಳಿಗಾಲದಲ್ಲಿ ಆನಂದವನ್ನು ನೀಡದೆ, ಅಹಿತವೆನಿಸುತ್ತದೆ.ವಸ್ತು ಒಂದೇ ಆದರೂ ಅನುಭೂತಿ ಬೇರೆ. 

ಒಬ್ಬ ವ್ಯಕ್ತಿಗೆ ಒಂದು ವಿಷಯ ಆನಂದವನ್ನು ನೀಡಿದರೆ ಅದೇ ವಿಷಯ ಇನ್ನೊಬ್ಬ ವ್ಯಕ್ತಿಗೆ ನೋವನ್ನು ನೀಡಬಹುದು.ಒಬ್ಬ ವ್ಯಕ್ತಿಗೆ ಒಂದು ವಿಷಯ ಒಂದು ಕಾಲಕ್ಕೆ ಸಂತೋಷವನ್ನು ನೀಡಿದರೆ, ಅದೇ ವಸ್ತು ಬೇರೊಂದು ಕಾಲಕ್ಕೆ ಅದೇ ವ್ಯಕ್ತಿಗೆ ದುಃಖಕ್ಕೆ ಕಾರಣವಾಗಬಹುದು.  ಅವರವರ ಭಾವನೆಗೆ ಅನುಗುಣವಾಗಿ ಆಯಾಯಾ ವಿಷಯ ವಸ್ತುಗಳು ಕಾಲಾನುಸಾರವಾಗಿ ಸುಖವನ್ನೋ  ದುಃಖವನ್ನೋ  ಕೊಡುತ್ತದೆ. ವಿಡಂಬನೆಯಂದರೆ ಮಾನಸಿಕವಾಗಿ ಸಮಭಾವದಿಂದ ಇರುವ, ಸುಖ ದು:ಖಗಳನ್ನು ಸಮಭಾವದಿಂದ ತೆಗೆದುಕೊಳ್ಳುವ, ತಟಸ್ಥ ಅಥವಾ ತೃಪ್ತ ಮನೋಭಾವವಿರುವ ವ್ಯಕ್ತಿಗಳಿಗೆ ಯಾವುದೇ ವಸ್ತು, ವಿಷಯ ಅಥವಾ ವ್ಯಕ್ತಿಯ ಸಂಪರ್ಕದಿಂದಲೋ ಅಥವಾ ವಿಯೋಗದಿಂದಲೋ ಆನಂದವೂ ಆಗುವುದಿಲ್ಲ - ದು:ಖವೂ ಆಗುವುದಿಲ್ಲ.

ಹಾಗಾಗಿ ಆನಂದವೆಂಬುದು ನಮ್ಮ ಮನಸ್ಸಿನ ಸ್ಥಿತಿಗೆ ಮತ್ತು ಮನೋಭಾವಕ್ಕೆ ಸಂಭಂಧಿಸಿದ್ದೆಂದು ನಿರಾತಂಕವಾಗಿ ಹೇಳಬಹುದು.  

ವಾಸ್ತವಿಕ ಬದುಕಿನ ದೃಷ್ಟಿಕೋನದಿಂದ ನೋಡಿದಾಗ ನಮ್ಮ ಸಂತೋಷದ ಮಟ್ಟ ನಮಗಿಂತ ಹೆಚ್ಚು ಸಂತೋಷವಾಗಿ ಇರುವವರ ಪ್ರತಿ ನಮಗಿರುವ ಅಸೂಯೆಯ  ಮಟ್ಟದ ಮೇಲೆ ಆಧಾರವಾಗಿರುತ್ತದೆ. ಲಂಗು ಲಗಾಮಿಲ್ಲದ ನಮ್ಮ ಮನಸ್ಸು ಸದಾ ಸಂಪತ್ತಿನಿಂದ, ಅಂತಸ್ತಿನಿಂದ, ವಿದ್ಯೆಯಿಂದ, ಹೆಸರು-ಹೆಗ್ಗಳಿಕೆಗಳಿಂದ ನಮಗಿಂತ  ಉತ್ತಮರಾದವರನ್ನು ಮತ್ತು ಉತ್ತಮ ಸಾಧನೆ ಮಾಡಿದವರನ್ನು ಕಂಡು ಅಸೂಯೆ ಪಡುವಂತೆ ಮಾಡಿ ಮಾನಸಿಕವಾಗಿ ಹಲುಬುವಂತೆ ಮಾಡಿ ನಮ್ಮನ್ನು ದು:ಖಕ್ಕೆ ತಳ್ಳುತ್ತದೆ. 

