Monday, 13 November 2017

ಅನುಭವ ತೈಲ



ಒಮ್ಮೆ ಸಂಸಾರವೆಂಬ ಈ ಬದುಕಿನಲ್ಲಿ ಕತ್ತೆತ್ತಿ ಸುತ್ತಲೂ ನೋಡಿದರೆ ನಮಗೆ ಒಂದು ವಿಷಯದ ಅರಿವಾಗುತ್ತದೆ. ಈ ಜಗತ್ತಿನ ಪ್ರತಿಯೊಬ್ಬರಿಗೂ ಕಷ್ಟ ಸುಖಗಳ ಸಮ್ಮಿಶ್ರ ಜೀವನ ಸಿಗುತ್ತದೆ. ಕೆಲವರಿಗೆ ಕೆಲಕಾಲ ಕಷ್ಟ ಮತ್ತೆ ನಿರಾಳ. ಕೆಲವರಿಗೆ ಕಷ್ಟವೇ ಇಲ್ಲದ ಸುನಾಯಾಸದ ಬದುಕು. ಕೆಲವರಿಗೆ ತೀರಾ ಏರಿಳಿತಗಳ ಬದುಕು. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ. ಸುಖದಲ್ಲಿರುವವರು ಎಂದಿಗೂ 'ನಮಗೇಕೆ ಸುಖ ಬಂದಿದೆ'  ಎಂದು ಕೇಳುವುದೇ ಇಲ್ಲ.  ಆದರೆ ಕಷ್ಟದಲ್ಲಿರುವವರಿಗೆ ಮತ್ತು ತಮ್ಮ ಕಷ್ಟವನ್ನು ಅನ್ಯರ ಸುಖದೊಂದಿಗೆ ತುಲನೆಮಾಡಿಕೊಳ್ಳುವವರಿಗೆ ಸಾಮಾನ್ಯವಾಗಿ 'ನಮಗೇಕೆ  ಇಂತಹ ಕಷ್ಟಗಳ ಸರಮಾಲೆ? ' ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. 

ನಮ್ಮ ಬದುಕಿನಲ್ಲಿ ನಮಗೆ ಸಾಲು ಸಾಲು ಕಷ್ಟ ಅಥವಾ ಸುಖಗಳ ಅನುಭವಗಳು ಏಕಾಗುತ್ತವೆ ಎಂದು ನಾವು ನಮ್ಮ ಅಂತರಂಗದಲ್ಲಿ ಆಲೋಚಿಸಿದರೆ ನಮಗೆ ಅದರ ಕಾರಣ ಸುಲಭದಲ್ಲಿ ಅರ್ಥವಾಗುವುದಿಲ್ಲ, ಅಲ್ಲವೇ? ಏಕೆಂದರೆ ನಮಗೆ ಈ ಬದುಕನ್ನು ಕೊಟ್ಟ ದಾತನು, ಎಂದರೆ ಆ ಪರಮ ಪುರುಷ ನಮ್ಮನ್ನು ಜೀವನವೆಂಬ ಗಾಣದಲ್ಲಿ ಎಳ್ಳಿನ ಕಾಳುಗಳಂತೆ ಅರೆಯುತ್ತಾನೆ. ಯಾರಿಗೂ ಈ ಅರೆತದಿಂದ ವಿನಾಯತಿ ಇಲ್ಲ. ನಿಧಾನವಾಗಿ ಎಲ್ಲರನ್ನೂ ನೆನಪಿನಲ್ಲಿರಿಸಿಕೊಂಡು, ಯಾರನ್ನೂ ಉಪೇಕ್ಷಿಸದೆ, ಅವರ ಅವರ ಕರ್ಮಾನುಸಾರ ಎಂತೆಂತಹ ಪೆಟ್ಟುಗಳನ್ನು ಕೊಡಬೇಕೋ ಅವುಗಳನ್ನೆಲ್ಲ ನಿಶ್ಚಯವಾಗಿ ಕೊಟ್ಟೇ ಕೊಡುತ್ತಾನೆ. ಇದು ಅವನಾಡಿಸುವ ಜಗನ್ನಾಟಕದ ವಿಧಾನ.  

ಈ ಜಗತ್ತನ್ನು ಒಂದು ಸಮರ್ಪಕವಾದ ವಿಧಾನ( system)ನಲ್ಲಿ ಇರಿಸಿದ್ದಾನೆ ಆ ಪರಮಾತ್ಮ ಮತ್ತು ಈ ಜಗತ್ತಿನ ಸಕಲ ಚರಾಚರಗಳೂ ಅ ವ್ಯವಸ್ಥೆ ಅಥವಾ ಪದ್ದತಿಗೆ ಅನುಸಾರವಾಗಿಯೇ ನಡೆದುಕೊಳ್ಳಬೇಕು. ಅನ್ಯ ದಾರಿಯೇ ಇಲ್ಲ. ಆದರೆ ಮನುಷ್ಯನಿಗೆ ಮಾತ್ರ ಸ್ವಲ್ಪ ವಿವೇಕವನ್ನೂ ಮತ್ತು ಅದನ್ನು ವೃದ್ಧಿಸಿಕೊಳ್ಳುವ ಕ್ಷಮತೆಯನ್ನೂ ನೀಡಿದ್ದಾನೆ ವಿಧಾತ. ಆದರೂ ನಾವೆಲ್ಲಾ ಗಾಣದೊಳಗಿನ ಎಳ್ಳಿನ ಕಾಳಿನಂತೆ  ಪ್ರತಿ ನಿತ್ಯ ಅರೆಯಲ್ಪಪಡುತ್ತೇವೆ. ಈ ಅರೆತವೇ ಜೀವನಾನುಭವ. ಅಂತಹ ಅರೆತದಿಂದ ನಮಗೆ ಉಂಟಾಗುವ ಅರಿವೇ ಆ ಪರಮಾತ್ಮ ತನ್ನ 'ಗಾಣ' ದಲ್ಲಿ ತೆಗೆಯುವ ಎಣ್ಣೆ. ವ್ಯತ್ಯಾಸವೇನೆಂದರೆ ಗಾಣಿಗ ತೆಗೆಯುವ ಎಣ್ಣೆ ಪರರ ಉಪಯೋಗಕ್ಕೆ ಬರುತ್ತದೆ, ಆದರೆ ನಮ್ಮ ಪರಮಾತ್ಮನೆಂಬ ಗಾಣಿಗ ತೆಗೆಯುವ ಎಣ್ಣೆ, ಎಂದರೆ ಜೀವನಾನುಭವ,  ಜೀವಿಗಳ  ಅನುಕೂಲಕ್ಕೆ ಬಂದು ಆತ್ಮೋದ್ಧಾರಕ್ಕೆ ಅನುವು ಮಾಡಿಕೊಡುತ್ತದೆ.

