
ಪ್ರೇಮ ಸಮಾನತೆ
ನಲ್ಲೆ ನಿನಗೆ ಚಂದಿರನೊಲು
ವದನವನು ಇತ್ತವನು
ಮನದಲೆನ್ನೊಳು ಪ್ರಣಯ
ಭಾವವನು ಬಿತ್ತಿಹನು "ನಲ್ಲೆ ನಿನಗೆ ಚಂದಿರನೊಲು "
ನಲ್ಲೆ ಕೋಗಿಲೆಯೊಲು
ಕಂಠ ನಿನಗಿತ್ತವನು
ಕೇಳಿ ಆನಂದಿಸುವ
ಮನಸೆನಗೆ ಇತ್ತಿಹನು "ನಲ್ಲೆ ನಿನಗೆ ಚಂದಿರನೊಲು "
ನಲ್ಲೆ ನಿನಗೆ ಲಾವಣ್ಯ
ರೂಪವನು ಕೊಟ್ಟವನು
ಅದನಾರಾಧಿಸುವ
ಹೃದಯವೆನಗಿತ್ತಿಹನು "ನಲ್ಲೆ ನಿನಗೆ ಚಂದಿರನೊಲು "
ಎನಗು ನಿನಗೂ ನಡುವಿನಲಿ
ಅಂತರವನಿಟ್ಟವನು
ಅಂತರಂಗದಲಿ ನಿನ್ನ
ಅಂತರಂಗದಲಿ ನಿನ್ನ
ನೆನವ ಮನವಿನಿತ್ತಿಹನು "ನಲ್ಲೆ ನಿನಗೆ ಚಂದಿರನೊಲು "
ನಲ್ಲೆ ದೂರದೂರಿನಲಿ
ನಿನ್ನನಿಂದು ಬಿಟ್ಟವನು
ಮಿಲನೋತ್ಸವಕೆ ಕಾಯ್ವ
ತಾಳ್ಮೆಯನು ಕೊಟ್ಟಿಹನು "ನಲ್ಲೆ ನಿನಗೆ ಚಂದಿರನೊಲು "
ರವಿ ತಿರುಮಲೈ
No comments:
Post a Comment