Thursday, 4 January 2018

'ಋಣ'



'ಋಣ' ಎಂದರೆ ಹಿಂದೆ ಪಡೆದದ್ದು ಮತ್ತು ಹಿಂತಿರುಗಿಸಲೇ ಬೇಕಾದ್ದು ಎಂದು ಅರ್ಥ.  ಹಿಂದೆ ಯಾರಿಂದಲೋ ಏನನ್ನೋ ಪಡೆದಿದ್ದ ಕಾರಣ ಅದನ್ನು ಹಿಂತಿರುಗಿಸಲೇ ಬೇಕಾಗಿರುವುದರಿಂದ ಅದರ ಪ್ರಯತ್ನದಲ್ಲಿ ನಮ್ಮ ಕೆಲವು ಕೆಲಸಗಳು ಮತ್ತು ಕಾರಣವರಿಯದೆ ಯಾರದೋ ಅವಶ್ಯಕತೆಗಳನ್ನು ತೀರಿಸಲು 'ಪರಹಿತ'  ದ ಕೆಲಸಗಳನ್ನು ನಾವು ಮಾಡುತ್ತೇವೆ, ಅಲ್ಲವೇ? ನಮಗೆ ಇದರ ಹಿಂದಿನ ಕಾರಣಗಳು ಮತ್ತು ಘಟನೆಗಳ ಅರಿವಾಗುವುದೇ ಇಲ್ಲ. ಯಾವುದರಿಂದ ಯಾವುದು? ಏಕೆ ಹೀಗೆ, ಅಥವಾ ಹೀಗೇ ಏಕೆ ಎಂದು ಪ್ರಯತ್ನಪಟ್ಟರೂ ನಮಗೆ ಅರ್ಥವಾಗುವುದೇ ಇಲ್ಲ. ಹಾಗೆ ಅರ್ಥವಾಗದಿದ್ದರೂ ಮಾಡಲೇಬೇಕಾದ ಕೆಲಸವನ್ನು ಮಾಡಿ  'ಯಾವ ಜನ್ಮದ ಋಣವೋ'  ಎಂದು ಮನಸ್ಸಮಾಧಾನ ಪಟ್ಟುಕೊಳ್ಳುತ್ತೇವೆ ಅಲ್ಲವೇ? 

ಯಾವ ಋಣ ತೀರಿಸಲೋ ಅಥವಾ ಯಾರ ಹಿತಕ್ಕಾಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಅಥವಾ ನಮಗರಿಯದ ಶಕ್ತಿಯ ಯಾವ ಯೋಜನೆಗನುಸಾರವಾಗಿಯೋ ನಾವು ಸುಖವನ್ನೋ ಅಥವಾ ನೋವನ್ನೋ ಅನುಭವಿಸುವುದು ದೈವೇಚ್ಛೆ ಆಗಿದ್ದರೆ ಆ ದೈವವನ್ನು ಕುರುಡು ಎನ್ನಲಾಗುವುದೇ?  ಹಾಗೆ ಹೇಳಲಾಗದು,  ಏಕೆಂದರೆ ನಾವು ಅನುಭವಿಸುವುದು ಕೇವಲ ದೈವ ಕೃಪೆಯನ್ನಲ್ಲ,  ಅದರೊಳಗೆ ನಮ್ಮ ಪಾಲೂ ಇರುತ್ತದೆ. ಅದು ನಮ್ಮಿಂದ ಹಿಂದೆ ನಡೆದ ಕರ್ಮದ ಫಲಸ್ವರೂಪದಲ್ಲಿ ಇಂದು ನಮಗೆ ಸಂದಿದೆ ಎಂದರೆ ಸೂಕ್ತವಾಗುತ್ತದೆ.    

