Sunday, 29 January 2012


ನದಿ




ಭಾನು ಪ್ರಕಾಶನ ಶಾಖಕ್ಕೆ ಆವಿಯಾಗಿ 

ಮೂಲ ತೊರೆದು ದಿವಿಗೇರಿ

ಹಾರುತ್ತಾ ತನ್ನಂತವರ ಸೇರಿ

ಸೇರಿ ಸೇರಿ ಸತ್ವಯುತವಾಗಿ




ಮೋಡವೆಂದೆನಿಸಿಕೊ೦ಡು

ಧುಮುಕಿ ಧರೆಗಿಳಿದು

ಹನಿ ಎಂದೆನಿಸಿಕೊಂಡು

ಸೇರಿ ಸೇರಿ ತನ್ನಂತವರ


ಸ್ತ್ರೀ ರೂಪದಲಿ ಮಾತೆಯಂತೆ

ಹರಿವಾಗ ಸುಂದರ ಗೀತೆಯಂತೆ

ಜಾತಿ ಮತಗಳ ಭೇದ ಮಾಡದಂತೆ

ಸಮನ್ವಯದ ಭಾವ ತೋರುವಂತೆ


ಹಳ್ಳವಾಗಿ ತೊರೆಯಾಗಿ

ಹರಿ ಹರಿದು ನದಿಯಾಗಿ

ಕವಲೊಡೆದು ಧರೆ ತಣಿಸಿ

ಧರೆಯಲ್ಲರಿಗೆ ಉಣ ಉಣಿಸಿ


ಸಫಲತೆಯ ಭಾವದಿ ಧನ್ಯತೆಯ ಪಡೆದು

ಓಡಿ ಓಡಿ ಗಮ್ಯವ ಹುಡುಕಿ ನಡೆ ನಡೆದು

ಜ್ಞಾನ ಪಡೆದ ಭುವಿಯ ಆತ್ಮಗಳಂತೆ

ಮೂಲ ಸೇರುವಾತುರದಲಿ ಓಡುವಂತೆ


ರತ್ನಾಕರನ ಗರ್ಭಸೇರಿ

ಅಸ್ತಿತ್ವವಿಲ್ಲದೆ, ವಿಲೀನವಾಗುವೆ

ಮತ್ತದೇ ಚಕ್ರಕ್ಕೆ ಕಾರಣನಾದ

ಭಾನು ಪ್ರಕಾಶನ ಶಾಖಕ್ಕಾಗಿ ಕಾಯುವೆ.


ಇದಕ್ಕೆ ಶ್ರೀ Nataraj kangod ಅವರು ಪ್ರೇರಣೆ.

ರವಿ ತಿರುಮಲೈ

Friday, 27 January 2012

ತನ್ಮಯತೆ


ಗೋಕುಲದಲ್ಲಿ ಶ್ರೀ ಕೃಷ್ಣ ಎಲ್ಲರ ಮನಸ್ಸನ್ನೂ ಆವರಸಿಕೊಂಡಿರುವವನು. ಎಲ್ಲರೂ ತಾವು ಕೃಷ್ಣನ ಸಂಗಡ ಇರಬೇಕೆಂದುಕೊಳ್ಳುವವರು. ಒಂದು ಗಳಿಗೆಯೂ ಅವನಿಂದ ದೂರ ಇರಲಾರರು. ಆದರೆ ಮೂರ್ತ ರೂಪದಲ್ಲಿ ಅವನು ಅವರೊಡನೆ ಇಲ್ಲದಾಗ, ಅವನೊಡನೆ ಇರುವ ಭಾವವೇ ಅವರಿಗೆ ಆನಂದ ಕೊಡುತ್ತಿತ್ತು. ಹಾಗೆ ತನ್ನ ಸಂಗಡವೇ ಕೃಷ್ಣನಿದ್ದಾನೆ ಅಥವಾ ತಾನು ಅವನೊಡನಿದ್ದೇನೆ  ಎನ್ನುವ ಒಂದು ತನ್ಮಯ ಭಾವ ಅವರಲ್ಲಿ ಇರುತಿತ್ತು.ಅಂಥಹ ಒಂದು ತನ್ಮಯ ಭಾವದ ಮನಸ್ಸಿನ ರೂಪವನ್ನು ತನ್ನ ಸಖಿಗೆ ಅರುಹುವುದೇ ಈ ತನ್ಮಯತೆ. 





