Thursday, 4 January 2018

'ಋಣ'



'ಋಣ' ಎಂದರೆ ಹಿಂದೆ ಪಡೆದದ್ದು ಮತ್ತು ಹಿಂತಿರುಗಿಸಲೇ ಬೇಕಾದ್ದು ಎಂದು ಅರ್ಥಹಿಂದೆ ಯಾರಿಂದಲೋ ಏನನ್ನೋ ಪಡೆದಿದ್ದ ಕಾರಣ ಅದನ್ನು ಹಿಂತಿರುಗಿಸಲೇ ಬೇಕಾಗಿರುವುದರಿಂದ ಅದರ ಪ್ರಯತ್ನದಲ್ಲಿ ನಮ್ಮ ಕೆಲವು ಕೆಲಸಗಳು ಮತ್ತು ಕಾರಣವರಿಯದೆ ಯಾರದೋ ಅವಶ್ಯಕತೆಗಳನ್ನು ತೀರಿಸಲು 'ಪರಹಿತ ಕೆಲಸಗಳನ್ನು ನಾವು ಮಾಡುತ್ತೇವೆ, ಅಲ್ಲವೇ? ನಮಗೆ ಇದರ ಹಿಂದಿನ ಕಾರಣಗಳು ಮತ್ತು ಘಟನೆಗಳ ಅರಿವಾಗುವುದೇ ಇಲ್ಲ. ಯಾವುದರಿಂದ ಯಾವುದು? ಏಕೆ ಹೀಗೆ, ಅಥವಾ ಹೀಗೇ ಏಕೆ ಎಂದು ಪ್ರಯತ್ನಪಟ್ಟರೂ ನಮಗೆ ಅರ್ಥವಾಗುವುದೇ ಇಲ್ಲ. ಹಾಗೆ ಅರ್ಥವಾಗದಿದ್ದರೂ ಮಾಡಲೇಬೇಕಾದ ಕೆಲಸವನ್ನು ಮಾಡಿ  'ಯಾವ ಜನ್ಮದ ಋಣವೋಎಂದು ಮನಸ್ಸಮಾಧಾನ ಪಟ್ಟುಕೊಳ್ಳುತ್ತೇವೆ ಅಲ್ಲವೇ

ಯಾವ ಋಣ ತೀರಿಸಲೋ ಅಥವಾ ಯಾರ ಹಿತಕ್ಕಾಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಅಥವಾ ನಮಗರಿಯದ ಶಕ್ತಿಯ ಯಾವ ಯೋಜನೆಗನುಸಾರವಾಗಿಯೋ ನಾವು ಸುಖವನ್ನೋ ಅಥವಾ ನೋವನ್ನೋ ಅನುಭವಿಸುವುದು ದೈವೇಚ್ಛೆ ಆಗಿದ್ದರೆ ದೈವವನ್ನು ಕುರುಡು ಎನ್ನಲಾಗುವುದೇ?  ಹಾಗೆ ಹೇಳಲಾಗದು,  ಏಕೆಂದರೆ ನಾವು ಅನುಭವಿಸುವುದು ಕೇವಲ ದೈವ ಕೃಪೆಯನ್ನಲ್ಲ,  ಅದರೊಳಗೆ ನಮ್ಮ ಪಾಲೂ ಇರುತ್ತದೆ. ಅದು ನಮ್ಮಿಂದ ಹಿಂದೆ ನಡೆದ ಕರ್ಮದ ಫಲಸ್ವರೂಪದಲ್ಲಿ ಇಂದು ನಮಗೆ ಸಂದಿದೆ ಎಂದರೆ ಸೂಕ್ತವಾಗುತ್ತದೆ.    

