Thursday 26 September 2013

ಕೇಶದಾ ಕ್ಲೀಷೆ




ಒಂದುಕಾಲಕ್ಕೆ ತುಂಬಾ ಇತ್ತು 


ಆನಂದವಾಗಿ ಬೆರಳಾಡಿಸಬಹುದಿತ್ತು 

ಮನಕೆ ಬಂದಹಾಗೆ ಮಣಿಸಬಹುದಿತ್ತು 

ಅಂದಚಂದಕೆ ತಿದ್ದಿ ತೀಡಬಹುದಿತ್ತು 



ವಾರಕ್ಕೊಮ್ಮೆ ಎಣ್ಣೆ ಕುಡಿಯುತ್ತಿತ್ತು


ಅಭ್ಯಂಜನದ ನಂತರ ಗಾಢ ಮಲಗಿಸುತ್ತಿತ್ತು.

ಎದ್ದಮೇಲಂದು ದೇಹ ಹಗುರಾಗುತಿತ್ತು

'ಮತ್ತ' ದೇಹ ಮತ್ತದನ ಬೇಡುತ್ತಿತ್ತು



ಹುಡುಗರಿಗೆ ದೇವಾನಂದ, ರಾಜೇಶ್ ಖನ್ನ


ಮಾದರಿಯಾದರೆ,ಹುಡುಗಿಯರಿಗೆ ಮಧು

ಬಾಲಳೋ ಮೀನಾಕುಮಾರಿಯಂತೆಯೋ


ಕಾಣುವಾ ಬಯಕೆಯಿರುತ್ತಿತ್ತು


ಭಾನುವಾರದಂದು ಭಾರೀ 'ಕ್ಯೂ' ಇರುತಿತ್ತು

ಲೇಟಾದರೆ, ಅದನ್ನಾಗಲೇ ಕಳೆದುಕೊಂಡ

ಅಪ್ಪನ ' ಅದೇನು ಅಮೇರಿಕನ್ ಕಟಿಂಗೋ


ಎಷ್ಟು ಹೊತ್ತುಎಂಬ ಕೂಗಾಟವಿರುತ್ತಿತ್ತು


ಅದು ಹೋದ ಅರಿವೇ ಆಗಲಿಲ್ಲ.


ಬಟ್ಟತಲೆ ಬಂದದ್ದೆ ಗೊತ್ತಾಗಲಿಲ್ಲ

ನೋಡನೋಡುತ್ತಾ ಬರಿದಾಯಿತಲ್ಲ

ಮತ್ತೆ ಬೇಕೆಂದರೂ ಬರದಾಯಿತಲ್ಲ


ಇರದೆಡೆಗೆ ಇರುವೆಡೆಯಿಂದ ಎರವಲು 

ಬೆಳ್ಳಗಾದರೂ ಬಣ್ಣಹಚ್ಚುವ ತೆವಲು

ಮಣ್ಣಲ್ಲಿ ಮಣ್ಣಾಗುವ ಕೇಶದಾ ಕ್ಲೇಷೆ

ಸಾಯುವತಕನ ಬಿಡದಾ ಕ್ಲೀಷೆ



ರವಿ ತಿರುಮಲೈ

1 comment:

  1. ನಮ್ಮ ಕ್ಲಿಷೆಯನ್ನು ಅಮೋಘವಾಗಿ ಕಣ್ಣೀರು ಧಾರಾಕಾರವಾಗಿ ಉದ್ಭವಿಸುವಂತೆ ಚಿತ್ರಿಸಿದ್ದೀರ ಸಾರ್. :-D
    ಒಮ್ಮೆ ಊರಗಲವಾಗಿರುವ ಹಣೆ ಮತ್ತು ಗತ ಕಾಲದ ಕ್ರಾಪನ್ನು ನೆನೆಸಿಕೊಂಡು ಒಂದು ಸಿಗರೇಟು ಸುಟ್ಟು ಬಿಸಾಕಿದೆ!
    ಒಂದು ಕಾಲದಲ್ಲಿ ನಮ್ಮ ಕ್ಲಾಸ್ ರೂಂನಲ್ಲಿ ಹುಡುಗರೆಲ್ಲಾ ಶಿವರಾಜ್ಕುಮಾರ್ ಮತ್ತು ಹುಡುಗಿಯರೆಲ್ಲ ಸುಧಾರಾಣಿ ಹೇರ್ ಸ್ಟೈಲ್ ಮಾಡುತ್ತಿದ್ದೆವು.

    ಭಾಷೆಯ ಸಮರ್ಥ ಬಳಕೆ ಮತ್ತು ನದಿಯ ಎಲ್ಲ ಒನಪುಗುಳು ಮತ್ತು ಜಲಪಾತದ ಧಾರೆಯಂತಹ ನಿಮ್ಮ ಈ ಕಾವ್ಯ.

    ReplyDelete