Saturday 17 November 2018

ವಿಶ್ವಾನುಭವ - ವಿಶ್ವಾತ್ಮಾನುಭವ

ನಮಗೆ ಕಾಣುವುದೆಲ್ಲವೂ ನಾಶವಾಗುವಂತಹದ್ದಾದರೂ, ನಮ್ಮ ನೋಟದ ಪರಿಧಿಗೆ ಬಂದಾಗ ಅದು ಸತ್ಯವಾಗಿರುತ್ತದೆ.  ಹಾಗಾಗಿ ಕೇವಲ ನೋಡುವುದಷ್ಟೇ ನಮ್ಮ ಕರ್ತವ್ಯ. ವಿಶ್ವದ ಅನುಭವವೇ ವಿಶ್ವಾತ್ಮಾನುಭವಕ್ಕೆ ದಾರಿ ಮತ್ತು ನಾಶವಾಗುವುದರ ಮೂಲಕವೇ ಅವಿನಾಶಿಯಾದ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೆಂಬುವುದು ನಮ್ಮ ಬದುಕಿನಲ್ಲಿ ಸತ್ಯವಾದ ಅರಿವಿನ ಮತ್ತು ಅರಿವಿಗೆ ಮಾರ್ಗದ.  


ಈ ಜಗತ್ತು ಜಡ ಮತ್ತು ಚೇತನದಿಂದ ಆಗಿದೆ. ಜಡಕ್ಕೆ ರೂಪವುಂಟು. ಚೇತನಕ್ಕೆ ರೂಪವಿಲ್ಲ. ಆದರೆ ಆ ಜಡದ ರೂಪ ಬದಲಾಗುತ್ತಾ ಇರುತ್ತದೆ. ಯಾವ ರೂಪವೂ ಶಾಶ್ವತವಾಗಿರುವುದಿಲ್ಲ. ಚೇತನಕ್ಕೆ ಮಾತ್ರ ನಾಶವಿಲ್ಲ. ಅದು ಅನಶ್ಯ. ಜಡದ ಈಗಿನ ರೂಪ ನಾಶವಾಗಿ ಮತ್ತೊಂದು ರೂಪವನ್ನು ಪಡೆದುಕೊಂಡರೂ ನಾವು ನೋಡುವಾಗಿನ ರೂಪ ನಮಗೆ ಸತ್ಯವಲ್ಲವೆ. ಅದನ್ನು ನೋಡುವುದಷ್ಟೇ ನಮ್ಮ ಕರ್ತವ್ಯ. 

ಉದಾಹರಣೆಗೆ, ಒಂದು ಪುಟ್ಟ ಮಗು, ಮಗುವಾಗೇ ಇರದೆ, ಬಾಲಕ(ಕಿ)ನಾಗಿ ಯುವಕ(ತಿ)ನಾಗಿ, ವಯಸ್ಕನಾಗಿ, ಮುದುಕ(ಕಿ)ನಾಗಿ, ಒಂದು ದಿನ ಆ ರೂಪವೂ ಇಲ್ಲದೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾನೆ. ಹೀಗೆ ಬದಲಾಗುತ್ತಾ ಹೋಗುವ ರೂಪವು ಶಾಶ್ವತವಲ್ಲದಿದ್ದರೂ ಆಯಾಯಾ ಅವಸ್ಥೆಗಳಲ್ಲಿ ನಾವು ನೋಡುವ ದೃಶ್ಯ (ಕಾಣಬಹುದಾದದ್ದು), ಸತ್ಯವಲ್ಲವೇ? 

ನಾವು ಇರುವ ಬಾಳು ನಮ್ಮ ಮಟ್ಟಿಗೆ ಸತ್ಯವಾದದ್ದು. ಅದರ ವಿವರಣೆ ಮತ್ತು ವಿಶ್ಲೇಷಣೆ ಮಾಡುವ ಹೊಣೆ ಅಥವಾ ಜವಾಬುದಾರಿ ನಮ್ಮ ಮೇಲಿಲ್ಲ. ಅದನ್ನು ನಾವು ಕೇವಲ ಜಾಣ್ಮೆಯಿಂದ ಅನುಭವಿಸಿ, ಇದರ ಹಿರಿಮೆಯನ್ನು ಹೆಚ್ಚಿಸುವುದಕ್ಕೆ ಕ್ರಿಯಾಶೀಲರಾಗುವುದೇ ನಮ್ಮ ಕರ್ತವ್ಯ ಎಂದು ನಮ್ಮ ಬಾಳನ್ನು ಹೇಗೆ ನಡೆಸಬೇಕು ಎನ್ನುವುದೇ ನಮಗೆ ನಮ್ಮ ಸನಾತನದ ಋಷಿಮುನಿಗಳೂ ಪೂರ್ವಜರೂ, ಅನೇಕಾನೇಕ ಸದ್ಭಕ್ತರೂ ಹಾಕಿಕೊಟ್ಟಿರುವ ಸನ್ಮಾರ್ಗ. ಆ ಮಾರ್ಗದಲ್ಲಿ ನಡೆಯುವುದಷ್ಟೇ ನಮ್ಮ ಕರ್ತವ್ಯ.  