ಅಸೂಯೆ ಎನ್ನುವುದು ಒಂದು ರೀತಿಯ ಮನೋ ವಿಕಾರ ಅಥವಾ ಮಾನಸಿಕ ರುಗ್ಣತೆ. ಪಕ್ಕದ ಮನೆಯವರು, ಹೊಸ ಮನೆ ಕೊಂಡರೆಂದ ಕಾರಣಕ್ಕೋ, ನಮಗೆ ಪರಿಚಯವಿರುವವರೊಬ್ಬರಿಗೆ ಯಾವುದೋ ಬಹುಮಾನ ಸಿಕ್ಕಿತೆಂದೋ, ಅಥವಾ ಅವರ  ಸ್ನೇಹಿತನ ಮಗನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆಯೆಂದೋ, ಎಂಬ ಅತೀ ಕ್ಷುಲ್ಲಕ ಕಾರಣಗಳಿಗೆ ನಮ್ಮ ಮನದಲ್ಲಿ ಅಸೂಯೆ ಪ್ರವೇಶ ಮಾಡಬಹುದು. ಒಂದು ಬಾರಿ ಅಸೂಯೆ ಪ್ರವೇಶ ಮಾಡಿಬಿಟ್ಟರೆ ಸಾಕು ನಮ್ಮ ಮಾನಸಿಕ ಸಂತುಲನೆಯನ್ನು ಕೆಡಿಸಿ ಕಂಗಾಲು ಮಾಡಿಬಿಡುತ್ತದೆ. ನಾವು ತಳಮಳಿಸುತ್ತಾ, ಕಸಿವಿಸಿಗೊಳ್ಳುತ್ತಾ ಇರುತ್ತೇವೆ. ನಮ್ಮ ಮನಸ್ಸಿನಲ್ಲಿ ಸಂತೋಷವು ದುಃಖಕ್ಕೆ ಎಡೆಮಾಡಿಕೊಡುತ್ತದೆ. ಹಾಗಾಗಿ ಸಂತೋಷದಿಂದಿರಬೇಕಾದರೆ ಮನಸ್ಸು ಬುಧ್ಧಿ ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ವಸ್ತು -ವಿಷಯ -ವ್ಯಕ್ತಿಯ  ಅಪೇಕ್ಷೆ ಹೇಗೆ ಪಡಬೇಕು, ಎಷ್ಟುಪದಬೇಕು ಎಂಬ ಅರಿವಿದ್ದು, ಅಪೇಕ್ಷೆಗಿಂತ ಹೆಚ್ಚೋ ಕಡಿಮೆಯೋ ನಮಗೆ ಸಿಕ್ಕಾಗ ಸಮಾದಾನದಿಂದ ಬಂದದ್ದನ್ನು ಸಮಭಾವದಿಂದ ತೆಗೆದುಗೊಂದು, ಅನುಭವಿಸಿ, ಸಂತೋಷ ಪಟ್ಟರೆ ಸುಖ. ಹಾಗಲ್ಲದೆ, ಸಿಕ್ಕಿದ್ದರ ಪರಿಮಾಣ ಕಡಿಮೆಯಂದೋ, ಗುಣವ್ಯತ್ಯಾಸವೆಂದೋ ಹಲುಬುತ್ತಾ ಕೊರಗುತ್ತಾ ಇದ್ದರೆ ದುಃಖ. ಹಾಗಾಗಿ ಆನಂದವೋ ದುಃಖವೋ ನಮ್ಮ ಮನೋಭಾವದ ಮೇಲೆ ಆಧಾರವಾಗಿರುತ್ತದೆ.   

