Saturday 14 January 2017

🌷ದೇವಾಲಯದ ಮೆಟ್ಟಿಲುಗಳು 🌷



ನಾನು ನನ್ನ ಅಜ್ಜಿಯೊಡನೆ ದೇವಾಲಯಕ್ಕೆ ಹೋಗುತ್ತಿದ್ದೆ.  ಸುಮಾರು ಎತ್ತರದಲ್ಲಿದ್ದ ಇದ್ದ ಆ ದೇವಾಲಯಕ್ಕೆ ಮೆಟ್ಟಿಲುಗಳಿದ್ದವು. ಅವುಗಳನ್ನು ಹಟ್ಟುವುದು ಪುಟ್ಟವನಾದ ನನಗೆ ಬಹಳ ಸೋಜಿಗ ಮತ್ತು ಸಂತೋಷವಾಗುತ್ತಿತ್ತು. ಆದರೆ ನನ್ನ ಅಜ್ಜಿ ವಯಸ್ಸಾಗಿದ್ದರಿಂದ ಹತ್ತಲು ಕಷ್ಟಪಡುತ್ತಿದ್ದರು.  ನಾನು "ಅಜ್ಜಿ, ನಾವು ಪ್ರತಿ ನಿತ್ಯ ಈ ದೇವಾಲಯದ ಮೆಟ್ಟಿಲುಗಳನ್ನು ಹತ್ತಬೇಕಲ್ಲ!!! ಈ ದೇವಾಲಯವನ್ನು ನೆಲದ ಮಟ್ಟಕ್ಕೆ ಏಕೆ ಕಟ್ಟುವುದಿಲ್ಲ. ಇಷ್ಟು ಮೆಟ್ಟಿಲುಗಳನ್ನು ಇಟ್ಟು,  ದೇವಾಲಯವನ್ನು ಅಷ್ಟು ಎತ್ತರಕ್ಕೆ ಏಕೆ 
ಕಟ್ಟುತ್ತಾರೆ? " ಎಂದು ಕೇಳುತ್ತಿದ್ದೆ. 

ಆಕೆ ಅಂದು ಇತ್ತ ಉತ್ತರದ  ಅರ್ಥ ನನಗಿಂದು ನಿಧಾನವಾಗಿ ಆಗುತ್ತಿದೆ. ಆಕೆ ಹೇಳಿದಳು " ಆ ದೇವರು ಅಥವಾ ಆ ಪರತತ್ವ ಎನ್ನುವುದು ಉನ್ನತ ಸ್ಥರದಲ್ಲಿರುತ್ತದೆ. ನಾವು ಜಗತ್ತನ್ನು ಅಂಟಿಸಿಕೊಂಡು ಕೆಳಸ್ಥರದಲ್ಲಿದ್ದೇವೆ, ಅಲ್ಲವಾ? ಹಾಗಾಗಿ ಆ ದೇವರನ್ನು ಕಾಣಲು ಅಥವಾ  ಆ ಪರತತ್ವವನ್ನು ಅರಿಯಲು ಹಂತಹಂತವಾಗಿ ಮೆಟ್ಟಿಲು ಮೆಟ್ಟಿಲಾಗಿ ನಾವು ಮೇಲೆ ಏರಬೇಕು. ಮೆಟ್ಟಿಲಮೇಲೆ ಕಾಲನ್ನು ಊರಿ, ಅದನ್ನು ತೊರೆದು ಮುಂದಿನ ಮೆಟ್ಟಿಲಮೇಲೆ ಕಾಲಿಡುತ್ತಾ ಮೇಲೆ ಏರಬೇಕು. ಹಾಗೆ ಏರುತ್ತಾ ಎಲ್ಲಾ ಮೆಟ್ಟಿಲುಗಳನ್ನೂ ದಾಟಿ ಮೇಲೆ ಏರಿದಾಗ ನಮಗೆ ಭಗವದ್ಧರ್ಶನವಾಗುತ್ತದೆ."   

ಅಜ್ಜಿ ಮತ್ತೂ ಮುಂದುವರೆಸಿ " ಪ್ರತೀ ಮೆಟ್ಟಿಲೂ ನಮಗೆ ' ನಾವು ಮೇಲೇರುತ್ತಿದ್ದೇವೆ' ಎಂದು ಸೂಚಿಸುತ್ತದೆ. ಈ ಮೆಟ್ಟಿಲುಗಳೇ ನಮ್ಮ ಅಂತರಂಗದಲ್ಲಿರುವ ಕಾಮ, ಕ್ರೋಧ, ಲೋಭ, ಮದ, ಮೋಹ , ಮಾತ್ಸರ್ಯಗಳು. ಅವುಗಳನ್ನು ಒಂದಾದಮೇಲೆ ಒಂದರಂತೆ  ಹಿಂದಟ್ಟಿ, ಮೆಟ್ಟಿ ನಿಂತು ಮುನ್ನಡೆದಾಗ ನಾವು 'ದೇವ' ನ  ಆಲಯವನ್ನು ತಲುಪುತ್ತೇವೆ ಮತ್ತು ಪರತತ್ವದ ದರ್ಶನವಾಗುತ್ತದೆ. ಹಂತಹಂತವಾಗೇ ಮೇಲೇರಬೇಕು. ಒಂದೇಬಾರಿ ನೆಲದಿಂದ ಹಾರಿ ಮೇಲೆ ಹಾರಲು ಸಾಧ್ಯವಿಲ್ಲ. ನೆನಪಿರಲಿ ಇದು ಜೀವನದ ಸತ್ಯ. ನೀನು ಎಲ್ಲಾ ಮೆಟ್ಟಿಲುಗಳನ್ನು ' ಮೆಟ್ಟಿ' ಮುನ್ನಡೆದಾಗ ನಿನಗೆ ಅಂತರಂಗದಲ್ಲಿನ ಸತ್ಯದ' ದರ್ಶನವಾಗುತ್ತದೆ.      

ಮಿತ್ರರೇ ಅಂದು ಅಜ್ಜಿ ಹೇಳಿದ ವಿಚಾರ ನನಗೆ ಅರ್ತವೇ ಆಗಿರಲಿಲ್ಲ. ಮತ್ತೆ ಇಂದು ಮೆಲುಕು ಹಾಕುವಾಗ ' ಅಬ್ಬಾ! ' ಎಂತಹ ಅದ್ಭುತ ವಿಚಾರವನ್ನು ನಮ್ಮ ಪುರಾತನರು ಸೂಕ್ಷ್ಮವಾಗಿ ಮತ್ತು ಸೂಚ್ಯವಾಗಿ ನಮಗೆ ತಿಳಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಯಿತು. ದಯಮಾಡಿ ನೀವೂ ಸಹ ಈ ವಿಚಾರವನ್ನು ಅಂತರ್ಮಂಥನ ಮಾಡಿಕೊಂಡು, ಅನುಭವಿಸಿ, ಆನಂದಿಸಿ.  

No comments:

Post a Comment