ನಾವು ನಮ್ಮ ಪ್ರಮೇಯವಿಲ್ಲದೆ ಈ ಜಗತ್ತಿಗೆ ಬಂದಿದ್ದೇವೆ. ನಾವೆಲ್ಲಾ ಈ ಜಗತ್ತನ್ನು ನಡೆಸುವ ಆ ಪರಮ ಚೇತನದ ಅಧೀನ. ನಾವು ಒಪ್ಪಿದರೂ ಬಿಟ್ಟರೂ ಇದೇ ಸತ್ಯ. ಆದ್ದರಿಂದ ನಾವು ಇಲ್ಲಿ ಕೇವಲ ಇದ್ದುಹೋಗಲು ಬಂದ ಅತಿಥಿಗಳು. ಯಾರ ಮನೆಗಾದರೂ ಅತಿಥಿಗಳು ಬಂದರೆ ಹೇಗಿರುತ್ತಾರೆ? ಬಂದ ಸ್ಥಳದಲ್ಲಿ ಇರುವುದನ್ನು ವಿಮರ್ಶೆ ಮಾಡದೆ, ಇದ್ದು ಹೋಗುತ್ತಾರಲ್ಲವೇ? ಹಾಗೆಯೇ  ನಾವೂ ಸಹ ಇದ್ದು ಹೋಗಬೇಕು. ಪರಮಾತ್ಮ ತನಗೆ ಹೇಗೆ ಬೇಕೋ ಹಾಗೆ, ನಮ್ಮನ್ನೂ ಸೇರಿಸಿ, ಈ ಜಗತ್ತನ್ನು ಸೃಷ್ಟಿಮಾಡಿಕೊಂಡಿದ್ದಾನೆ. ನಾವು ಕೇವಲ ಇದ್ದು ಹೋಗಬೇಕೇ ಹೊರತು ಇಲ್ಲಿನ ವ್ಯವಸ್ಥೆಯನ್ನು ವಿಮರ್ಶೆ ಮಾಡುವ ಅಧಿಕಾರ ನಮಗಿಲ್ಲ. ಹಾಗೇನಾದರೂ ನಾವು ವಿಮರ್ಶೆ ಮಾಡಲು ಹೊರಟರೆ, ಈ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟು ವಿಭಿನ್ನ ವಿಮರ್ಶೆಗಳು ನಮಗೆ ಸಿಗಬಹುದು. 