ಯಾರದೋ ಮನೆಯಲ್ಲಿ ಇಂದು   ನಮಗೆ ಊಟ,  ಆದರೆ ಮುಂದೆಂದೋ ಬೇರೆ ಯಾರಿಗೋ ನಮ್ಮ ಮನೆಯಲ್ಲಿ ಉಪಚಾರ. ಯಾರೋ ನಮಗೆ ಸೂಕ್ತ ಸಮಯದಲ್ಲಿ ಸಹಾಯ ಮಾಡುತ್ತಾರೆ,  ಮತ್ಯಾರೋ ನಮ್ಮಿಂದ ಸಹಾಯವನ್ನು ಪಡೆಯುತ್ತಾರೆ. ಒಂದು ಘಟನೆಗೂ ಮತ್ತೊಂದಕ್ಕೂ, ಒಬ್ಬ ವ್ಯಕ್ತಿ ಮತ್ತು ಮತ್ತೊಂದು ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಂಪರ್ಕವೇರ್ಪಟ್ಟಾಗ ಕಾಕತಾಳೀಯವಾಗಿ ಕಂಡರೂ ಅದು ಒಂದು ಪೂರ್ವ ನಿರ್ಧಾರಿತ ವಿನ್ಯಾಸದಂತೆಯೇ ನಡೆಯುತ್ತದೆ.  ಅದು ದೈವೀ ವಿನ್ಯಾಸ,  ನಮಗೆ ಅರ್ಥವಾಗದ ವಿನ್ಯಾಸ. ಈ ದೈವೀ ವಿನ್ಯಾಸ ಮತ್ತು ನಮ್ಮ ಮಾನುಷೀ ಭಾವದ ಅಪೇಕ್ಷೆಗಳು ಸಮಾನಾಂತರವಾಗಿ ಪಕ್ಕಪಕ್ಕದಲ್ಲೇ ಚಲಿಸುತ್ತಿದ್ದರೂ, ನಮಗೆ ಆ ದೈವೀ ವಿನ್ಯಾಸ ಅರ್ಥವಾಗುವುದೇ ಇಲ್ಲ. ನಾವು ಕೇವಲ ನಮ್ಮ ಭಾವನೆಗಳಿಗನುಸಾರವಾಗಿ ಆಗುಹೋಗುಗಳ ಲೆಕ್ಕಾಚಾರಗಳನ್ನು ಹಾಕಿ, ನಮ್ಮದೇ ರೀತಿಯಲ್ಲಿ ನಿರ್ಧಾರಕ್ಕೆ ಬರುತ್ತೇವೆ. ಆದರೆ ಅದು ಸತ್ಯಕ್ಕೆ ದೂರವಾಗಿರುತ್ತದೆ ಎಂಬುವುದನ್ನು ಅರಿಯಲು ಸೋಲುತ್ತೇವೆ.  ಹಾಗೆ ಸೋತ ನಾವು ನಮ್ಮ ಸ್ಥಿತಿಗೆ ಅನ್ಯರನ್ನು ಕಾರಣವಾಗಿಸಿ ದೂರುತ್ತೇವೆ, ಜಗಳ ಮಾಡುತ್ತೇವೆ, ದ್ವೇಷಿಸುತ್ತೇವೆ, ಕುಪಿತಗೊಳ್ಳುತ್ತೇವೆ, ನಮ್ಮ ಹಣೆಬರಹವನ್ನು ದೂರುತ್ತೇವೆ,  ಕಡೆಗೆ ದೈವವನ್ನೂ ನಿಂದಿಸುತ್ತೇವೆ. ಇದು ಪ್ರಾಕೃತ ಮತ್ತು ಅಜ್ಞಾನದ ಭಾವ. 

ನಮ್ಮ ಪೂರ್ವ ಕರ್ಮಗಳಿಗನುಸಾರವಾಗಿಯೇ ದೈವೀ ವಿನ್ಯಾಸವೂ ರೂಪುಗೊಂಡಿರುತ್ತದೆ. ಆ ವಿನ್ಯಾಸದಲ್ಲಿ ನಮ್ಮ ಪಾತ್ರವು ಅಧಿಕವಾಗಿರುತ್ತದೆ ಮತ್ತು ಅನ್ಯರ ಕರ್ಮಾನುಸಾರವಾಗಿಯೂ ನಮ್ಮ ಬದುಕಿನ ವಿನ್ಯಾಸ ರೂಪುಗೊಂಡಿರಬಹುದು. ಇದು ನಮಗೆ ಅರ್ಥವಾಗುವುದಿಲ್ಲ. ನಮಗೆ ಯಾವುದು ಅರ್ಥವಾಗುವುದಿಲ್ಲವೋ ಅದನ್ನು 'ದೈವಕೃಪೆ'ಎಂದು ನಾವು ಒಪ್ಪಿಕೊಳ್ಳಲೇಬೇಕು. ಅನ್ಯಥಾ ದಾರಿಯಿಲ್ಲ. ಹಾಗಾಗಿ ಆಯಾಯಾ ಸಮಯಕ್ಕೆ ನಮ್ಮೆದುರಿನ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು, ಅನಪೇಕ್ಷಿಯಾಗಿರುವುದು ಉತ್ತಮ.  ಕಾರಣಗಳ ಹುಡುಕಿ, ಅನ್ಯರನ್ನು ದೂಷಿಸಿ,  ಬದುಕನ್ನು ಕೆದಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಬಂದ ಕರ್ಮವನ್ನು ಧರ್ಮದಂತೆ ಮಾಡುವುದು, ಆ ಕರ್ಮದಿಂದ ಬಂದ ಫಲವನ್ನು ಸಂತೋಷದಿಂದ ಅನುಭವಿಸುವುದು ಮತ್ತು ನಮ್ಮ ಕರ್ಮ ಮತ್ತು ಕರ್ಮಫಲವನ್ನು ಆ ದೈವಕ್ಕೆ ಅರ್ಪಿಸಿಬಿಟ್ಟು ಬದುಕಿದರೆ ಸುಖ ಮತ್ತು ನೆಮ್ಮದಿ ಎರಡೂ ಇರುತ್ತದೆ. ಬದುಕು ನಿರಾಳವಾಗಬೇಕಾದರೆ ಹಾಗೆ ಬದುಕುವುದೇ ಉತ್ತಮ. ಆಯ್ಕೆ ನಮ್ಮದೇ ಅಲ್ಲವೇ?   


