Monday 7 August 2017

ಕೋಪ - ಶಮನ ಸಾಧ್ಯವೇ?

ಕೋಪವು ಯಾರಿಗೆ ಬರುವುದಿಲ್ಲ. ಈ ಜಗತ್ತಿನಲ್ಲಿ ಜನಿಸಿದ ಪ್ರತೀ ಜೀವಿಗೂ ಕೋಪ ಬಂದೇ ಬರುತ್ತದೆ. ಸಾಕಾರಣವಾಗಿಯೋ ಅಥವಾ ಆಕಾರಣವಾಗಿಯೋ ಸಿಟ್ಟು ಎಲ್ಲರಿಗೂ ಬಂದೇ ಬರುತ್ತದೆ. ಕೆಲವರಿಗೆ ಅಧಿಕವಾದರೆ ಮತ್ತೆ ಕೆಲವರಿಗೆ ಕಡಿಮೆ, ಕೆಲವರಿಗೆ ಕ್ಷಣಿಕವಾದರೆ ಮತ್ತೆ ಕೆಲವರಿಗೆ ಅದು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ,  ಕೆಲವರು ಕೋಪದಲ್ಲಿ ಪ್ರತಿಕ್ರಿಯೆ ತೋರಿ ತಾವು ಮತ್ತು ಅನ್ಯರನ್ನೂ ಕಷ್ಟಕ್ಕೆ ಸಿಲುಕಿಸುತ್ತಾರೆ ಮತ್ತೆ ಕೆಲವರು ಕೋಪವನ್ನು ವ್ಯಕ್ತಪಡಿಸದೆ ನುಂಗಿಕೊಳ್ಳುತ್ತಾರೆ ಮತ್ತೆ ಕೆಲವರು ಕೋಪವಿಲ್ಲದಂತೆ  ನೀಗಿಕೊಳ್ಳುತ್ತಾರೆ, ಮತ್ತೆ ಕೆಲವರು ಯಾವುದೇ ವಿಷಯ ಅಥವಾ ಘಟನೆಯ ಪ್ರಭಾವ ತಮ್ಮ ಮೇಲೆ ಆಗದಂತೆ ನೋಡಿಕೊಳ್ಳುತ್ತಾರೆ. ಆದರೆ ಕೋಪವೇ ಇಲ್ಲದ ವ್ಯಕ್ತಿಗಳು ಈ ಜಗತ್ತಿನಲ್ಲಿ ಇರುವುದು ಬಹಳ ವಿರಳ. 