ಹಾಗೆ ಇರುವಾಗ ನಾವು ಹೇಗಿರಬೇಕು ಎಂದರೆ "ನಾವದರ ಸಿರಿಯಾ ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ " ಎಂದಿದ್ದಾರೆ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ. ಎಂದರೆ ಇಲ್ಲಿರುವುದನ್ನು ಅನುಭವಿಸಬೇಕು. ಆ ಪರಮಾತ್ಮ ನಮಗಾಗಿ ಸೃಷ್ಟಿಸಿದ ಸಿರಿ, ಎಂದರೆ ಸಂಪತ್ತನ್ನು ಅಭಿವೃದ್ಧಿಗೊಳಿಸುವ ಪ್ರಯತ್ನವನ್ನು ಮಾಡುತ್ತಾ ನಮ್ಮ ಈ ಪ್ರಯಾಣವನ್ನು ಮುಗಿಸಬೇಕು. ಅದನ್ನೇ ಪುರುಷಾರ್ಥವೆಂದಿದೆ ನಮ್ಮಸನಾತನದ  ಪದ್ಧತಿ. ಪ್ರಕೃತಿ ಪ್ರಭಾವಿತರಾಗಿ, ಇಂದ್ರಿಯಗಳ ಸ್ಪಂದನಗಳಿಗೆ ಅಧೀನರಾದ ನಾವು ಸಹಜವಾಗೇ " ಕಾಮ" ಎಂದರೆ ಆಸೆ ಪಡುತ್ತೇವೆ. ನಾವು ಕಾಮಿಸಿ ಪಡೆಯುವುದೆಲ್ಲಾ "ಅರ್ಥ",  ಎಂದರೆ ನಾವು ಪಡೆದ ಸಂಪತ್ತು. ಅದನ್ನು ನಾವು "ಧರ್ಮ" ದಿಂದ ಅನುಭವಿಸಬೇಕು ಮತ್ತು ಪರರಲ್ಲಿ ವಿನಿಯೋಗಿಸಬೇಕು, ಎಂದರೆ ಹಂಚಬೇಕು. ಹೀಗೆ ಧರ್ಮದಿಂದ ವಿನಿಯೋಗ ಮಾಡಿ ಎಲ್ಲವನ್ನೂ ತೊರೆದು "ಮೋಕ್ಷ"ವನ್ನು ಪಡೆದು ಮುಕ್ತರಾಗಬೇಕು ಎನ್ನವುದು ಪುರುಷಾರ್ಥದ ನಿಯಮ. ಪ್ರಕೃತಿಯಿಂದ ಪ್ರಭಾವಿತರಾಗಿ, ಆಸೆಪಟ್ಟು ಪಡೆದು, ಅನುಭವಿಸಿ, ಧರ್ಮದಿಂದ ಹಂಚಿ, ಎಲ್ಲವನ್ನೂ ತೊರೆದು ಪ್ರಕೃತಿಯ ಪ್ರಭಾವದಿಂದ ಮುಕ್ತಿಯನ್ನು ಪಡೆಯುವುದೇ "ಪುರುಷಾರ್ಥದ" ನಾಲ್ಕು ಪಾದಗಳು. ಪ್ರತಿಯೊಬ್ಬರೂ ಈ ಪುರುಷಾರ್ಥವನ್ನು ನಿಜಸ್ವರೂಪದಲ್ಲಿ ಪರಿಪಾಲಿಸಿದರೆ, ಈ ಜಗತ್ತು ಸ್ವರ್ಗವಾಗಿಬಿಡುವುದರಲ್ಲಿ ಸಂದೇಹವೇ ಇಲ್ಲ.  

ಇನ್ನು,  ಚೇತನಕ್ಕೆ ರೂಪವಿಲ್ಲ. ಅದನ್ನು ರೂಪಗಳ ಮೂಲಕ, ಕೇವಲ ಅನುಭವದಿಂದ ಅರಿಯಬಹುದು. ಅದು ಶಾಶ್ವತ ಮತ್ತು ನಿರಂತರ. ಕಾಣುವಂತಾ ಮತ್ತು ಬದಲಾಗುತ್ತಾ ಹೋಗುವ ರೂಪ ಮತ್ತು ಕಾಣಲಾಗದ ಚೇತನಗಳ ಸಮ್ಮಿಲನವೇ ಈ ಜಗತ್ತು. ಕಾಣುವಂತಾ ರೂಪ, ಎಂದರೆ ಜೀವಿಗಳು ಹೊತ್ತ ದೇಹಗಳು.  ಈ ರೂಪಗಳು ಜಗತ್ತಿನ ಅನುಭವ ಪಡೆಯುವುದೇ ಆ ಕಾಣಲಾಗದ ಚೇತನದ ಮೂಲಕ ಮತ್ತು ಕಾಣಲಾಗದ ಚೇತನ ತನ್ನ ಜಗತ್ತಿನ ಪಯಣವನ್ನು ನಡೆಸುವುದೇ ಬದಲಾಗುತ್ತಾ ಹೋಗುವ ರೂಪ ಹೊಂದಿದ ಈ ದೇಹದ ಮೂಲಕ. ಮಾನ್ಯ ಗುಂಡಪ್ಪನವರು 'ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ' ಎಂದು ಬಹಳ ಸೂಕ್ತವಾಗಿ ಹೇಳಿದ್ದಾರೆ.  

