Thursday 13 November 2014

ಕ್ಷಮಯಾ ಧರಿತ್ರಿ


ನಿನ್ನ ಮೌನವೆನಗೆ ಕಂಡಿತಂದು
ಕೇವಲ ನಿನ್ನ ಬಲಹೀನತೆಯೆಂದು
ಕೋಪಗೊಂಡು ಅರಚಿದೆ 
ಕ್ರೋಧದಿಂದ ಕ್ಷುದ್ರನಾಗಿ ಕನಲಿದೆ


ಪದಗಳನಾಡಿದೆ,ವಾದಗಳ ಮಂಡಿಸಿದೆ
ಮಾತುಗಳ ಕತ್ತಿಯಲಗಿನಂತೆ ಬಳಸಿದೆ
ಎನ್ನ ಮತವೆಂದೆಂದಿಗೂ ಸರಿಯೆಂದು
ನೀ ಸರಿಯಾಗಲು ಸಾಧ್ಯವಿಲ್ಲೆಂದು

ಅಂದಿನಿಂದ ಇಂದಿನವರೆಗೆ, ನಾ
ಆಡಿದ ಮಾತಿನಾ ಭಾರದಲಿ, ನಾ
ಕುಗ್ಗಿಹೆ, ಬಗ್ಗಿಹೆ, ಕುಬ್ಜನಾಗಿಹೆ, ಅರಿತು
ಎನ್ನ ನುಡಿಗಳು ಕಿವಿಗೆ ಇಂಪಾದ ಹಾಡಲ್ಲವೆಂದು

ಬಳಲಿ ಬೆಂಡಾಗಿ, ಎನ್ನ ಅಹಮಡಗಿ,
ಒರಗಲೊಂದು ಆಸರೆಯೊಂದ
ಹುಡುಕುತ್ತಿರೆ, ಕಳೆದ ದಿನಗಳ
ನೆನೆದು,ಒರಗಿ ಕಣ್ಣೀರಿಡಲೆಂದು

ನೀ ತೆರೆದ ತೋಳ್ಗಳಿಂದ, ಬಾ
ಎಂದು ಕರೆದಾಗ, ನಾ ಕುಸಿದು
ಧರೆಗಿಳಿದು ಮೌನದಲಿ ಕೂಗಿದೆ,
ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ

ರವಿ ತಿರುಮಲೈ

1 comment:

  1. ಎನ್ನ ಸಾವಿರ ತಪ್ಪುಗಳ ಬಾರ ಹೊತ್ತವಳೇ
    ಎನ್ನ ಮನದೆನ್ನೇ...

    ಯಾಕೋ ಈಗಲೇ ಮನೆಗೆ ಹೋಗಿ ನನ್ನವಳ ಮುಂದೆ
    ಮಂಡಿಯೂರಿ ಕುಳಿತು,
    ’ಧರೆಗಿಳಿದು ಮೌನದಲಿ ಕೂಗಿ ಬಯಸಿಹೆನು
    ಕ್ಷಮಯಾ ಧರಿತ್ರಿ ಕ್ಷಮಯಾ ಧರಿತ್ರಿ’

    shared at:
    https://www.facebook.com/groups/191375717613653?view=permalink&id=435285689889320

    ReplyDelete