Thursday, 12 December 2013
Monday, 7 October 2013
ಸ್ವಪ್ನ ಸುಂದರಿ
ಕಳೆದು ಹೋದ 'ಯೌವನ'ದ
ದಿನಗಳ ನೆನಪೆನಗೆ.
ಸಖೀ !! ಕನಸಿನಲಿ ನಿನ್ನೊಡನೆ
ನಲಿನಲಿಯುತ್ತಾ ಕಳೆದ
ದಿನಗಳ ನೆನಪು ಕಾಡುತ್ತದೆ
ಎಚ್ಚರದ ನಂತರವೂ
ನನಸಿನಲಿ ಉಳಿಯುತ್ತದೆ.
ನೀ ಯಾರೋ ನಾನರಿಯೆ.
ಪರಿ ಪರಿ ಪ್ರೀತಿಯ ಧಾರೆ
ನೀ ಸುರಿದಾಗ ಕೈ ಬೊಗಸೆ
ಉಕ್ಕಿ ಹರಿದು ಚೆಲ್ಲುವ
ನಿನ್ನೊಲವ ಹಿಡಿಟ್ಟುಕೊಳ್ಳಲು
ನಾ ಪಡುವ ಪಾಡು ಮಂಪರು
ಹರಿದ ಮೇಲೂ ಉಳಿಯುತ್ತದೆ
ಪ್ರಾಯ ಸಂದಿರುವ ಕೈ ಕಾಲು
ಕೀಲುಗಳ ಮಧುರವಾದ ನೋವು
ಓಡುವ ಮನಸಿನೊಂದಿಗೆ
ಪೋಟಿಮಾಡಲಾಗದೆ ನಿಂತಲ್ಲೇ
ನಡೆದಂತ ಅನುಭವ. ವಾಸ್ತವದಿ
ನೀ ದೂರ ನಿಂತು, ಸಖೀ
ಕೇವಲ ನನ್ನ ಕನಸಲ್ಲೋ
ಮನದಲ್ಲೋ ನಲಿದು ಕುಣಿದಾಡು
ನನ್ನ ಭಾವನಾ ಲೋಕದಿ ಸುಳಿದಾಡು.
ರವಿ ತಿರುಮಲೈ
Thursday, 26 September 2013
ಕೇಶದಾ ಕ್ಲೀಷೆ
ಒಂದುಕಾಲಕ್ಕೆ ತುಂಬಾ ಇತ್ತು
ಆನಂದವಾಗಿ ಬೆರಳಾಡಿಸಬಹುದಿತ್ತು
ಮನಕೆ ಬಂದಹಾಗೆ ಮಣಿಸಬಹುದಿತ್ತು
ಅಂದಚಂದಕೆ ತಿದ್ದಿ ತೀಡಬಹುದಿತ್ತು
ವಾರಕ್ಕೊಮ್ಮೆ ಎಣ್ಣೆ ಕುಡಿಯುತ್ತಿತ್ತು
ಅಭ್ಯಂಜನದ ನಂತರ ಗಾಢ ಮಲಗಿಸುತ್ತಿತ್ತು.
ಎದ್ದಮೇಲಂದು ದೇಹ ಹಗುರಾಗುತಿತ್ತು
'ಮತ್ತ' ದೇಹ ಮತ್ತದನ ಬೇಡುತ್ತಿತ್ತು
ಹುಡುಗರಿಗೆ ದೇವಾನಂದ, ರಾಜೇಶ್ ಖನ್ನ
ಮಾದರಿಯಾದರೆ,ಹುಡುಗಿಯರಿಗೆ ಮಧು
ಬಾಲಳೋ ಮೀನಾಕುಮಾರಿಯಂತೆಯೋ
ಕಾಣುವಾ ಬಯಕೆಯಿರುತ್ತಿತ್ತು
ಭಾನುವಾರದಂದು ಭಾರೀ 'ಕ್ಯೂ' ಇರುತಿತ್ತು
ಲೇಟಾದರೆ, ಅದನ್ನಾಗಲೇ ಕಳೆದುಕೊಂಡ
ಅಪ್ಪನ ' ಅದೇನು ಅಮೇರಿಕನ್ ಕಟಿಂಗೋ
ಎಷ್ಟು ಹೊತ್ತು' ಎಂಬ ಕೂಗಾಟವಿರುತ್ತಿತ್ತು
ಅದು ಹೋದ ಅರಿವೇ ಆಗಲಿಲ್ಲ.
ಬಟ್ಟತಲೆ ಬಂದದ್ದೆ ಗೊತ್ತಾಗಲಿಲ್ಲ
ನೋಡನೋಡುತ್ತಾ ಬರಿದಾಯಿತಲ್ಲ
ಮತ್ತೆ ಬೇಕೆಂದರೂ ಬರದಾಯಿತಲ್ಲ
ಇರದೆಡೆಗೆ ಇರುವೆಡೆಯಿಂದ ಎರವಲು
ಬೆಳ್ಳಗಾದರೂ ಬಣ್ಣಹಚ್ಚುವ ತೆವಲು
ಮಣ್ಣಲ್ಲಿ ಮಣ್ಣಾಗುವ ಕೇಶದಾ ಕ್ಲೇಷೆ
ಸಾಯುವತಕನ ಬಿಡದಾ ಕ್ಲೀಷೆ
ರವಿ ತಿರುಮಲೈ
Saturday, 29 June 2013
Food for all - where is the Justice
- Wet eyelids open for tears to rain
to tell the story of each thrown grain
whose life has eternally gone in vainotherwise could have quenched the hunger
cruel hands, thoughtless before the blunder
could have fed the hungry one or the otherHungry, fighting with dogs on the street
to pick a grain or two in strewn banana plates
Trying to fill the belly that is hungry and flat.Haves who have more have more of ego
havenots look around with nowhere to go
Filled pockets throw out empty hands in deceitHaves don't have a sharing heart and mind
Half bellys cannot give even if are kind
for what they have is in-apt till the day endAlas ! is there an end to the crave of food
Queen's law intends all to get food and bread
But the poor get ten of the spent hundred
and rest reaches the silken layers of her bed.Ravi Tirumalai
Friday, 28 June 2013
ಅನ್ನಂ ಬ್ರಹ್ಮ
ಕಣ್ಣಂಚಿನಲ್ಲಿ ನೀರ ಹನಿಗಳು ಜಿನುಗುತ್ತವೆ,
ತೊಯ್ದ ಕಣ್ಣಾಲಿಗಳು ಕತೆ ಹೇಳುತ್ತವೆ
ಕೊರಗುತ್ತವೆ ಎಸೆದ ಅಗುಳಗುಳುಗಳು
ಯಾರದೋ ಉದರ ಸೇರಿ ತಣಿಸಬಹುದಿತ್ತು
ಕ್ರೂರ ಕೈಗಳು ತುಸು ಯೋಚಿಸಬಹುದಿತ್ತು
ಎಸೆಯುವ ಮುನ್ನ ಯಾರಿಗಾದರೂ ನೀಡಬಹುದಿತ್ತು.
