Tuesday 19 September 2017

ಮೂರು ' E E E ' ಗಳ ಮಹತ್ವ

ಮೂರು ' E E E ' ಗಳ ಮಹತ್ವ

ಮೂರು E ಗಳು ಯಾವುವೆಂದರೆ: Entry ಎಂದರೆ ಜನನ, Existance, ಎಂದರೆ ಜೀವನ ಮತ್ತು Exit, ಎಂದರೆ ನಿರ್ಗಮನ. ಇವುಗಳನ್ನು ನಾವು ಕೂಲಂಕುಷವಾಗಿ ಗಮನಿಸಿ ನಮ್ಮ ಮನಸ್ಸುಗಳಲ್ಲಿ ಇದರ ವಿಚಾರವನ್ನು ಮಥಿಸಿದರೆ ನಮಗೆ ಕೆಲವು ವಿಷಯಗಳು ತಿಳಿಯುತ್ತವೆ.
ಈ ಜಗತ್ತಿಗೆ entry ಎಂದರೆ ಬರುವ, ಜಗತ್ತಿನ ಸಕಲರ ಜನನವೂ ಒಂದೇ ರೀತಿಯಲ್ಲಿ ಆಗುತ್ತದೆ. ತಾಯ ಗರ್ಭದಲ್ಲಿ, ಮೊಳೆತು ನವಮಾಸ ಬೆಳೆದು ಭೂಮಿಗೆ ಬಂದು ಬೀಳುವುದು. ಮನುಷ್ಯರನ್ನು ಹೊರತು ಪಡಿಸಿ ನೋಡಿದರೆ ಅನ್ಯ ಪ್ರಾಣಿ, ಪಕ್ಷಿ, ಕೀಟ, ಜಂತು ಮುಂತಾದವುಗಳೆಲ್ಲವೂ ಸಹ ಅವರವರ ತಾಯ ಗರ್ಭದಿಂದಲೇ ಜನಿಸುವುದು. ಆದರೆ ಅವುಗಳ 'ಗರ್ಭವಾಸ' ಅಥವಾ 'ತತ್ತಿವಾಸ'ದ ಸಮಯದಲ್ಲಿ ವ್ಯತ್ಯಾಸವಿರಬಹುದು. ನಾವು ಮಾನವರನ್ನೇ ಪ್ರತ್ಯೇಕಿಸಿ ನೋಡಿದಾಗ, ಜಗತ್ತಿನ ಯಾವುದೇ ಮೂಲೆಯಲ್ಲಿಯಾಗಲೀ ಯಾವುದೇ ಬಣ್ಣ, ಭಾಷೆ, ಸಂಸ್ಕೃತಿ, ಕುಲ, ಮತ ಮತ್ತು ಧರ್ಮದವರಾಗಲೀ ಇದಕ್ಕಿಂತ ಬೇರೆಬೇರೆ ರೀತಿಯಲ್ಲಿ ಜನಿಸುವುದು ಸಾಧ್ಯವಿಲ್ಲ, ಅಲ್ಲವೇ? ಇದು ಪ್ರಕೃತಿಯ ನಿಯಮ ಮತ್ತು ಈ ಪ್ರಕೃತಿಗೆ, ನಿಯಾಮಕ ಶಕ್ತಿ ಒಂದೇ. ಹೀಗೆ ನಾವೆಲ್ಲಾ ಒಂದೇ ರೀತಿಯಲ್ಲಿ ಜನಿಸಿದವರಾದ್ದರಿಂದ ನಮ್ಮನ್ನು 'ಜನ' ಎಂದು ಕರೆದರು. ಹಾಗೆ ಜನಿಸಿದವರ ಬಣ್ಣ, ಆಕಾರ, ಭಾಷೆ, ಸಂಸ್ಕೃತಿ, ಸಂಸ್ಕಾರ, ಆಹಾರ ಪದ್ದತಿಗಳು ಆಯಾಯ ದೇಶಕಾಲಾನುಸಾರವಾಗಿ ಭಿನ್ನ ಭಿನ್ನವಾದರೂ ಅವರೆಲ್ಲರ ಜನನ ಪ್ರಕ್ರಿಯೆ ಮಾತ್ರ ಒಂದೇ ಆಗಿರುತ್ತದೆ, ಅಲ್ಲವೇ? ಹಾಗಾಗಿ Entry ಎಂದರೆ ಜನನವು ಜಗತ್ತಿನ ಜನರೆಲ್ಲರಿಗೂ ಸಮಾನ.