"ಯಾರು ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುತ್ತಾನೋ ಮತ್ತು ಮುಕ್ತಿಯ ಸಿಧ್ಧಾ೦ತಗಳನ್ನು  ಅಭ್ಯಾಸಮಾಡುತ್ತಾನೋ, ಅವನು ಪರಮಾತ್ಮನ ಸಂಪೂರ್ಣ ಕರುಣೆಗೆ ಪಾತ್ರನಾಗಿ ಎಲ್ಲಾ ರೀತಿಯ ಬಂಧನಗಳಿಂದಲೂ ಮುಕ್ತನಾಗಿ ಶುಧ್ಧನಾಗುತ್ತಾನೆ. ದೈವೀ ಪ್ರಜ್ಞೆಯಲ್ಲಿ ಸದಾ ಇರುವವನು ಸ೦ಸಾರದ ತಾಪತ್ರಯಗಳಿಂದ ಮುಕ್ತನಾಗಿ ಅವನ ಬುಧ್ಧಿ ಶುಧ್ಧವಾಗಿ ಮತ್ತು ಸ್ಥಿರವಾಗಿ ನಿಲ್ಲುತ್ತದೆ" ಎಂಬುದು ಗೀತ ವಾಕ್ಯ 

ಹಾಗಾಗಿ ನಾವು ಎಲ್ಲಿಯತನಕ ದ್ವೇಷ ಮತ್ತು ಬಂಧನವೆಂಬ ಜೋಡಿ ಕಳ್ಳರಿಗೆ ಜೋತು ಬಿದ್ದಿರುವ ತನಕ, ದುಷ್ಟ ಇಂದ್ರಿಯಗಳಿಗೆ ದಾಸರಾಗಿ ಎಂದೂ ಸಂತೋಷದಿಂದ ಇರಲು ಸಾಧ್ಯವೇ ಇಲ್ಲ. ಇಂತಹ ದಾಸ್ಯದಲ್ಲಿರುವ ವ್ಯಕ್ತಿ ಸದಾ ಪರರ ಲೋಪಗಳನ್ನು ಹುಡುಕುವುದು, ಪರರನ್ನು ಟೀಕಿಸುವುದು ಅಥವಾ ಹೊಗಳುವುದು, ಕೆಲಸಕ್ಕೆಬಾರದ ಹರಟೆ ಮತ್ತು ಬೂಟಾಟಿಕೆಯಲ್ಲಿರುತ್ತಾನೆ. ಪ್ರಾಪಂಚಿಕ ಭೋಗಗಳಲ್ಲಿ ಮುಳುಗಿರುವ ವ್ಯಕ್ತಿ ಸದಾ ಕಾಲ ಸುಳ್ಳು, ಜೂಜು, ದುರ್ಜನರ ಸಂಗ ಮತ್ತು ಇತರೆ ವ್ಯಸನಗಳಿಗೆ ದಾಸನಾಗಿ ಕ್ರಮೇಣ ಮಾನಸಿಕ ಸಂತುಲನೆಯನ್ನು ಕಳೆದುಕೊಂಡು ತಾನೂ ದು:ಖಿತನಾಗಿ, ತನ್ನನ್ನಾಶ್ರಯಿಸಿದವರನ್ನೂ ಶೋಕದ ಕಡಲಲ್ಲಿ ಮುಳುಗಿಸುತ್ತಾನೆ. ಮಾನವರ ದು:ಖಕ್ಕೆ ಕಾರಣವೇನೆಂದರೆ ಸಹಜವಾಗಿ ದೊರೆತ ಸೌಲಭ್ಯಗಳಿಂದ ತೃಪ್ತನಾಗದೆ ಇರುವುದು, ಸ್ವಾರ್ಥಪರತೆ, ದುರಭ್ಯಾಸಗಳು, ಆಲಸ್ಯ, ಹೆದರಿಕೆ, ಅಹಂಕಾರ ಇತ್ಯಾದಿ.ಇವೆಲ್ಲವೂ ಮನುಷ್ಯನ ಮನಸ್ಸಿಗೆ ಸಂಭಂದಿಸಿದ್ದೆ ಹೊರತು ಬೇರೇನೂ ಅಲ್ಲ.  