ಪರಮಾತ್ಮ ಒಳ್ಳೆಯ ಲೆಕ್ಕಾಚಾರದವನು ಹಾಗಾಗಿ ಡಿ.ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಪರಮಾತ್ಮನನ್ನು ಒಳ್ಳೆ ಲೆಕ್ಕಿಗ ಪರಮೇಷ್ಠಿ ಎನ್ನುತ್ತಾರೆ.  ಏಕೆಂದರೆ  ಆ ಪರಮಾತ್ಮ ಎಲ್ಲರ ಲೆಕ್ಕವನ್ನೂ ಸಮರ್ಪಕವಾಗಿಟ್ಟಿರುತ್ತಾನೆ. ಯಾರನ್ನೂ ಮರೆಯುವ ಪ್ರಮೇಯವೇ ಬರುವುದಿಲ್ಲ. ಅವನ ಕೈಯಲ್ಲಿರುವ ಲೇಖನಿಯೇ ವಿಧಿ. ಆ ವಿಧಿಯೆಂಬ ಲೇಖನಿಯಲ್ಲಿ ಶಾಯಿಯ ರೂಪದಲ್ಲಿ ಅವನು ತುಂಬುವುದೇ, ನಮ್ಮನ್ನು ಬದುಕೆಂಬ ಗಾಣದಲ್ಲಿ ಅರೆದು ತೆಗೆದ "ಅರಿವೆಂಬ" ಎಣ್ಣೆಯನ್ನು. ಈ ಎಣ್ಣೆ ಎಷ್ಟು ಸುಧಾರಿತವಾಗಿದ್ದರೆ, ನಮ್ಮ ಮುಂದಿನ ಬದುಕಿನ ಬರಹವೂ ಸುಂದರವಾಗಿರುತ್ತದೆ. ಹಾಗಾಗಿ ಬದುಕಿನಲ್ಲಿ ಅನುಭವವನ್ನು ಪಡೆದ ನಾವು ಆ ಅನುಭವಗಳಿಂದ ಕಲಿತು, ಅರಿವನ್ನು ಬೆಳೆಸಿಕೊಂಡು, ನಮ್ಮನ್ನು ನಾವು ಆದಷ್ಟು ಸುಧಾರಿಸಿಕೊಂಡರೆ ಮುಂದಿನ ಬದುಕೂ ಸಹ 'ನಿರಾಳ' ವಾಗಿರುತ್ತದೆ. 

ಆದರೆ ನಮ್ಮಲ್ಲಿ ಬಹುತೇಕ ಮಂದಿ, ಅಹಂಕಾರದಿಂದ, ಅಜ್ಞಾನದಿಂದ, ಸಂಸಾರದ ಅಂಟಿನಲ್ಲಿ ಮುಳುಗಿದವರಾಗಿ  ಈ ಬದುಕೆಂಬ ಗಾಣದಲ್ಲಿ ಅರೆಯಲ್ಪಟ್ಟರೂ, ಬದುಕಿನ ಅನುಭವಗಳನ್ನು ಪಡೆದರೂ,  ಆ ಅನುಭವಗಳು ನಮಗೆ ನೀಡುವ ಪಾಠವನ್ನು ಓದಿದರೂ, ಅದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ ಮತ್ತು ಅದರಿಂದ ಕಲಿಯುವುದೇ ಇಲ್ಲ. ಮತ್ತೆ ಮತ್ತೆ ಈ ಬದುಕಿನ ಜಂಜಡಕ್ಕೆ ಸಿಲುಕಿಕೊಂಡು ತೊಳಲಾಡುತ್ತೇವೆ.

ನಾವು ಏನೇ ಆಗಿದ್ದರೂ, ಏನೇ ಮಾಡಿದರೂ ಆ ವಿಧಾತನ ಅಧೀನದಲ್ಲಿರುವುದರಿಂದ ಅವನ ವ್ಯವಸ್ಥೆ ಮತ್ತು ವಿಧಾನಕ್ಕೆ ತಲೆಬಾಗಿ ‘ಕಷ್ಟವೋ ಸುಖವೋ’  ಒಂದು ನಿರ್ಲಿಪ್ತ ಭಾವದಿಂದ ಅನುಭವಿಸಿದರೆ, ಆ 'ನಿರ್ಲಿಪ್ತತೆ'  ನಮಗೆ ಬದುಕಿನ ಅನುಭವಗಳನ್ನು ಅನುಭವಿಸುವಾಗ ನೋವನ್ನುಂಟುಮಾಡುವುದಿಲ್ಲ. ಅಂತಹ ನಿರ್ಲಿಪ್ತತೆಯನ್ನು ಕಾಲಕ್ರಮೇಣ ಬೆಳೆಸಿಕೊಳ್ಳಬಹುದು ಮತ್ತು ಇದು ಜನ್ಮಜನ್ಮಾಂತರದಲ್ಲಿ ಆಗುವ ಬದಲಾವಣೆ. ಅಂತಹ ಸ್ಥಿತಿಯಲ್ಲಿ ನಮಗೆ ಸಿಕ್ಕ ಬದುಕನ್ನು  ನೋವಿಲ್ಲದೆ ಅನುಭವಿಸಬಹುದು. ನಾವು ಯಾವ ರೀತಿಯ ಬದುಕನ್ನು ಆಯ್ದುಕೊಂಡರೆ ನಮ್ಮ ಬದುಕು ಹಾಗೆ ಇರುತ್ತದೆ.  

ಅಂತರಂಗದ ಭಾವ


ಹೊಟ್ಟೆಯು ಹಸಿವಿನಿಂದ ಪರದಾಡುವಂತೆ, ಹೃದಯ ಮತ್ತು ಮನಸ್ಸುಗಳೂ ಸಹ  ಪ್ರೀತಿ, ಪ್ರೇಮ ಮತ್ತು ವಾತ್ಸಲ್ಯಗಳ ಭಾವನೆಯ ಹಸಿವಿನಿಂದ ಪರದಾಡುತ್ತದೆ. ಆಹಾರವು ಕೊರಳ ನಾಳದಿಂದ ಒಳಹೊಕ್ಕಂತೆ, ಭಾವಗಳಿಂದ ಉದ್ರೇಕಗೊಳ್ಳುವ  ಹೃದಯದ ಅಬ್ಬರವೂ ಸಹ ಕೊರಳ ನಾಳದಿಂದಲೇ ನಗು, ಕೋಪ, ಹೊಗಳಿಕೆ, ತೆಗಳಿಕೆ ಮುಂತಾದವುಗಳಾಗಿ ಒಳ ಹೊಕ್ಕು, ಹೊರ ಹೊಮ್ಮುತ್ತದೆ. ಈ ಎಲ್ಲ ರೀತಿಯ ಭಾವಗಳ ಶಮನದಿಂದಲೇ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ ಶಮನ ಹೇಗಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಏಕೆಂದರೆ ಆ ಶಮನದ ಮಾರ್ಗವನ್ನು ಯೋಚಿಸಲೂ ಆಗದಷ್ಟು, ಅನಗತ್ಯ ವಿಷಯಗಳು ನಮ್ಮೊಳಗೆ ತುಂಬಿಕೊಂಡಿವೆ.