ಹುಟ್ಟಿದ ಮನುಷ್ಯರೆಲ್ಲರೂ ಹುಟ್ಟುವುದು ಒಂದೇ ರೀತಿ. ಹೆಣ್ಣು ಗಂಡಿನ ಬೇಧದ ಹೊರತು ಎಲ್ಲರಿಗೂ ಎರಡು ಕಾಲು, ಎರಡು ಕೈ, ಪಾದಗಳು, ರುಂಡ ಮುಂಡಗಳು, ಕಣ್ಣು, ಕಿವಿ, ಮೂಗು ಬಾಯಿ ತಲೆ ಹೀಗೆ ಎಲ್ಲವೂ, ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಬಣ್ಣ ಆಕಾರ ಬೇರೆಬೇರೆಯಾಗಿದ್ದರೂ ಎಲ್ಲವೂ ಸಮಾನವಾಗಿರುತ್ತವೆ. ಅಮೇರಿಕಾದಲ್ಲಿ ಕಿವಿಯಲ್ಲಿ ನೋಡಿ, ಕಣ್ಣಲ್ಲಿ ಕೇಳಲಾಗುವುದಿಲ್ಲ ಅಲ್ಲವೇ? ಹಾಗಾಗಿ ಎಲ್ಲರ Entry ಒಂದೇ ರೀತಿಯದ್ದಾಗಿರುತ್ತದೆ.

ಇನ್ನು ಈ ಜಗತ್ತಿನ ಜೀವನವನ್ನು ಎಂದರೆ, Existance ನ್ನು ನೋಡೋಣ. ಬಾಳು ಬಹಳ ವೈವಿಧ್ಯತೆಯಿಂದ ಕೂಡಿದೆಯಾದರೂ ಮೂಲ ಕೆಲಸಗಳು ಎಂದರೆ basic activity ಒಂದೇ ರೀತಿಯದ್ದಾಗಿರುತ್ತದೆ. ನಿದ್ರಾಹಾರ ಮೈಥುನ ಎಂಬ ಮೂರು ಮೂಲಭೂತ ಕಾರ್ಯಗಳು ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರಿಗೂ ಒಂದೇ ರೀತಿಯದ್ದಾಗಿರುತ್ತದೆ. ಬೆಳಗು ರಾತ್ರಿಗಳು, ಬೆಳಗಿನಲ್ಲಿ ಕಾರ್ಯೋನ್ಮುಖರಾಗುವುದು ರಾತ್ರಿಯ ನಿಶೆಯಲ್ಲಿ ನಿದ್ರಿಸುವುದೂ ಸಹ ಜಗತ್ತಿನಾದ್ಯಂತ ಒಂದೇ ಆಗಿರುತ್ತದೆ. ಎಲ್ಲರೂ ಏನಾದರೊಂದು ಪ್ರವೃತ್ತಿಯನ್ನು ಅವಲಂಬಿಸಿಯೇ ಜೀವನ ಮಾಡಬೇಕು. ಮಾಡುವ ಕೆಲಸ ಮತ್ತು ಅದನ್ನು ಮಾಡುವ ರೀತಿ ಬೇರೆಬೇರೆಯಾಗಿರಬಹುದಾದರೂ ಹುಟ್ಟಿದಾರಭ್ಯ ಮರಣದ ತನಕ ಎಲ್ಲರೂ ಏನಾದರೂ ಕೆಲಸಮಾಡುತ್ತಲೇ ಇರಬೇಕು. ಇದು ಜಗತ್ತಿನ ಯಾವುದೇ ಮೂಲೆಯಲ್ಲಾದರೂ, ಮಾನವರ ಬದುಕಿನ ಒಂದೇ ರೀತಿಯಾದ ಕ್ರಮ. ಹಾಗಾಗಿ ಎಲ್ಲರ Existance ನ ಮೂಲ ರೂಪರೇಷೆಗಳು ಒಂದೇ ರೀತಿಯದ್ದಾಗಿರುತ್ತದೆ, ಅಲ್ಲವೇ? ಒಬ್ಬೊಬ್ಬರ ಜೀವನ ಶೈಲಿಯು ಒಂದೊಂದು ರೀತಿಯದಾಗಿದ್ದರೂ ಎಲ್ಲರಿಗೂ ಬೆಳಕ ನೀಡುವುದು ಒಂದೇ ಸೂರ್ಯ, ಎಲ್ಲರೂ ಉಸಿರಾಡುವುದು ಒಂದೇ ಗಾಳಿಯನ್ನು, ಕುಡಿಯುವುದು ಆ ಒಂದೇ ಆಕಾಶದಿಂದ ಬಿದ್ದ ಮಳೆಯ ನೀರನ್ನು. ಇಡೀ ಜಗತ್ತಿನಲ್ಲಿ ಎಲ್ಲಿಯಾದರೂ ಬೆಂಕಿ ಸುಡುತ್ತದೆ, ನೀರು ಹರಿಯುತ್ತದೆ ಮತ್ತು ಗಾಳಿ ಬೀಸುತ್ತದೆ. ಹಾಗಾಗಿ ಮನುಷ್ಯನ ಜೀವನಕ್ಕೆ ಆಧಾರವಾದ ಪಂಚಭೂತಗಳು ಜಗತ್ತಿನಾದ್ಯಂತ ಒಂದೇ ಆಗಿರುವಾಗ ಜನರ ಜೀವನವೂ ಅವುಗಳೇ ಮೇಲೆ ನಿರ್ಭರವಾಗಿರುವಾಗ, ಎಲ್ಲರ ಜೀವನವೂ, ಎಂದರೆ existance ಒಂದೇ ರೀತಿಯಲ್ಲಿ ಆಗುತ್ತದೆ.

