Monday, 15 January 2018

ಜಗತ್ಸೌಂದರ್ಯ


ನಾವಿರುವ ಜಗತ್ತು ಬಹಳ ಸುಂದರ. ಯಾವುದರಲ್ಲೂ ಯಾವುದೇ ರೀತಿಯ ಕೊರತೆಗಳಿಲ್ಲ. ಆ ಸೌಂದರ್ಯವನ್ನು ನೋಡುವ ಮನಸಿರಬೇಕು. ಕಂಡದ್ದನ್ನು ' ಸುಂದರ ಎಂದು ಅರಿತುಕೊಳ್ಳುವ ಜ್ಞಾನವಿರಬೇಕು. ಕಂಡ ಸೌಂದರ್ಯವನ್ನು ಆಸ್ವಾದಿಸುವ ಸಂಸ್ಕಾರವಿರಬೇಕು.  ಕಡಲಂಚಿನಲ್ಲಿ ಕಾಣುವ ನೇರ ನೇರವಾದ ಗೆರೆ ಹೇಗೆ ಕಡಲಲ್ಲಿ ತೆರೆಯೆದ್ದಾಗ ಒಂದು ಬಾರಿ ಬಳುಕಿ ನೋಡುಗರಿಗೆ ಆನಂದವನ್ನು ನೀಡುತ್ತದೋ, ಹೇಗೆ ರಾಗದ ಜೊತೆ ತಾಳ ಸೇರಿ ಲಯವಾಗಿ ನಾಟ್ಯಧಾಟಿಯಿಂದ ಮನವನ್ನು ರಂಜಿಸುತ್ತದೆಯೋ, ಪ್ರತಿಯೊಂದೂ, ಉರಿವ ಅಗ್ನಿ ಗೋಳಗಳಾಗಿದ್ದರೂ,  ಆಗಸದ ಪಟಲದಲ್ಲಿ ಉದ್ದಕ್ಕೂ ಹರಡಿ ನಕ್ಷತ್ರಗಳು, ಒಂದು ಸುಂದರ ಚಿತ್ತಾರವನ್ನು ಮೂಡಿಸಿದೆಯೋ, ಹಾಗೆ ವಿಲಕ್ಷಣವಾದ ಪ್ರತಿಯೊಂದೂ ಈ ಜಗತ್ತನ್ನು ಸುಂದರವಾಗಿಸಲು ಇಂಬು ನೀಡುತ್ತಿವೆ. ವಿಲಕ್ಷಣವೆನ್ನುವುದು ನಮ್ಮ ಭಾವವೇ ಹೊರತು ಆ ವಸ್ತುವಿನ ನಿಜಸ್ಥಿತಿಯಲ್ಲ. ಏಕೆಂದರೆ ಪರಮಾತ್ಮನ ಸೃಷ್ಟಿಯ ಎಲ್ಲವೂ ಪರಿಪೂರ್ಣ ಮತ್ತು ಸುಂದರ.   

ಇಲ್ಲಿ ವಿಲಕ್ಷಣವೆಂದರೆ ವಿವಿಧ ಲಕ್ಷಣಗಳನ್ನು ಹೊಂದಿರುವ ಅನೇಕಾನೇಕ ವಸ್ತುಗಳು ಒಂದ್ಕೊಂದಕ್ಕೆ ಹೇಗೆ ಪೂರಕವಾಗಿವೆ ಎನ್ನುವುದೇ ಅರ್ಥ.  ಸೃಷ್ಟಿಯ ಪ್ರತಿಯೊಂದೂ ಮತ್ತೊಂದರೊಡನೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ಸುಂದರತೆಯೇ ಸೃಷ್ಟಿಯ ವಿಶೇಷ . ಭೂಮಿಯ, ಸೂರ್ಯನ, ನೀರಿನ ಸಂಪರ್ಕಕ್ಕೆ ಬಂದಾಗ ಒಂದು ಬೀಜ ಸಸಿಯಾಗಿ, ಗಿಡವಾಗಿ, ಮರವಾಗಿ ಬಣ್ಣ ಬಣ್ಣದ    ಸುಗಂಧಭರಿತ ಹೂಗಳಿಂದ, ರುಚಿ ರುಚಿಯಾದ ಹಣ್ಣುಗಳಿಂದ ಸುಂದರವಾಗಿ ಎಲ್ಲರಿಗೂ ಆನಂದವನ್ನು ನೀಡುತ್ತದೆಯಲ್ಲವೇ? ಹಾಗೆಯೇ ಸಕಲ ಜೀವರಾಶಿಗಳೂ ಮತ್ತೆಲ್ಲ ಅನ್ಯ ಜೀವರಾಶಿಗಳಿಗೂ ಆನಂದವನ್ನು ಕೊಡುತ್ತವೆ. ಹಾಗೆ ಆನಂದವನ್ನು ನೀಡುವುದೇ ಸೃಷ್ಟಿಯ ಪ್ರತಿಯೊಂದರ ಬದುಕಿನ ಸಾರ್ಥಕತೆ.