ನಮ್ಮ ದೇಹ ಧಾರಣೆಗೆ ಹೇಗೆ ಆಹಾರವು ಅಗತ್ಯವೋ,  ಹಾಗೆಯೇ ಹೃದಯ ಮತ್ತು ಮನಸ್ಸುಗಳಿಗೆ ಭಾವನೆಗಳೆಂಬ ಆಹಾರ ಅತ್ಯಗತ್ಯ. ಅವರವರ ಮನೋಭಾವಕ್ಕೆ ತಕ್ಕಂತೆ ಎಲ್ಲರ ಭಾವನೆಗಳೂ ಇರುತ್ತವೆ. ಆಹಾರದಲ್ಲಿ ಎಷ್ಟು ವೈವಿಧ್ಯತೆ ಇದೆಯೋ ಅದಕ್ಕಿಂತ ಸಾವಿರ-ಲಕ್ಷಪಟ್ಟು ಭಾವ ವೈವಿಧ್ಯತೆ ಉಂಟು. ಹೇಗೆ ಎಷ್ಟೋಬಾರಿ ನಾವು ನಮಗೆ ಜೀರ್ಣವಾಗದ, ಆರೋಗ್ಯಕ್ಕೆ ಹಿತವಲ್ಲದ ಆಹಾರವನ್ನು ಸೇವಿಸಿ ಪರದಾಡುತ್ತೇವಲ್ಲ ಹಾಗೆಯೇ ನಮ್ಮ ಮನಸ್ಸು, ಬುದ್ಧಿಗಳಿಗೆ ಹಿತವಲ್ಲದ ಮತ್ತು ಹಾನಿಯುಂಟುಮಾಡುವ ವಿಚಾರಗಳು ಭಾವನೆಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುತ್ತದೆ, ಬಂದು ಹೋಗುತ್ತದೆ, ತನ್ನ ಪರಿಣಾಮ ಬೀರಿ,  ಸ್ಥಾಯೀಯಾಗಿ ನಮ್ಮ ಮನಸ್ಸಿನಲ್ಲೇ ಉಳಿದು, ಆಗಾಗ ಮೇಲೆದ್ದು ಪ್ರಕಟಗೊಳ್ಳುತ್ತಾ ಇರುತ್ತದೆ. ಇಲ್ಲಿ ನಡೆಯುವುದು ಒಂದು ತಡೆಯಿಲ್ಲದ ಭಾವ ಪ್ರವಾಹ.  ಇದಕ್ಕೆ ಅಣೆಕಟ್ಟ ಕಟ್ಟುವುದು ಅತೀ ಕ್ಲಿಷ್ಟಕರವಾದ ಕೆಲಸ.  

ನಮ್ಮ ನಗು, ಆನಂದ, ಸಂತೋಷ, ಕೋಪ, ದ್ವೇಷ, ದುಗುಡ, ದುಮ್ಮಾನ, ಅಸೂಯೆಗಳಂತಾ ಭಾವಗಳೆಲ್ಲ ನಮ್ಮ ಕೊರಳಿಂದ ನಮ್ಮೊಳಗೇ ಇಳಿದು, ನಮ್ಮ ಕೊರಳೊಳಗಿಂದಲೇ ಹೊರ ಹೊಮ್ಮುತ್ತದೆ. ಹಾಗೆ ಬಂದು ಹೋಗುವ ಭಾವಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಮ್ಮ ಭಾವನೆಗಳು ಹೇಗಿರುತ್ತವೆಯೋ ಹಾಗೆ ನಮ್ಮ ನಡವಳಿಕೆಯಿರುತ್ತದೆ. ಕಾಲಕಾಲಕ್ಕೆ ಬದಲಾಗುವ ನಮ್ಮ ವಿಚಾರಗಳು ಮತ್ತು ತದನುಗುಣವಾಗಿ ಬದಲಾಗುವ ಭಾವನೆಗಳಿಂದ ನಮ್ಮ ವ್ಯಕ್ತಿತ್ವ ಬದಲಾಗುತ್ತಾ ಹೋಗುತ್ತದೆ. ಈ ವಿಚಾರಗಳೆಲ್ಲ ನಮ್ಮನ್ನು ಶಾಂತವಾಗಿರಲು ಬಿಡುವುದಿಲ್ಲ. ಸದಾಕಾಲ ಯಾವುದಾದರೂ ಒಂದು ರೀತಿಯ ದ್ವಂದ್ವಗಳಿಂದ ನಮ್ಮನ್ನು ಪೀಡಿಸುತ್ತಾ ಇರುತ್ತದೆ. 

ಆದರೆ ಇವುಗಳಿಂದ ಪೀಡಿತರಾದ ನಾವು ಒಂದು ವಿಚಾರವನ್ನು ಮಾಡುವುದರಲ್ಲಿ ವಿಫಲರಾಗುತ್ತೇವೆ. ಅದೇನೆಂದರೆ, ಈ ಎಲ್ಲಾ ಭಾವಗಳ ಮಹಾಪೂರ ನಮ್ಮಲ್ಲಿ ಹರಿದು ಬರುವುದಕ್ಕೆ ಯಾರು ಕಾರಣರು? ಎಂದು. ಸೂಕ್ಷ್ಮವಾಗಿ ಅವಲೋಕಿಸಿ ನೋಡಿದರೆ ಹೊರಗಿನ ಅಂಶಗಳಿಗಿಂತ,  ನಾವೇ ಇದಕ್ಕೆ ಕಾರಣರೆಂದು ನಮಗೆ ಅರಿವಾಗುತ್ತದೆ. ನಮ್ಮ ಅಂತರಂಗದ ಭಾವಗಳೇ ಹೊರಗಿನ ವಿಷಯಗಳಿಗೆ ಅಂಟಿಕೊಂಡು ಮತ್ತಷ್ಟು ಭಾವಗಳಿಗೆ ಕಾರಣವಾಗುತ್ತವೆ ಮತ್ತು ಅಶಾಂತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ನಮ್ಮೊಳಗಿನ ದ್ವಂದ್ವ, ನೋವು, ಸಂಕಟದ ಭಾವನೆಗಳ ತಿಕ್ಕಾಟವೆಲ್ಲವೂ ನಿಂತು ಮನಸ್ಸು, ಬುದ್ಧಿಗಳು ಶಾಂತವಾಗಬೇಕಾದರೆ, ನಾವೇ ಪ್ರಯತ್ನ ಪಡಬೇಕು. ಅದಕ್ಕೆ ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ನಮಗೆ ಸೂಚಿಸಿದ್ದಾರೆ ಅಲ್ಲವೇ? ಯಾವ ಮಾರ್ಗವನ್ನು ಅನುಸರಿಸಿದರೂ ಗಮ್ಯ ಸೇರುವುದು ಸಾಧ್ಯ.   