ನಮಗೆ ಕೋಪ,  ಸಾಮಾನ್ಯವಾಗಿ ಹಲವಾರು ಕಾರಣಗಳಿಗೆ ಬರುತ್ತದೆ. ಅದರಲ್ಲಿ ಮುಖ್ಯವಾಗಿ, ನಾವು ಅಂದುಕೊಂಡ ಕೆಲಸ ನಾವಂದುಕೊಂಡ ಹಾಗೆ ಆಗದಿದ್ದಲ್ಲಿ, ನಾವು ಹೇಳಿದ ಕೆಲಸವನ್ನು ನಾವು ಹೇಳಿದ ರೀತಿ ಅನ್ಯರು ಮಾಡದಿದ್ದಲ್ಲಿ, ನಮ್ಮ ಪ್ರಮೇಯವೇ ಇಲ್ಲದೆ ಅನ್ಯರು ನಮಗೆ ಘಾಸಿಮಾಡಿದಲ್ಲಿ, ನಾವು ಬಹುವಾಗಿ ನಂಬಿದವರು ನಮಗೆ ನಂಬಿಕೆ ದ್ರೋಹ ಮಾಡಿದ್ದಲ್ಲಿ ಅಥವಾ ನಮ್ಮ ಮೇಲೆ ಸಕಾರಣವಾಗಿಯೋ ಅಥವಾ ವಿನಾಕಾರಣವಾಗಿಯೋ ಯಾರಾದರೂ ಕೋಪಗೊಂಡಲ್ಲಿ,  ಹೀಗೆ ಹಲವು ಕಾರಣಗಳಿಗೆ ನಮಗೆ ಕೋಪ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ನಾವು ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿದರೆ ನಮಗೆ ಎರಡು ವಿಷಯಗಳು ತಿಳಿಯುತ್ತದೆ. ಒಂದು ನಾವು ಅನ್ಯರನ್ನು ಅರ್ಥಮಾಡಿಕೊಳ್ಳುವುದರಲ್ಲಿ ತಪ್ಪಾಗಿ,  ನಾವು ಅವರ ಮೇಲೆ ಕೋಪಗೊಂಡಿರಬಹುದು ಅಥವಾ ನಾವೇ ತಪ್ಪು ಮಾಡಿ ನಮ್ಮ ಲೋಪವನ್ನು ಮುಚ್ಚಿಕೊಳ್ಳಲು ನಾವು ಕೋಪಗೊಂಡಿರಬಹುದು. ಈ ಎರಡೂ ಸಂದರ್ಭದಲ್ಲಿ ನಾವು ಕೋಪಮಾಡಿಕೊಳ್ಳದೆ ಇರುವುದಕ್ಕೆ ಮಾರ್ಗವಿದೆ. ಅವರ ತಪ್ಪಿಲ್ಲವೆಂದು ಅರಿತು ನಾವು ಅವರ ಮೇಲೆ ಕೋಪಗೊಳ್ಳದೆ ಇರುವುದು ಮತ್ತು ನಮ್ಮ ತಪ್ಪನ್ನು ಒಪ್ಪಿಕೊಂಡು, ಕೋಪಗೊಳ್ಳದೆ ಇರುವುದು. ಆಗ ನಾವು ನಮ್ಮ ಕೋಪವನ್ನು ನೀಗಿಕೊಂಡು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು. 

ಕೋಪವೆಂಬುವುದು ಒಂದು ಮಾನಸಿಕ ರೋಗ. ಕೋಪವು, ಅಗ್ನಿ ಅಥವಾ ಯಾವುದೇ ಭೂಕಂಪಕ್ಕಿಂತ ಅಧಿಕ ವಿನಾಶಕಾರಿ.  ನಾವು ಕೋಪಗೊಂಡಾಗ ದೇಹದಲ್ಲಿನ ಕೆಲವು ಗ್ರಂಥಿಗಳು ಸಕ್ರಿಯವಾಗುತ್ತವೆ. ಇದು ನಮ್ಮ ದೇಹದೊಳಗೆ  ಅಡ್ರಿನಾಲಿನ್  ಮತ್ತು ಇತರೆ ಒತ್ತಡ ಪ್ರೇರಕವಾದ ಹಾರ್ಮೋನುಗಳನ್ನು ಅಧಿಕವಾಗಿ ಸ್ರವಿಸಿ, ಗಮನೀಯವಾದ ದೈಹಿಕ ಬದಲಾವಣೆಗೆ ಕಾರಣವಾಗುತ್ತದೆ. ಮುಖ ಕೆಂಪಾಗುತ್ತದೆ, ರಕ್ತದೊತ್ತಡ ಅಧಿಕವಾಗುತ್ತದೆ, ಉಸಿರಾಟ ತ್ವರಿತವಾಗುತ್ತದೆ, ಹೃದಯದ ಬಡಿತ ಜೋರಾಗುತ್ತದೆ ಮತ್ತು ಕೈಕಾಲುಗಳ ಸ್ನಾಯುಗಳು ಬಿಗಿದುಕೊಂಡು, ದೇಹದಲ್ಲಿ ಒತ್ತಡ ಹೆಚ್ಚಾಗುತ್ತದೆ. ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ, ಹೃದಯದ ಬೇನೆಯುಂಟಾಗಿ ಜೀವಕ್ಕೆ ಮಾರಕವಾದ ಪಾರ್ಶ್ವ ವಾಯು, ಉದರದ ಹುಣ್ಣು (ulcers)  ತೀವ್ರ ರಕ್ತದೊತ್ತಡದಂತಹ  ಖಾಯಿಲೆಗಳಿಗೆ ನಾವು ತುತ್ತಾಗಬಹುದು.  ಹಾಗಾಗಿ  ಕೋಪವು ನಮ್ಮನ್ನು ಸುಡುವ ಮುನ್ನ ನಾವೇ ಕೋಪವನ್ನು ನುಂಗಿಬಿಡುವುದು ಬಹಳ ಸೂಕ್ತ ಪರಿಹಾರ.  