ಪ್ರಕೃತಿ ಮಾನವನಿಗೆ, ಎತೇಚ್ಚವಾಗಿ ಶುಧ್ಧ ನೀರು, ಗಾಳಿ ಮತ್ತು ಅಗಾಧ ಸಸ್ಯ ಸಾಮ್ರಾಜ್ಯವನ್ನೇ ಕೊಟ್ಟಿದೆ. ಆದರೆ ಅವುಗಳನ್ನು ಉಪಯೋಗಿಸಿಕೊಂಡು ತೃಪ್ತ ಜೀವನ ಮಾಡದೆ, ಅದನ್ನು ದುರುಪಯೋಗಮಾಡಿ,ನಕಲಿ ಜೀವನಕ್ಕೆ ಬಲಿಯಾಗಿದ್ದಾನೆ. ಇಂತಹ ಅಸಹಜ ಬದುಕಿನಲ್ಲಿ,ಮನುಷ್ಯ ತನ್ನ ಜೀವನವನ್ನು ಕೃತಕ ವಸ್ತುಗಳಲ್ಲಿ, ಕೃತಕ ಜೀವನ ಶೈಲಿಯಲ್ಲಿ, ಆಸಕ್ತಿ ತೋರುತ್ತಾ, ತನ್ನ ಹಣವನ್ನು ಪೋಲುಮಾಡುತ್ತಾ, ನಿಜವಾದ ಸುಖ ಮತ್ತು ಆನಂದದಿಂದ ವಂಚಿತನಾಗಿ,ದುಃಖಪಡುತ್ತಿದ್ದಾನೆ.ಪ್ರಕೃತಿಯಿಂದ ದೂರವಾಗುತ್ತಿರುವ ಮನುಷ್ಯನ ಪ್ರವೃತ್ತಿಯಿಂದಲೇ, ಇಂದು ಮನುಷ್ಯ ಹಲವಾರು ವಿಧವಾದ ಅನಾರಾಗ್ಯಕ್ಕೆ ತುತ್ತಾಗಿ, ಅನ್ನರೋಗ್ಯ ಮತ್ತು ಅದರ ನಿವಾರಣೆಗೆ ಉಂಟಾಗುವ ವ್ಯಚ್ಚದಿಂದ ದುಃಖಿತನಾಗಿದ್ದಾನೆ. 

ಸ್ವಾರ್ಥಪೂರಿತವಾದಂತಹ ನಮ್ಮ ಅಚಾರ ವಿಚಾರಗಳಿಂದ, ಶತಾಯ-ಗತಾಯನಮ್ಮ ಸ್ವಾರ್ಥವನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ಹೀಗೆ ನಮ್ಮ ಸ್ವಾರ್ಥದ ಬಯಕೆಗಳನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿ ಬಹಳಷ್ಟುಬಾರಿ ನಾವು ನಮ್ಮ ಮನಸಿಂಕ ಸಂತುಲನೆಯನ್ನು ಕಳೆದು ಕೊಂಡು ಸರಿ-ತಪ್ಪುಗಳ ವಿವೇಚನೆಯಿಲ್ಲದೆ ವರ್ತಿಸುತ್ತೇವೆ.ನಮ್ಮನ್ನು ನಾವು ಅತೀ ಬುಧ್ಧಿವಂತರೆಂದು ಭಾವಿಸಿ ಬೇರೊಬ್ಬರಿಗೆ ತೊಂದರೆಯಾದರೂ, ಗಣನೆಗೆ ತೆಗೆದುಕೊಳ್ಳದೆ, ಸ್ವಾರ್ಥವನ್ನು ಸಾಧಿಸುತ್ತೇವೆ ಅಥವಾ ಸಾಧಿಸಿದೆವೆಂಬ ಹುಂಬತನದ ಜಂಬವನ್ನು ತೋರುತ್ತೇವೆ.ಇದರಿಂದ ಉಂಟಾಗುವ, ಕ್ರಿಯೆ ಮತ್ತಿ ಪ್ರತಿಕ್ರಿಯೆಗಳ ಸಂಕೋಲೆಯಲ್ಲಿ, ನಮಗೆ ಅರಿವಿಲ್ಲದೆಯೇ ಸಿಕ್ಕು ಹಾಕಿಕೊಂಡ ನಾವು, ಪರರನ್ನೂ ನೋಯಿಸುತ್ತಾ ಮತ್ತು ನಮ್ಮ ಮಾನಸಿಕ ಸಂತುಲನೆಯನ್ನು ಕಳೆದುಕೊಂಡು,ದುಃಖಿಗಳಾಗುತ್ತೇವೆ. 