ಮಕ್ಕಳಿಗೆ ಪಾಠ ಹೇಳಿಕೊಡುವ ಉಪಾಧ್ಯಾಯ, ಹಾಡಲು ಕಲಿತ ಗಾಯಕ, ನೃತ್ಯಮಾಡುವ ಕಲಾವಿದ, ಚಿತ್ರ ಬಿಡಿಸುವ ಕಲೆಗಾರ, ಶಿಲ್ಪಗಳನ್ನು ಕೆತ್ತುವ ಶಿಲ್ಪಿ, ಅನ್ಯರ ದುಃಖಕ್ಕೆ ಮಿಡಿಯುವ ಸಹೃದಯಿ, ದೇಹದಂಡನೆಯಿಂದ ಬದುಕ ಕಟ್ಟಿಕೊಳ್ಳುವ ಕಾರ್ಮಿಕ, ಆ ಕಾರ್ಮಿಕರಿಗೆ ಒಂದು ಜೀವನೋಪಾದಿಯನ್ನು ಕಲ್ಪಿಸುವ ಬಂಡವಾಳಶಾಹಿ, ಹೀಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅನ್ಯರಿಗೆ ಒದಗುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನಲ್ಲವೇ. ಉದ್ದೇಶದಿಂದಲೋ ಅನುದ್ದೇಶವಾಗಿಯೋ ಪ್ರತಿಯೊಬ್ಬರೂ ಅನ್ಯರಿಗೆ ಒದಗುತ್ತಾ ತಾವೂ ಬದುಕುತ್ತಾರೆ ಅಲ್ಲವೇ?

ನಮ್ಮ ನಮ್ಮ ಜೀವನದಲ್ಲೂ ಅಂತಹ ಮಧುರವಾದ ವಿಷಯಗಳನ್ನು ನಾವು ಎಲ್ಲ ಕಡೆಯೂ ನೋಡಬಹುದು. ನೋಡುವ ಮನಸ್ಸಿರಬೇಕು ಅಷ್ಟೇ!! ಹಾರುವ ಹಕ್ಕಿ, ಬೀಸುವ ಗಾಳಿ, ಹೂ-ಹಣ್ಣು, ಗಿಡ-ಮರ, ನದಿ-ಝರಿ, ಕಾಡು-ಮೇಡು, ಪ್ರಾಣಿ, ಕೀಟ, ಕ್ರಿಮಿಗಳಂತಹ ವಸ್ತುಗಳು, ಮನುಷ್ಯರ ನಡುವಿನ ಪರಸ್ಪರ ಪ್ರೀತಿ, ಪ್ರೇಮ, ಸಹನೆ, ಭಕ್ತಿಯಂತ ಮದುರ ಭಾವಗಳು, ಸಕ್ರಿಯತೆಗೆ ಇಂಬು ನೀಡುವ  ದ್ವೇಷ, ಅಸೂಯೆ, ಕೋಪ, ಮುಂತಾದ ನಕಾರಾತ್ಮಕ ಭಾವಗಳೂ ಸಹಃ ಜಗತ್ತಿನ ಆನಂದವನ್ನು ಹೆಚ್ಚಿಸಲು ಇಂಬು ನೀಡುತ್ತವೆ.    

ಈ ಜಗತ್ತಿನ ಸೃಷ್ಟಿಯ ಹಿಂದಿರುವ ಆ ಪರಮ ಚೇತನವೂ ಸುಂದರ, ಸುಂದರತೆಯಿಂದ ಸೃಷ್ಟಿಸಲ್ಪಟ್ಟ ಸಕಲವೂ ಸುಂದರ. ನೋಡುವ ಮನಸ್ಸು ಇರಬೇಕು, ಅನುಭವಿಸಲು ಹೃದಯಬೇಕು. ಪಡೆದ ಆನಂದವನ್ನು ಪರರಿಗೆ ಹಂಚುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಹಾಗಾದರೆ ನಾವು ಸೌಂದರ್ಯೋಪಾಸನೆಯನ್ನು ಯತೇಚ್ಚವಾಗಿ ಮಾಡಬಹುದು. ನಾವೂ ಸಹ ಜಗತ್ತಿನ ಈ ಎಲ್ಲಾ ಸುಂದರತೆಯಲ್ಲೂ ನಮ್ಮ ಪಾತ್ರವನ್ನು ಸಮರ್ಪಕವಾಗಿ ವಹಿಸುತ್ತಾ, ನಾವೂ ಸಂತೋಷಪಡುತ್ತಾ ಅನ್ಯರಿಗೆ ನಾವು ಪಟ್ಟ ಸಂತೋಷವನ್ನು ಹಂಚುತ್ತಾ ಬದುಕಿದರೆ ಜೀವನ ಸುಂದರವಾಗಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಒಟ್ಟಿನಲ್ಲಿ ಸೌಂದರ್ಯವನ್ನು ಕಾಣುವ, ಆಸ್ವಾಧಿಸುವ, ಆನಂದಿಸುವ ಮತ್ತು ಅದನ್ನು ಅನ್ಯರೊಡನೆ ಹಂಚಿಕೊಳ್ಳುವ ಬುದ್ಧಿ ನಮ್ಮದಾದರೆ ನಾವೇ ಧನ್ಯರೆಂದುಕೊಳ್ಳಬೇಕು.