ಕೊನೆಯದಾಗಿ ನಾವು Exit, ಎಂದರೆ ಜಗತ್ತಿನಿಂದ ನಮ್ಮ ನಿರ್ಗಮನವನ್ನು ನೋಡುವ. Entry ಮಾಡಿದ ಪ್ರತೀ ಪ್ರಾಣಿಗೂ Exit ಕಟ್ಟಿಟ್ಟ ಬುತ್ತಿ. ಬರುವಾಗಲೇ ticket ಮತ್ತು VISA ಎರಡೂ ಹಿಡಿದೇ ಬಂದಿರುತ್ತೇವೆ. ನಿರ್ಗಮಿಸುವ ದಿನಾಂಕ ಮಾತ್ರ ನಮಗೆ ಗೊತ್ತಿರುವುದಿಲ್ಲ. ಈಗ ನಾವು ಒಂದು ಊರಿಗೆ ಹೋಗಬೇಕಾದರೆ ಹಲವಾರು ಮಾರ್ಗಗಳು ಮತ್ತು ಸಾರಿಗೆ ಸಾಧನಗಳಿರುತ್ತವೆ ಅಲ್ಲವೇ? ಉದಾ: ಮೈಸೂರಿಗೆ ಹೋಗಲು ಬಸ್ಸು ಇದೆ, ಟ್ರೈನುಂಟು, ಕಾರಲ್ಲಿ ಹೋಗಬಹುದು ಹೀಗೆಯೇ ಯಾರಿಗೆ ಏನು ಬೇಕೋ ಯಾವುದು ಅನುಕೂಲವೋ ಅದರೊಳಗೆ ಹೋಗಬಹುದು. ಹಾಗೆಯೇ ಈ ಜಗತ್ತಿನಿಂದ ನಿರ್ಗಮಿಸಲೂ ಸಹ ಹಲವಾರು ರೀತಿಗಳುಂಟು. ಸಾಧಾರಣ ಸಾವು, ಆತ್ಮಹತೆ, ಹತ್ಯೆ, ಅಫಘಾತದಲ್ಲಿ ಮರಣ, ಯುದ್ಧದಲ್ಲಿ ಮರಣ, ಇತ್ಯಾದಿ ಇತ್ಯಾದಿ. ಆದರೆ ನಿರ್ಗಮನದಿಂದ ಯಾರಿಗೂ ವಿನಾಯಿತಿ ಇಲ್ಲವೇ ಇಲ್ಲ. ಎಲ್ಲರೂ ಇಲ್ಲಿಂದ ತೊಲಗಲೇ ಬೇಕು. ಹಾಗೆ ತೊಲಗಿದ ಮೇಲೆ ಈ ದೇಹವನ್ನು ಜಗತ್ತಿನಾದ್ಯಂತ ಹೂಳುತ್ತಾರೆ ಅಥವಾ ಸುಡುತ್ತಾರೆ. (ಫಾರಸಿಗಳನ್ನು ಹೊರತು ಪಡಿಸಿ) ಅಲ್ಲಿಗೆ ಈ ದೇಹದ ಕಥೆ ಮುಗಿಯುತ್ತದೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರ ಗತಿಯೂ ಇಷ್ಟೇ. ಯಾರೂ ಇದರಿಂದ ಭಿನ್ನರಾಗಿರಲು ಸಾಧ್ಯವೇ ಇಲ್ಲ.