ಎಂಜಲೆಲೆಯಲ್ಲಿ ಅಗಳ ಹೆಕ್ಕುವ ನಾಯಿಗಳೊಂದಿಗೆ
ಪೈಪೋಟಿಗೆ ನಿಲ್ಲುವರು ಬಿದ್ದರೆಲೆ ಹಿತ್ತಲಿಗೆ
ಹುಡುಕಲು ತಮ್ಮ ಹಸಿವಿನೊಂದಂಶ ನೀಗಲಿಕೆ
ಹೆಚ್ಚು ಸಿಕ್ಕಿದವರಿಂದು ಹಮ್ಮು ತೋರುವರು
ಸಿಗದವರು ಪಾಪ ಹಸಿವಿನಲ್ಲಿ ಕೊರಗುವರು
ಬೇಡುವವರಿಗೆ ಇದ್ದವರು ಬರಿಗೈಯ ತೋರುವರು.
ಇರುವವನಿಗೆ ಮನಸಿಲ್ಲ ಕೊಡಬೇಕು ಎಂದು
ಮನಸಿರುವವಗೆ ಅರೆ ಬರೆ ಊಟವೆಂದೆಂದೂ
ಬೇಕೆಂದರೂ ಇವನು ಕೊಡಲಾರನೆಂದೆಂದೂ
ಹಸಿವ ಕೂಗಿಗೆಂದು ಕೊನೆಯೋ ನಾ ಕಾಣೆ
ಮಸೂದೆಯಲಿ ಆಹಾರ ಕೊಟ್ಟಿಹಳು ಜಾಣೆ
ರೂಪಾಯಿ ಕರ್ಚಿನಲಿ ನುಂಗುವಳು ಹದಿನೈದಾಣೆ
ರವಿ ತಿರುಮಲೈ
Saturday, 22 June 2013
ಅಂತರಂಗದ ಗಾವಿಲರು

ಗಿರಿ ಶಿಖರ ಸುತ್ತಿಹರು
ಮರಗಿಡವ ಮುತ್ತಿಹರು
ಅಂತರಂಗದಿ ದೈವವ
ಕಾಣದಾ ಗಾವಿಲರು
ಹೆಸರು ಸಾವಿರಾರು
ರೂಪ ನೂರ ಕೊಟ್ಟಿಹರು
ಇಲ್ಲದಾ ಆಕಾರ ಕಾಣ್ಬ
ಹಂಬಲದ ಹುಚ್ಚರಿವರು
ಹಲವು ಆಚಾರಗಳ
ಬಲವಂತರಿವರು
ಕೆಲವು ನಂಬಿಕೆಗಳ
ಗುಣವಂತರಿವರು
ವರ್ಣನೆಗೆ ಪರಿ ಪರಿಯ
ಪುರಾಣಗಳ ಕಟ್ಟಿಹರು
ವರ್ಣನಾತೀತನನು
ಅಮಿತ ವರ್ಣಿಸಿಹರು
ನಂಬಿಕೆಗೆ ತಲೆತೋಕೆಗಳಿಲ್ಲ
ಹುಂಬತನಕೆ ಕೊನೆಮೊದಲಿಲ್ಲ
ತಮ್ಮ ಕೂಪವ ತಾವೇ ತೋಡಿ
ಸುಮ್ಮನಿಹ ದೈವವನು
ಹಳಿದು ದೂರುತಿಹರು
ಅಂತರಂಗದಿ ದೈವವ
ಕಾಣದಾ ಗಾವಿಲರು
ರವಿ ತಿರುಮಲೈ
Sunday, 19 May 2013
ಮಹಿಳೆ ಎಷ್ಟು ಸ್ವತಂತ್ರಳು?
ಇತ್ತೀಚಿಗೆ ಹೆಣ್ಣಿನ ಸ್ಥಾನಮಾನ ಮತ್ತು ರಕ್ಷಣೆಯ ಬಗ್ಗೆ ಒಂದು ಸಕಾರಾತ್ಮಕವಾದ ' ಕೂಗು' ಕೇಳಬರುತ್ತಿದೆ. ಹೆಣ್ಣಿನ ಮೇಲೆ ಶೋಷಣೆ ಎಲ್ಲಾದರೂ ಗುರುತರವಾಗಿ ಹೆಚ್ಚಾದರೆ ಆಗ ಒಂದು ಕೂಗು. ಮತ್ತೆ ಎಲ್ಲ ತಣ್ಣಗೆ ಮಾಮೂಲು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಂತಹ ಸ್ಥಾನಮಾನವಿದೆ ಎಂದು ಸಾವಿರಾರು ವರ್ಷಗಳಿಂದ ಜಿಜ್ಞಾಸೆಗೆ ಒಳಗಾಗಿರುವ ವಿಷಯವೆಂದು ಎಲ್ಲರಿಗೂ ಗೊತ್ತು.
ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣೇನು, ಗಂಡಿನ ಸ್ಥಿತಿಗತಿಗಳೂ ಸಹ ಬದಲಾಗುತ್ತಲೇ ಇದೆ. ಒಂದು ಕಾಲಕ್ಕೆ ಕೇವಲ ಗೃಹಿಣಿಯಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದ ಹೆಣ್ಣು ಇಂದು ಆರ್ಥಿಕ, ಸಾಮಾಜಿಕ ಇತ್ಯಾದಿ ರಂಗಗಳಲ್ಲಿಯೂ ಸಮಭಾಗಿತ್ವವನ್ನು ನಿರ್ವಹಿಸುತ್ತಿದ್ದಾಳೆ.
