Wednesday 8 April 2015

ಮಂದ ಮತಿಯೂ ನಾನು


ಮಂದ ಮತಿಯು ನಾನು
ನಿನ್ನರಿಯೆ ಸಾಧ್ಯವೇನು
ಮಹಾ ಮಹಿಮನೂ ನೀನು
ಮತಿಭ್ರಾಂತನೂ ನಾನು ।।ಮಂದ ಮತಿಯು।।

ನಾನೇ ಎಲ್ಲ ಗೈವೆನೆಂದು
ನೆನೆದು ನಲಿವ ನರನು ನಾನು
ಎಲ್ಲಕ್ಕೆಲ್ಲಕು ನೀನೆ ಮೂಲ-
ವೆಂಬ ತತ್ವ ಅರಿವಯದವನು ।।ಮಂದ ಮತಿಯು।।

ಆರು ದುಷ್ಟರನಾಶ್ರಯಿಸಿ
ಭ್ರಾಂತಿಯಿಂದ ಬಾಳ ನಡೆಸಿ
ಮಿತ್ಯ ಬಿಡದೆ ಸತ್ಯದೆಡೆಗೆ
ದಿಟ್ಟ ನಡೆಯಲಿಡಲಾರೆನು ।।ಮಂದ ಮತಿಯು।।

ಸತಿ ಸುತರೆ ಸತ್ಯವೆಂದು
ಈ ಜನುಮವೇ ನಿತ್ಯವೆಂದು
ಭ್ರಮೆಯ ಭಾವದಿಂದಲೇ
ಬದುಕ ದೂಡುತಿಹೆನು ನಾನು ।।ಮಂದ ಮತಿಯು।।

ಸೃಷ್ಟಿಕರ್ತನೂ ನೀನು
ಸೃಷ್ಟಿಯೊಂದಂಶ ನಾನು
ಕಷ್ಟದಲ್ಲಷ್ಟೆ ನಿನ್ನ ನೆನೆವ
ಹೀನ ಮನುಜ ನಾನು ।।ಮಂದ ಮತಿಯು।।

ದೇವ ದೇವ ಪೊಡಮೊಡುವೆ
ವರವನೆಂದು ಎನಗೆ ಕೊಡುವೆ
ರತಿ ಪತಿ ಪಿತನೆ ನಿನ್ನ
ಪಾದ ಬಿಡದೆ ನಂಬುವಂತೆ ।।ಮಂದ ಮತಿಯು।।

1 comment:

  1. ಅವನದೇ ಸೃಷ್ಟಿ ಕಷ್ಟ ಬಂದಾಗ ವೆಂಕಟರಮಣ ಎನುವರು!
    ಉತ್ತಮ ನಿವೇದನಾ ದಾಸ ಕೃತಿ.
    ಹರಿ ನೆನೆದರೆ ಅನುಕ್ಷಣ ಹರಣಗೊಳಿಸುನವನು ಹೀನ ಬದುಕಿನ ಶತಾಘಾತಗಳ.

    ReplyDelete