ರವಿ ತಿರುಮಲೈ

ಉದರ ದೈವದ ಪೂಜೆ


ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೂಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆ, ಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಹಾಗಾಗಿ ನಾವು ಆಹಾರ ಸೇವನೆಯನ್ನು ಮಾಡಬೇಕು. ಇದೂ ಸಹ ಒಂದು ಪೂಜೆಯೆಂತೆಯೇ. ನಾವು ಒಂದು ಹೋಮ ಅಥವಾ ಹವನ ಮಾಡುವಾಗ ಒಂದು ಹೋಮಕುಂಡವನ್ನು ಶಾಸ್ತ್ರೋಕ್ತವಾಗಿ ರಚಿಸಿ, ಎಲ್ಲಾ ಪರಿಕರಗಳನ್ನೂ ಸಮರ್ಪಕವಾಗಿಟ್ಟುಕೊಂಡು,  ಆ ಹೋಮ ಕುಂಡದಲ್ಲಿ ' ಅಗ್ನಿ' ಯನ್ನು ಪ್ರತಿಷ್ಠಾಪಿಸಿ ಆ ಅಗ್ನಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡುತ್ತೇವೆ. ಆ ಅಗ್ನಿಗೆ 'ಹವ್ಯವಾಹಕ' ಎಂದು ಹೆಸರು. ನಾವಿತ್ತ ಈ ಹವಿಸ್ಸನ್ನು ಅಗ್ನಿಯು ನಾವು ಉದ್ದೇಶಿಸಿದ ದೇವತೆಗಳಿಗೆ ತಲುಪಿಸುತ್ತದೆ ಮತ್ತು ಆ ದೇವತೆಗಳು ಸುಪ್ರೀತರಾಗಿ ನಮ್ಮ ಮನೋಭೀಷ್ಟೆಯನ್ನು ನೆರವೇರಿಸುತ್ತಾರೆ ಎನ್ನುವುದು ಸನಾತನದ ನಂಬಿಕೆ.  

ಶ್ರೀ ಕೃಷ್ಣ,  ಭಗವದ್ಗೀತೆಯಲ್ಲಿ ‘ ನಾನು ಜೀವಿಗಳ ಉದರದಲ್ಲಿ ವೈಶ್ವಾನರ ರೂಪದಲ್ಲಿ ಇದ್ದೇನೆ’ ಎಂದು ಹೇಳುತ್ತಾನೆ. ನಮ್ಮ ಜಠರದಲ್ಲಿರುವುದು ಜಠರಾಗ್ನಿ. ಹವಿಸ್ಸಿನ ರೂಪದಲ್ಲಿ ನಾವು ಆಹಾರವನ್ನು ಅದಕ್ಕೆ ಸಮರ್ಪಿಸಿದಾಗ ಆ ಅಗ್ನಿ ಅದನ್ನು ಪಚನಗೊಳಿಸಿ ಎಲ್ಲ ರೀತಿಯ ಶಕ್ತಿಯನ್ನೂ ಉತ್ಪಾದಿಸಿ  ‘ಸಮಾನ ವಾಯು’ ವಿನ ಮೂಲಕ ನಮ್ಮ ದೇಹದ ಎಲ್ಲ ಭಾಗಗಳಿಗೂ ಸಮರ್ಪಕವಾಗಿ ವಿತರಿಸುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದ್ದರೆ ನಮ್ಮ ದೇಹ ಸುಸ್ಥಿತಿಯಲ್ಲಿರುತ್ತದೆ. ಹಾಗಾಗಿ   ನಮ್ಮ ಉದರದಲ್ಲಿರುವ ಆ ‘ವೈಶ್ವಾನರ ’ನೆಂಬ ದೇವರಿಗೆ ಮೊದಲ ಪೂಜೆಯಾಗಬೇಕು. ಹಾಗಾದಾಗ ದೇಹ ಧೃಢವಾಗಿ ಮಿಕ್ಕೆಲ್ಲ ದೇವತೆಗಳ ಪೂಜೆಗೆ ಪೂರಕವಾಗಿರುತ್ತದೆ. ಹಾಗೆ ಕೊಟ್ಟ ಆಹಾರದಿಂದ ‘ವೈಶ್ವಾನರ ತೃಪ್ತನಾದರೆ’ ಆನಂದ, ಇಲ್ಲದಿದ್ದರೆ ಅವನು ಆಗ್ರಹಿಸಿ ದೇಹ ಸೊರಗಿ ಶಕ್ತಿಯಿಲ್ಲದೆ ಯಾವ ದೇವರ ಪೂಜೆಯೂ ಕೈಲಾಗುವುದಿಲ್ಲ. ಹಾಗಾಗಿ ಉದರ ದೈವದ ಪೂಜೆ ಮೊದಲಾಗಬೇಕು.

ಹೆಚ್ಚು ತಿಂದರೆ ಅನಾರೋಗ್ಯ, ಕಡಿಮೆ ತಿಂದರೂ ಅನಾರೊಗ್ಯ. ಎಷ್ಟು ತಿನ್ನಬೇಕು ಎಂದು ನಿರ್ಧರಿಸುವುದು ಕಷ್ಟ. ಏನನ್ನೋ ತಿಂದರೆ ಅನಾರೋಗ್ಯ ಮತ್ತ್ಯಾವುದನ್ನೋ ತಿಂದರೆ ಆರೋಗ್ಯ. ಆದರೆ ಏನು ತಿನ್ನಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಮಿಶ್ರಣ(combination) ಪರಿಮಾಣ(ratio) ಮತ್ತು ಪ್ರಮಾಣ(quantity) ನಿರ್ಧರಿಸುವುದೇ ಬಹಳ ಕಷ್ಟ. ನಮ್ಮ ಆಹಾರದ "ಹದವರಿಯುವುದು" ಒಂದು ಸಾಹಸವೇ ಸರಿ.  ಆದರೆ ನಾಲಿಗೆ ಒಂದಿದೆಯಲ್ಲ!! ಅದನ್ನೂ ತೃಪ್ತಿ ಪಡಿಸುತ್ತಾ ಆ ಹದವನ್ನೂ ಅರಿತರೆ ‘ಉದರ ದೈವ’ ದ ಪೂಜೆಯೂ ಸರಿಯಾಗುತ್ತದೆ. ದೇಹವೂ ಆರೋಗ್ಯದಿಂದಿರುತ್ತದೆ. 