ನೋಡೇ ಸಖೀ ಮೂಕಳಾಗಿಹೆ ನಾ 
ಮಾಧವನಾ ಮೋಹನ ರೂಪವ ಕಂಡು " ನೋಡೇ ಸಖೀ" 

ಅವನ ಲೀಲೆಯ ಕೇಳಿ 
ಅವನ ಮೋಹದಿ ತೇಲಿ 
ಅವನೊಡನಿರುವಂಥಾ 
ಭಾವದೊಳಿರುವಾಗ                        " ನೋಡೇ ಸಖೀ" 

ನಯನದೊಳು ಅವನಿರಲು 
ಮನದೊಳಗೆ ತುಂಬಿರಲು 
ಮುರಳೀಗಾನವ 
ನಾನಾಲಿಸುತಿರುವಾಗ                     " ನೋಡೇ ಸಖೀ" 

ಹುಣ್ಣಿಮೆಯ ಸಂಜೆಯಲಿ 
ಯಮುನಾ ತೀರದಲೀ 
ರಂಗನಾ ಸಂಗದಲಿ 
ಎನ್ನ ನಾ ನೆನೆವಾಗ                       " ನೋಡೇ ಸಖೀ" 

ನಂದ  ನಂದನಂದನನೆನಗೆ
ನಲುಮೆಯನು ತೋರಿರಲೂ 
ತನುಮನದಲವನೊಲುಮೆ  
ಜೇನಂತೆ ಸುರಿವಾಗ                      " ನೋಡೇ ಸಖೀ" 


ರವಿ ತಿರುಮಲೈ 


Thursday, 26 January 2012

ಹೇ ಸೂರ್ಯನೇ


ದಿವಿಯಲ್ಲೇ  

ಮತ್ತೊಂದು ಭಾಗಕೆ
ಬೆಳಕನೀಡಲುಹೊರಟು
ತನ್ನ ಬಿಂಬದ ಬಿಂಬವ

ಭುವಿಯಕಾಯಲುಬಿಟ್ಟು  
ಜಗದ ಸಮತೋಲನ

ಕಾಯುವ 

ಭಾನುಪ್ರಕಾಶನೆ
ಹಿಂತಿರುಗಿಬಾ 

ಕಾಯುತ್ತೆ
ಈ ಭಾಗ ಇರುಳೆಲ್ಲ

ಕನಸ ಕಾಣುತ್ತ.
Chat Conversation End

Friday, 20 January 2012

ಹುಡುಕಾಟ




ಹುಡುಕಾಟ 


ಗೋಕುಲದಲ್ಲಿ ಶ್ರೀ ಕೃಷ್ಣನನ್ನು ಕಾಣದೆ ಒಂದು ನಿಮಿಷವೂ ಇರಲಾರದ ಗೋಪಿಕೆಯರ ತವಕ ಮತ್ತು ಅವನಿಗಾಗಿ ಅವರು ಪಡುವ ಪರಿತಾಪ ಅಷ್ಟಿಷ್ಟಲ್ಲ. ಅವನನ್ನು ಕಾಣಲು ತಪತಪಿಸಿ ತಡೆಯಲಿಕ್ಕಾಗದೆ ಹುಡುಕುತ್ತಾರೆ. ಆ ರೀತಿಯ ಹುಡುಕಾಟದ ಭಾವವೇ ಈ ಹಾಡಿನ ಮೂಲ ರೂಪ. 



ಹೇ ಸಖೀ ಬಾರೆ 
ಹುಡುಕುವ ನಾವೂ 
ಚೆಂದದಾ ಚೆನ್ನಿಗನೆಲ್ಲಿಹನೆಂದೂ 

ನಂದನರಮನೆಯಲ್ಲಿ ಕಾಣಹೋದೆನೆ  ನಾ 
ಅಂದದಾ  ಚೆನ್ನಿಗನಲ್ಲಿರಲಿಲ್ಲ 
ಎತ್ತಪೋದನೆಂದು ಕೇಳಲು ನಾಚೀ ನಾ(೨) 
ಸುತ್ತ ಒಮ್ಮೆ ನೋಡಿ ಸುಮ್ಮನೆ ಬಂದೆನೇ(೨) 
 "ಹೇ ಸಖೀ ಬಾ ರೆ "

ಗೋಪಬಾಲಕರ ಗುಂಪಿನ ನಡುವೆ 
ನೆಟ್ಟನೋಟದಿ  ನಾನರೆಸಿದೆನಲ್ಲೇ 
 ರಂಗನಾ ರಂಗಲ್ಲಿ ಕಾಣದೆ ನಾ (೨) 
      ಕಣ್ಣೀರುಡುತಾ  ಕುಸಿದೆನಲ್ಲೇ (೨)               
 "ಹೇ ಸಖೀ ಬಾರೆ "

ಮನೆಗಳ ಹಾದಿಯ ಹಿಡಿದ ಗೋಗಳ 
ಮಾಧವನೆಲ್ಲೆಂದು  ಕೇಳಿದೆನಲ್ಲೇ   
ಮರುಮಾತಿಲ್ಲದೆ ಮೋರೆಯ ತಿರುವುತಾ (೨) 
           ಮೌನ ಗೀತೆಯಾ ಹಾಡಿದವಲ್ಲೇ (೨)            
"ಹೇ ಸಖೀ ಬಾರೆ "