ಭಗವದ್ಗೀತೆಯ ( ೧೬-೨೧) ಶ್ಲೋಕವು ಈ ರೀತಿಯಿದೆ. 

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಾತ್ಮಾನಂ । 
ಕಾಮಃ ಕ್ರೋಧಸ್ತಥಾ ಲೋಭ: ತಸ್ಮಾದೇತತ್ರಯಂ ತ್ಯಜೇತ್ ।  

ನರಕದಂತಹ ಸಂಕಟಮಯ ಸ್ಥಿತಿಗೆ ಹೋಗಲು ನಮಗೆ ಮೂರು ಬಾಗಿಲುಗಳಿರುತ್ತವೆ. ಅವುಗಳೇ, ಕಾಮ ಕ್ರೋಧ ಮತ್ತು ಲೋಭ. ಅವುಗಳು ಆತ್ಮನನ್ನು ನಾಶಮಾಡುತ್ತವೆ. ಇದನ್ನರಿತು ಅವುಗಳನ್ನು ತ್ಯಜಿಸಿಬಿಡಬೇಕು, ಎನ್ನುತ್ತಾನೆ ಭಗವಾನ್ ಶ್ರೀ ಕೃಷ್ಣ. 

ಈ ಶ್ಲೋಕವನ್ನು ಶ್ರೀ ವಿಜಯನಾಥ ಭಟ್ಟ(ಕೌಂಡಿನ್ಯ) ರವರು ತಮ್ಮ ' ವಿಜಯಿನಿ ' ಎಂಬ ಭಗವದ್ಗೀತೆಯ ಕನ್ನಡ ಅವತರಿಣಿಕೆಯಲ್ಲಿ " ಕೀಳ್ಗತಿಯು ನರಕಕ್ಕೆ ಮೂರು ದಾರಿಗಳುಂಟು, ಅವುಗಳನ್ನರಿತು ಜಾಗ್ರತೆಯಲ್ಲಿರಬೇಕು। ವಿಷಯಲಾಲಸೆ, ಸಿಟ್ಟು, ಲೋಭ - ಈ ದೋಷಗಳ ಕುರಿತರಿತು ಅವುಗಳಿಂ ದೂರವಿರಬೇಕು ।" ಎಂದು ಹೇಳಿ ಸಿಟ್ಟು ಅಥವಾ ಕೋಪದ ಪರಿಣಾಮವನ್ನು ವಿವರಿಸಿದ್ದಾರೆ.  

ನಾವು ಶಾಂತವಾಗಿದ್ದರೆ, ನೆಮ್ಮದಿಯಾಗಿದ್ದರೆ, ಸಂತೋಷವಾಗಿದ್ದರೆ ನಮ್ಮ ದೇಹದ ಪಚನ ಕ್ರಿಯೆ ಸುಸೂತ್ರವಾಗಿ ನಡೆಯುತ್ತದೆ. ಕೋಪಗೊಂಡಾಗ ಅದು ಏರುಪೇರಾಗುತ್ತದೆ. ಹಾಗಾಗಿ ಆಹಾರ ಸೇವಿಸುವಾಗ ಪ್ರಸನ್ನ ಚಿತ್ತರಾಗಿರಬೇಕೆಂದು ವೈದ್ಯರುಗಳು ಸಲಹೆ ನೀಡುತ್ತಾರೆ. ಏಕೆಂದರೆ ಕೋಪವು ಇಡೀ ದೇಹವನ್ನು ವಿಚಲಿತಗೊಳಿಸುತ್ತದೆ. ಕೋಪವು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಯವಾಗಿ ಸುಡುವ ' ನಂಜು ಯಾ ವಿಷ'  ಎಂದು ಅರಿಯಬೇಕು.  