ಅದಲ್ಲದೆ ನಾಲಿಗೆಯ ಚಪಲಕ್ಕೆ ಬಲಿಯಾಗಿ ಏನೇನನ್ನೋ ತಿನ್ನುತ್ತಾ ಹೋದರೆ ಅದರ ಪರಿಣಾಮವನ್ನು ಬೇರೆಯಾಗಿ ವಿವರಿಸಬೇಕೇ? ಇಂದು ನಾವು ನೋಡುತ್ತಿರುವುದೇನೆಂದರೆ ಬಹಳಷ್ಟು ಜನ ವೈದ್ಯಕೀಯ ಶುಶ್ರೂಷೆಗೆ ಬರುವುದೇ ಈ ಆಹಾರದ ವ್ಯತ್ಯಯದಿಂದಾಗಿ. ಈ ಆಹಾರದ ವಿನ್ಯಾಸಕ್ಕಾಗಿಯೇ ವಿಜ್ಞಾನದ ಹಲವಾರು ವಿಭಾಗಗಳು ಹೊಸದಾಗಿ ಹುಟ್ಟಿಕೊಂಡಿವೆ. ಆದರೆ ನಮ್ಮ ಪುರಾತನರ ಆಹಾರ ಕ್ರಮವೇ ' ಔಷಧಿ ' ರೂಪದಲ್ಲಿದೆ ಎಂದು ಅರಿಯದಾಗಿದ್ದಾರೆ. ದೇಶ ಕಾಲಕ್ಕನುಗುಣವಾಗಿ ವಿನ್ಯಾಸಗೊಂಡಿರುವ ನಮ್ಮ ಪುರಾತನರ ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಅದೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾಲಿಗೆಯ ಚಪಲತೆಯನ್ನು ಬಿಟ್ಟು,  ಊಟವನ್ನು ಒಂದು ವಿಧಿವತ್ತಾದ ಪೂಜೆಯಂತೆ ಮಾಡಿದರೆ ಪುಣ್ಯಕ್ಕೂ ಆಗುತ್ತದೆ ಮತ್ತು ಪುರುಷಾರ್ಥಕ್ಕೂ ಆಗುತ್ತದೆ.  ಆಹಾರವನ್ನು ಅರಿತು ಸೇವಿಸಿದರೆ ಆರೋಗ್ಯ ಚಪಲಕ್ಕೆ ಸೇವಿಸಿದರೆ ಅನಾರೋಗ್ಯ. ಸರಿಯಾದ ಆಹಾರವನ್ನು ಸೂಕ್ತ ಸಮಯದಲ್ಲಿ ಸೇವಿಸಿದರೆ ಅದೇ ನಮ್ಮ ' ಉದರ ದೈವದ ' ಪೂಜೆಯಾಗುತ್ತದೆ.  ಅಲ್ಲವೇ?  

ರವಿ ತಿರುಮಲೈ



Tuesday, 2 January 2018

ಸುಖದಾಸೆಯ ಭ್ರಮೆ



ಈ ಜಗತ್ತಿನಲ್ಲಿ ಹುಟ್ಟಿದ ಪ್ರತೀ ಪ್ರಾಣಿಯೂ ಸುಖವಾಗಿರಬೇಂದುಕೊಳ್ಳುವುದು ಬಹಳ ಸಹಜ. ಆದರೆ ಆ ಸುಖ ಏನು, ಯಾವ ರೀತಿಯ ಬದುಕನ್ನು ಸುಖವಾದ ಬದುಕು ಎನ್ನಬೇಕು ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಹುಚ್ಚು
ಹಿಡಿದವರಂತೆ ಭ್ರಮಾಧೀನರಾಗಿ ಸುಖದ ಬೆನ್ನ ಹತ್ತಿ ಅಂತ್ಯದಲ್ಲಿ ನಿರಾಶರಾಗುವವರೇ ನಾವೆಲ್ಲಾ.  ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ 'ಒಳ್ಳೆಯ ಹುಲ್ಲು ಇಲ್ಲಿದೆ,  ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಮ್ಮ ಪರಿಸ್ತಿತಿ.

ಮನುಷ್ಯನೂ ಸೇರಿದಂತೆ ಪ್ರತೀ ಪ್ರಾಣಿಯೂ ಸುಖವನ್ನೇ ಬಯಸುತ್ತದೆ. ಆದರೆ ಆ 'ಸುಖ' ಎಂದರೆ ಏನು? ಅದು ಎಲ್ಲಿ ಸಿಗುತ್ತದೆ ಮತ್ತು ಹೇಗೆ ಸಿಗುತ್ತದೆ ಎನ್ನುವುದು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ನಾವು ಅ ಸುಖವನ್ನು ಎಲ್ಲಂದರಲ್ಲಿ ಹುಡುಕುತ್ತೇವೆ. ನಾವು ಯಾವುದೋ ಒಂದು ವಸ್ತುವಿನಿಂದ ಸುಖ ಸಿಗುತ್ತದೆ ಎಂದು ಅಂದುಕೊಳ್ಳುತ್ತೇವೆ ಮತ್ತು ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ. ಅದು ಸಿಕ್ಕರೆ  ತತ್ಕಾಲದಲ್ಲಿ ಸುಖವನ್ನು ಅನುಭವಿಸಿದ ನಂತರ 'ಅಯ್ಯೋ ಇಷ್ಟೇನೇ' ಎನ್ನುವ ಭ್ರಮನಿರಸನಕ್ಕೊಳಗಾಗುತ್ತೇವೆ. ಅಲ್ಲಿಂದ ನಮ್ಮ ಹುಡುಕಾಟ ಮತ್ತೆ ಶುರುವಾಗುತ್ತದೆ. ಈ ಸುಖದ ಭ್ರಮೆಗೆ ಕೊನೆಯೇ ಇಲ್ಲ ಅಲ್ಲವೇ? ಈ ಭ್ರಮೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಪ್ರಮಾಣ ಭೇದವಿದ್ದರೂ 'ಭ್ರಮೆ'ಯಂತೂ ಎಲ್ಲರಲ್ಲೂ ಇದ್ದೇ  ಇರುತ್ತದೆ.  