ಹೆಣ್ಣು ಅಬಲೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇದು ನಿಜವೇ? ಹೌದು ಮತ್ತು ಅಲ್ಲ, ಎರಡೂ ಉತ್ತರವನ್ನು ಕೊಡಬಹುದು. 'ಹೌದು' ಏಕೆಂದರೆ ದೈಹಿಕವಾಗಿ ಸಾಮಾನ್ಯವಾಗಿ ಹೆಣ್ಣಿಗೆ ಕಡಿಮೆ ಬಲ . ಆ ಅರ್ಥದಲ್ಲಿ ಆಕೆ 'ಅಬಲೆ'. ಅಂದರೆ ಬಳವಿಲ್ಲದವಳು ಎಂದು ಅರ್ಥ. 'ಅಲ್ಲ' ಏಕೆಂದರೆ ಮಾನಸಿಕವಾಗಿ ಹೆಣ್ಣು ಬಲು ಬಲವಂತೆ. ಗಂಡಿಗಿಂತ ಹೆಣ್ಣು ಅಧಿಕ ದೃಢ ಮನೋಭಾವನ್ನು ಹೊಂದಿದ್ದಾಳೆ.
ನಮ್ಮ ಭಾರತೀಯ ಸಮಾಜದಲ್ಲಿ ' ಸಂಸಾರ'ಕ್ಕೆ ಬಹಳ ಮಹತ್ವ. ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಸಂಸಾರಕ್ಕೆ ಬದ್ಧರಾಗಿರುತ್ತಾರೆ ಅಥವಾ ಬದ್ಧರಾಗಿರಬೇಕು. ಇದು ನಿಯಮ. ಇಬ್ಬರೂ ಸಂಸಾರವೆಂಬ ಬಂಡಿಯನ್ನು ಎಳೆಯುವ ಜೋಡಿ ಎತ್ತುಗಳಂತೆ ಎಂದು ನಮ್ಮಲ್ಲಿ ಹೇಳುತ್ತಾರೆ, ಅಲ್ಲವೇ?
ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ ಒಬ್ಬ 'ಬ್ರಹ್ಮಪುತ್ರ'ನ ಹೊರತು. .'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ:' ಎಂದು ಹೇಳಿದ್ದೇನು, ಸ್ತ್ರೀಯಲ್ಲಿ ದೇವತೆಗಳ ಕಂಡಿದ್ದೇನು, ಸ್ತ್ರೀಯನ್ನು ಹಾಡಿ ಹೊಗಳಿದ್ದೇನು. ಆದರೂ ಸ್ತ್ರೀಯರಿಗೆ ಇರಬೇಕಾದ ಸ್ಥಾನ ಮಾನವು ಇಂದಿನ ಸಮಾಜದಲ್ಲಿ ಇಲ್ಲವೆಂಬ ಕೂಗೂ ಸಹ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಬರುತ್ತಿದೆ.
ಇಂದಿನ ಸ್ತ್ರೀ ಬದಲಾಗಿದ್ದಾಳೆ. ಅವಳ ಸ್ವಭಾವ ಸ್ವತಂತ್ರವಾಗುತ್ತಿದೆ. ಅವಳ ಉಡುಗೆ ತೊಡುಗೆ ಬದಲಾಗುತ್ತಿದೆ. ಅವಳ ವಿದ್ಯಾಭ್ಯಾಸ ಉತ್ತಮವಾಗುತ್ತಿದೆ. ಅವಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇಂದು ಸ್ತ್ರೀ ಸ್ವತಂತ್ರಳಾಗುತ್ತಿದ್ದಾಳೆ. ಇದು ಬಹುಶಃ ನಮ್ಮ ಸಮಾಜದ ಕೆಲವರ ಮಟ್ಟಿಗೆ ಅಥವಾ ಕೆಲ ಪ್ರದೇಶಗಳಿಗೆ ಸತ್ಯವೆನ್ನಬಹುದು. ಆದರೆ ಇನ್ನೂ 'ಪುರುಷ ಪ್ರಧಾನ ಸಮಾಜ' ದಲ್ಲಿ ಹೆಣ್ಣಿಗೆ ಸಿಗಬೇಕಾದ ಸ್ಥಾನ ಮಾನ ಮರ್ಯಾದೆಗಳ ಕೊರತೆ ಎದ್ದು ಕಾಣುತ್ತದೆ. ಇದು ಬಹುತೇಕೆ ಅವಿದ್ಯಾವಂತರ, ಕಡಿಮೆ ವಿದ್ಯಾವಂತರ ಮತ್ತು ವಿದ್ಯಾವಂಥರಾದರೂ 'ಸಂಸ್ಕಾರ ಹೀನ' ರಲ್ಲಿ ನಿಚ್ಚಳವಾಗಿ ಕಾಣುತ್ತದೆ.
ಒಂದು ಕಾಲಕ್ಕೆ ಗಂಡಿನ ದರ್ಪಕ್ಕೆ, ದಬ್ಬಾಳಿಕೆಗೆ ಹೆದರಿ ಎಷ್ಟೇ ಕಷ್ಟ ಬಂದರೂ ಅ ಮನೆಗೆ ಮತ್ತು ಸಂಸಾರಕ್ಕೆ ಅಂಟಿಕೊಂಡಿರುತ್ತಿದ್ದ ಮಹಿಳೆ ಇಂದು ಧೈರ್ಯ ತಂದುಕೊಂಡು ಸ್ವತಂತ್ರವಾಗಿ ಯೋಚಿಸುವ, ತನ್ನ ದಿಶೆಯನ್ನು ತಾನೇ ರೂಪಿಸಿಕೊಳ್ಳುವ ಮತ್ತು ಬಹುತೇಕ ಸಂದರ್ಭಗಳಲ್ಲಿ ಗಂಡಿಗೆ ಮಾರ್ಗ ದರ್ಶನ ಮಾಡುತ್ತಾ , ಆ ಮೂಲಕ ತನ್ನ ಮನೆಯನ್ನು ಮತ್ತು ತನ್ನ ಸಂಸಾರವನ್ನು ಒಂದು ಸರಿಯಾದ ಮಾರ್ಗದಲ್ಲಿ ಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಂಡಿದ್ದಾಳೆ.