ನಮಗೆ ಬರುವ ಕೋಪವನ್ನು ನಿಭಾಯಿಸಲು ಮೂರು ದಾರಿಗಳುಂಟು. ಮೊದಲಿನದು ನಮ್ಮ ಪ್ರತಿಕ್ರಿಯೆ. ನಾವು ನಮ್ಮ ಮನಸ್ಸಿನ ಭಾವವನ್ನು ಒಳಗೆ ಇಟ್ಟುಕೊಳ್ಳದೆ ವ್ಯಕ್ತಪಡಿಸಿದರೆ ಮನಸ್ಸು ನಿರಾಳವಾಗುತ್ತದೆಯಾದ್ದರಿಂದ, ಕೋಪವನ್ನು ವ್ಯಕ್ತಪಡಿಸುವುದು ಉತ್ತಮ ಎಂದು 'ಮನಃಶಾಸ್ತ್ರಜ್ಞರು' ಹೇಳುತ್ತಾರೆ. ಆದರೆ ಹಾಗೆ ಸಿಗುವ ಮಾನಸಿಕ ನೆಮ್ಮದಿ ಕೇವಲ ತಾತ್ಕಾಲಿಕ.  ಅದರಿಂದ ಅಸಮಾಧಾನ ಮತ್ತೆ ಅಧಿಕವಾಗುತ್ತದೆ ಮತ್ತು ಅದನ್ನು ಹೊರಹಾಕಲು ಪ್ರಯತ್ನಿಸುತ್ತೇವೆ. ಆಗ ಮತ್ತೆ ಕೋಪ ಬರುತ್ತದೆ. ಕ್ರಮೇಣ ಕೋಪಮಾಡಿಕೊಳ್ಳುವುದು ಅಭ್ಯಾಸವಾಗಿ, ನಾವು ಅದರ ಗುಲಾಮರಾಗುತ್ತೇವೆ. ಕೋಪವು ನಮ್ಮನ್ನು ನಿಯಂತ್ರಿಸುತ್ತದೆ. ಅದು ನಮಗೆ ವೈಪರೀತ್ಯದ ಯಜಮಾನನಂತೆ ಆಗುತ್ತದೆ.    

ಎರಡನೆಯದಾಗಿ ಇರುವ ಮಾರ್ಗವೆಂದರೆ, ಅದನ್ನು ಹೊರಗೆಡುಹದೆ ಅದುಮಿಡುವುದು. ಆದರೆ ಅದು ಸರಿಯಾದ ಮಾರ್ಗವಲ್ಲ. ಏಕೆಂದರೆ, ಹಾಗೆ ಮಾಡಿದಾಗ ಕೋಪವು ನಮ್ಮ ಅಂತರಂಗದಲ್ಲೇ ಉಳಿದು ನಮ್ಮ ಮನಸ್ಸಿನೊಡನೆ ಚೆಲ್ಲಾಟವಾಡುತ್ತದೆ, ನಮ್ಮ ರಕ್ತದೊತ್ತಡ ಅಧಿಕವಾಗುತ್ತದೆ   ಹಾಗಾಗಿ ಕೋಪವನ್ನು ವ್ಯಕ್ತಪಡಿಸುವುದಾಗಲೀ ಅಥವಾ ವ್ಯಕ್ತಪಡಿಸದೆ ಮುಚ್ಚಿಟ್ಟುಕೊಳ್ಳುವುದಾಗಲೀ, ಎರಡೂ ಸರಿಯಾದ ಮಾರ್ಗ ಅಥವಾ ಪರಿಹಾರವಲ್ಲ. ಏಕೆಂದರೆ ಅದು ನಮಗೆ ಬಂದ ಕೋಪದಿಂದ ನಮಗೆ ಮುಕ್ತಿಯನ್ನು ಕೊಡುವುದಿಲ್ಲ ಅಥವಾ ನಾವು ಅದರಿಂದ ಮುಕ್ತರಾಗುವುದಿಲ್ಲ.   

