Friday 28 June 2013

ಅನ್ನಂ ಬ್ರಹ್ಮ



ಕಣ್ಣಂಚಿನಲ್ಲಿ ನೀರ ಹನಿಗಳು ಜಿನುಗುತ್ತವೆ,
ತೊಯ್ದ ಕಣ್ಣಾಲಿಗಳು ಕತೆ ಹೇಳುತ್ತವೆ 
ಕೊರಗುತ್ತವೆ ಎಸೆದ ಅಗುಳಗುಳುಗಳು 


ಯಾರದೋ ಉದರ ಸೇರಿ ತಣಿಸಬಹುದಿತ್ತು 
ಕ್ರೂರ ಕೈಗಳು ತುಸು ಯೋಚಿಸಬಹುದಿತ್ತು 
ಎಸೆಯುವ ಮುನ್ನ ಯಾರಿಗಾದರೂ ನೀಡಬಹುದಿತ್ತು. 

ಎಂಜಲೆಲೆಯಲ್ಲಿ ಅಗಳ ಹೆಕ್ಕುವ ನಾಯಿಗಳೊಂದಿಗೆ 
ಪೈಪೋಟಿಗೆ ನಿಲ್ಲುವರು ಬಿದ್ದರೆಲೆ ಹಿತ್ತಲಿಗೆ 
ಹುಡುಕಲು ತಮ್ಮ ಹಸಿವಿನೊಂದಂಶ ನೀಗಲಿಕೆ 

ಹೆಚ್ಚು ಸಿಕ್ಕಿದವರಿಂದು ಹಮ್ಮು ತೋರುವರು 
ಸಿಗದವರು ಪಾಪ ಹಸಿವಿನಲ್ಲಿ ಕೊರಗುವರು 
ಬೇಡುವವರಿಗೆ ಇದ್ದವರು ಬರಿಗೈಯ ತೋರುವರು. 

ಇರುವವನಿಗೆ ಮನಸಿಲ್ಲ ಕೊಡಬೇಕು ಎಂದು 
ಮನಸಿರುವವಗೆ ಅರೆ ಬರೆ ಊಟವೆಂದೆಂದೂ 
ಬೇಕೆಂದರೂ ಇವನು ಕೊಡಲಾರನೆಂದೆಂದೂ 

ಹಸಿವ ಕೂಗಿಗೆಂದು ಕೊನೆಯೋ ನಾ ಕಾಣೆ 
ಮಸೂದೆಯಲಿ ಆಹಾರ ಕೊಟ್ಟಿಹಳು ಜಾಣೆ 
ರೂಪಾಯಿ ಕರ್ಚಿನಲಿ ನುಂಗುವಳು ಹದಿನೈದಾಣೆ




ರವಿ ತಿರುಮಲೈ 

1 comment:

  1. ಆಹಾರ ಭದ್ರತಾ ಕಾಯಿದೆ ಹೇಗೆ ಬಳಸಿಕೊಳ್ಳ ಬಹುದು ಎನ್ನುವುದನ್ನು ಕಾಳ ಸಂತೆ ಮಾರುಕಟ್ಟೆ ಈಗಾಗಲೇ ಸ್ಕೆಚ್ ಹಾಕುತ್ತಿದೆ!

    ReplyDelete