ಸ್ತ್ರೀ ಯೂ ಆ ಪರಮಾತ್ಮನ ಸೃಷ್ಟಿಯಲ್ಲಿ ಪುರುಷನಂತೆಯೇ ಸೃಷ್ಟಿಸಲ್ಪಟ್ಟಿರುವವಳು. ಅವಳಿಗೂ ಸ್ವತಂತ್ರವಾಗಿ ಬದುಕಲು ಪುರುಷನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕಿದೆ.ಆದರೆ ಪುರುಷ ಪ್ರಧಾನವಾದ ಈ ಜಗತ್ತಿನಲ್ಲಿ ಅವಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದರೆ ಅತಿಶಯೋಕ್ತಿ
ಆಗಲಾರದು. ಇದಕ್ಕೆ ಗಂಡಿನ ಅಹಂಕಾರವೇ ಕಾರಣವೆಂದರೆ ತಪ್ಪಾಗಲಾರದು. ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ, ಸಹೋದ್ಯೋಗಿಯಾಗಿ ಗಂಡಿನ ಒಡನಾಟದಲ್ಲಿರುವ ಹೆಣ್ಣಿಗೆ ಹಲವಾರು ಸಂದರ್ಭಗಳಲ್ಲಿ ಗಂಡಿನ ಮತ್ತು ಅ ಗಂಡಿನ ಮೂಲಕ ಒಟ್ಟು ಸಮುದಾಯದ 'ರಕ್ಷಣೆ' ಬಹಳ ಅವಶ್ಯಕ.
ಭಾರತೀಯ ಶಾಸ್ತ್ರಗ್ರಂಥಗಳಲ್ಲಿ "ಮನು ಧರ್ಮ ಶಾಸ್ತ್ರವು" ಪ್ರಮುಖವಾದದ್ದು. ಇದರಲ್ಲಿ ಒಂದು ಶ್ಲೋಕವಿದೆ.
"ಪಿತಾ ರಕ್ಷತಿ ಕೌಮಾರೇ
ಭರ್ತಾ ರಕ್ಷತಿ ಯೌವನೆ
ರಕ್ಷಂತಿ ಸ್ಥವಿರೆ ಪುತ್ರಾಃ
ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು
ಇಲ್ಲಿ ಮೊದಲ ಮೂರು ಸಾಲನ್ನು ನೋಡಿ. ಇಲ್ಲಿ ಯಾರು ಸ್ತ್ರೀಯನ್ನು ಯಾವ ಯಾವ ಸಂದರ್ಭದಲ್ಲಿ ರಕ್ಷಿಸುತ್ತಾರೆ ಎಂದು ಉಲ್ಲೇಖಮಾಡಲಾಗಿದೆ. ಇಲ್ಲಿ ದೈಹಿಕ ರಕ್ಷಣೆಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ನಾವು ನೋಡಬೇಕು. ಆದರೆ ನಮ್ಮವರು ಕೊನೆಯ "ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ' ಎಂಬ ಸಾಲಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು " ಸ್ತ್ರೀ ಸ್ವಾತಂತ್ರಕ್ಕೆ ಅನರ್ಹಳು " ಎಂದು ಪ್ರತಿಪಾದಿಸುತ್ತಾ, ಸಮಾಜದ ಎಲ್ಲ ರಂಗಗಳಲ್ಲಿಯೂ ಅವಳನ್ನು ತುಳಿತಕ್ಕೆ ಒಳಪಡಿಸಿದ್ದಾರೆ. ಇದು ಪುರುಷ ಸಮಾಜದ ಘೋರ ಅಪರಾಧವಲ್ಲದೆ ಮತ್ತೇನು? ಕೇವಲ ದೈಹಿಕ ರಕ್ಷಣೆಯೇ ಮುಖ್ಯವಲ್ಲದೆ ಸ್ತ್ರೀಯನ್ನು ಮತ್ತೆ ಯಾವ ಯಾವ ಪ್ರಸಂಗಗಳಲ್ಲಿ ರಕ್ಷಿಸಬೇಕು ಮತ್ತು ಹಾಗೆ ರಕ್ಷಿಸುವುದರಿಂದ ಒಂದು ಕುಟುಂಬಕ್ಕೆ ಅಥವಾ ಒಂದು ಸಮಾಜಕ್ಕೆ ಯಾವ ರೀತಿ ಒಳಿತಾಗುತ್ತದೆ ಎಂದು ಮೇಲೆ ಉಲ್ಲೇಖಿಸಿದ 'ಮನು ಧರ್ಮ ಶಾಸ್ತ್ರ' ದಲ್ಲೇ ಹೇಳಲ್ಪಟ್ಟಿದೆ.