ಆದರೆ ಒಂದು ವಿಚಾರೆ ನಮ್ಮ Entry ಯ ಬಗ್ಗೆ ನಮಗೆ ಯಾವುದೇ ರೀತಿಯ Choice, ಎಂದರೆ ಆಯ್ಕೆ ಇರುವುದಿಲ್ಲ, ಏಕೆಂದರೆ ನಾವು ' ನಾನು ಇಂತಹವರ ಮನೆಯಲ್ಲೇ ಹುಟ್ಟಬೇಕು, ಗಂಡು ಅಥವಾ ಹೆಣ್ಣಾಗಿ ಹುಟ್ಟಬೇಕು, ಇಂತಹುದೇ ಬಣ್ಣ ಮತ್ತು ರೂಪವನ್ನು ಹೊಂದಿರಬೇಕು' ಎನ್ನುವ ಆಯ್ಕೆಗೆ ನಮಗೆ ಅವಕಾಶವಿಲ್ಲ ಅಲ್ಲವೇ?

ನಮ್ಮ Exit ಬಗ್ಗೆ ನಾವು ಯಾವುದೇ ರೀತಿಯ choice ಎಂದರೆ ಆಯ್ಕೆ ಹೊಂದಿರಲು ಸಾಧ್ಯವಿಲ್ಲ. ' ನಾನಿಷ್ಟು ದಿವಸ ಬದುಕಿರಬೇಕು, ಇಂತಹ ದಿನವೇ ಸಾಯಬೇಕು, ಹೀಗೇ ಸಾಯಬೇಕು ಎನ್ನುವ ಆಯ್ಕೆಗೆ ಸ್ಥಾನವೇ ಇಲ್ಲ ಅಲ್ಲವೇ? ಹಾಗೇನಾದರೂ ಇದ್ದಿದ್ದರೆ ಇಲ್ಲಿಂದ ಯಾರೂ Exit ಆಗುವುದಕ್ಕೆ ಇಷ್ಟಪಡುತ್ತಿರಲೇ ಇಲ್ಲ ಅಲ್ಲವೇ?