ಅಸುರೀ ಪ್ರವೃತ್ತಿ ಮತ್ತು ಮನೋಭಾವವಿರುವ ಜನರ ಗುಣಗಳನ್ನು ವಿವರಿಸುತ್ತಾ, ಶ್ರೀ ಕೃಷ್ಣ ಹೇಳುತ್ತಾನೆ " ಅಂತಹ ಜನರು ಅಜ್ಞಾನದಿಂದ ಕೂಡಿದ್ದರೂ, ತಾವು ಮಹಾ ಬುಧ್ಧಿವಂತರೆಂದೂ, ಪರಿಪೂರ್ಣರೆಂದೂ,ಶಕ್ತರೂ ಮತ್ತು ಸುಖಿಗಳೆಂದೂ ಅಂದುಕೊಳ್ಳುತ್ತಾ ಇಂದ್ರಿಯಾಸಕ್ತರಾಗಿ  ಭ್ರಮಾಧೀನರಾಗಿರುತ್ತಾರೆ. ಸ್ವಯಂ ಪರಿಪೂರ್ಣರೆಂಬ  ಭ್ರಮೆ, ದುರಹ೦ಕಾರ, ಉಧ್ಧಟತನ, ಅಹಂಭಾವ, ಲಾಲಸೆ ಮತ್ತು ಕೋಪದಿಂದ, ಪರಮಾತ್ಮನನ್ನು ಮತ್ತು ಧರ್ಮವನ್ನು ಧಿಕ್ಕರಿಸುತ್ತಾರೆ". ಅಂತಹವರು ಎಚ್ಚೆತ್ತುಕೊಳ್ಳುವ ವೇಳೆಗೆ, ಸಮಯಮೀರಿ ಕಷ್ಟದ ಸಂಕೋಲೆಯಲ್ಲಿ ಸಿಕ್ಕಿಕೊಂಡು, ಅನ್ಯರಿಗೂ ಹಿಂಸೆಯನ್ನು ಕೊಡುತ್ತಾ, ತಾವೂ ಆನಂದವನ್ನು ಪಡೆಯದೇ ಪರರ ಆನಂದವನ್ನೂ ಕಸಿಯುತ್ತಾ ಲೋಕಕಂಟಕರಾಗಿರುತ್ತಾರೆ.  