ರವಿ ತಿರುಮಲೈ 


ಈ ಹಾಡನ್ನು ಹಿಂದೂಸ್ತಾನಿ ಶೈಲಿಯ " ತೋಡಿ " ಅಥವಾ " ಗುಜರಿ ತೋಡಿ" ರಾಗದಲ್ಲಿ ಹಾಡಿದರೆ ಹಾಡಿನ ಮೂಲ ಭಾವವನ್ನು ಉಳಿಸಿಕೊಳ್ಳಬಹುದು 

ಎನ್ನ ಮನದಾಸೆ


"ಕನ್ನಡ ಬ್ಲಾಗಿನ ಎಲ್ಲ ಕವಿಗಳನ್ನೂ

ಒಂದೆಡೆ ಸೇರಿಸುವ ಕನಸೆನಗೆ

ಎಲ್ಲರ ಸುಂದರ ಭಾವಗಳನ್ನೂ 

ಒಮ್ಮೆಲೇ ಕೇಳುವ ತವಕವೆನಗೆ 

ಚಿನ್ನದ ಮೊಟ್ಟೆಯ ಹೊಟ್ಟೆ ಕೊಯ್ದು 

ಅತಿಯಾಸೆಯಿಂದ ಗತಿ 

ಕೆಡಿಸಿ ಕೊಂಡವನ ರೀತಿ 



ಎಷ್ಟೊಂದು ಭಾವಗಳು 

ಭಾವದಲಿ  ನೋವುಗಳು 

ನಲಿವುಗಳು, ಹಾಸ್ಯಗಳು,,

ವೇದಾಂತದ ಮಾತುಗಳು 

ಮಾತುಗಳಲ್ಲಿ ಚತುರೋಕ್ತಿಗಳು 

ನಮ್ಮೆಲ್ಲರ ಭಾವ ಅವರುಗಳ ಪದ್ಯ 



ಪುಷ್ಪರಾಜನ ಪ್ರೇಮಗೀತೆಗಳು

ಪಮ್ಮಿಯ ಪ್ರೀತಿಯ ಪರಿಭಾಷೆಗಳು
 
ಕೋಮಲನ ಅಣಕುವಾಡುಗಳು

ಬಷೀರಣ್ಣನ ಭಾವೋಕ್ತಿಗಳು

ಆನಂದಾಚಾರ್ಯನ ವಿರಹಗೀತೆಗಳು

ಹುಸೇನರ ಕನಸ ಯಾತ್ರೆಗಳು



ಬದ್ರಿ, ಮೂರ್ನಾಡರ ಪ್ರಬುಧ್ಧತೆ,

ಐ ಕೆ ಭಟ್ಟರ ಪುರಾಣಗೀತೆ

ಸಾರೋಡೆಯ ತಾಯಿಯ ಮಮತೆ 

ದಿವಾತರರ ಸಖೀಗೀತೆ

ಬೆಲ್ಲಾಲರ ಸಾಹಿತ್ಯವಾರ್ತೆ 

ಪರೇಶನ ವಿವಾಹ ಗೀತೆ

ಪ್ರಶಾಂತನ ಪುಷ್ಪಬಾಣ ವಿಲಾಸ,

ತಡಾದಿಕರರ ಕೋಕಿಲಗಾನ

ಸುಜಾತೆಯ ಮಂಜುಳಗಾನ

ಸೀಗೆಕೋಟೆಯ ಚುಟುಕಪುರಾಣ

ಕೊಳ್ಳೆಗಾಲರ ಸೃಷ್ಟಿ ಸಮತೋಲನ

ಪದ್ಮಶಾಲಿಯ ಉದಯಗಾನ



ಸತ್ತಾರ ಧೀರ ಹರಿಕಾರ

ಕನ್ನಡ ಕವಿತೆಯ ನೇತಾರ 

ಮೂರ್ನಾಡೇತರರ ಸಹಕಾರ

ಬೇರೆಲ್ಲಿದೆ ಇಂಥಹ ಆಕಾರ

ಎಲ್ಲರ ಹೆಸರ ಹೇಳಲಾಗದಂತೆ 

ದೇವರೂ ಸಹ ಮೂಕಸ್ಮಿತ


ಬನ್ನಿ ಮಿತ್ರರೇ, ಸೇರಿ ಒಂದು ಕಡೆ

ಒಮ್ಮೆ ನಿಮ್ಮನ್ನೆಲ್ಲಾ ನೋಡುವಾಸೆ

ಬಿಗಿದಪ್ಪಿ ಮುದ್ದಾಡುವಾಸೆ

ಒಂದು ಗೂಡಿಸು ನೀ ಶಕುಂತಲ

ಮಾಡಿಸು ನೀ ಕೋಲಾಹಲ 

.