Thursday, 4 January 2018

'ಋಣ'



'ಋಣ' ಎಂದರೆ ಹಿಂದೆ ಪಡೆದದ್ದು ಮತ್ತು ಹಿಂತಿರುಗಿಸಲೇ ಬೇಕಾದ್ದು ಎಂದು ಅರ್ಥ.  ಹಿಂದೆ ಯಾರಿಂದಲೋ ಏನನ್ನೋ ಪಡೆದಿದ್ದ ಕಾರಣ ಅದನ್ನು ಹಿಂತಿರುಗಿಸಲೇ ಬೇಕಾಗಿರುವುದರಿಂದ ಅದರ ಪ್ರಯತ್ನದಲ್ಲಿ ನಮ್ಮ ಕೆಲವು ಕೆಲಸಗಳು ಮತ್ತು ಕಾರಣವರಿಯದೆ ಯಾರದೋ ಅವಶ್ಯಕತೆಗಳನ್ನು ತೀರಿಸಲು 'ಪರಹಿತ'  ದ ಕೆಲಸಗಳನ್ನು ನಾವು ಮಾಡುತ್ತೇವೆ, ಅಲ್ಲವೇ? ನಮಗೆ ಇದರ ಹಿಂದಿನ ಕಾರಣಗಳು ಮತ್ತು ಘಟನೆಗಳ ಅರಿವಾಗುವುದೇ ಇಲ್ಲ. ಯಾವುದರಿಂದ ಯಾವುದು? ಏಕೆ ಹೀಗೆ, ಅಥವಾ ಹೀಗೇ ಏಕೆ ಎಂದು ಪ್ರಯತ್ನಪಟ್ಟರೂ ನಮಗೆ ಅರ್ಥವಾಗುವುದೇ ಇಲ್ಲ. ಹಾಗೆ ಅರ್ಥವಾಗದಿದ್ದರೂ ಮಾಡಲೇಬೇಕಾದ ಕೆಲಸವನ್ನು ಮಾಡಿ  'ಯಾವ ಜನ್ಮದ ಋಣವೋ'  ಎಂದು ಮನಸ್ಸಮಾಧಾನ ಪಟ್ಟುಕೊಳ್ಳುತ್ತೇವೆ ಅಲ್ಲವೇ? 

ಯಾವ ಋಣ ತೀರಿಸಲೋ ಅಥವಾ ಯಾರ ಹಿತಕ್ಕಾಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೋ ಅಥವಾ ನಮಗರಿಯದ ಶಕ್ತಿಯ ಯಾವ ಯೋಜನೆಗನುಸಾರವಾಗಿಯೋ ನಾವು ಸುಖವನ್ನೋ ಅಥವಾ ನೋವನ್ನೋ ಅನುಭವಿಸುವುದು ದೈವೇಚ್ಛೆ ಆಗಿದ್ದರೆ ಆ ದೈವವನ್ನು ಕುರುಡು ಎನ್ನಲಾಗುವುದೇ?  ಹಾಗೆ ಹೇಳಲಾಗದು,  ಏಕೆಂದರೆ ನಾವು ಅನುಭವಿಸುವುದು ಕೇವಲ ದೈವ ಕೃಪೆಯನ್ನಲ್ಲ,  ಅದರೊಳಗೆ ನಮ್ಮ ಪಾಲೂ ಇರುತ್ತದೆ. ಅದು ನಮ್ಮಿಂದ ಹಿಂದೆ ನಡೆದ ಕರ್ಮದ ಫಲಸ್ವರೂಪದಲ್ಲಿ ಇಂದು ನಮಗೆ ಸಂದಿದೆ ಎಂದರೆ ಸೂಕ್ತವಾಗುತ್ತದೆ.    