ಸೂಕ್ಷ್ಮ್ಯೇಭ್ಯೋಪಿ ಪ್ರಸಂಗೇಭ್ಯಃ
ಸ್ತ್ರಿಯೋರರ್ಕ್ಷ್ಯಾ ವಿಶೇಷತಃ
ದ್ವಯೋರ್ಹಿ ಕುಲಯೋ:
ಶೋಕಮಾವಹೇಯು:ಅರಕ್ಷಿತಾಃ
ಸೂಕ್ಷ್ಟರ ಪ್ರಸಂಗಗಳಲ್ಲಿ ಎಂದರೆ ಗಲಭೆ,ದೊಂಬಿ ಯುದ್ಧದಂತಹ ಪ್ರಸಂಗಗಳಲ್ಲಿ ಮತ್ತು ದುಷ್ಟ ಜನರಿಂದ ಸ್ತ್ರೀಯರನ್ನು ವಿಶೇಷವಾಗಿ ರಕ್ಷಿಸಬೇಕು. ಹಾಗೆ ರಕ್ಷಣೆ ಮಾಡದಿದ್ದ ಪ್ರಸಂಗದಲ್ಲಿ " ದ್ವಯೋರ್ಹಿ ಕುಲಯೋ:ಶೋಕಮಾವಹೇಯು:" ರಕ್ಷಣೆ ಮಾಡಬೇಕಾದವರು ಮತ್ತು ರಕ್ಷಿಸಲ್ಪಡಬೇಕಾದವರು, ಎರಡೂ ಕುಲದವರು ದುಃಖಪಡಬೇಕಾದ ಸ್ಥಿತಿ ಒದಗುತ್ತದೆ ಎಂದು ಹೇಳುತ್ತಾ ಸ್ತ್ರೀ ರಕ್ಷಣೆಗೆ ಒತ್ತು ನೀಡಿದ್ದಾನೆ ಮನು. ಆದರೆ ನಮ್ಮ ಸಮಾಜದಲ್ಲಿ ಇದು ನಡೆಯುತ್ತಿದೆಯೇ. ಎಲ್ಲ ರೀತಿಯಲ್ಲಿಯೂ ರಕ್ಷಿಸಲ್ಪಡಬೇಕಾದ ಸ್ತ್ರೀಯನ್ನು ರಕ್ಷಿಸದೇ, " ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು ಕೇವಲ ಅವಳನ್ನು ತುಳಿಯಲಿಕ್ಕಾಗಿಯೇ ತಮಗನುಕೂಲವಾಗುವಂತೆ ಶಾಸ್ತ್ರವನ್ನು ತಿರುಚಿದರೆ ಇದು ಪುರುಷ ಸಮಾಜದ 'ದುಷ್ಟ'ತನವಲ್ಲದೆ ಮತ್ತೇನು.
ಭಾರ್ಯಾ ಎಂದರೆ ಸಹಧರ್ಮಿಣಿ ಎಂದು ಅರ್ಥ. 'ಬಿಭ್ರತಿ ಇತಿ ಭಾರ್ಯಾ', ಎಂದರೆ ಎಲ್ಲವನ್ನೂ ಭರಿಸುತ್ತಾಳಾದ್ದರಿಂದ ಭಾರ್ಯಾ. ಇವಳು ಎಲ್ಲವನ್ನೂ ಭರಿಸಬೇಕು. ಆದರೆ ಅವಳನ್ನು ರಕ್ಷಿಸಲು, ಭರಿಸಲು ಪುರುಷನಿಗೆ ಸಾಧ್ಯವಿಲ್ಲ. ತನ್ನ ಮನೆ, ಮಕ್ಕಳು ಎಲ್ಲವನ್ನೂ ಭರಿಸುವ ಮತ್ತು ರಕ್ಷಿಸುವ ಅವಳನ್ನು ಏಕೆ ಮತ್ತು ಹೇಗೆ ರಕ್ಷಿಸಬೇಕು ಎಂದು ಮನು ಹೀಗೆ ಹೇಳುತ್ತಾನೆ
ಭಾರ್ಯಾಯಾಂ ರಕ್ಷ್ಯಮಾಣಾಯಾಂ
ಪ್ರಜಾ ಭವತಿ ರಕ್ಷಿತಾಃ
ಪ್ರಜಾಯಾಂ ರಕ್ಷ್ಯಮಾಣಾಯಾಂ
ಆತ್ಮಾ ಭವತಿ ರಕ್ಷಿತಃ
ಭಾರ್ಯೆ, ಎಂದರೆ ಸಹಧರ್ಮಿಣಿಯನ್ನು ರಕ್ಷಿಸಿದರೆ, ಅವಳಿಂದ ಪಡೆದ ಮಕ್ಕಳು ರಕ್ಷಿಸಲ್ಪಡುತ್ತಾರೆ ಮತ್ತು ಮಕ್ಕಳು ರಕ್ಷಿಸಲ್ಪಟ್ಟರೆ ತಾನೂ ಎಂದರೆ ಪುರುಷನೂ ರಕ್ಷಿಸಲ್ಪಡುತ್ತಾನೆ ಎಂದು ಅರ್ಥ. ಒಂದು ಸಂಸಾರದಲ್ಲಿ ತಾಯಿ ಅರಕ್ಷಿತಳಾದರೆ, ಇದೇ ಸಂಸಾರ ಛಿದ್ರ ಛಿದ್ರವಾಗಿರುವುದನ್ನು ನಾವು ನೋಡಿಲ್ಲವೇ? ಅಷ್ಟೇ ಅಲ್ಲ ಗಂಡ ತನ್ನ ಹೆಂಡತಿಯನ್ನು ರಕ್ಷಿಸದೇ ಇದ್ದಾಗ ಸ್ತ್ರೀ ತನ್ನ ಸ್ವ-ಶಕ್ತಿಯಿಂದ ತನ್ನ ರಕ್ಷಣೆಯನ್ನು ಮಾಡಿಕೊಂಡು, ಮಕ್ಕಳನ್ನು ರಕ್ಷಿಸಿ, ಪೋಷಿಸಿ, ಬೆಳೆಸಿ ಯೋಗ್ಯರನ್ನಾಗಿಸಿದ ಉದಾಹರಣೆಗಳು ನಮಗೆ ಹೇರಳವಾಗಿ ಸಿಗುತ್ತದೆ. ಆದರೆ "ಭರ್ತ" ಎಂದು ಕರೆಸಿಕೊಂಡರೂ, ಸ್ತ್ರೀ ಸಕ್ರಿಯವಾಗದಿದ್ದಾಗ ಕುಟುಂಬದ ಅಥವಾ ಸಂಸಾರದ ಭಾರವನ್ನು ಹೊತ್ತು ಕುಟುಂಬ ಮತ್ತು ಮಕ್ಕಳನ್ನು ಯೋಗ್ಯರನ್ನಾಗಿಸಿ ಸಫಲತೆಯನ್ನು ಪಡೆದ ಪುರುಷರ ಉದಾಹರಣೆಗಳು ಸಿಗುವುದೇ ಇಲ್ಲ.