ಹಾಗಾಗಿ ಮೂರನೆಯ ದಾರಿಯೇ, ' ಕ್ಷಮೆ-ತಾಳ್ಮೆ-ಸಹನೆ'. ಇವುಗಳು ಕೋಪವನ್ನು ನೀಗಿಕೊಳ್ಳುವದಕ್ಕೆ ಸೂಕ್ತವಾಗಿ ಪರಿಣಾಮವನ್ನು ನೀಡುತ್ತವೆ. ನಮಗೆ ಯಾರಮೇಲೆ ಕೋಪ ಬಂದಿದೆಯೋ ಅವರನ್ನು ಕ್ಷಮಿಸಿಬಿಟ್ಟರೆ, ನಾವು ಕೋಪದಿಂದ ಮುಕ್ತರಾಗಬಹುದು. ಪ್ರತಿ ರಾತ್ರಿ ಮಲಗುವ ಮುನ್ನ ಅಂದಿನ ದಿನದಲ್ಲಿ ನಡೆದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡು, ನಮಗೆ ಮೋಸಮಾಡಿದವರನ್ನೋ, ನೋವುಂಟುಮಾಡಿದವರನ್ನೋ, ಘಾಸಿಮಾಡಿದವರನ್ನೋ ಅಥವಾ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡವರನ್ನೋ ನೆನೆದು, ಅವರ ಹೆಸರನ್ನು ಹೇಳಿ  'ಹೇ!! ನಾನು ನಿನ್ನನ್ನು ಕ್ಷಮಿಸಿದ್ದೇನೆ, ಹೋಗು' ಎಂದು ಹೇಳಿದರೆ ನಾವು ಅವರನ್ನು ಕ್ಷಮಿಸದಂತಾಗುತ್ತದೆ, ನಮ್ಮ ಕೋಪ ಕರಗುತ್ತದೆ ಮತ್ತು ಶಾಂತಿಯಿಂದ ನಿದ್ದೆ ಬರುತ್ತದೆ.    

ಎರಡನೆಯ ಫ್ರೆಡರಿಕ್ ಎನ್ನುವ ಪರ್ಷಿಯಾ ದೇಶದ ರಾಜನೊಬ್ಬನ ಜೀವನದಲ್ಲಿ ನಡೆದ ಘಟನೆಯೊಂದು ಇಲ್ಲಿ ನೆನಪಿಸಿಕೊಳ್ಳಬೇಕು. ಒಂದು ದಿನ ಅವನು ತನ್ನ ಬೆಳ್ಳಿಯ ನಶ್ಯದ ಡಬ್ಬಿಯಿಂದ, ತನ್ನ ಸೇವಕ ಸ್ವಲ್ಪವೇ ನಶ್ಯವನ್ನು ಕದಿಯುವುದನ್ನು ಕಂಡ. ಆಗ ರಾಜ ಬಹಳ ಸರಳವಾಗಿ " ನಿನಗೆ ಈ ಬೆಳ್ಳಿಯ ನಶ್ಯದ ಡಬ್ಬಿ ಇಷ್ಟವಾಯಿತೇ?" ಎಂದು ಆ ಹುಡುಗನನ್ನು ಕೇಳಿದ.  ಕದಿಯುವಾಗ ಸಿಕ್ಕಿಬಿದ್ದ ಆ ಸೇವಕ ತಬ್ಬಿಬ್ಬಾಗಿ, ನಿರುತ್ತರನಾದ. " ನಿನಗೆ ಈ ನಶ್ಯದ ಡಬ್ಬಿ ಇಷ್ಟವಾಯಿತೇ? " ರಾಜ ಮತ್ತೊಮ್ಮೆ ಪ್ರಶ್ನಿಸಿದ. ಆ ಸೇವಕ ತಲೆಯೆತ್ತಿ  "ಹೌದು ಪ್ರಭುಗಳೇ, ಇದೊಂದು ಬಹಳ ಸುಂದರವಾದ ನಶ್ಯದ ಡಬ್ಬಿ" ಎಂದನಂತೆ. ಆ ರಾಜನಿಗೆ ತನ್ನ ಸೇವಕ ಮಾಡಿದ್ದರಿಂದ ಅಸಮಾಧಾನವಿದ್ದರೂ ಅವನನ್ನು ಕ್ಷಮಿಸಿ, "ಹಾಗಾದರೆ ಇದನ್ನು ನೀನೆ ತೆಗೆದುಕೋ, ಅದು ನಮ್ಮಿಬ್ಬರಿಗೆ ಬಹಳ ಸಣ್ಣದಾಗುತ್ತದೆ" ಎಂದು ಹೇಳಿ ತನ್ನ ಕೋಪದ ಮೇಲೆ ವಿಜಯವನ್ನು ಸಾಧಿಸಿದನಂತೆ.  