ನಾವು ಮನಸ್ಸು ಬುದ್ಧಿಗಳಿಂದ ಶಾಂತ ಸ್ಥಿತಿಗೆ ತಲುಪಬೇಕಾದರೆ ಈ ರೀತಿ ನಮ್ಮನ್ನು ವಿಚಲಿತಗೊಳಿಸುವ ಭಾವನೆಗಳನ್ನು ಕಸ ಗುಡಿಸಿದಂತೆ ಮನದಿಂದ ಹೊರಹಾಕಬೇಕು ಮತ್ತು ಶುದ್ಧ ಮತ್ತು ಶಾಂತ ವಿಚಾರಗಳನ್ನು ಮಾತ್ರ ಒಳಬರಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಆಗ ನಾವು ಶಾಂತರಾಗಬಹುದು. ಜಗತ್ತಿನಲ್ಲಿ ನಾವಿರುವಾಗ ಅದರಿಂದ ದೂರ ಸರಿಯಲು ಸಾಧ್ಯವಿಲ್ಲ. ಇಲ್ಲಿ ಇದ್ದೇ ಆ ರೀತಿಯ ಮನಃಶಾಂತಿಯನ್ನು ಪಡೆಯಲಾದರೆ ಅದೇ ದೊಡ್ಡ ಸಾಧನೆ.

Friday, 29 September 2017

ಸಾರಂಗss ನಿನ್ನ ನೆನಪಿನಲಿ


ಸಾರಂಗss ನಿನ್ನ ನೆನಪಿನಲಿ
ಕಣ್ಣುಗಳು ತಡಕಾಡಿವೆ
ನಿನ್ನ ಮಧುರ ಮಿಲನವಿಲ್ಲದೇsss
ದಿನರಾತ್ರಿಕಳೆಯದಾಗಿದೆ 'ಸಾರಂಗss '

ಆ ಮಾಮರsದುಯ್ಯಾಲೇ ಆ ಅರಳಿಯ ನೆರಳು
ಮುಸುಕಲ್ಲಿ ಚಂದ್ರಮನಿದ್ದಾಗಾ ಮದರಂಗಿ ಕಾಲಲಿತ್ತಾಗ
ಓsss ಇಂದು ಮುರಿದು ಬಿsದ್ದಿದೇss
ಕನಸಿನಾ ಮನೆಯೂ ' ಸಾರಂಗss '

ಸಂಗದಿ ಕಳೆದಾ ಘಳಿಗೆಗಳೂ
ಸರಿದಿಹವಿಂದು ಕ್ಷಣದಂತೆ
ಶೋಕವ ಸುರಿಸಿದ ಕಂಗಳೂ
ನಿಂದಿವೆ ಇಂದಾರಿದಂತೆ
ಕಷ್ಟವನಿತ್ತು ಸುಖವೊಯ್ದವೋsss
ಚಂಚಲ ನಯನಗಳು ' ಸಾರಂಗss '

ನನ್ನ ನಿನ್ನ ಕನಸು

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss  ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||

ನನ್ನ ನಿನ್ನ ಮನವೂ ಒಂದಾಗಲೇಬೇಕಿತ್ತೂss
ವಸಂತಕಾಲದಲ್ಲೀsss  ಹೂವು ಅರಳುವಂತೆ ,
ನನ್ನ ನಿನ್ನ ಮನವೂ ಒಂದಾಗಲೇಬೇಕಿತ್ತೂ
ವಸಂತಕಾಲದಲ್ಲೀ ಹೂವು ಅರಳುವಂತೆ,
ಓ! ನನ್ನ ಬಾಳ ಸಂಗಾತೀ


ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||


ನಿನ್ನ ಶೋಕವಿssನ್ನು ನನದು ನನ್ನ ಸುಖವಿನ್ನು ನಿನದು
ಕಣ್ಗರೆಡು ನಿನ್ನಾssss ಚಂದ್ರಸೂರ್ಯರೆನಗೆ
ನಿನ್ನ ಶೋಕವಿssನ್ನು ನನದು ನನ್ನ ಸುಖವಿನ್ನು ನಿನದು
ಕಣ್ಗರೆಡು ನಿನ್ನಾssss ಚಂದ್ರಸೂರ್ಯರೆನಗೆಓ! ನನ್ನ ಬಾಳ ಸಂಗಾತೀ

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂss  ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ||

ಲಕ್ಷ ತಡೆಯೊಡ್ಡsಲಿ ಲೋಕ, ಅನುಬಂಧಕಂತ್ಯವಿಲ್ಲ   
ಬೆರೆತ ಕೈಗಳನೆಂದೂssss  ತೊರೆಯೆ ಬಿಡುವುದಿಲ್ಲ
ಲಕ್ಷ ತಡೆಯೊಡ್ಡsಲಿ ಲೋಕ, ಅನುಬಂಧಕಂತ್ಯವಿಲ್ಲ
ಬೆರೆತ ಕೈಗಳನೆಂದೂssss  ತೊರೆಯೆ ಬಿಡುವುದಿಲ್ಲ
ಓ! ನನ್ನ ಬಾಳ ಸಂಗಾತೀ

ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ
ನನ್ನ ನಿನ್ನ ಕನಸು ಇಂದು ಒಂದಾಗಿದೇ
ನೀನೆಲ್ಲಿ ಕರೆದರೂ ಸಖೀ ನಾ ಜೊತೆಗಿರುವೆ ।। ನನ್ನ ನಿನ್ನ ಕನಸೂ|| 