ಸ್ತ್ರೀಯನ್ನು ರಕ್ಷಿಸಿದರೆ ಆಗುವ ಪ್ರಯೋಜನಗಳನ್ನು ಮುಂದುವರೆಸುತ್ತಾ ಮನು ಹೀಗೆ ಹೇಳುತ್ತಾನೆ
"ಸ್ವಾಂ ಪ್ರಸೂತಿಂ ಚರಿತ್ರಂ
ಚ ಕುಲಂ ಆತ್ಮಾನಮೇವ ಚ
ಸ್ವಂ ಚ ಧರ್ಮಂ ಪ್ರಯತ್ನೇನ
ಜಾಯಾಂ ರಕ್ಷನ್ ಹಿ ರಕ್ಷತಿ"
ಎಂದು ಹೇಳುತ್ತಾ, ಸ್ತ್ರೀ ರಕ್ಷಣೆಯಿಂದ ಅವಳ ಮಕ್ಕಳನ್ನು, ಮಕ್ಕಳ, ಮನೆಯ, ತನ್ನ ಚರಿತ್ರೆಯೂ ರಕ್ಷಿತವಾಗುತ್ತದೆ. 'ಜಾಯಾ' ಅಂದ್ರೆ ಹೆಂಡತಿಯ ರಕ್ಷಣೆಯಿಂದ ಅವನ ಧರ್ಮವನ್ನು ಮತ್ತು ಸಂಸ್ಕಾರಗಳನ್ನು ರಕ್ಷಿಸಿಕೊಂಡಂತೆ ಆಗುತ್ತದೆ ಎನ್ನುತದೆ ಈ ಶ್ಲೋಕ. ನೋಡಿ ನಮ್ಮ ಭಾರತೀಯ ಸಂಸ್ಕಾರಗಳಲ್ಲಿ ಸ್ತ್ರೀ ಇಲ್ಲದೆ ಯಾವ ಶುಭ ಕಾರ್ಯ ಮಾಡಲು ಪುರುಷನಿಗೆ ಶಾಸ್ತ್ರ ಪ್ರಕಾರ ಹಕ್ಕೂ ಇಲ್ಲ ಅರ್ಹತೆಯೂ ಇಲ್ಲ. ಹಾಗೆ ಇವನಿಗೆ ಪುಣ್ಯ ತರುವ ಕೆಲಸಗಳಿಗೆ "ಅವಳು" ಬೇಕು. ಆದರೆ ಇವನು ಮಾಡುವ ಪಾಪ ಕರ್ಮಗಳಿಗೆ ಇವಳು ಗುರಿಯಾಗಬೇಕು. ಇದು ಅನ್ಯಾಯವಲ್ಲದೆ ಮತ್ತೇನು?
ಶಾಸ್ತ್ರ ಅವಳಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ ಮತ್ತು ಅವಳಿಗೆ ಎಷ್ಟೊಂದು ಜವಾಬ್ದಾರಿಯನ್ನು ನೀಡಿದೆ ಎಂದು ಅದೇ ಮನುಧರ್ಮ ಶಾಸ್ತ್ರ ಹೇಳುತ್ತದೆ.
'ಅರ್ಥಸ್ಯ ಸಂಗ್ರಹೆ ಚೈನಾಮ್
ವ್ಯೆಯೇಚೈವಂ ನಿಯೋಜಯೇತ್
ಶೌಚೆ ಧರ್ಮೇ ಅನ್ನಪಕ್ತ್ಯಾಂ ಚ
ಪಾರಿಣಾಹ್ಯಸ್ಯ ವೇಕ್ಷಣೆ ".
ನೋಡಿ ಹಣವನ್ನು ಸಂಪಾದಿಸುವುದಷ್ಟೇ ಪುರುಷನ ಕೆಲಸ ಎಂದು ಸ್ಪಷ್ಟವಾಗಿ ಹೇಳುವ ಈ ಶ್ಲೋಕ, ಆ ಹಣವನ್ನು ಸಂಗ್ರಹ ಮಾಡಿಕೊಳ್ಳುವುದು, ವ್ಯಯ ಮಾಡುವುದು ಮತ್ತು ಗೃಹದ ಶುದ್ಧಿಯ, ಅನ್ನ ವಿತರಣೆಯ ಮತ್ತು ಸಮಾರಂಭಗಳ ಮೇಲ್ವಿಚಾರಣೆಯನ್ನೂ ಸಹ ಸ್ತ್ರೀಯರಿಗೆ ಒಪ್ಪಿಸಿದೆ ಶಾಸ್ತ್ರ.
ಹೀಗಿರುವಾಗ ಸ್ತ್ರೀ ಪುರುಷನಿಗಿಂತ ಯಾವ ರಂಗದಲ್ಲೂ ಕೀಳಲ್ಲ ಎಂದು ಶಾಸ್ತ್ರವೇ ಒಪ್ಪಿಕೊಂಡಿದೆ. ಆದರೆ ಮನುವಿನ ಇಷ್ಟು ಶ್ಲೋಕಗಳಲ್ಲಿ ಮಿಕ್ಕದ್ದನ್ನೆಲ್ಲಾ ಬಿಟ್ಟು, 'ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ' ಎಂಬ ಒಂದನ್ನು ಹಿಡಿದುಕೊಂಡು, "ನೋಡಿ ಈ ಮನು ಒಬ್ಬ ಸ್ತ್ರೀ ವಿರೋಧಿ. ಅವನೇ ಹೀಗೆ ಹೇಳಿದ್ದಾನೆ, ಅವನು ಲಫಂಗ ಅವನನ್ನು ವಿರೋಧಿಸುವುದೇ ನಮ್ಮ ಮೂಲಭೂತ ಧ್ಯೇಯ" ವೆಂಬಂತೆ ವರ್ತಿಸುವ ಸ್ತ್ರೀ ಪರ ಸಂಘಗಳು ತಪ್ಪು ಮಾಡುತ್ತಾ "ಸ್ತ್ರೀಪರ" ಎಂದು ತಮ್ಮನ್ನು ತಾವು ಕರೆದುಕೊಂಡರೂ ಸ್ತ್ರೀ ವಿರೋಧಿ ಕೆಲಸಗಳನ್ನು ಮಾಡುತ್ತಿವೆ ಎಂದು ಅನ್ನಿಸುತ್ತದೆ.