ನಮ್ಮ ಅನಂದದಮೇಲೆ ಪ್ರಭಾವ ಬೀರುವ ಇನ್ನೊಂದು ವಿಷಯವೆಂದರೆ, ಜಡತ್ವ ಅಥವಾ ಜೋಭದ್ರತನ. ಸಮಯಪ್ರಜ್ಞೆ ಇಲ್ಲದೆ, ಮಾಡಬೇಕಾದ ಕೆಲಸವನ್ನು ತತ್ಸಮಯದಲ್ಲಿ ಮಾಡದೆ ಮುಂದೂಡುತ್ತಾ, ಬೇಡದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತೇವೆ. ಪ್ರಾಣಿ, ಪಶು,ಪಕ್ಷಿಗಳಿಗೂ ಸಹ ತಾವು ಯಾವ ಕೆಲಸವನ್ನು ಮಾಡಬೇಕು, ಹೇಗೆ ಮಾಡಬೇಕು ಯಾಮ ಸಮಯದಲ್ಲಿ ಮಾಡಬೇಕು ಎಂಬ ಸಾಮಾನ್ಯ ಪ್ರಜ್ಞೆ  ಇರುತ್ತದೆ. ಆದರೆ ಉನ್ನತ ಪ್ರಾಣಿ ಎಂದೆನ್ನಿಸಿಕೊಳ್ಳುವ ಮನುಷ್ಯನಿಗೆ ಈ ಪ್ರಜ್ಞೆ ಇದ್ದರೂ ಸಹ. ಸ್ವಾರ್ಥ, ಆಲಸ್ಯ ಮತ್ತು ಅಹಂಕಾರಗಳೆಂಬ ಮೋಡಗಳು ವಿವೇಕಕ್ಕೆ ಕವಿದು ತನಗಿರುವ ಈ ಪ್ರಜ್ಞೆಗೆ ವಿರುಧ್ಧವಾಗಿ ನಡೆದುಕೊಳ್ಳುತ್ತಾನೆ. ಮೇಲ್ನೋಟಕ್ಕೆ ಈ ಪ್ರಾಣಿ, ಪಕ್ಷಿ ಮತ್ತು ಕೀಟ ಸಂಕುಲಕ್ಕೆ  ಇರುವ ಸೀಮಿತ ಬುಧ್ಧಿವಂತಿಕೆಗೆ ಇರುವುದು ಮೂರೇ ಕೆಲಸ. ಮೊದಲನೆಯದು ಅಹಾರಾರ್ಜನೆ, ಎರಡನೆಯದು ಸಂತಾನೋತ್ಪತ್ತಿ, ಮೂರನೆಯದು ಸ್ವ ಸಂರಕ್ಷಣೆ. ಆದರೆ ಅತೀ ಬುಧ್ಧಿವಂತಿಕೆಯ ಮನುಷ್ಯನಿಗೋ ಅದರೊಟ್ಟಿಗೆ, ಸ್ವಾರ್ಥವೊಂದಿದೆ. ಆ ಸ್ವಾರ್ಥ ಸಾಧನೆಗೆ ಆಲಸ್ಯ, ಅಹಂಕಾರ, ದುರಾಸೆ ಎಲ್ಲವನ್ನೂ ಮನುಷ್ಯ ಅವಲಂಬಿಸುತ್ತಾನೆ. ಕ್ರಮೇಣ ಈ ದುರ್ಗುಣಗಳೇ ಅವನ ಸ್ವಭಾವವಾಗಿ ಅವನ ದುರ್ಗತಿಗೆ ಕಾರಣ ಹೇತುವಾಗುತ್ತದೆ. 