Tuesday, 19 September 2017

ಮೂರು ' E E E ' ಗಳ ಮಹತ್ವ

ಮೂರು ' E E E ' ಗಳ ಮಹತ್ವ

ಮೂರು E ಗಳು ಯಾವುವೆಂದರೆ: Entry ಎಂದರೆ ಜನನ, Existance, ಎಂದರೆ ಜೀವನ ಮತ್ತು Exit, ಎಂದರೆ ನಿರ್ಗಮನ. ಇವುಗಳನ್ನು ನಾವು ಕೂಲಂಕುಷವಾಗಿ ಗಮನಿಸಿ ನಮ್ಮ ಮನಸ್ಸುಗಳಲ್ಲಿ ಇದರ ವಿಚಾರವನ್ನು ಮಥಿಸಿದರೆ ನಮಗೆ ಕೆಲವು ವಿಷಯಗಳು ತಿಳಿಯುತ್ತವೆ.
ಈ ಜಗತ್ತಿಗೆ entry ಎಂದರೆ ಬರುವ, ಜಗತ್ತಿನ ಸಕಲರ ಜನನವೂ ಒಂದೇ ರೀತಿಯಲ್ಲಿ ಆಗುತ್ತದೆ. ತಾಯ ಗರ್ಭದಲ್ಲಿ, ಮೊಳೆತು ನವಮಾಸ ಬೆಳೆದು ಭೂಮಿಗೆ ಬಂದು ಬೀಳುವುದು. ಮನುಷ್ಯರನ್ನು ಹೊರತು ಪಡಿಸಿ ನೋಡಿದರೆ ಅನ್ಯ ಪ್ರಾಣಿ, ಪಕ್ಷಿ, ಕೀಟ, ಜಂತು ಮುಂತಾದವುಗಳೆಲ್ಲವೂ ಸಹ ಅವರವರ ತಾಯ ಗರ್ಭದಿಂದಲೇ ಜನಿಸುವುದು. ಆದರೆ ಅವುಗಳ 'ಗರ್ಭವಾಸ' ಅಥವಾ 'ತತ್ತಿವಾಸ'ದ ಸಮಯದಲ್ಲಿ ವ್ಯತ್ಯಾಸವಿರಬಹುದು. ನಾವು ಮಾನವರನ್ನೇ ಪ್ರತ್ಯೇಕಿಸಿ ನೋಡಿದಾಗ, ಜಗತ್ತಿನ ಯಾವುದೇ ಮೂಲೆಯಲ್ಲಿಯಾಗಲೀ ಯಾವುದೇ ಬಣ್ಣ, ಭಾಷೆ, ಸಂಸ್ಕೃತಿ, ಕುಲ, ಮತ ಮತ್ತು ಧರ್ಮದವರಾಗಲೀ ಇದಕ್ಕಿಂತ ಬೇರೆಬೇರೆ ರೀತಿಯಲ್ಲಿ ಜನಿಸುವುದು ಸಾಧ್ಯವಿಲ್ಲ, ಅಲ್ಲವೇ? ಇದು ಪ್ರಕೃತಿಯ ನಿಯಮ ಮತ್ತು ಈ ಪ್ರಕೃತಿಗೆ, ನಿಯಾಮಕ ಶಕ್ತಿ ಒಂದೇ. ಹೀಗೆ ನಾವೆಲ್ಲಾ ಒಂದೇ ರೀತಿಯಲ್ಲಿ ಜನಿಸಿದವರಾದ್ದರಿಂದ ನಮ್ಮನ್ನು 'ಜನ' ಎಂದು ಕರೆದರು. ಹಾಗೆ ಜನಿಸಿದವರ ಬಣ್ಣ, ಆಕಾರ, ಭಾಷೆ, ಸಂಸ್ಕೃತಿ, ಸಂಸ್ಕಾರ, ಆಹಾರ ಪದ್ದತಿಗಳು ಆಯಾಯ ದೇಶಕಾಲಾನುಸಾರವಾಗಿ ಭಿನ್ನ ಭಿನ್ನವಾದರೂ ಅವರೆಲ್ಲರ ಜನನ ಪ್ರಕ್ರಿಯೆ ಮಾತ್ರ ಒಂದೇ ಆಗಿರುತ್ತದೆ, ಅಲ್ಲವೇ? ಹಾಗಾಗಿ Entry ಎಂದರೆ ಜನನವು ಜಗತ್ತಿನ ಜನರೆಲ್ಲರಿಗೂ ಸಮಾನ.

ಹುಟ್ಟಿದ ಮನುಷ್ಯರೆಲ್ಲರೂ ಹುಟ್ಟುವುದು ಒಂದೇ ರೀತಿ. ಹೆಣ್ಣು ಗಂಡಿನ ಬೇಧದ ಹೊರತು ಎಲ್ಲರಿಗೂ ಎರಡು ಕಾಲು, ಎರಡು ಕೈ, ಪಾದಗಳು, ರುಂಡ ಮುಂಡಗಳು, ಕಣ್ಣು, ಕಿವಿ, ಮೂಗು ಬಾಯಿ ತಲೆ ಹೀಗೆ ಎಲ್ಲವೂ, ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಬಣ್ಣ ಆಕಾರ ಬೇರೆಬೇರೆಯಾಗಿದ್ದರೂ ಎಲ್ಲವೂ ಸಮಾನವಾಗಿರುತ್ತವೆ. ಅಮೇರಿಕಾದಲ್ಲಿ ಕಿವಿಯಲ್ಲಿ ನೋಡಿ, ಕಣ್ಣಲ್ಲಿ ಕೇಳಲಾಗುವುದಿಲ್ಲ ಅಲ್ಲವೇ? ಹಾಗಾಗಿ ಎಲ್ಲರ Entry ಒಂದೇ ರೀತಿಯದ್ದಾಗಿರುತ್ತದೆ.