ಸ್ತ್ರೀಯರ ಮೇಲೆ ಆಗುತ್ತಿರುವ ಅತ್ಯಾಚಾರಗಳಿಗೆ ಮೂಲತಃ ' ಗಂಡು ಹೆಣ್ಣನ್ನು ಭೋಗ ವಸ್ತು' ಎಂದು ತಿಳಿದಿರುವ ಪುರುಷಾಹಂಕಾರವೇ ಕಾರಣ.ಇಂದಿನ ಸಮಾಜದಲ್ಲಿ ಸ್ತ್ರೀಯರೂ ಸಹ ತಮ್ಮ ಉಡುಗೆ ತೊಡುಗೆಗಳಿಂದ ಅಂತಹ ಭಾವನೆಗೆ ಪ್ರೋತ್ಸಾಹವನ್ನೇ ನೀಡುತ್ತಾರೆ. ಇದು ಎಲ್ಲೆಡೆಯಲ್ಲೂ ನಿಚ್ಚಳವಾಗಿ ಕಾಣುತ್ತಿದೆ. ಏಕೆ ಒಂದು ಸಿನಿಮಾವನ್ನೇ ನೋಡಿ. ಅದರಲ್ಲಿ ಗಂಡಿಗೆ ಮೈತುಂಬ ಬಟ್ಟೆ ಮತ್ತು ಹೆಣ್ಣಿಗೆ ಸಾಧ್ಯವಾದಷ್ಟು ಕಡಿಮೆ.
"ದ್ರುಷ್ಯಮಾಣೇ ಭವೇತ್ ಪ್ರೀತಿಃ " ಎಂದರೆ 'ಕಂಡರೆ ಪಡೆಯಬೇಕೆನ್ನುವ ಆಸೆ '.ಗಂಡಸರಿಗೆ ಮೊದಲೇ ಪುರುಷಾಹಂಕಾರ, ಅದರ ಮೇಲೆ ಸಂಯಮ ಕಡಿಮೆ. ಅದಕ್ಕೆ ಇಂಬುಕೊಡುವಂತೆ ಸ್ತ್ರೀಯರ ಉಡುಗೆ ತೊಡುಗೆಗಳೂ ಸಹ ಪ್ರಚೋದಕವಾಗಿರುತ್ತವೆ. ಹತ್ತು ಹಲವಾರು ಕಾರಣಗಳಲ್ಲಿ ಇದೂ ಸಹ ಒಂದು . ಇನ್ನು ನಮ್ಮ ಜಾಹೀರಾತುಗಳು, ಕೇವಲ ಬಾಹ್ಯ ಸೌಂದರ್ಯಕ್ಕಷ್ಟೇ ಗಮನ. ಈ ಎಲ್ಲ ನಿಟ್ಟಿನಲ್ಲೂ ಹೆಣ್ಣು ಯೋಚನೆ ಮಾಡಿದರೆ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು.
ಮೂಲತಃ ಸ್ತ್ರೀ ತಡೆದುಕೊಳ್ಳುತ್ತಾಳೆ. ಅವಳಿಗೆ ತಾಳ್ಮೆ ಹೆಚ್ಚು. ಅವಳು ಬಹಳ ಸೂಕ್ತವಾಗಿ ಯೋಚಿಸುತ್ತಾಳೆ . ಏಕೆಂದರೆ ಅವಳು ತನ್ನ ಸಂಸಾರದ ಜವಾಬ್ದಾರಿಯನ್ನು ಸ್ವ-ಇಚ್ಚೆಯಿಂದ ಹೊರುತ್ತಾಳೆ. ಸಂಸಾರದಲ್ಲಿ ಗಂಡು ಸೋತರೆ ಆ ಸಂಸಾರವನ್ನು ಹೇಗಾದರೂ ನಿಭಾಯಿಸಿಸುವ ಕ್ಷಮತೆ, ಧೈರ್ಯ ಮತ್ತು ಛಲ ಹೆಣ್ಣಿಗೆ ಇರುತ್ತದೆ. ಆದರೆ ಒಂದು ಹೆಣ್ಣು ಸೋತರೆ ಆ ಸಂಸಾರವನ್ನು ಅಷ್ಟು ಸಮರ್ಪಕವಾಗಿ ಗಂಡು ನಿಭಾಯಿಸಲಾರ. ಅಂತಹ ಸಂಸಾರವನ್ನು ಆ ದೇವರೇ ಕಾಪಾಡಬೇಕು.
ಸ್ತ್ರೀ ಎಲ್ಲ ರೀತಿಯಲ್ಲೂ ಅಬಲೆಯಲ್ಲ. ಪುರುಷ ಸಮಾಜದ ದುಷ್ಟತನಕ್ಕೆ ಬಲಿಯಾದ ಸ್ತ್ರೀ ಈಗ ಸಕ್ರಿಯವಾಗಿ ಎಚ್ಚೆತ್ತುಕೊಂಡಿದ್ದಾಳೆ. ತನ್ನನ್ನು ತಾನು ನೋಡಿಕೊಳ್ಳುವಷ್ಟು ರಕ್ಷಿಸಿಕೊಳ್ಳುವಷ್ಟು ಬಲವನ್ನು ಸ್ತ್ರೀ ಪಡೆದಿದ್ದಾಳೆ. ಸ್ತ್ರೀ ಪುರುಷರಿಬ್ಬರೂ ಸಮಾಜದಲ್ಲಿ ಸಮಾನವಾಗಿ, ಯಾರೊಬ್ಬರೂ ತಾವು ಮೇಲು ಎನ್ನುವ ಭಾವ ಬಿಟ್ಟು ಸಮನ್ವಯದಿಂದ ಬಾಳಿದರೆ ಸಮಾಜದಲ್ಲಿ ಗೊಂದಲಗಳು ಕಡಿಮೆಯಾಗಿ ಶಾಂತಿ ಬರಬಹುದು.
"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ " ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ ಎಂದು ಹೇಳಿದ ಭಾರತೀಯ ಸಂಸ್ಕೃತಿಯಲ್ಲಿ, ನಾರಿಯರ ಮೇಲೆ ಇಷ್ಟೊಂದು ಅತ್ಯಾಚಾರದ ಸಮಾಚಾರಗಳು ನಾವು ಕೇಳಿಬರುವುದು ಒಂದು ವಿಪರ್ಯಾಸವಲ್ಲವೇ? ನಾರಿಯರನ್ನು ಪೂಜಿಸದಿದ್ದರೂ " ಗಂಡು - ಹೆಣ್ಣು" ಸಹಭಾಗಿತ್ವದ ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಗೌರವವಿದ್ದರೆ ಸಾಕಲ್ಲವೇ?