ಯಾರದೋ ಮನೆಯಲ್ಲಿ ಇಂದು   ನಮಗೆ ಊಟ,  ಆದರೆ ಮುಂದೆಂದೋ ಬೇರೆ ಯಾರಿಗೋ ನಮ್ಮ ಮನೆಯಲ್ಲಿ ಉಪಚಾರ. ಯಾರೋ ನಮಗೆ ಸೂಕ್ತ ಸಮಯದಲ್ಲಿ ಸಹಾಯ ಮಾಡುತ್ತಾರೆ,  ಮತ್ಯಾರೋ ನಮ್ಮಿಂದ ಸಹಾಯವನ್ನು ಪಡೆಯುತ್ತಾರೆ. ಒಂದು ಘಟನೆಗೂ ಮತ್ತೊಂದಕ್ಕೂ, ಒಬ್ಬ ವ್ಯಕ್ತಿ ಮತ್ತು ಮತ್ತೊಂದು ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಂಪರ್ಕವೇರ್ಪಟ್ಟಾಗ ಕಾಕತಾಳೀಯವಾಗಿ ಕಂಡರೂ ಅದು ಒಂದು ಪೂರ್ವ ನಿರ್ಧಾರಿತ ವಿನ್ಯಾಸದಂತೆಯೇ ನಡೆಯುತ್ತದೆ.  ಅದು ದೈವೀ ವಿನ್ಯಾಸ,  ನಮಗೆ ಅರ್ಥವಾಗದ ವಿನ್ಯಾಸ. ದೈವೀ ವಿನ್ಯಾಸ ಮತ್ತು ನಮ್ಮ ಮಾನುಷೀ ಭಾವದ ಅಪೇಕ್ಷೆಗಳು ಸಮಾನಾಂತರವಾಗಿ ಪಕ್ಕಪಕ್ಕದಲ್ಲೇ ಚಲಿಸುತ್ತಿದ್ದರೂ, ನಮಗೆ ದೈವೀ ವಿನ್ಯಾಸ ಅರ್ಥವಾಗುವುದೇ ಇಲ್ಲ. ನಾವು ಕೇವಲ ನಮ್ಮ ಭಾವನೆಗಳಿಗನುಸಾರವಾಗಿ ಆಗುಹೋಗುಗಳ ಲೆಕ್ಕಾಚಾರಗಳನ್ನು ಹಾಕಿ, ನಮ್ಮದೇ ರೀತಿಯಲ್ಲಿ ನಿರ್ಧಾರಕ್ಕೆ ಬರುತ್ತೇವೆ. ಆದರೆ ಅದು ಸತ್ಯಕ್ಕೆ ದೂರವಾಗಿರುತ್ತದೆ ಎಂಬುವುದನ್ನು ಅರಿಯಲು ಸೋಲುತ್ತೇವೆ.  ಹಾಗೆ ಸೋತ ನಾವು ನಮ್ಮ ಸ್ಥಿತಿಗೆ ಅನ್ಯರನ್ನು ಕಾರಣವಾಗಿಸಿ ದೂರುತ್ತೇವೆ, ಜಗಳ ಮಾಡುತ್ತೇವೆ, ದ್ವೇಷಿಸುತ್ತೇವೆ, ಕುಪಿತಗೊಳ್ಳುತ್ತೇವೆ, ನಮ್ಮ ಹಣೆಬರಹವನ್ನು ದೂರುತ್ತೇವೆ,  ಕಡೆಗೆ ದೈವವನ್ನೂ ನಿಂದಿಸುತ್ತೇವೆ. ಇದು ಪ್ರಾಕೃತ ಮತ್ತು ಅಜ್ಞಾನದ ಭಾವ

ನಮ್ಮ ಪೂರ್ವ ಕರ್ಮಗಳಿಗನುಸಾರವಾಗಿಯೇ ದೈವೀ ವಿನ್ಯಾಸವೂ ರೂಪುಗೊಂಡಿರುತ್ತದೆ ವಿನ್ಯಾಸದಲ್ಲಿ ನಮ್ಮ ಪಾತ್ರವು ಅಧಿಕವಾಗಿರುತ್ತದೆ ಮತ್ತು ಅನ್ಯರ ಕರ್ಮಾನುಸಾರವಾಗಿಯೂ ನಮ್ಮ ಬದುಕಿನ ವಿನ್ಯಾಸ ರೂಪುಗೊಂಡಿರಬಹುದು. ಇದು ನಮಗೆ ಅರ್ಥವಾಗುವುದಿಲ್ಲ. ನಮಗೆ ಯಾವುದು ಅರ್ಥವಾಗುವುದಿಲ್ಲವೋ ಅದನ್ನು 'ದೈವಕೃಪೆ'ಎಂದು ನಾವು ಒಪ್ಪಿಕೊಳ್ಳಲೇಬೇಕು. ಅನ್ಯಥಾ ದಾರಿಯಿಲ್ಲ. ಹಾಗಾಗಿ ಆಯಾಯಾ ಸಮಯಕ್ಕೆ ನಮ್ಮೆದುರಿನ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು, ಅನಪೇಕ್ಷಿಯಾಗಿರುವುದು ಉತ್ತಮ.  ಕಾರಣಗಳ ಹುಡುಕಿ, ಅನ್ಯರನ್ನು ದೂಷಿಸಿ,  ಬದುಕನ್ನು ಕೆದಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಬಂದ ಕರ್ಮವನ್ನು ಧರ್ಮದಂತೆ ಮಾಡುವುದು, ಕರ್ಮದಿಂದ ಬಂದ ಫಲವನ್ನು ಸಂತೋಷದಿಂದ ಅನುಭವಿಸುವುದು ಮತ್ತು ನಮ್ಮ ಕರ್ಮ ಮತ್ತು ಕರ್ಮಫಲವನ್ನು ದೈವಕ್ಕೆ ಅರ್ಪಿಸಿಬಿಟ್ಟು ಬದುಕಿದರೆ ಸುಖ ಮತ್ತು ನೆಮ್ಮದಿ ಎರಡೂ ಇರುತ್ತದೆ. ಬದುಕು ನಿರಾಳವಾಗಬೇಕಾದರೆ ಹಾಗೆ ಬದುಕುವುದೇ ಉತ್ತಮಆಯ್ಕೆ ನಮ್ಮದೇ ಅಲ್ಲವೇ  


ರವಿ ತಿರುಮಲೈ

No comments:

Post a Comment