ಇನ್ನು ಈ ಜಗತ್ತಿನ ಜೀವನವನ್ನು ಎಂದರೆ, Existance ನ್ನು ನೋಡೋಣ. ಬಾಳು ಬಹಳ ವೈವಿಧ್ಯತೆಯಿಂದ ಕೂಡಿದೆಯಾದರೂ ಮೂಲ ಕೆಲಸಗಳು ಎಂದರೆ basic activity ಒಂದೇ ರೀತಿಯದ್ದಾಗಿರುತ್ತದೆ. ನಿದ್ರಾಹಾರ ಮೈಥುನ ಎಂಬ ಮೂರು ಮೂಲಭೂತ ಕಾರ್ಯಗಳು ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರಿಗೂ ಒಂದೇ ರೀತಿಯದ್ದಾಗಿರುತ್ತದೆ. ಬೆಳಗು ರಾತ್ರಿಗಳು, ಬೆಳಗಿನಲ್ಲಿ ಕಾರ್ಯೋನ್ಮುಖರಾಗುವುದು ರಾತ್ರಿಯ ನಿಶೆಯಲ್ಲಿ ನಿದ್ರಿಸುವುದೂ ಸಹ ಜಗತ್ತಿನಾದ್ಯಂತ ಒಂದೇ ಆಗಿರುತ್ತದೆ. ಎಲ್ಲರೂ ಏನಾದರೊಂದು ಪ್ರವೃತ್ತಿಯನ್ನು ಅವಲಂಬಿಸಿಯೇ ಜೀವನ ಮಾಡಬೇಕು. ಮಾಡುವ ಕೆಲಸ ಮತ್ತು ಅದನ್ನು ಮಾಡುವ ರೀತಿ ಬೇರೆಬೇರೆಯಾಗಿರಬಹುದಾದರೂ ಹುಟ್ಟಿದಾರಭ್ಯ ಮರಣದ ತನಕ ಎಲ್ಲರೂ ಏನಾದರೂ ಕೆಲಸಮಾಡುತ್ತಲೇ ಇರಬೇಕು. ಇದು ಜಗತ್ತಿನ ಯಾವುದೇ ಮೂಲೆಯಲ್ಲಾದರೂ, ಮಾನವರ ಬದುಕಿನ ಒಂದೇ ರೀತಿಯಾದ ಕ್ರಮ. ಹಾಗಾಗಿ ಎಲ್ಲರ Existance ನ ಮೂಲ ರೂಪರೇಷೆಗಳು ಒಂದೇ ರೀತಿಯದ್ದಾಗಿರುತ್ತದೆ, ಅಲ್ಲವೇ? ಒಬ್ಬೊಬ್ಬರ ಜೀವನ ಶೈಲಿಯು ಒಂದೊಂದು ರೀತಿಯದಾಗಿದ್ದರೂ ಎಲ್ಲರಿಗೂ ಬೆಳಕ ನೀಡುವುದು ಒಂದೇ ಸೂರ್ಯ, ಎಲ್ಲರೂ ಉಸಿರಾಡುವುದು ಒಂದೇ ಗಾಳಿಯನ್ನು, ಕುಡಿಯುವುದು ಆ ಒಂದೇ ಆಕಾಶದಿಂದ ಬಿದ್ದ ಮಳೆಯ ನೀರನ್ನು. ಇಡೀ ಜಗತ್ತಿನಲ್ಲಿ ಎಲ್ಲಿಯಾದರೂ ಬೆಂಕಿ ಸುಡುತ್ತದೆ, ನೀರು ಹರಿಯುತ್ತದೆ ಮತ್ತು ಗಾಳಿ ಬೀಸುತ್ತದೆ. ಹಾಗಾಗಿ ಮನುಷ್ಯನ ಜೀವನಕ್ಕೆ ಆಧಾರವಾದ ಪಂಚಭೂತಗಳು ಜಗತ್ತಿನಾದ್ಯಂತ ಒಂದೇ ಆಗಿರುವಾಗ ಜನರ ಜೀವನವೂ ಅವುಗಳೇ ಮೇಲೆ ನಿರ್ಭರವಾಗಿರುವಾಗ, ಎಲ್ಲರ ಜೀವನವೂ, ಎಂದರೆ existance ಒಂದೇ ರೀತಿಯಲ್ಲಿ ಆಗುತ್ತದೆ.

ಕೊನೆಯದಾಗಿ ನಾವು Exit, ಎಂದರೆ ಜಗತ್ತಿನಿಂದ ನಮ್ಮ ನಿರ್ಗಮನವನ್ನು ನೋಡುವ. Entry ಮಾಡಿದ ಪ್ರತೀ ಪ್ರಾಣಿಗೂ Exit ಕಟ್ಟಿಟ್ಟ ಬುತ್ತಿ. ಬರುವಾಗಲೇ ticket ಮತ್ತು VISA ಎರಡೂ ಹಿಡಿದೇ ಬಂದಿರುತ್ತೇವೆ. ನಿರ್ಗಮಿಸುವ ದಿನಾಂಕ ಮಾತ್ರ ನಮಗೆ ಗೊತ್ತಿರುವುದಿಲ್ಲ. ಈಗ ನಾವು ಒಂದು ಊರಿಗೆ ಹೋಗಬೇಕಾದರೆ ಹಲವಾರು ಮಾರ್ಗಗಳು ಮತ್ತು ಸಾರಿಗೆ ಸಾಧನಗಳಿರುತ್ತವೆ ಅಲ್ಲವೇ? ಉದಾ: ಮೈಸೂರಿಗೆ ಹೋಗಲು ಬಸ್ಸು ಇದೆ, ಟ್ರೈನುಂಟು, ಕಾರಲ್ಲಿ ಹೋಗಬಹುದು ಹೀಗೆಯೇ ಯಾರಿಗೆ ಏನು ಬೇಕೋ ಯಾವುದು ಅನುಕೂಲವೋ ಅದರೊಳಗೆ ಹೋಗಬಹುದು. ಹಾಗೆಯೇ ಈ ಜಗತ್ತಿನಿಂದ ನಿರ್ಗಮಿಸಲೂ ಸಹ ಹಲವಾರು ರೀತಿಗಳುಂಟು. ಸಾಧಾರಣ ಸಾವು, ಆತ್ಮಹತೆ, ಹತ್ಯೆ, ಅಫಘಾತದಲ್ಲಿ ಮರಣ, ಯುದ್ಧದಲ್ಲಿ ಮರಣ, ಇತ್ಯಾದಿ ಇತ್ಯಾದಿ. ಆದರೆ ನಿರ್ಗಮನದಿಂದ ಯಾರಿಗೂ ವಿನಾಯಿತಿ ಇಲ್ಲವೇ ಇಲ್ಲ. ಎಲ್ಲರೂ ಇಲ್ಲಿಂದ ತೊಲಗಲೇ ಬೇಕು. ಹಾಗೆ ತೊಲಗಿದ ಮೇಲೆ ಈ ದೇಹವನ್ನು ಜಗತ್ತಿನಾದ್ಯಂತ ಹೂಳುತ್ತಾರೆ ಅಥವಾ ಸುಡುತ್ತಾರೆ. (ಫಾರಸಿಗಳನ್ನು ಹೊರತು ಪಡಿಸಿ) ಅಲ್ಲಿಗೆ ಈ ದೇಹದ ಕಥೆ ಮುಗಿಯುತ್ತದೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರ ಗತಿಯೂ ಇಷ್ಟೇ. ಯಾರೂ ಇದರಿಂದ ಭಿನ್ನರಾಗಿರಲು ಸಾಧ್ಯವೇ ಇಲ್ಲ.