ಇಂದ್ರಿಯ ಪ್ರೇರಿತವಾದ ಈ ದೇಹಕ್ಕೆ ನಾವು ಅಂಟಿಕೊಂಡಿರುವವರೆಗೆ ನಾವು ಈ ಸುಖದ ಭ್ರಮೆಯಲ್ಲೇ ಜೀವಿಸುತ್ತೇವೆ. ಮನಸ್ಸು ಬುದ್ಧಿ ದೇಹ ಮತ್ತು ಆತ್ಮಗಳ ಸಮ್ಮಿಲನದಿಂದಾದ ನಮ್ಮ ಅಸ್ಥಿತ್ವದಲ್ಲಿ 'ನಮ್ಮನ್ನು' ನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯ ತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ 'ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ. 

ಹಾಗಲ್ಲದೆ,  'ನಾನು' ಎಂದರೆ 'ಆತ್ಮ' ಎಂದು, ಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆ, ಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ್ಲ. ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆ' ಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ.  
  
ನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ ' ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ.

ಹಾಗಲ್ಲದೆ,  'ನಾನು' ಎಂದರೆ 'ಆತ್ಮ' ಎಂದು,  ಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆ, ಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ.  ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆ' ಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ. ಆಯ್ಕೆಯ ಸಂಪೂರ್ಣ ಸ್ವಾತಂತ್ರ ನಮಗಿದೆ ಅಲ್ಲವೇ?    


Tuesday, 19 December 2017

ಭಾವುಕತೆ


ನಾವು ಅನ್ಯ ಪ್ರಾಣಿಗಳಂತೆಯೇ ಈ ಸೃಷ್ಟಿಯೊಳಗೊಂದಾದರೂ, ಅವುಗಳಂತೆಯೇ ಬದುಕುವವರಾದರೂ, ನಾವು ಮಾನವರು ಅವುಗಳಿಗಿಂತ ತೀರಾ ಭಿನ್ನ. ಏಕೆಂದರೆ ನಮಗೆ ಭಾವನೆಗಲುಂಟು. ಪ್ರಾಣಿಗಳಿಗಿರುವ ಭಾವುಕತೆ ಸೀಮಿತ. ಆದರೆ ನಮಗಿರುವ ಭಾವನೆಗಳು ಅಮಿತ. ಪ್ರಾಣಿಗಳಿಗಿರುವ ಭಾವುಕತೆ, ಕೆಲ ಪ್ರಾಣಿಗಳನ್ನು ಹೊರತುಪಡಿಸಿ, ಕೇವಲ ಅವುಗಳ, ಆಹಾರ ಹುಡುಕುವಿಕೆ, ಸ್ವ-ರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಮಾನವರಾದ ನಮಗಿರುವುದು ಬಹಳ ವಿಶಾಲವಾದ ಮತ್ತು ವಿಸ್ತಾರವಾದ  ಭಾವುಕತೆ. ನಾವು ತೋರುವ ಪ್ರೀತಿ, ಕೋಪ, ದ್ವೇಷ ಅನುರಾಗ ಮುಂತಾದ ಭಾವಗಳಿಂದ ತುಂಬಿರುವುದೇ ನಮ್ಮ ಈ ಭಾವುಕತೆಯ ಹಂದರ. ಮಾನವನ ಬಹಳಷ್ಟು ಸಂತೋಷ ಆನಂದ ಮತ್ತು ದುಃಖ ತಾಪತ್ರಯಗಳು ಕೇವಲ ಈ ಭಾವುಕತೆಯ ಕಾರಣದಿಂದಲೇ ಉಂಟಾಗುತ್ತದೆ. 

ಭಾವುಕತೆ, ಕೋಪ, ಉದ್ರೇಕ ಮುಂತಾದ ಭಾವಗಳು ಇರಲಿ, ತಪ್ಪೇನಿಲ್ಲ. ಆದರೆ ಆ ಭಾವದ ಉತ್ಕಟತೆ ಬುದ್ಧಿಯ ಸಮತೋಲನವನ್ನು ವಿಚಲಿತಗೊಳಿಸಿ, ಕದಡದೆ ಇದ್ದರೆ ಅಷ್ಟೇ ಸಾಕು. ಏಕೆಂದರೆ ಸಾಮಾನ್ಯವಾಗಿ ನಾವು ಭಾವುಕರಾದಾಗ ನಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು, ನಮಗರಿವಿಲ್ಲದಂತೆಯೇ ಎಲ್ಲೇ ಮೀರಿ ವರ್ತಿಸುತ್ತೇವೆ. ಆದರೆ ಇಂತಹ ಭಾವವೂ ನಮ್ಮೊಳಗೇ ನುಗ್ಗಿದರೂ ನಮ್ಮನ್ನು ವಿಚಲಿತರಾಗಿಸದೆ ಇದ್ದಾರೆ ನಾವು ಈ ಜಗತ್ತಿನಲ್ಲಿ ಕಲಿತ ವಿದ್ಯೆ ಮತ್ತು ಅಂಟಿಸಿಕೊಂಡ ವ್ಯಾಮೋಹ ಮತ್ತು ಮಮಕಾರಗಳು ಮನೋವ್ಯಾಪಾರದ ಮೇಲೆ ತನ್ನ ಪ್ರಭಾವ ಬೀರದೆ ಇದ್ದರೆ, ಮನಸ್ಸು ಬುದ್ಧಿಗಳು ಶುದ್ಧವಾಗಿರುತ್ತವೆ. 