ನಮ್ಮ ದೇಹವನ್ನು ಮಲ ಮೂತ್ರಗಳ ಆಗರ, ಕೊಳೆಯ ಹುತ್ತ ಎನ್ನಬಾರದು. ನಮ್ಮ ಋಷಿ ಮುನಿಗಳು ಈ ದೇಹವನ್ನು ಪರಮಾತ್ಮನ ಆವಾಸ ಸ್ಥಾನವೆಂದಿದ್ದಾರೆ. ಚೆನ್ನಾಗಿ ಬೆಳೆಸಿ, ರಕ್ಷಿಸಿ, ಕಡಿವಾಣ ತೊಡಿಸಿ ಓಡಿಸಿದರೆ ತನ್ನ ಗುರಿಮುಟ್ಟುವ ಒಳ್ಳೆಯ ಕುದುರೆಯಂತೆ, ನಾವೂ ಸಹ ನಮ್ಮ ದೇಹವನ್ನು  ರಕ್ಷಿಸಿಕೊಂಡು ದೃಢವಾಗಿಟ್ಟುಕೊಂಡು ತನ್ಮೂಲಕ ಸಾಧನೆಗೈದರೆ, ನಮ್ಮ ಗಮ್ಯವಾದ ಪರಮಾತ್ಮನನ್ನು ಮುಟ್ಟಬಹುದು ಎಂದು ದೇಹಾತ್ಮ ಸಂಬಂಧವನ್ನು ವಿಮರ್ಶೆಮಾಡಿದ್ದಾರೆ ನಮ್ಮ ಪೂರ್ವಜರು. 

ನಮ್ಮ ದೇಹದ ಯಜಮಾನನಾದ ಆತ್ಮನು ದೇಹವನ್ನು ಒಂದು ಉಪಕರಣದ ರೀತಿ ಉಪಯೋಗಿಸಿಕೊಳ್ಳುತ್ತಾನೆ. ನಾವು ನಮ್ಮ ಕೆಲಸ  ಕಾರ್ಯಗಳಿಗೆ ಉಪಯೋಗಿಸುವ ಹಲವಾರು ಉಪಕರಣಗಳು ಇವೆ. ಆ ಉಪಕರಣಗಳನ್ನು ನಾವು ಸರಿಯಾಗಿ ನೋಡಿಕೊಂಡು ಕಾಪಾಡಿಕೊಂಡರೆ ಅವು ನಮ್ಮ ಕೆಲಸಕ್ಕೆ ಬರುತ್ತವೆ. ಉದಾಹರಣೆಗೆ, ನಮ್ಮ 'ಮೋಟರ್ ಸೈಕಲ್' ನ್ನು ಜೋಪಾನವಾಗಿ ನೋಡಿಕೊಂಡು, ಕಾಲಕಾಲಕ್ಕೆ 'ಸರ್ವಿಸ್' ಮಾಡಿಸಿ ಇಟ್ಟುಕೊಂಡರೆ, ಓಡುವಾಗ ತೊಂದರೆ ಕೊಡದೆ, ನಮ್ಮನ್ನು ನಮ್ಮ ಗಮ್ಯಕ್ಕೆ ಸೇರಿಸುತ್ತದೆ.

ಇದೇ ರೀತಿ ಪರಮಾತ್ಮನ ಪ್ರತಿರೂಪವಾದ ಆತ್ಮನ ವಾಸ ಸ್ಥಾನವಾದ ದೇಹವನ್ನು, ಕಾಪಾಡಿಕೊಳ್ಳಬೇಕು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಒಂದು ಸದೃಢ ದೇಹದಲ್ಲಿ ಒಂದು ಆರೋಗ್ಯಕರವಾದ ಮನಸ್ಸು ಇರುತ್ತದೆ ಎನ್ನುವುದು ಒಂದು ಆಂಗ್ಲ ನಾಣ್ಣುಡಿ. ಹಾಗಾಗಿ ಆರೋಗ್ಯಕರವಾದ ದೇಹದಲ್ಲಿರುವ ಆರೋಗ್ಯಕರವಾದ ಮನಸ್ಸಿನ ಸಹಾಯದಿಂದಲೇ ಆತ್ಮಜ್ಞಾನ ಪಡೆಯಲು ಅನುಕೂಲವಾದ 'ಬೇಕು - ಬೇಡ' ಗಳ ಇತ್ಯರ್ಥವಾಗಿ, ಆತ್ಮೋದ್ಧಾರಕ್ಕೆ ಯಾವುದು ಬೇಕೋ ಅದನ್ನು ಪಡೆದು, ಶೇಖರಿಸಿ, ವೃದ್ಧಿಗೊಳಿಸಿಕೊಂಡು ತನ್ಮೂಲಕ ಬೇಡದ್ದನ್ನು ಪ್ರಯತ್ನಪೂರ್ವಕವಾಗಿ ತ್ಯಜಿಸಿದರೆ, 'ಆತ್ಮ ಜ್ಞಾನ ' ಪಡೆಯಲು ಸಾಧ್ಯ. ಹಾಗೆ ಪಡೆದ ಆತ್ಮ ಜ್ಞಾನವೇ ನಮ್ಮನ್ನು ಪರಮಾತ್ಮಾಭಿಮುಖವಾಗಿಸುವುದು. 