ನಮ್ಮ ಆನಂದಕ್ಕೆ ಅಡ್ಡಿಬರುವ ಮತ್ತೊಂದು ಭೂತವೆಂದರೆ ನಮ್ಮ ಭಯ. ನಾವು ಸದಾಕಾಲ ವಸ್ತು-ವಿಷಯ-ವ್ಯಕ್ತಿಗಳಿಗೆ ಅಂಟಿಕೊಂಡಿರುತ್ತೇವೆ. ಹೀಗೆ ನಾವೇ ಅಂಟಿಕೊಂಡು ಇರುವ ವಸ್ತು-ವಿಷಯ-ವ್ಯಕ್ತಿಗಳು ನಮ್ಮಿಂದ ದೂರಾಗುವ ಭಯ ಅಥವಾ ನಾವು ಅಪೇಕ್ಷೆಪಟ್ಟ ಈ ವಸ್ತು-ವಿಷಯ-ವ್ಯಕ್ತಿಗಳು ನಮಗೆ ಸಿಗದೇನೋ ಎನ್ನುವ ಭಯ. ಅಂಟಿನಿಂದ ಭಯ. ಮನುಷ್ಯ   ತ್ರಿಗುಣಗಳಿಂದಾದವನು. ಸತ್ವ-ರಜಸ್ಸು-ತಮೋಗುಣಗಳು. ಸತ್ವ ಗುಣ ಆಚಾರಕ್ಕೆ ಮತ್ತು ಧರ್ಮಕ್ಕೆ ಹತ್ತಿರ. ಸತ್ವಗುನವಿದ್ದರೆ ಆನಂದವೇ ಸ್ವಭಾವವಾಗುತ್ತದೆ. ರಜೋ ಗುಣ ಅಹಂಕಾರ, ಕೋಪ, ಸ್ವಾರ್ಥ, ಸ೦ಯಮಹೀನತೆ,ದುರಾಚಾರಗಳ ಪ್ರತೀಕ. ಈ ಗುಣದಲ್ಲಿ ಮೊದಲಿಗೆ ಅನಂದವೆನಿಸಿದರೂ, ಅಂತಿಮವಾಗಿ ನೋವೆ ಗತಿ. ಆದರೆ ತಮೋ ಗುಣಕ್ಕೆ ನೋವೆ ಸ್ವಭಾವ. ಹಾಗಾಗಿ ನಾವು ಆನಂದದಿಂದ ಇರಬೇಕಾದರೆ, ವಸ್ತು-ವಿಷಯ-ವ್ಯಕ್ತಿಗಳಿಗೆ ಅಂಟಿಕೊಂಡಿರುವ ನಾವು ಪ್ರಯತ್ನಪೂರ್ವಕವಾಗಿ ಸತ್ವಗುಣದ ಪ್ರಮಾಣ ಹೆಚ್ಚಿಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಭಗವದ್ಗೀತೆಯ ಉಪದೇಶ ಅಂದಿಗೂ, ಇಂದಿಗೂ ಮತ್ತು ಎಂದೆಂದಿಗೂ ಹೆಚ್ಚು ಪ್ರಸ್ತುತ. ಹಸಿಗಾಯದ ಮೇಲೆ ಅಂಟಿಸಿದ band-aid ನ್ನು ತೆಗೆದಾಗ ಹೇಗಾಗಬಹುದೋ ಊಹಿಸಿಕೊಳ್ಳಿ. ಒಂದೇ ದಿನದಲ್ಲಾಗಲೀ ಅಥವಾ ನಿರ್ಧಿಷ್ಟ ಸಮಯದಲ್ಲಿಯಾಗಲೀ ಈ ಗುಣ ಪರಿವರ್ತನೆ ಸಾಧ್ಯವಿಲ್ಲ. ಹುಣ್ಣು  ಮಾಗಬೇಕು, ಆರಬೇಕು, ಒಣಗಬೇಕು. ಹಾಗಾದಾಗ ಆ band-ಐದ ತಾನೇ ತಾನಾಗಿ ಬಿದ್ದು ಹೋಗುತ್ತದೆ. ಹಾಗೆ ನಿರಂತರ ಅಭ್ಯಾಸ ಮತ್ತು ಸತ್ಸಂಗ-ಸದ್ವಿಚಾರದಿಂದ ಗುಣಪರಿವರ್ತನೆಯಾಗಿ, ಆನಂದವನ್ನು ಪಡೆಯಲು ಮತ್ತು ಪಡೆದ ಆನಂದವನ್ನು ಅನುಭವಿಸಲು ತಕ್ಕ ಮನೋಭಾವ ಉಂಟಾಗುತ್ತದೆ. 
     
ಇಷ್ಟೆಲ್ಲಾ ಆನಂದದ ಬಗ್ಗೆ ಹೇಳಿದ್ದೇವೆ. ಆದರೆ ಆ ಆನಂದವೆನ್ನುವುದು ಏನು ಮತ್ತು ಹೇಗಿರುತ್ತದೆ ಎಂದು ತಿಳಿದುಕೊಳ್ಳಬೇಕಾಗಿದೆ.ಆನಂದದ  ವರ್ಣನೆಯನ್ನು ಉಪನಿಶತ್ತುಗಳೂ ಮಾಡಿವೆ. ಇಂದ್ರಿಯಗಳಿಗೆ ನೀಡುವ ತೃಪ್ತಿಯು ಆನಂದವೋ  ಅಥವಾ ಇಂದ್ರಿಯಾತೀತವಾದ ಆಧ್ಯ್ಯಾತ್ಮಿಕವಾದ ಅನುಭೂತಿಯು ಆನಂದವೋ ಎಂದರೆ ಕ್ಷಣಿಕವಾದ ಇಂದ್ರಿಯ ಸಂಬಂಧದ ಆನಂದಕ್ಕಿಂತ ಇಂದ್ರಿಯಾತೀತವಾದ ಆಧ್ಯ್ಯಾತ್ಮಿಕವಾದ ಅನುಭೂತಿಯು ನಿತ್ಯ ನಿರಂತರ ಮತ್ತು ಸತ್ಯವಾದ ಆನಂದವೆಂದು ಎಲ್ಲ ಪುರಾಣ ಇತಿಹಾಸ ವೇದೋಪನಿಷತ್ತುಗಳು, ಸಾರಿ ಸಾರಿ ಹೇಳುತ್ತಿವೆ. 

