Saturday 1 September 2012

ಬಂಜೆ



ನಾ ಹೆರ್ಲಿಲ್ಲಾಂತ 
ಗೊಣಗ್ಲಿಲ್ಲ ಅವ್ನೆಂದೂ
ಮೂಗ್ಮುರಿಯೋ ಜನ
ಚಿಂತಿಲ್ಲ ಅವ್ನೀಗೆ

ಅವ್ನಿಗೆ ನಂದೇ ಚಿಂತೆ
"ನೀ ಚೆಂದಾಕಿರು ಚಿನ್ನ"
ದಿವ್ಸಕ್ಕೊಂದು ಹತ್ಕಿತ
ಹೇಳ್ದಿದ್ರೆ ಅರ್ಗಕಿಲ್ಲ ತಿನ್ದನ್ನ

ನನ್ಗಂತೂ ಒಳ್ಗೊಳ್ಗೆ ಬೇಸ್ರ
ವಂಸಕ್ಕೆ ಒಬ್ಬ ಮಗಾ ಬೇಕಂತ
ಮನ್ಸಾಗೆ ಬಂದಾಗೆಲ್ಲ ಕಣ್ಕಪ್ಪಾಗಿ
ದಡದಡಡ್ನೆ ಸುರೀತಿತ್ತು ಕಣ್ಣೀರ್

ಹಂಗೂ ಹಿಂಗೂ
ಹತ್ತು ವರ್ಸ ಕಳದಾಯ್ತು,
ಬಂಜೆ ಅಂತ ಬೇರೆ
ನಂಗೆ ಹೆಸ್ರಾಯ್ತು

ಬಸ್ರು ಕಟ್ದೆ ಇದ್ರೂ
ಹೆಸ್ರು ಮಾತ್ರ ಸಂತಾನಲಕ್ಷ್ಮಿ
ಸಾಕವ್ವಾಂತ ಹೆಸ್ರಿಟ್ಕೊಂಡರೂ
ಪಕದ್ಮನಿಯಾಕಿ ಹೆತ್ತವ್ಳಾರು

ಮುಪ್ಪಾತು, ಮಕ್ಳಿಲ್ಲಾಂತ
ಕೊರ್ಗ್ಹೆಚ್ಚಾತು, ಜೀವ್ನ ಸಾಕಾಯ್ತು
ನಾವಿಬ್ರೂ ಹೆಂಗೋ ಒಂದಂಗೆ
ನಿಟ್ಟುಸ್ರುಬಿಟ್ಕೊಂಡು ದಿವ್ಸ ದೂಡಾಯ್ತು,

ಪಟ್ಣಸೇರಿದ್ ಸಾಕವ್ವನ್ ಆರೂ ಮಕ್ಳು
ಬಂದವ್ರೆ ಅಂತ ಅವ್ರ ಮನೆ ಕುಟ್ಟೆ ಹೋದ್ರೆ
ಕಂಡದ್ದೇನುನಾ! ಯವ್ವ! ಎಲ್ಲ ಸೇರ್ಕೊಂಡು
ಅವ್ವನ್ ನೋಡ್ಕೊಳೋಕ್ ಆಗಾಕಿಲ್ಲ ಅಂತ

ವೃದ್ಧಾಶ್ರಮಕ್ ಸೇರಿಸ್ತೀವಿ ನಮ್ಮವ್ವನ್
ಅಂದಾಗ ಎದೀ ಧಕ್ ಅಂತು, ಅಯ್ಯೋ
ನಾ ಹೆತ್ತಿದ್ರೂ ಇದೆ ಗತೀ ಆಗ್ತಿತ್ತೋ ಏನೋ
ಅಂತ, ಬಾಯ್ಮುಚ್ಗೊಂಡು, ಮನೀಗ್ ಬಂದೆ.

"ಮಕ್ಲಿಲ್ದಿದ್ರೆ ಏನಾತು ಬಾಳೈತಲ್ಲ," ಅಂತ
ನಮ್ಮೆಜಮಾನ ಹೇಳಿದ್ ಮಾತ್ ನೆಪ್ಪಾಯ್ತು
'ಮಕ್ಳಿಲ್ದಿದ್ರೆ ಏನು ದುಃಖವಂತೂ ಇಲ್ವಲ್ಲ' ಅಂತ
ಮನೀಗ್ಬಂದ್ ಕುಂತಾಗ, ಮನ್ಸಿಗ್ ನಿರಾಳಾಯ್ತು

ರವಿ ತಿರುಮಲೈ

2 comments:

  1. ಇದು ನಾನು ಕಣ್ಣಾರೆ ನೋಡಿದ ಸ್ಥಿತಿ ಸಾರ್, ಮಕ್ಕಳು ಹೆತ್ತವರನ್ನು ಬೀದಿಗಟ್ಟಿದರೂ ಅವರು ಶಾಪ ಹಾಕುವುದಿಲ್ಲ. ಬಂಜೆತನವೇ ಶಾಪವಾದ ಆ ತಾಯಿ ಎನಿತು ನೊಂದಿದ್ದಾಳೋ?

    ರತ್ನಂ ಶೈಲಿಯ ಈ ಕವನ 2012ರ The Best.

    ReplyDelete
  2. ಶೂನ್ಯ ಸ್ತಿತಿಯಲ್ಲಿ ಬದುಕುವುದು ಎಲ್ಲರಿಗು ಬರುವುದಿಲ್ಲ,
    ನಿಮ್ಮೊಳಗೊಬ್ಬ ರತ್ನ ಬದುಕಿ ಈ ರೀತಿಯ ಸಂದೇಶಗಳನ್ನು
    ಸದಾ ತಲುಪಿಸುತ್ತಿರಲಿ....

    ReplyDelete