ರವಿ ತಿರುಮಲೈ
19.5.2013
Saturday, 13 April 2013
ಹೀಗೂ ಒಂದು ಕವಿತೆ
ನಿನ್ನ ಒಲುಮೆಗಾಗಿ
ಎಷ್ಟು ದಿನ ಕಾದರು
ಬೀಸದದು ತಂಬೆಲರು
ಬಿರಿ ವಿರಹದ ನಿಟ್ಟುಸಿರು
ಅರಿಯದಾದೆ ನೀ ಎನ್ನೊಲವ
ತೋರದಾದೆ ಬಗಿದು ನಾ ಎನ್ನ ಮನವ
ಕಾಣಲಾದರೆ ನೀ ನೋಡು ಇಣುಕಿ
ಅಂತರಂಗದಿ ಅಡಗಿಹುದು ವಿರಹದಾ ಬೆಂಕಿ
ನಿನ್ನ ದಾರಿಯ ತುಳಿಯಲು ನಾ ಸಿದ್ಧನಿದ್ದೆ
ನಿನ್ನೊಂದು 'ಸರಿ'ಕಾರಕ್ಕೆ ಬಲಿಯಾಯ್ತು ನಿದ್ದೆ
ನಿನ್ನ ನೆನಪಲಿ ವರುಷಗಳೇ ಸರಿದಿವೆ
ನಿನ್ನೊಡನಾಟದಾ ನೆನಪುಗಳೇ ಸುರಿದಿವೆ
ಬರುವೆಯೋ ಇಲ್ಲವೋ ತಿಳಿಯುವುದು ಹೇಗೆ
ಸೇರೆನ್ನ ಸನಿಹವಾ ತಾಳಲಾರೆನು ಬೇಗೆ
ರವಿ ತಿರುಮಲೈ
Wednesday, 23 January 2013
ವರ್ಣಾಶ್ರಮ -ಶೂದ್ರ
ಶುದ್ಧ ಶೂದ್ರ ಹೌದು.
ನಿಮಗೆ ಬೇಸರವಾದರೂ
ನನಗಿಲ್ಲ ಚಿಂತೆ ಕಿಂಚಿತ್ತಾದರೂ
ನಾ ಓದುವ ದಿನಗಳಲ್ಲಿ
ಜ್ಞಾನದ ಓಣಿಗಳಲ್ಲಿ
ಓಡುವಾಗ ನಾ, ಓಲಾಡುವಾಗ
ಬ್ರಾಹ್ಮಣನಾಗಿದ್ದೆ.
ಮುಂದೆ ಮನೆ ಮಡದಿ
ಎಂದು ಸಂಸಾರ ಕಟ್ಟಿಕೊಂಡಾಗ
ನಮಗೆ ಮಕ್ಕಳು ಹುಟ್ಟಿಕೊಂಡಾಗ
ಹೊಟ್ಟೆಪಾಡಿಗೆ ಧನಾರ್ಜನೆ ಮಾಡುವಾಗ,
ನಾ ವೈಶ್ಯನೂ ಆಗಿದ್ದ ದಿನಗಳು ಇತ್ತಾಗ.
ಪಾಪ ಇವರಿಗೆ ನಾನೇ ಗತಿಯಂದು
ಇವರೆಲ್ಲ ನೀ ಕಾಯಬೇಕೆಂದಾಗ
ಕೈಯ್ಯಲ್ಲಿ ಕತ್ತಿ ಹಿಡಿಯದಿದ್ದರೂ, ನನ್ನವರ
ಕ್ಷಾತ್ರ ತೇಜಸ್ಸಿನಿಂದ ಕಾಯುತ್ತಿದ್ದೆ
ಕ್ಷತ್ರಿಯವತಾರ ಹೊತ್ತಿದ್ದೆ.
ಹೌದು ಈಗ ಶೂದ್ರ ನಾನು
ಚರಂಡಿ ತೊಳೆಯುವ ಶೂದ್ರ ನಾನು
ಮನಸ್ಸಿನ ಓಣಿಗಳಲ್ಲಿನ ಗಲ್ಲಿಗಲ್ಲಿಯ
ಕೊಳೆ ತೊಳೆಯುವ ಶೂದ್ರ ನಾನು
ಬದುಕ ಓಟದಲ್ಲಿ ನಾ ಸುತ್ತಿದ
ಬೀದಿಗಳ ಧೂಳಿಂದ ಗಲೀಜಾದ ಮನವ
ತೊಳೆಯುವ ಶೂದ್ರ ನಾನು
ಆರು ಅರಿಗಳ ಸಂಗದಲ್ಲಂಟಿಸಿಕೊಂಡ
ಪರಿಪರಿಯಾದ ಹೊಲಸ ತೊಳೆಯುವ ಶೂದ್ರ ನಾನು.
ಬುದ್ಧಿಗಂಟಿದ ಹೊಲಸನ್ನು ತೊಳೆಯುವ
ಶುದ್ಧ ಶೂದ್ರ ನಾನು, ಹಿತವಾಗಿಸುವ
ಕಾರ್ಯಮಾಡುವ ಶೂದ್ರ ನಾನು
ಆತ್ಮ ಶುದ್ಧಿಮಾಡುವ ಶೂದ್ರ ನಾನು
ನಾಲ್ಕೂ ವರ್ಣಗಳಲ್ಲಿ ತೂರಿಬಂದ
ನನಗೆ ಬಹಳ ಹೆಮ್ಮೆ, ನಾ ಶೂದ್ರನೆಂದು
ಹೊಲಸ ತೊಳೆಯುವ ಶ್ರೇಷ್ಟನೆಂದು
ಆತ್ಮೋದ್ಧಾರಕ್ಕೆ ದಾರಿ ಮಾಡುವವನೆಂದು.
ರವಿ ತಿರುಮಲೈ
Subscribe to:
Posts (Atom)