ಎಷ್ಟೋಬಾರಿ ಕೋಪಬಂದವರು ಆ ಕೋಪದ ಮಿತಿಮೀರಿದ ಭಾವುಕತೆಯಲ್ಲಿ, ತಮಗರಿವಿಲ್ಲದಂತೆಯೇ, ತಮ್ಮ ಬದುಕನ್ನೇ ಬದಲಿಸುವ ಪರಿಣಾಮಗಳಾಗುವಂತಹ ರೀತಿಯಲ್ಲಿ ವರ್ತಿಸಬಹುದು. ಉದಾ: ಕೋಪದ ಭರದಲ್ಲಿ ಮಾಡುವ ಕೊಲೆ, ಪಶ್ಚಾತ್ತಾಪ ಪಟ್ಟರೂ ಅದರ ಪರಿಣಾಮವನ್ನು ಅನುಭವಿಸಲೇ ಬೇಕಲ್ಲವೇ?

ಅತಿಯಾದ ಸಂತೋಷ, ಉದ್ವಿಗ್ನತೆ, ಕೋಪ ಮುಂತಾದ ಭಾವಗಳು ಸಹಜವಾಗೇ ನಮಗೆ ನಮ್ಮ ಪ್ರತಿನಿತ್ಯದ ಆಗುಹೋಗುಗಳಲ್ಲಿ ಬರುತ್ತವೆ. ನಮ್ಮನ್ನು ಉದ್ರೇಕಗೊಳಿಸುವ, ಉದ್ವೇಗದಲ್ಲಿ ಅನರ್ಥವನ್ನು ಮಾಡಿಕೊಳ್ಳುವ ಹಲವಾರು ಸಂದರ್ಭಗಳು ನಮ್ಮ ಬದುಕಿನಲ್ಲಿ ಬರುತ್ತವೆ. ಇದರಲ್ಲಿ ಅತಿಶಯವೇನಿಲ್ಲ. ಆದರೆ ಅವುಗಳು ನಮ್ಮ ಮನಸ್ಸು ಬುದ್ಧಿಗಳನ್ನು ವಿಚಲಿತಗೊಳಿಸಬಾರದು. ಹಾಗಾಗಬೇಕಾದರೆ ನಾವು ತಾಳ್ಮೆ ಮತ್ತು ಸಹನೆಯನ್ನು ರೂಢಿಸಿಕೊಳ್ಳಬೇಕು. ಒಂದು ಸಿನೆಮಾ ನೋಡಿದಾಗ, ಅದರಲ್ಲಿನ ಜಗಳ ಕಿತ್ತಾಟ, ಹೊಡೆದಾಟ ಕ್ರೌರ್ಯ ಮುಂತಾದ ದೃಶ್ಯಗಳನ್ನು ನಾವು ಕೇವಲ ಪ್ರೇಕ್ಷಕರಂತೆ ನೋಡಿ ಬರುತ್ತೇವೋ, ಹಾಗೆಯೇ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೂ ಪ್ರತಿಕ್ರಿಯೆ ನೀಡದೆ ಇದ್ದರೆ, ಅವುಗಳ ಪ್ರಭಾವ ನಮ್ಮ ಮೇಲೆ ಆಗದೆ ಇರಬಹುದು. ನಾವು ಜಗತ್ತಿನಲ್ಲಿ ಕಲಿತ ವಿದ್ಯೆಯ ಪ್ರಭಾವದಿಂದ ಅಥವಾ ನಾವು ಈ ಜಗತ್ತಿನಲ್ಲಿ ಬೆಳೆಸಿಕೊಂಡ ಮೋಹ, ಮಮತೆ ಮತ್ತು ವ್ಯಾಮೋಹಗಳು ನಮ್ಮ ಹೃದಯಕ್ಕೆ ಅಂಟಿಕೊಂಡು ಮನಸ್ಸನ್ನು ಉದ್ವಿಗ್ನಗೊಳಿಸದಿದ್ದರೆ, ನಮ್ಮ ಹೃದಯದ ಶುದ್ಧತೆಯನ್ನು ನಾವು ಕಾಪಾಡಿಕೊಳ್ಳಬಹುದು.

ಆದರೆ ಹಾಗೆ ವಿಚಲಿತಗೊಳ್ಳದ ಸ್ಥಿತಿಗೆ ತಲುಪುವುದು ಅಷ್ಟು ಸುಲಭವಲ್ಲ. ಸಾಮಾನ್ಯ ಮಾನವರಾದ ನಮಗೆ ಅಂತಹ ಸ್ಥಿತಿಗೆ ತಲುಪಬೇಕಾದರೆ ಜೀವನದಲ್ಲಿ ಬಹಳ ಅನುಭವವಾಗಬೇಕು, ಪೆಟ್ಟು ಬೀಳಬೇಕು, ನೋವುಣ್ಣಬೇಕು, ನಿರ್ಲಿಪತತೆ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಮ್ಮ ಹೃದಯದಲ್ಲಿ ನಡೆಯುವ ಮಂಥನವು ಪಾವನವಾಗಬಹುದು. ನಾವು ಶಾಂತರಾಗಬಹುದು. ಕೇವಲ ಸಾಕ್ಷೀ ಭಾವದಿಂದ ಎಲ್ಲವನ್ನೂ ನೋಡುತ್ತಾ ನಿರ್ಲಿಪ್ತರಾಗಿ ' ಭಾವುಕತೆಯ ಪ್ರಭಾವ' ದಿಂದ ಮುಕ್ತರಾಗಬಹುದು . 