ಹಾಗೆಂದು ಕೇವಲ ದೇಹಕ್ಕೆ ಮಾತ್ರ  ಪ್ರಾಮುಖ್ಯತೆಯನ್ನು ಕೊಟ್ಟು, ಲೌಕಿಕಾನಂದವನ್ನೇ ಪಡೆದು, ಇಂದ್ರಿಯ ಸುಖವನ್ನು ಅನುಭವಿಸದೆ,  ದೇಹವನ್ನು 'ಕೇವಲ' ಒಂದು ಉಪಕರಣದಂತೆ ಉಪಯೋಗಿಸಿಕೊಂಡು ಅತ್ಮಾನುಭವ ಮತ್ತು ತನ್ಮೂಲಕ ಪರಮಾತ್ಮಾನುಭವ ಪಡೆಯುವ ಪ್ರಯತ್ನ ನಮ್ಮದಾಗಬೇಕು. ಪರಮ ಚೇತನವನ್ನು ಅರಿಯುವುದೇ ಆಧ್ಯಾತ್ಮದ ಗುರಿ. ಆದರೆ 'ಅವಿನಾಶಿ'ಯಾದ ಆ ಪರಮ ಚೇತನವನ್ನು ಅರಿಯಲು 'ನಾಶಿ'ಯಾದ ಈ ದೇಹದ ಅಥವಾ ರೂಪದ ಮೂಲಕವೇ ಸಾಧ್ಯ ಎಂದು 'ಜಡ ಮತ್ತು ಜೀವ'ಗಳ ಒಂದು ಅವಿನಾಭಾವ ಸಂಬಂಧವನ್ನು ನಾವು ಸತ್ಯವಾಗಿ ಅರಿತುಕೊಂಡಾಗ ದೇಹದ ಮೂಲಕ ಆಗಬೇಕಾದ ಆತ್ಮೋದ್ಧಾರ ಖಂಡಿತವಾಗಿ ಆಗುತ್ತದೆ. ಅಂತಹ ಪ್ರಯತ್ನವನ್ನು ಮಾನವರಾದ ನಮಗೆ ಅವಕಾಶವನ್ನಿಟ್ಟಿದ್ದಾನೆ ಪರಮಾತ್ಮ. ಅದನ್ನು ಬಳಸಿಕೊಂಡು ಮುಕ್ತಿಯ ಮಾರ್ಗದಲ್ಲಿ ನಡೆಯುವ ಪ್ರಯತ್ನವನ್ನು ನಾವು ಮಾಡಬೇಕು. 



ನಮಸ್ಕಾರ 

ರವಿ ತಿರುಮಲೈ 

1 comment:

  1. ಅರಿವಿಲ್ಲದೆಯೇ ಬರುವ ಜೀವ ಅರಿವಾಗುತ್ತಲೇ ಹೊರಟು ಹೋಗುವ ಈ ಪಯಣದಲ್ಲಿ ಈ ಜಗದಲ್ಲಿ ಸ್ವಲ್ಪ ಜಾಗ ಮಾಡಿಕೊಂಡು ಬದುಕಬೇಕಾದ ಸರಳ ಸೂತ್ರವನ್ನು ಸರಳ ವಿವರಣೆಯೊಂದಿಗೆ ನೀಡಿರುವ ಬರಹ ಇಷ್ಟವಾಗುತ್ತದೆ ಗುರುಗಳೇ..

    ಹೇಳಬೇಕಾದ ಮಾತುಗಳನ್ನು ಸರಳವಾಗಿ ಸುಂದರವಾಗಿ ಮನಕ್ಕೆ ತಾಕುವಂತೆ ಹೇಳುವ ನಿಮ್ಮ ಬರಹಕ್ಕೆ ಒಂದು ಸಲಾಂ..

    ಜಗದಲ್ಲಿ ಬದುಕಬೇಕಾದಾಗ ವಿಶ್ಲೇಷಣೆಗೆ ಒತ್ತು ನೀಡದೆ ನಮ್ಮ ವಿವರಗಳನ್ನು ಬಿಟ್ಟುಹೋಗುವ ಬಗ್ಗೆ ಸರಿಯಾಗಿ ಯೋಚಿಸಿ ಹೋಗಬೇಕಾದ ಮಾರ್ಗದ ಬಗ್ಗೆ ಹೇಳಿರುವ ರೀತಿ ಸೊಗಸಾಗಿದೆ ಗುರುಗಳೇ

    ReplyDelete