ರವಿ ತಿರುಮಲೈ"
 · 

Tuesday, 10 January 2012

ದಾಸಾನುದಾಸ





ದಾಸಾನುದಾಸ
ದಾಸ ನಾನು ದಾಸ ನಾನು                      
ದಾಸ ನಾನು ಕೃಷ್ಣ 

ದೇವ ನೀನು ಪಾಲಿಸೆನ್ನ
ನೀಲ ಮೇಘ ಶ್ಯಾಮಾ      " ದಾಸ" 

ದಿವಿಯಲ್ಲೋ ಭುವಿಯಲ್ಲೋ 
ನರಕಾಂತರಾಳದಲೋ
ಇಳಿಸು ಎನ್ನ, ಉಳಿಸು ಮನದಿ 
ಚರಣಗಳ ನಿನ್ನ                " ದಾಸ  " 
       
ಎನ್ನ ಪೂರ್ವ ಕರ್ಮದಂತೆ 
ನಡೆವುದೆಲ್ಲ ನಡೆಯಲೀ 
ಅದರ ರುಚಿಯ ಸವಿಯುವಾಗ 
ನೀನೆ ನೆಲಸು ಮನದಲೀ        " ದಾಸ " 
 
ನೀನೆ ಮೂಲ ನೀನೆ ಗಮ್ಯ 
ನೀನೆ ಎಲ್ಲ ರೂಪವೂ 
ನನ್ನನಳಿಸು ಉಳಿಸು ನಿನ್ನ
ರೂಪ ಎನ್ನ ಮನದೊಳು       " ದಾಸ



ರವಿ  ತಿರುಮಲೈ  


ಮರೆಯಲಾಗದ ಕೃಷ್ಣ

ಗೋಕುಲದ ಕಣ್ಮಣಿ , ಗೋಪ-ಗೋಪಿಕೆಯರ ಮನಸ್ಸುಗಳಲ್ಲಿ ಸದಾ ತುಂಬಿರುವ ರೂಪ, ಆ ಶ್ರೀ ಕೃಷ್ಣ.
ಸದಾ ಕಾಲ ಅವನೊಡನೆ ಇರಬೇಕು, ಅವನ ಮಾತು ಕೇಳಬೇಕು, ಅವನ ಮುರಳೀ ಗಾನವ ಆಲಿಸಬೇಕು ಎಂದು ಹಾತೊರೆಯುವ ಅವರ ಮನಸ್ಸುಗಳು  ಅವನನ್ನು ಎಂದಿಗಾದರೂ ಮರೆಯಲು ಸಾಧ್ಯವೇ. ಅವರಿಗೆ ಆನಂದವೀಯುವ ರೂಪ ಅವರನ್ನು ಪೊರೆಯುವ ದೇವ ಅವನನ್ನು ಮರೆಯಲಾಗುವುದೇ. ಅಂಥಹ ಭಾವಗಳನ್ನೋಳಗೊಂಡ ಹಾಡು


ಕಂಡ ದಿನದಿಂದಲೇ
ಕಣ್ಣಲಿ ನೆಲೆಸಿರುವ
ಕೃಷ್ಣನಾ ಮರೆವುದು
ಸಾಧ್ಯವೇನೆ ಸಖೀ                                 "ಕಂಡ "

ಕೊಳಲ ನಾದದಿಂದ ಎಲ್ಲರ ತನ್ನೆಡೆಗೆ 
ಸೆಳೆವ ಮೋಹನ ಮೂರುತಿ ಅವನೇ
ಗೋಗಳ ಕಾಯುವ ನಟನೆಯ ಮಾಡುತ
ಗೋವರ್ಧನ ಗಿರಿ ಎತ್ತಿದವನಾ                 " ಕಂಡ"

ತಾವರೆ ಕಂಗಳ ತಿರುಗಿಸುತವನೂ
ತಾಯಿಗೆ ಜಗವನ್ನೇ ತೋರಿದನಲ್ಲೇ
ಜಗದೋಧ್ಧಾರನೆಂಬ ಬಿರುದನು ಪಡೆದ
ಜಗದೊಡೆಯನ ನಾ ಮರೆಯಲಹುದೇ      "ಕಂಡ "

ನಲಿ ನಲಿ ನಲಿಯುತ ನಲುಮೆಯ ತೋರುತಾ
ನಂದ ಗೋಪನ ಮನವನು ತಣಿಸುತ
ಬೆಣ್ಣೆಯ ಕದಿಯುತ ಚಿಣ್ಣರೊಡನಾಡುತ  
ಚಿನ್ಮಯರೂಪದಿ ಜಗವನು ಪೋರೆವನಾ   'ಕಂಡ "

ರವಿ ತಿರುಮಲೈ