ಆದರೆ ಒಂದು ವಿಚಾರೆ ನಮ್ಮ Entry ಯ ಬಗ್ಗೆ ನಮಗೆ ಯಾವುದೇ ರೀತಿಯ Choice, ಎಂದರೆ ಆಯ್ಕೆ ಇರುವುದಿಲ್ಲ, ಏಕೆಂದರೆ ನಾವು ' ನಾನು ಇಂತಹವರ ಮನೆಯಲ್ಲೇ ಹುಟ್ಟಬೇಕು, ಗಂಡು ಅಥವಾ ಹೆಣ್ಣಾಗಿ ಹುಟ್ಟಬೇಕು, ಇಂತಹುದೇ ಬಣ್ಣ ಮತ್ತು ರೂಪವನ್ನು ಹೊಂದಿರಬೇಕು' ಎನ್ನುವ ಆಯ್ಕೆಗೆ ನಮಗೆ ಅವಕಾಶವಿಲ್ಲ ಅಲ್ಲವೇ?

ನಮ್ಮ Exit ಬಗ್ಗೆ ನಾವು ಯಾವುದೇ ರೀತಿಯ choice ಎಂದರೆ ಆಯ್ಕೆ ಹೊಂದಿರಲು ಸಾಧ್ಯವಿಲ್ಲ. ' ನಾನಿಷ್ಟು ದಿವಸ ಬದುಕಿರಬೇಕು, ಇಂತಹ ದಿನವೇ ಸಾಯಬೇಕು, ಹೀಗೇ ಸಾಯಬೇಕು ಎನ್ನುವ ಆಯ್ಕೆಗೆ ಸ್ಥಾನವೇ ಇಲ್ಲ ಅಲ್ಲವೇ? ಹಾಗೇನಾದರೂ ಇದ್ದಿದ್ದರೆ ಇಲ್ಲಿಂದ ಯಾರೂ Exit ಆಗುವುದಕ್ಕೆ ಇಷ್ಟಪಡುತ್ತಿರಲೇ ಇಲ್ಲ ಅಲ್ಲವೇ?

ನಮ್ಮ Existance ನಲ್ಲಿ ನಾವು ಹೀಗೇ ಬದುಕಬೇಕು ಎಂದುಕೊಳ್ಳುವವರೇ ಎಲ್ಲರೂ. ಆದರೆ ಯಾರಿಗೂ ಹಾಗೆ ಇರಲು ಸಾಧ್ಯವೇ ಇಲ್ಲ. ಬದುಕು ಹೇಗೆ ಹೇಗೆ ಕೊಂಡುಹೋದರೆ ಹಾಗೆ ಹೋಗುವುದೇ existance. ಇಲ್ಲಿಯೂ ಸಹ ನಮಗೆ ಆಯ್ಕೆಗಳು ಬಹಳ ಕಡಿಮೆಯಾದರೂ ಸ್ವಪ್ರಯತ್ನದಿಂದ ನಮ್ಮ ಬದುಕನ್ನು ಸ್ವಲ್ಪಮಾತ್ರ ತಿದ್ದಿಕೊಳ್ಳಲು ಸಾಧ್ಯವಿದೆ.

ಹಾಗಾಗಿ ಜಗತ್ತಿನ ಜನರೆಲ್ಲರ ಬದುಕೂ ಒಂದೇ ರೀತಿಯಿದ್ದು, ಎಲ್ಲರ Entry, Existance ಮತ್ತು Exit ಗಳು ಮೂಲಭೂತವಾಗಿ ಒಂದೇ ಆಗಿರುವಾಗ ನಿಶ್ಚಯವಾಗಿ ಮನುಷ್ಯ ಮನುಷ್ಯರಲ್ಲಿ ಈ ಭೇದಗಳೇಕೆ? ಎಂದು ಯೋಚಿಸಿದರೆ ನಮಗೆ ಸಿಗುವ ಒಂದೇ ಒಂದು ಉತ್ತರವೆಂದರೆ ' ಅಹಂಕಾರಂ ' ಈ ಜಗತ್ತಿನಲ್ಲಿ ನಡೆಯುವ ಎಲ್ಲಾ ಅಸಾಧಾರಣ ವಿದ್ಯಮಾನಗಳಿಗೆ ಕೇವಲ ಮನುಷ್ಯನ 'ಅಹಂಕಾರವೇ' ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ' ನನಗೆ ಅಹಂಕಾರವಿಲ್ಲ ' ಎಂದುಕೊಳ್ಳುವವರೇ ಎಲ್ಲರೂ. ಈ ಅಹಂಕಾರ, ಮಮಕಾರಗಳೇ ಅಲ್ಲವೇ ಮನುಷ್ಯ ಮನುಷ್ಯರ ನಡುವೆ ಭೇಧಗಳನ್ನು ಸೃಷ್ಠಿಸಿ ಜಗತ್ತಿನ ಎಲ್ಲಾ ತೊಂದರೆ ತಾಪತ್ರಯಗಳಿಗೆ ಕಾರಣವಾಗಿರುವುದು.

ಮಾನ್ಯ ಡಿ.ವಿ.ಗುಂಡಪ್ಪನವರು ತಮ್ಮ 'ಮಂಕುತಿಮ್ಮನ ಕಗ್ಗ' ದಲ್ಲಿ:
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು I
ಬಂದುದೀ ವೈಷಮ್ಯ? - ಮಂಕುತಿಮ್ಮ

ಎಂದು ಬರೆಯುತ್ತಾ ಜಗತ್ತಿನ ಜನರ ನಡುವೆ ಇರುವ ವಿಷಮ ಸ್ಥಿತಿಗೆ ಮರುಗುತ್ತಾರೆ. ಎಲ್ಲವೂ ಸಮನಾಗಿ ಇರುವುದನ್ನು ವಿಷಮವಾಗಿ ಕಾಣದೆ ಸಮನಾಗಿ ಕಾಣುವ ಕ್ಷಮತೆಯೇ ವಿದ್ಯೆ. ಅಂತಹ ವಿದ್ಯೆಯನ್ನು ಎಲ್ಲರೂ ಪಡೆದರೆ ಈ ಜಗತ್ತು ಸಕಲ ಪ್ರಾಣಿಗಳ ಜೀವನಕ್ಕೆ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅಂತಹ ದಿನಗಳು ನಿಜಕ್ಕೂ ಎಂದು ಬರುವುದೋ !!!!!!!!!!!!!