ಯಾರದೋ ಮನೆಯಲ್ಲಿ ಇಂದು   ನಮಗೆ ಊಟ,  ಆದರೆ ಮುಂದೆಂದೋ ಬೇರೆ ಯಾರಿಗೋ ನಮ್ಮ ಮನೆಯಲ್ಲಿ ಉಪಚಾರ. ಯಾರೋ ನಮಗೆ ಸೂಕ್ತ ಸಮಯದಲ್ಲಿ ಸಹಾಯ ಮಾಡುತ್ತಾರೆ,  ಮತ್ಯಾರೋ ನಮ್ಮಿಂದ ಸಹಾಯವನ್ನು ಪಡೆಯುತ್ತಾರೆ. ಒಂದು ಘಟನೆಗೂ ಮತ್ತೊಂದಕ್ಕೂ, ಒಬ್ಬ ವ್ಯಕ್ತಿ ಮತ್ತು ಮತ್ತೊಂದು ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಸಂಪರ್ಕವೇರ್ಪಟ್ಟಾಗ ಕಾಕತಾಳೀಯವಾಗಿ ಕಂಡರೂ ಅದು ಒಂದು ಪೂರ್ವ ನಿರ್ಧಾರಿತ ವಿನ್ಯಾಸದಂತೆಯೇ ನಡೆಯುತ್ತದೆ.  ಅದು ದೈವೀ ವಿನ್ಯಾಸ,  ನಮಗೆ ಅರ್ಥವಾಗದ ವಿನ್ಯಾಸ. ಈ ದೈವೀ ವಿನ್ಯಾಸ ಮತ್ತು ನಮ್ಮ ಮಾನುಷೀ ಭಾವದ ಅಪೇಕ್ಷೆಗಳು ಸಮಾನಾಂತರವಾಗಿ ಪಕ್ಕಪಕ್ಕದಲ್ಲೇ ಚಲಿಸುತ್ತಿದ್ದರೂ, ನಮಗೆ ಆ ದೈವೀ ವಿನ್ಯಾಸ ಅರ್ಥವಾಗುವುದೇ ಇಲ್ಲ. ನಾವು ಕೇವಲ ನಮ್ಮ ಭಾವನೆಗಳಿಗನುಸಾರವಾಗಿ ಆಗುಹೋಗುಗಳ ಲೆಕ್ಕಾಚಾರಗಳನ್ನು ಹಾಕಿ, ನಮ್ಮದೇ ರೀತಿಯಲ್ಲಿ ನಿರ್ಧಾರಕ್ಕೆ ಬರುತ್ತೇವೆ. ಆದರೆ ಅದು ಸತ್ಯಕ್ಕೆ ದೂರವಾಗಿರುತ್ತದೆ ಎಂಬುವುದನ್ನು ಅರಿಯಲು ಸೋಲುತ್ತೇವೆ.  ಹಾಗೆ ಸೋತ ನಾವು ನಮ್ಮ ಸ್ಥಿತಿಗೆ ಅನ್ಯರನ್ನು ಕಾರಣವಾಗಿಸಿ ದೂರುತ್ತೇವೆ, ಜಗಳ ಮಾಡುತ್ತೇವೆ, ದ್ವೇಷಿಸುತ್ತೇವೆ, ಕುಪಿತಗೊಳ್ಳುತ್ತೇವೆ, ನಮ್ಮ ಹಣೆಬರಹವನ್ನು ದೂರುತ್ತೇವೆ,  ಕಡೆಗೆ ದೈವವನ್ನೂ ನಿಂದಿಸುತ್ತೇವೆ. ಇದು ಪ್ರಾಕೃತ ಮತ್ತು ಅಜ್ಞಾನದ ಭಾವ. 

ನಮ್ಮ ಪೂರ್ವ ಕರ್ಮಗಳಿಗನುಸಾರವಾಗಿಯೇ ದೈವೀ ವಿನ್ಯಾಸವೂ ರೂಪುಗೊಂಡಿರುತ್ತದೆ. ಆ ವಿನ್ಯಾಸದಲ್ಲಿ ನಮ್ಮ ಪಾತ್ರವು ಅಧಿಕವಾಗಿರುತ್ತದೆ ಮತ್ತು ಅನ್ಯರ ಕರ್ಮಾನುಸಾರವಾಗಿಯೂ ನಮ್ಮ ಬದುಕಿನ ವಿನ್ಯಾಸ ರೂಪುಗೊಂಡಿರಬಹುದು. ಇದು ನಮಗೆ ಅರ್ಥವಾಗುವುದಿಲ್ಲ. ನಮಗೆ ಯಾವುದು ಅರ್ಥವಾಗುವುದಿಲ್ಲವೋ ಅದನ್ನು 'ದೈವಕೃಪೆ'ಎಂದು ನಾವು ಒಪ್ಪಿಕೊಳ್ಳಲೇಬೇಕು. ಅನ್ಯಥಾ ದಾರಿಯಿಲ್ಲ. ಹಾಗಾಗಿ ಆಯಾಯಾ ಸಮಯಕ್ಕೆ ನಮ್ಮೆದುರಿನ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು, ಅನಪೇಕ್ಷಿಯಾಗಿರುವುದು ಉತ್ತಮ.  ಕಾರಣಗಳ ಹುಡುಕಿ, ಅನ್ಯರನ್ನು ದೂಷಿಸಿ,  ಬದುಕನ್ನು ಕೆದಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಬಂದ ಕರ್ಮವನ್ನು ಧರ್ಮದಂತೆ ಮಾಡುವುದು, ಆ ಕರ್ಮದಿಂದ ಬಂದ ಫಲವನ್ನು ಸಂತೋಷದಿಂದ ಅನುಭವಿಸುವುದು ಮತ್ತು ನಮ್ಮ ಕರ್ಮ ಮತ್ತು ಕರ್ಮಫಲವನ್ನು ಆ ದೈವಕ್ಕೆ ಅರ್ಪಿಸಿಬಿಟ್ಟು ಬದುಕಿದರೆ ಸುಖ ಮತ್ತು ನೆಮ್ಮದಿ ಎರಡೂ ಇರುತ್ತದೆ. ಬದುಕು ನಿರಾಳವಾಗಬೇಕಾದರೆ ಹಾಗೆ ಬದುಕುವುದೇ ಉತ್ತಮ. ಆಯ್ಕೆ ನಮ್ಮದೇ ಅಲ್ಲವೇ?   