ಮುಂಗೋಪಿಯಾದ ಒಬ್ಬ ಸನ್ಯಾಸಿಯೊಬ್ಬ ಒಂದು ಆಶ್ರಮದಲ್ಲಿದ್ದ. ಅವನ ಮುಂಗೋಪದ ಕಾರಣ ಅವನಿಗೆ ಇತರ ಆಶ್ರಮವಾಸಿಗಳೊಡನೆ ಇರಲು ಬಹಳ ಕಷ್ಟವಾಗುತ್ತಿತ್ತು. ಕಾಡಿನಲ್ಲಿ ಏಕಾಂತ ಸ್ಥಳದಲ್ಲಿ ಶಾಂತಿಯಿಂದ ಇರಬಹುದು, ಕೋಪವನ್ನು ಗೆಲ್ಲಬಹುದು ಎಂದು ಎಣಿಸಿದ ಮತ್ತು ನಿವಾಸ ಮಾಡಲು ನಿರ್ಧರಿಸಿದ.  ಅಲ್ಲಿ,  ಮೊದಮೊದಲಿಗೆ ಅವನಿಗೆ ಶಾಂತಿ ಮತ್ತು ನೆಮ್ಮದಿಯಿತ್ತು. ಅವನು ಸಂತೋಷವಾಗಿದ್ದ. ಒಂದು ದಿನ ಅವನು ಹತ್ತಿರದ ನದಿಯಲ್ಲಿ ಒಂದು ಮಡಕೆಯಲ್ಲಿ ನೀರು ತರಲು ಹೋದ. ನೀರನ್ನು ತುಂಬಿಕೊಂಡು ಆ ಮಡಕೆಯನ್ನು ನೆಲದ ಮೇಲೆ ಇಟ್ಟ. ಅದು ಉರುಳಿಕೊಂಡು ನೀರೆಲ್ಲ ನೆಲದ ಪಾಲಾಯಿತು. ಅವನು ಮತ್ತೆ ನೀರನ್ನು ತುಂಬಿಕೊಂಡ. ಮತ್ತೆ ನೆಲದ ಮೇಲೆ ಇಟ್ಟೊಡನೆಯೇ ಆ ಮಡಕೆ ಮತ್ತೆ ಉರುಳಿತು. ಹೀಗೆ ತುಂಬುವುದು ಉರುಳುವುದು ಹಲವು ಬಾರಿ ನಡೆದು, ಅವನಿಗೆ ಕೋಪಬಂದು ಆ ಮಡಕೆಯನ್ನು ಚೂರಾಗುವಂತೆ ಒಡೆದು ಹಾಕಿದ. ಸ್ವಲ್ಪ ಸಮಯದ ನಂತರ ಅವನಿಗೆ ತನ್ನ ತಪ್ಪಿನ ಅರಿವಾಯಿತು. ' ಅಯ್ಯೋ , ನಾನು ಕೋಪವನ್ನು ತೊರೆಯಲು ಆಶ್ರಮವನ್ನು ಬಿಟ್ಟು, ಕಾಡಿಗೆ ಬಂದೆ. ಆದರೆ ಆ ಕೋಪವು ನನ್ನನ್ನು ಈ ಕಾಡಿಗೂ ಹಿಂಬಾಲಿಸಿಕೊಂಡು ಬಂದಿದೆಯಲ್ಲಾ' ಎಂದು ಪಶ್ಚಾತ್ತಾಪ ಪಟ್ಟ. 