 


Wednesday, 15 November 2017

ಪರೋಪಕಾರ



ಉಪಕಾರ ಮಾಡುವುದು ನಮ್ಮ ಸಂಸ್ಕೃತಿ. ಪರೋಪಕಾರಕ್ಕೆ ನಮ್ಮ ಸಂಸ್ಕಾರಗಳಲ್ಲಿ ಬಹಳ ಮಹತ್ವವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ಆದರೆ ಯಾರಿಗೆ ಯಾವ ಸಮಯದಲ್ಲಿ ಯಾವ ರೀತಿಯ ಉಪಕಾರವನ್ನು ಮಾಡಬೇಕು ಎನ್ನುವುದೇ ಜಿಜ್ಞಾಸೆಯ ವಸ್ತುವಾಗುತ್ತದೆ. ಉದಾ:ಯಾರೋ ಒಬ್ಬ ದುಡಿದು ಸುಸ್ತಾಗಿ, ನೆಲದಮೇಲೆ ಮಲಗಿ ನಿದ್ರಿಸುತ್ತಿರುವವನನ್ನು ಅಲುಗಾಡಿಸಿ,  ಎಬ್ಬಿಸಿ, ಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನು? ಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬಾರದು. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ. 

ಒಬ್ಬ ಆರಾಮಾಗಿ ನೆಲದಲ್ಲಿ ಕಾಲ ಮೇಲೆ ಕಾಲ ಹಾಕಿಕೊಂಡು ಮಲಗಿದ್ದನಂತೆ. ಮತ್ಯಾರೋ ಒಬ್ಬ ಬಂದು ಅವನನ್ನು ' ಎದ್ದೇಳು, ಚುರುಕಾಗು, ಕೆಲಸಮಾಡು, ಅಭಿವೃದ್ಧಿ ಹೊಂದು, ಸಕಲ ಭಾಗ್ಯಗಳನ್ನೂ ಸಂಪಾದಿಸು, ಸ್ಥಿತಿವಂತನಾಗು, ಎಂದು ಉಪದೇಶ ಮಾಡಿದನಂತೆ. ಅದಕ್ಕವನು "ಹಾಗೆಲ್ಲಾ ಮಾಡಿದೇ ಎಂದಿಟ್ಟುಕೊಳ್ಳಿ,  ಮುಂದಕ್ಕೆ?" ಎಂಬ ಪ್ರಶ್ನೆ ಕೇಳಿದಾಗ, 'ಮುಂದಕ್ಕೆ, ಆರಾಮಾಗಿ ಕಾಲಮೇಲೆ ಕಾಲ ಹಾಕಿಕೊಂಡು, ಮಲಗಿ ಆನಂದವಾಗಿರಬಹುದು" ಎಂದನಂತೆ. " ಅಯ್ಯೋ!!! ನಾ ಈಗಾಗಲೇ ಆ ಸ್ಥಿತಿಯಲ್ಲಿದ್ದೇನೆ, ನಿಮ್ಮ ದಾರಿ ನೀವು ನೋಡ್ಕೊಳ್ಳಿ" ಎಂದನಂತೆ ನಮ್ಮ ಭೂಪತಿ. ಹೀಗೆ ಪುಗಸಟ್ಟೆ ಸಲಹೆಗಳನ್ನು ಕೊಡುವವರು ನಮಗೆ ಬಹಳ ಜನ ಸಿಗುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ಅತೀ ಸುಲಭವಾದ ಕೆಲಸಗಳೆಂದರೆ 'ಅನ್ಯರಿಗೆ ಸಲಹೆ ನೀಡುವುದು ಮತ್ತು ಮತ್ತೊಬ್ಬರು ಮಾಡಿದ ಕೆಲಸದಲ್ಲಿ ಹುಳುಕ ಹುಡುಕುವುದು' . 

ತೈತ್ತರೀಯೋಪನಿಷತ್ತು ತನ್ನ 'ಶೀಕ್ಷಾವಲ್ಲಿ' ಯಲ್ಲಿ ಕೊಡುವ ವಿಷಯವನ್ನು ಪ್ರಸ್ತಾಪಿಸುತ್ತಾ  'ಭಿಯಾ ದೇಯಂ ' ಎಂದಿದೆ. ಯಾರಿಗಾದರೂ ಏನನ್ನಾದರೂ ಕೊಡುವಾಗ ಮನಸಿನಲ್ಲಿ 'ಭಯ' ವನ್ನಿಟ್ಟುಕೊಂಡು ಕೊಡು ಎಂದಿದೆ. ಭಯವೇತಕ್ಕೆ ಎಂದರೆ, ನಾವು ಕೊಟ್ಟ ವಸ್ತು, ಸಲಹೆ  ಅಥವಾ ವಿಷಯ ಅವರಿಗೆ ಉಪಯೋಗಕ್ಕೆ ಬರುತ್ತದೋ ಅಥವಾ ಅದರಿಂದ ಅವರಿಗೆ ಏನಾದರೂ ತೊಂದರೆಯಾಗುತ್ತದೆಯೋ ಏನೋ ಎಂಬ 'ಭಯ' ವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊಡಬೇಕು ಎನ್ನುತ್ತದೆ. ಹಾಗೆ ನಮ್ಮ ಮನಸ್ಸಿನಲ್ಲಿ ಭಯವಿಟ್ಟುಕೊಂಡರೆ, ಆಗ ನಾವು ಕೊಡುವುದು ಸೂಕ್ತವಾಗಿ, ಉಪಯುಕ್ತವಾಗಿ, ಅನುಕೂಲವಾಗಿರುತ್ತದೆ.  