ರವಿ ತಿರುಮಲೈ

ಉದರ ದೈವದ ಪೂಜೆ


ಹೊಟ್ಟೆಯೊಳಗಿನ ದೈವದ ಪೂಜೆ ಮೊದಲು ಆದಮೇಲೆ ಮಿಕ್ಕೆಲ್ಲ ದೇವರುಗಳ ಪೂಜೆಯಾಗುತ್ತದೆ. ಏಕೆಂದರೆ ಆ ಹೊಟ್ಟೆಯೊಳಗಿನ ದೈವಕ್ಕಿಂತ ಮಿಗಿಲಾದ ದೈವವು ಯಾವುದೂ ಇಲ್ಲ. ಅದಕ್ಕೆ ಕೊಡಬೇಕಾದ್ದನ್ನು ಕೊಟ್ಟರೆ ಅದು ಶಾಂತವಾಗಿರುತ್ತದೆ, ಇಲ್ಲದಿದ್ದರೆ ಕೋಪಗೊಳ್ಳುತ್ತದೆ. ಹಾಗಾಗಿ ನಾವು ಆಹಾರ ಸೇವನೆಯನ್ನು ಮಾಡಬೇಕು. ಇದೂ ಸಹ ಒಂದು ಪೂಜೆಯೆಂತೆಯೇ. ನಾವು ಒಂದು ಹೋಮ ಅಥವಾ ಹವನ ಮಾಡುವಾಗ ಒಂದು ಹೋಮಕುಂಡವನ್ನು ಶಾಸ್ತ್ರೋಕ್ತವಾಗಿ ರಚಿಸಿ, ಎಲ್ಲಾ ಪರಿಕರಗಳನ್ನೂ ಸಮರ್ಪಕವಾಗಿಟ್ಟುಕೊಂಡು,  ಆ ಹೋಮ ಕುಂಡದಲ್ಲಿ ' ಅಗ್ನಿ' ಯನ್ನು ಪ್ರತಿಷ್ಠಾಪಿಸಿ ಆ ಅಗ್ನಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡುತ್ತೇವೆ. ಆ ಅಗ್ನಿಗೆ 'ಹವ್ಯವಾಹಕ' ಎಂದು ಹೆಸರು. ನಾವಿತ್ತ ಈ ಹವಿಸ್ಸನ್ನು ಅಗ್ನಿಯು ನಾವು ಉದ್ದೇಶಿಸಿದ ದೇವತೆಗಳಿಗೆ ತಲುಪಿಸುತ್ತದೆ ಮತ್ತು ಆ ದೇವತೆಗಳು ಸುಪ್ರೀತರಾಗಿ ನಮ್ಮ ಮನೋಭೀಷ್ಟೆಯನ್ನು ನೆರವೇರಿಸುತ್ತಾರೆ ಎನ್ನುವುದು ಸನಾತನದ ನಂಬಿಕೆ.  