ಈ ಜಗತ್ತಿನಲ್ಲಿ ತಪ್ಪು ಮಾಡದೆ ಇರುವವರು ಯಾರೂ ಇಲ್ಲ. ಡಿ. ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ "  ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? ಆತುಮದ ಪರಿಕಥೆಯನರಿತವರೆ ನಾವು? ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ,   ನೀತಿ ನಿಂದೆಯೊಳಿರದು – ಮಂಕುತಿಮ್ಮ. " ಎನ್ನುತ್ತಾ ಈ ಜಗತ್ತಿನಲ್ಲಿ ನಿರ್ಮಲನಾರು ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ತಪ್ಪು ಎಲ್ಲರೂ ಮಾಡುವುದರಿಂದ " ಕ್ಷಮೆ ದೋಷಿಗಳಲಿ' ಎಂದು ಹೇಳುತ್ತಾ ಒಬ್ಬರು ಮತ್ತೊಬ್ಬರೊಡನೆ ಕೋಪಗೊಳ್ಳುವುದು ಸೂಕ್ತವಲ್ಲ, ಕ್ಷಮೆಯೇ ಸೂಕ್ತ ಮಾರ್ಗ ಎನ್ನುತ್ತಾರೆ.   

ಕನ್ನಡದ ಕವಿ 'ರತ್ನ' ಸರ್ವಜ್ಞ ಕವಿಯು,  "ಕೋಪವೆಂಬುದು ತಾನು , ಪಾಪವ ನೆಲೆಗಟ್ಟು ಆಪತ್ತು , ಸುಖವು ಸರಿ ಎಂದು ಪೋಪಗೆ,  ಪಾಪವೆಲ್ಲಿಹುದು - ಸರ್ವಜ್ಞ" ಎಂದು ಹೇಳಿದ್ದಾನೆ. ಸರ್ವಜ್ಞ ಕವಿಯ ಪ್ರಕಾರ ಕೋಪವೇ ಎಲ್ಲಾ ಪಾಪಗಳಿಗೂ ಮೂಲ. ಕೋಪ ಮತ್ತು ಪಾಪವನ್ನು ತೊರೆದವನು ಪರಮಾತ್ಮನನ್ನು ಪಡೆಯುವನು ಎನ್ನುತ್ತಾ "ಮುನಿದಂಗೆ ಮುನಿಯದಿರು , ಕಿನಿವಂಗೆ ಕಿನಿಯದಿರು ಮನಸಿಜಾರಿಯನು ಮರೆಯದಿರು , ಶಿವಕೃಪೆಯು ಘನಕೆ ಘನವಕ್ಕು , ಸರ್ವಜ್ಞ"  ಎಂದು ಹೇಳುತ್ತಾ, " ಕೋಪಕ್ಕೆ ಪ್ರತಿಕೋಪವನ್ನು ತೋರಬೇಡ ಜಗಳಕ್ಕೆ ಪ್ರತಿ ಜಗಳವಾಡಬೇಡ, ಸ್ನೇಹ ಮತ್ತು ಸೌಹಾರ್ದತೆಯೇ,  ಶಾಂತಿ ಮತ್ತು ಸಂತೋಷಕ್ಕೆ ಮಾರ್ಗವೆಂದು ಬುದ್ಧಿಮಾತನ್ನು ಹೇಳುತ್ತಾನೆ. 

ನಮಗೆ ಕೋಪ ಏಕಾಗಿ ಬರುತ್ತದೆ ಎನ್ನುವುದಕ್ಕೆ ಡಿವಿಜಿಯವರು ತಮ್ಮ ಮತ್ತೊಂದು ಮುಕ್ತಕದಲ್ಲಿ " ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು,  ಅದಕಾಗಿ ಇದಕಾಗಿ ಮತ್ತೊಂದಕಾಗಿ,  ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು,  ಕುದಿಯುತಿಹುದಾವಗಂ – ಮಂಕುತಿಮ್ಮ" ಎಂದು ಹೇಳಿ ನಮ್ಮ ಆಸೆಗಳು, ಹುಡುಕಾಟಗಳು, ಅಸಹನೆಗಳು, ಅಸೂಯೆಗಳು ನಮ್ಮನ್ನು ಸದಾಕಾಲ ಕುದಿಯುವಂತೆ ಮಾಡುತ್ತದೆ ಎನ್ನುತ್ತಾರೆ. 'ಸಹನೆ, ತಾಳ್ಮೆ, ತೃಪ್ತಿ' ಗಳು ಖಂಡಿತವಾಗಿಯೂ ನಮ್ಮನ್ನು ' ಕೋಪ' ವೆಂಬ 'ಪಾಪ' ದಿಂದ ಮುಕ್ತವಾಗಿಸಬಹುದು. 