ನಮ್ಮ Existance ನಲ್ಲಿ ನಾವು ಹೀಗೇ ಬದುಕಬೇಕು ಎಂದುಕೊಳ್ಳುವವರೇ ಎಲ್ಲರೂ. ಆದರೆ ಯಾರಿಗೂ ಹಾಗೆ ಇರಲು ಸಾಧ್ಯವೇ ಇಲ್ಲ. ಬದುಕು ಹೇಗೆ ಹೇಗೆ ಕೊಂಡುಹೋದರೆ ಹಾಗೆ ಹೋಗುವುದೇ existance. ಇಲ್ಲಿಯೂ ಸಹ ನಮಗೆ ಆಯ್ಕೆಗಳು ಬಹಳ ಕಡಿಮೆಯಾದರೂ ಸ್ವಪ್ರಯತ್ನದಿಂದ ನಮ್ಮ ಬದುಕನ್ನು ಸ್ವಲ್ಪಮಾತ್ರ ತಿದ್ದಿಕೊಳ್ಳಲು ಸಾಧ್ಯವಿದೆ.

ಹಾಗಾಗಿ ಜಗತ್ತಿನ ಜನರೆಲ್ಲರ ಬದುಕೂ ಒಂದೇ ರೀತಿಯಿದ್ದು, ಎಲ್ಲರ Entry, Existance ಮತ್ತು Exit ಗಳು ಮೂಲಭೂತವಾಗಿ ಒಂದೇ ಆಗಿರುವಾಗ ನಿಶ್ಚಯವಾಗಿ ಮನುಷ್ಯ ಮನುಷ್ಯರಲ್ಲಿ ಈ ಭೇದಗಳೇಕೆ? ಎಂದು ಯೋಚಿಸಿದರೆ ನಮಗೆ ಸಿಗುವ ಒಂದೇ ಒಂದು ಉತ್ತರವೆಂದರೆ ' ಅಹಂಕಾರಂ ' ಈ ಜಗತ್ತಿನಲ್ಲಿ ನಡೆಯುವ ಎಲ್ಲಾ ಅಸಾಧಾರಣ ವಿದ್ಯಮಾನಗಳಿಗೆ ಕೇವಲ ಮನುಷ್ಯನ 'ಅಹಂಕಾರವೇ' ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ' ನನಗೆ ಅಹಂಕಾರವಿಲ್ಲ ' ಎಂದುಕೊಳ್ಳುವವರೇ ಎಲ್ಲರೂ. ಈ ಅಹಂಕಾರ, ಮಮಕಾರಗಳೇ ಅಲ್ಲವೇ ಮನುಷ್ಯ ಮನುಷ್ಯರ ನಡುವೆ ಭೇಧಗಳನ್ನು ಸೃಷ್ಠಿಸಿ ಜಗತ್ತಿನ ಎಲ್ಲಾ ತೊಂದರೆ ತಾಪತ್ರಯಗಳಿಗೆ ಕಾರಣವಾಗಿರುವುದು.

ಮಾನ್ಯ ಡಿ.ವಿ.ಗುಂಡಪ್ಪನವರು ತಮ್ಮ 'ಮಂಕುತಿಮ್ಮನ ಕಗ್ಗ' ದಲ್ಲಿ:
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು I
ಬಂದುದೀ ವೈಷಮ್ಯ? - ಮಂಕುತಿಮ್ಮ

ಎಂದು ಬರೆಯುತ್ತಾ ಜಗತ್ತಿನ ಜನರ ನಡುವೆ ಇರುವ ವಿಷಮ ಸ್ಥಿತಿಗೆ ಮರುಗುತ್ತಾರೆ. ಎಲ್ಲವೂ ಸಮನಾಗಿ ಇರುವುದನ್ನು ವಿಷಮವಾಗಿ ಕಾಣದೆ ಸಮನಾಗಿ ಕಾಣುವ ಕ್ಷಮತೆಯೇ ವಿದ್ಯೆ. ಅಂತಹ ವಿದ್ಯೆಯನ್ನು ಎಲ್ಲರೂ ಪಡೆದರೆ ಈ ಜಗತ್ತು ಸಕಲ ಪ್ರಾಣಿಗಳ ಜೀವನಕ್ಕೆ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅಂತಹ ದಿನಗಳು ನಿಜಕ್ಕೂ ಎಂದು ಬರುವುದೋ !!!!!!!!!!!!!

ರವಿ ತಿರುಮಲೈ

19.09.2017

No comments:

Post a Comment