ಶ್ರೀ ಕೃಷ್ಣ,  ಭಗವದ್ಗೀತೆಯಲ್ಲಿ ‘ ನಾನು ಜೀವಿಗಳ ಉದರದಲ್ಲಿ ವೈಶ್ವಾನರ ರೂಪದಲ್ಲಿ ಇದ್ದೇನೆ’ ಎಂದು ಹೇಳುತ್ತಾನೆ. ನಮ್ಮ ಜಠರದಲ್ಲಿರುವುದು ಜಠರಾಗ್ನಿ. ಹವಿಸ್ಸಿನ ರೂಪದಲ್ಲಿ ನಾವು ಆಹಾರವನ್ನು ಅದಕ್ಕೆ ಸಮರ್ಪಿಸಿದಾಗ ಆ ಅಗ್ನಿ ಅದನ್ನು ಪಚನಗೊಳಿಸಿ ಎಲ್ಲ ರೀತಿಯ ಶಕ್ತಿಯನ್ನೂ ಉತ್ಪಾದಿಸಿ  ‘ಸಮಾನ ವಾಯು’ ವಿನ ಮೂಲಕ ನಮ್ಮ ದೇಹದ ಎಲ್ಲ ಭಾಗಗಳಿಗೂ ಸಮರ್ಪಕವಾಗಿ ವಿತರಿಸುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದ್ದರೆ ನಮ್ಮ ದೇಹ ಸುಸ್ಥಿತಿಯಲ್ಲಿರುತ್ತದೆ. ಹಾಗಾಗಿ   ನಮ್ಮ ಉದರದಲ್ಲಿರುವ ಆ ‘ವೈಶ್ವಾನರ ’ನೆಂಬ ದೇವರಿಗೆ ಮೊದಲ ಪೂಜೆಯಾಗಬೇಕು. ಹಾಗಾದಾಗ ದೇಹ ಧೃಢವಾಗಿ ಮಿಕ್ಕೆಲ್ಲ ದೇವತೆಗಳ ಪೂಜೆಗೆ ಪೂರಕವಾಗಿರುತ್ತದೆ. ಹಾಗೆ ಕೊಟ್ಟ ಆಹಾರದಿಂದ ‘ವೈಶ್ವಾನರ ತೃಪ್ತನಾದರೆ’ ಆನಂದ, ಇಲ್ಲದಿದ್ದರೆ ಅವನು ಆಗ್ರಹಿಸಿ ದೇಹ ಸೊರಗಿ ಶಕ್ತಿಯಿಲ್ಲದೆ ಯಾವ ದೇವರ ಪೂಜೆಯೂ ಕೈಲಾಗುವುದಿಲ್ಲ. ಹಾಗಾಗಿ ಉದರ ದೈವದ ಪೂಜೆ ಮೊದಲಾಗಬೇಕು.

ಹೆಚ್ಚು ತಿಂದರೆ ಅನಾರೋಗ್ಯ, ಕಡಿಮೆ ತಿಂದರೂ ಅನಾರೊಗ್ಯ. ಎಷ್ಟು ತಿನ್ನಬೇಕು ಎಂದು ನಿರ್ಧರಿಸುವುದು ಕಷ್ಟ. ಏನನ್ನೋ ತಿಂದರೆ ಅನಾರೋಗ್ಯ ಮತ್ತ್ಯಾವುದನ್ನೋ ತಿಂದರೆ ಆರೋಗ್ಯ. ಆದರೆ ಏನು ತಿನ್ನಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಮಿಶ್ರಣ(combination) ಪರಿಮಾಣ(ratio) ಮತ್ತು ಪ್ರಮಾಣ(quantity) ನಿರ್ಧರಿಸುವುದೇ ಬಹಳ ಕಷ್ಟ. ನಮ್ಮ ಆಹಾರದ "ಹದವರಿಯುವುದು" ಒಂದು ಸಾಹಸವೇ ಸರಿ.  ಆದರೆ ನಾಲಿಗೆ ಒಂದಿದೆಯಲ್ಲ!! ಅದನ್ನೂ ತೃಪ್ತಿ ಪಡಿಸುತ್ತಾ ಆ ಹದವನ್ನೂ ಅರಿತರೆ ‘ಉದರ ದೈವ’ ದ ಪೂಜೆಯೂ ಸರಿಯಾಗುತ್ತದೆ. ದೇಹವೂ ಆರೋಗ್ಯದಿಂದಿರುತ್ತದೆ. 