ಮಾನ್ಯ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ 'ಸುಲಭವಲ್ಲೊಳಿತೆಸೆಗೆ' ಎಂದು ಹೇಳಿ ಪರರಿಗುಪಕರಿಸುವುದು ಅಷ್ಟು ಸುಲಭವಲ್ಲ, ಎಂದಿದ್ದಾರೆ. ಅನ್ಯರ ಅವಶ್ಯಕತೆಗಳನ್ನು ಅರಿಯುವುದು ಬಹಳ ಕಷ್ಟ. ಅದು ಏನೋ ಇದ್ದರೆ ನಾವು ಮತ್ತೇನನ್ನೋ, ಊಹಿಸಿ, ಭಾವಿಸಿ ಕೊಟ್ಟಾಗ, ಎಡವಟ್ಟಾಗುತ್ತದೆ. ನಿಷ್ಪ್ರಯೋಜಕ ವಸ್ತು ಅಥವಾ ಸಲಹೆಯನ್ನು ನೀಡಿ ಅನ್ಯರಿಗೆ ಉಪಕರಿಸದೆ, ಹಲಬಾರಿ ತೊಂದರೆಯನ್ನೇ ಮಾಡಿದಂತಾಗುತ್ತದೆ. ನಮ್ಮ ಉದ್ದೇಶ್ಯ 'ಶುದ್ಧ'ವಾಗಿದ್ದರೂ, ಅನ್ಯರಿಗೆ ಬೇಕಾದ ವಸ್ತು ಅಥವಾ ವಿಷಯ, ಬೇಕಾದ ಸಮಯದಲ್ಲಿ, ಬೇಕಾದ ಪ್ರಮಾಣದಲ್ಲಿ ಕೊಡುವುದರಲ್ಲಿ ನಾವು ಸೋಲುತ್ತೇವೆ.  


ಅನ್ಯರಿಗೆ ಉಪಕರಿಸಬೇಕು ಎನ್ನುವ ಭಾವನೆ ಒಳ್ಳೆಯದೇ ಆದರೂ ನಾವು ಮಾಡುವ ಉಪಕಾರ ಸೂಕ್ತವಾಗಿದೆಯೇ ಎಂದು ಆಲೋಚಿಸಿ ನಂತರ ಒದಗುವುದು ಒಳ್ಳೆಯದು. ಉದಾಹರಣೆಗೆ 'ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಲು ಪ್ರಯತ್ನಪಡುತ್ತಿರುವವರಿಗೆ ಒಡನೆಯೇ ಸಹಾಯಮಾಡಲು ಹೋದರೆ, ಅವರ ಪ್ರಯತ್ನ ಮತ್ತು ಅವರ ಸಾಹಸಕ್ಕೆ ಅಡ್ಡಿಯೊಡ್ಡಿ ಅವರ ಕ್ಷಮತೆಯನ್ನು ಕುಂಠಿತಗೊಳಿಸಿದಂತೆಯೇ ಅಲ್ಲವೇ? ಕೈಲಾಗದವರಿಗೆ ಮತ್ತು ದೀನರಿಗೆ ಒದಗುವುದು ಸೂಕ್ತ. ಕ್ಷಮತೆಯಿದ್ದವನಿಗೂ ಒದಗಿದರೆ ಅವನನ್ನು ಸೋಂಬೇರಿಯಾಗಿಸಿದಂತೆಯೇ ಅಲ್ಲವೇ?  

ನಾವು ಮಾಡುವ ಉಪಕಾರ ಸೂಕ್ತವೋ ಅಲ್ಲವೋ ಎಂದು ನಿರ್ಧರಿಸುವುದೇ ಬಹಳ ಕಷ್ಟಕರವಾದ ಕೆಲಸ. ಅನ್ಯರಿಗೆ ಉಪಕಾರ ಮಾಡುವುದು ಸುಲಭವಲ್ಲ. ಉಪಕಾರ ಮಾಡಬೇಕೆಂದು ಶುದ್ಧಮನಸಿದ್ದರೂ ಹಾಗೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಾವು ಅನ್ಯರಿಗೆ ಸೂಕ್ತ ಉಪಕಾರ ಮಾಡಲಾಗದಿದ್ದರೆ, ಅವರ ಪಾಡಿಗೆ ಅವರನ್ನು,  ಅವರ ಕರ್ಮಕ್ಕೆ ಅವರನ್ನು ಬಿಟ್ಟು, ಶುದ್ಧಮನಸ್ಸಿನಿಂದ ಅವರಿಗೆ ಶುಭವಾಗಲೆಂದು ಹಾರೈಸಿದರೆ, ಅವರಿಗೆ ಒಳಿತನ್ನು ಮಾಡಿದಂತೆಯೇ!!!!!!!!!!!