ಸತ್ಸಂಗತ್ವೆ ನಿಸ್ಸಂಗತ್ವಂ-ನಿಸ್ಸಂಗತ್ವೆ ನಿರ್ಮೋಹತ್ವಂ-ನಿರ್ಮೋಹತ್ವೆ ನಿಶ್ಚಲ ತತ್ವಂ-ನಿಶ್ಚಲತತ್ವೆ ಜೀವನ್ಮುಕ್ತಿ:

ಎಂಬುದು ಆಚಾರ್ಯ ಉಕ್ತಿ. ಇಲ್ಲಿ ನಿಸ್ಸಂಗವೂ, ನಿರ್ಮೋಹವೂ ಮತ್ತು ನಿಶ್ಚಲ ತತ್ವವೂ ಮನಸ್ಸಿನ ಸ್ಥಿತಿಗಳಾದ್ದರಿಂದ, ಮಾನಸಿಕ ಪ್ರವೃತ್ತಿಯಿಂದಲೇ ನಮಗೆ, ಸುಖವೋ, ದುಃಖವೋ, ಕ್ಷಣಿಕಾನಂದವೋ ಅಥವಾ ನಿತ್ಯಾನಂದವೋ ದೊರೆಯುತ್ತದೆ. ಪ್ರಾಜ್ಞರಾದವರು, ಸತ್ಸಂಗದಿಂದ,ಸದಾಚಾಚಾರದಿಂದ, ಸದ್ಗುರು ಸೇವೆಯಿಂದ, ಸತ್ತಿನ ಉಪಾಸನೆಯಿಂದ,ಇಂದ್ರಿಯಭೋಗದ ನಿರಾಸಕ್ತಿಯಿಂದ, ಸತ್ವಗುಣವನ್ನು ಮನಸ್ಸಿನಲ್ಲಿ ಬೆಳೆಸಿಕೊಂಡು ಅದನ್ನೇ ಸ್ವಭಾವವನ್ನಾಗಿಸಿಕೊಂಡಾಗ ಶಾಶ್ವತ ಆನಂದವು ದೊರೆಯುವುದರಲ್ಲಿ ಸಂದೇಹವೇ ಇಲ್ಲ. 

  
   
 ಓಂ ಶಾಂತಿ ಓಂ ಶಾಂತಿ ಓಂ ಶಾಂತಿ 

1 comment:

  1. ಸತ್ಸಂಗತ್ವೆ ನಿಸ್ಸಂಗತ್ವಂ-ನಿಸ್ಸಂಗತ್ವೆ ನಿರ್ಮೋಹತ್ವಂ-ನಿರ್ಮೋಹತ್ವೆ ನಿಶ್ಚಲ ತತ್ವಂ-ನಿಶ್ಚಲತತ್ವೆ ಜೀವನ್ಮುಕ್ತಿ:
    ಎಷ್ಟು ಚಂದದ ಸಾಲುಗಳು ಸರ್.
    ಶಂಕರರ ಮಾತನ್ನು ನೆನಪಿಸಿದ್ದಾಕ್ಕಾಗಿ ವಂದನೆಗಳು.
    ನಿಮ್ಮ ಕವಿತೆಗಳು ಸುಂದರವಾಗಿವೆ.
    ಕಾಲಾಯ ತಸ್ಮೈ ನಮಃ ತುಂಬಾ ಇಷ್ಟವಾಯಿತು
    ಬರೆಯುತ್ತಿರಿ
    ಸ್ವರ್ಣಾ

    ReplyDelete