ಅದಲ್ಲದೆ ನಾಲಿಗೆಯ ಚಪಲಕ್ಕೆ ಬಲಿಯಾಗಿ ಏನೇನನ್ನೋ ತಿನ್ನುತ್ತಾ ಹೋದರೆ ಅದರ ಪರಿಣಾಮವನ್ನು ಬೇರೆಯಾಗಿ ವಿವರಿಸಬೇಕೇ? ಇಂದು ನಾವು ನೋಡುತ್ತಿರುವುದೇನೆಂದರೆ ಬಹಳಷ್ಟು ಜನ ವೈದ್ಯಕೀಯ ಶುಶ್ರೂಷೆಗೆ ಬರುವುದೇ ಈ ಆಹಾರದ ವ್ಯತ್ಯಯದಿಂದಾಗಿ. ಈ ಆಹಾರದ ವಿನ್ಯಾಸಕ್ಕಾಗಿಯೇ ವಿಜ್ಞಾನದ ಹಲವಾರು ವಿಭಾಗಗಳು ಹೊಸದಾಗಿ ಹುಟ್ಟಿಕೊಂಡಿವೆ. ಆದರೆ ನಮ್ಮ ಪುರಾತನರ ಆಹಾರ ಕ್ರಮವೇ ' ಔಷಧಿ ' ರೂಪದಲ್ಲಿದೆ ಎಂದು ಅರಿಯದಾಗಿದ್ದಾರೆ. ದೇಶ ಕಾಲಕ್ಕನುಗುಣವಾಗಿ ವಿನ್ಯಾಸಗೊಂಡಿರುವ ನಮ್ಮ ಪುರಾತನರ ಆಹಾರ ಪದ್ದತಿಯನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಅದೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾಲಿಗೆಯ ಚಪಲತೆಯನ್ನು ಬಿಟ್ಟು,  ಊಟವನ್ನು ಒಂದು ವಿಧಿವತ್ತಾದ ಪೂಜೆಯಂತೆ ಮಾಡಿದರೆ ಪುಣ್ಯಕ್ಕೂ ಆಗುತ್ತದೆ ಮತ್ತು ಪುರುಷಾರ್ಥಕ್ಕೂ ಆಗುತ್ತದೆ.  ಆಹಾರವನ್ನು ಅರಿತು ಸೇವಿಸಿದರೆ ಆರೋಗ್ಯ ಚಪಲಕ್ಕೆ ಸೇವಿಸಿದರೆ ಅನಾರೋಗ್ಯ. ಸರಿಯಾದ ಆಹಾರವನ್ನು ಸೂಕ್ತ ಸಮಯದಲ್ಲಿ ಸೇವಿಸಿದರೆ ಅದೇ ನಮ್ಮ ' ಉದರ ದೈವದ ' ಪೂಜೆಯಾಗುತ್ತದೆ.  ಅಲ್ಲವೇ?  

ರವಿ ತಿರುಮಲೈ



Tuesday, 2 January 2018

ಸುಖದಾಸೆಯ ಭ್ರಮೆ



ಈ ಜಗತ್ತಿನಲ್ಲಿ ಹುಟ್ಟಿದ ಪ್ರತೀ ಪ್ರಾಣಿಯೂ ಸುಖವಾಗಿರಬೇಂದುಕೊಳ್ಳುವುದು ಬಹಳ ಸಹಜ. ಆದರೆ ಆ ಸುಖ ಏನು, ಯಾವ ರೀತಿಯ ಬದುಕನ್ನು ಸುಖವಾದ ಬದುಕು ಎನ್ನಬೇಕು ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಹುಚ್ಚು
ಹಿಡಿದವರಂತೆ ಭ್ರಮಾಧೀನರಾಗಿ ಸುಖದ ಬೆನ್ನ ಹತ್ತಿ ಅಂತ್ಯದಲ್ಲಿ ನಿರಾಶರಾಗುವವರೇ ನಾವೆಲ್ಲಾ.  ಒಂದು ವಿಶಾಲವಾದ ಹುಲ್ಲ ಬಯಲಲ್ಲಿ,ಒಂದು ಆಕಳ ಕರು ಚಂಗು ಚಂಗೆಂದು ನೆಗೆಯುತ್ತಾ 'ಒಳ್ಳೆಯ ಹುಲ್ಲು ಇಲ್ಲಿದೆ,  ಆಲ್ಲಿ ಚೆನ್ನಾಗಿದೆ ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು" ಎಂದು ಯೋಚಿಸಿ, ಎಲ್ಲ ಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿ ಓಡಿ ದಣಿವಂತೆ ಇದೆ ನಮ್ಮ ಪರಿಸ್ತಿತಿ.