ಪರಿಸ್ಥಿತಗಳಾಗಲಿ ಅಥವಾ ವ್ಯಕ್ತಿಗಳಾಗಲೀ ನಮಗೆ ಕೋಪ ತರಿಸುವುದಿಲ್ಲ. ಆ ಪರಿಸ್ಥಿತಿಗಳಿಗೆ ಮತ್ತು ವ್ಯಕ್ತಿಗಳಿಗೆ ನಾವು ನೀಡುವ ಪ್ರತಿಕ್ರಿಯೆಯೇ ಆ ಪರಿಸ್ಥಿತಿ ಅಥವಾ ವ್ಯಕ್ತಿಯ ಪ್ರತಿ ನಾವು ಸಮಾಧಾನವಾಗಿದ್ದೇವೋ ಅಥವಾ ಕೋಪಗೊಂಡಿದ್ದೇವೋ ಎನ್ನವುದನ್ನು ನಿರ್ಧರಿಸುತ್ತದೆ. ಹಾಗಾಗಿ ನಾವು ಶಾಂತ ಚಿತ್ತರಾದರೆ, ಕ್ಷಮಾಶೀಲರಾದರೆ, ಸಹನೆಯನ್ನು ರೂಢಿಸಿಕೊಂಡರೆ ನಮ್ಮ ಬದುಕಿನ ಕೋಪದಿಂದ ವಿಮುಕ್ತಿಯನ್ನು ಪಡೆಯಬಹುದು.  ಅಂತಹ ಸ್ಥಿತಿಗೆ ತಲುಪಬೇಕು ಎಂದು ದೃಢ ನಿಶ್ಚಯದಿಂದ  ಪ್ರಯತ್ನಿಸದವರಿಗೆಲ್ಲಾ ಅದು ಸಾಧ್ಯ.   


ರವಿ ತಿರುಮಲೈ 

2 comments:

  1. ನಾವು ಶಾಂತ ಚಿತ್ತರಾದರೆ, ಕ್ಷಮಾಶೀಲರಾದರೆ, ಸಹನೆಯನ್ನು ರೂಢಿಸಿಕೊಂಡರೆ ನಮ್ಮ ಬದುಕಿನ ಕೋಪದಿಂದ ವಿಮುಕ್ತಿಯನ್ನು ಪಡೆಯಬಹುದು - ಇದು ನೂರಕ್ಕೆ ನೂರು ಸತ್ಯ. ಲೇಖನ ಓದಿದಾಗ ಈ ಸಹನೆ ಮತ್ತೆ ತಾಳ್ಮೆ ಜೀವನದಲ್ಲಿ ಯಾಕೆ ರೂಢಿಸಿಕೊಳ್ಳಬೇಕು ಎಂಬುದಕ್ಕೆ ಎಳೆ ಎಳೆಯಾಗಿ ತಿಳಿಸಿ ಕೊಡುತ್ತದೆ. ಕೋಪ ಎನ್ನುವುದು ಬಾಂಬ್ ಇದ್ದಹಾಗೆ. ಸಿಡಿದರೆ ಸರ್ವನಾಶ. ತಾಳ್ಮೆ ಮತ್ತು ಸಹನೆ ವಿನಾಶದಿಂದ ದೂರಮಾಡಬಹುದು. ಯುವ ಪೀಳಿಗೆ ಇಂತಾಹ ಲೇಖನಗಳನ್ನು ಓದಬೇಕು. ಅನಾವಶ್ಯ ಫೇಸ್ ಬುಕ್, ವಾಟ್ಸ್ ಯಾಪ್ ಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಇಂತಾಹ ಲೇಖನ ಓದಿ ಜ್ಞಾನ ಗಳಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬಾಳಿ ಬದುಕಿ ಇತರರಿಗೂ ಮಾದರಿಯಾಗಬಹುದು.

    ReplyDelete
  2. ಸಹನೆ ವಜ್ರದ ಕವಚ – ಮಂಕುತಿಮ್ಮ ॥

    ReplyDelete