ಮನುಷ್ಯನೂ ಸೇರಿದಂತೆ ಪ್ರತೀ ಪ್ರಾಣಿಯೂ ಸುಖವನ್ನೇ ಬಯಸುತ್ತದೆ. ಆದರೆ ಆ 'ಸುಖ' ಎಂದರೆ ಏನು? ಅದು ಎಲ್ಲಿ ಸಿಗುತ್ತದೆ ಮತ್ತು ಹೇಗೆ ಸಿಗುತ್ತದೆ ಎನ್ನುವುದು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ನಾವು ಅ ಸುಖವನ್ನು ಎಲ್ಲಂದರಲ್ಲಿ ಹುಡುಕುತ್ತೇವೆ. ನಾವು ಯಾವುದೋ ಒಂದು ವಸ್ತುವಿನಿಂದ ಸುಖ ಸಿಗುತ್ತದೆ ಎಂದು ಅಂದುಕೊಳ್ಳುತ್ತೇವೆ ಮತ್ತು ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ. ಅದು ಸಿಕ್ಕರೆ  ತತ್ಕಾಲದಲ್ಲಿ ಸುಖವನ್ನು ಅನುಭವಿಸಿದ ನಂತರ 'ಅಯ್ಯೋ ಇಷ್ಟೇನೇ' ಎನ್ನುವ ಭ್ರಮನಿರಸನಕ್ಕೊಳಗಾಗುತ್ತೇವೆ. ಅಲ್ಲಿಂದ ನಮ್ಮ ಹುಡುಕಾಟ ಮತ್ತೆ ಶುರುವಾಗುತ್ತದೆ. ಈ ಸುಖದ ಭ್ರಮೆಗೆ ಕೊನೆಯೇ ಇಲ್ಲ ಅಲ್ಲವೇ? ಈ ಭ್ರಮೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಪ್ರಮಾಣ ಭೇದವಿದ್ದರೂ 'ಭ್ರಮೆ'ಯಂತೂ ಎಲ್ಲರಲ್ಲೂ ಇದ್ದೇ  ಇರುತ್ತದೆ.  

ಇಂದ್ರಿಯ ಪ್ರೇರಿತವಾದ ಈ ದೇಹಕ್ಕೆ ನಾವು ಅಂಟಿಕೊಂಡಿರುವವರೆಗೆ ನಾವು ಈ ಸುಖದ ಭ್ರಮೆಯಲ್ಲೇ ಜೀವಿಸುತ್ತೇವೆ. ಮನಸ್ಸು ಬುದ್ಧಿ ದೇಹ ಮತ್ತು ಆತ್ಮಗಳ ಸಮ್ಮಿಲನದಿಂದಾದ ನಮ್ಮ ಅಸ್ಥಿತ್ವದಲ್ಲಿ 'ನಮ್ಮನ್ನು' ನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯ ತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ 'ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ. 

ಹಾಗಲ್ಲದೆ,  'ನಾನು' ಎಂದರೆ 'ಆತ್ಮ' ಎಂದು, ಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆ, ಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ್ಲ. ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆ' ಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ.  
  
ನಾವು ಎಲ್ಲಿಯತನಕ ನಮ್ಮ ಮನಸ್ಸು ಬುದ್ಧಿ ದೇಹಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ ಅಲ್ಲಿಯತನಕ ಈ ಭ್ರಮೆ ನಮ್ಮನ್ನು ಬಿಡುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೀತಿಯ ಸುಖಕ್ಕಾಗಿ ' ಹುಲ್ಲ ಮೇಯಲು ಹೊರಟ  ಕರುವಿನಂತೆ'  ನಾವೂ ಸಹ ಪರದಾಡುತ್ತಿರುತ್ತೇವೆ.

ಹಾಗಲ್ಲದೆ,  'ನಾನು' ಎಂದರೆ 'ಆತ್ಮ' ಎಂದು,  ಎಂದು ಸಂಪೂರ್ಣ ಅರಿವಾಗುತ್ತದೋ ಅಂದು ನಮ್ಮ ಈ ಸುಖದ ಭ್ರಮೆಯ ಓಟ ನಿಲ್ಲಬಹುದು. ಅದಕ್ಕೆ ನಮಗೆ ನಿಜವಾದ  ಸುಖವೆಂದರೇನು ಎಂದು ಅರಿವಾಗಬೇಕು. ಆ ಅರಿವು ಮೂಡಿದೊಡನೆಯೇ ನಮ್ಮ ಓಟ ನಿಲ್ಲುತ್ತದೆ ಮತ್ತು ಇಂದ್ರಿಯಾತೀತವಾದ ಆನಂದದ ಅನುಭವವಾಗುತ್ತದೆ. ಸತ್ಯವಾದ ಮತ್ತು ನಿತ್ಯವಾದ ಸುಖ ಬೇಕಾದವರು ಅಂತಹ ಪ್ರಯತ್ನವನ್ನು ಮಾಡಬೇಕು. 'ಇಲ್ಲ ಈ ಜಗತ್ತನ್ನು ಬಿಟ್ಟರೆ, ಬೇರೆ ಏನಿದೆ ಎಂದು ನನಗೆ ಗೊತ್ತಿಲ್ಲ.  ಇಲ್ಲಿರುವಾಗ ಈ ಸುಖವನ್ನು ಅನುಭವಿಸಿಬಿಡುತ್ತೇನೆ' ಎಂದು ಹೇಳುವವರಿಗೆ 'ಸುಖದ ಭ್ರಮೆಯ ಓಟ ' ನಿಲ್ಲುವುದೇ ಇಲ್ಲ. ಆಯ್ಕೆಯ ಸಂಪೂರ್ಣ ಸ್ವಾತಂತ್ರ ನಮಗಿದೆ ಅಲ್ಲವೇ?