ರವಿ ತಿರುಮಲೈ

19.09.2017

Saturday, 16 September 2017

ಯಾರಿಹರಿಲ್ಲಿ, ಈ ಜಗದೊಳಗೆ


ನಮ್ಮ ಕನ್ನಡದ ಗುರುದತ್ ನಿರ್ದೇಶಿಸಿ ನಟಿಸಿದ ' ಪ್ಯಾಸಾ' ಎನ್ನುವ ಹಿಂದಿ ಚಿತ್ರ ಬಂದದ್ದು ೧೯೫೭ ರಲ್ಲಿ. ಅದರೊಳಗಿನ ಒಂದು ವಿಷಾದಭರಿತ ಹಾಡು ' जाने  ओ कैसे लोगे थे जिनके  प्यार को प्यारा मिला , हमने तो जबा कलियाँ मांगी कांटोंका हार मिला ' . ಆ ಹಾಡಿನ ಕನ್ನಡದಲ್ಲಿ ಬರೆಯಲು ಪ್ರಯತ್ನಪಟ್ಟಿದ್ದೇನೆ. ಅದನ್ನು ಮೂಲ ಗೀತೆಯ  ರಾಗದಲ್ಲಿ ಹಾಡಲು ಪ್ರಯತ್ನವನ್ನೂ ಮಾಡಿದ್ದೇನೆ. ಇದರ ಧ್ವನಿ ಮುದ್ರಣವನ್ನೂ ಇಲ್ಲಿ ಹಾಕಿದ್ದೇನೆ. ಓದಿ, ಕೇಳಿ, ನನಗೆ ಸಂತೋಷವಾಗಿದೆ ನಿಮಗೂ ಇಷ್ಟವಾದರೆ ಸಂತೋಷ.

ಯಾರಿಹರಿಲ್ಲಿ, ಈ ಜಗದೊಳಗೆ
ಪ್ರೇಮಕೆ  ಪ್ರೇಮವ ಪಡೆದವರು
ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ         'ಯಾರಿಹರಿಲ್ಲಿ,

ಸಂತಸ ಬಯಸಿ ಹುಡುಕಲು, ನಮಗೆ
ದೊರೆಯಿತು ಗೋಳಿನ ಬುತ್ತಿ  ,
ಮನವ ತಣಿಸುವ ಗೀತೆಯ ಬಯಸೆ
ದೊರೆಯಿತು ಕೇವಲ ನಿಟ್ಟುಸಿರು
ಹೃದಯ ಭಾರವ ಇಮ್ಮಡಿಗೊಳಿಸುವ
ದುಃಖವೆ  ದಕ್ಕಿತು  ನಮಗೆ

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

ತೊರೆದು ಹೋದರೆಲ್ಲಾ
ತೊರೆದು ಹೋದರೆಲ್ಲಾ

ತೊರೆದು ಹೋದರು ಎಲ್ಲಾ ಸಖರು
ಗಳಿಗೆಯರಡರ ಸಂಗವನಿತ್ತು
ಹುಚ್ಚರ ಸಂಗವ ಮಾಡಲು
ಯಾರಿಗೆ ಸಮಯವಿಹುದು ಹೇಳಿ.

ನಮ್ಮನ್ನು ನಮ್ಮ ನೆರಳೂ ಸಹಿತ
ಬಿಟ್ಟು ಓಡಿತಲ್ಲಾ

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

ಇದಕೇ  ಬಾಳು ಎಂದರೆ ನಾವು
ಹೀಗೇ ಬದುಕುವೆವು
ಬೇಸರಿಸದೆ ನಾವು
ತುಟಿಯನು  ಹೊಲೆದು
ಕಣ್ಣೀರ್  ಕುಡಿಯುವೆವು

ದುಃಖಕೆ ಏಕೆ  ಹೆದರುವುದಿಂದು
ಸಾವಿರಸಲ ದೊರೆಕಿಹುದು

ಹೂವನು ಬಯಸಿ ಮುಳ್ಳಿನ ಹಾರವ
ಧರಿಸಿಹೆವು ನಾವಿಲ್ಲಿ     ।। ಯಾರಿಹರಿಲ್ಲಿ, ।।

https://soundcloud.com/tirumalai-ravi/yaariharilli-ee-jagadolage

Monday, 7 August 2017

ಕೋಪ - ಶಮನ ಸಾಧ್ಯವೇ?

ಕೋಪವು ಯಾರಿಗೆ ಬರುವುದಿಲ್ಲ. ಈ ಜಗತ್ತಿನಲ್ಲಿ ಜನಿಸಿದ ಪ್ರತೀ ಜೀವಿಗೂ ಕೋಪ ಬಂದೇ ಬರುತ್ತದೆ. ಸಾಕಾರಣವಾಗಿಯೋ ಅಥವಾ ಆಕಾರಣವಾಗಿಯೋ ಸಿಟ್ಟು ಎಲ್ಲರಿಗೂ ಬಂದೇ ಬರುತ್ತದೆ. ಕೆಲವರಿಗೆ ಅಧಿಕವಾದರೆ ಮತ್ತೆ ಕೆಲವರಿಗೆ ಕಡಿಮೆ, ಕೆಲವರಿಗೆ ಕ್ಷಣಿಕವಾದರೆ ಮತ್ತೆ ಕೆಲವರಿಗೆ ಅದು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ,  ಕೆಲವರು ಕೋಪದಲ್ಲಿ ಪ್ರತಿಕ್ರಿಯೆ ತೋರಿ ತಾವು ಮತ್ತು ಅನ್ಯರನ್ನೂ ಕಷ್ಟಕ್ಕೆ ಸಿಲುಕಿಸುತ್ತಾರೆ ಮತ್ತೆ ಕೆಲವರು ಕೋಪವನ್ನು ವ್ಯಕ್ತಪಡಿಸದೆ ನುಂಗಿಕೊಳ್ಳುತ್ತಾರೆ ಮತ್ತೆ ಕೆಲವರು ಕೋಪವಿಲ್ಲದಂತೆ  ನೀಗಿಕೊಳ್ಳುತ್ತಾರೆ, ಮತ್ತೆ ಕೆಲವರು ಯಾವುದೇ ವಿಷಯ ಅಥವಾ ಘಟನೆಯ ಪ್ರಭಾವ ತಮ್ಮ ಮೇಲೆ ಆಗದಂತೆ ನೋಡಿಕೊಳ್ಳುತ್ತಾರೆ. ಆದರೆ ಕೋಪವೇ ಇಲ್ಲದ ವ್ಯಕ್ತಿಗಳು ಈ ಜಗತ್ತಿನಲ್ಲಿ ಇರುವುದು ಬಹಳ ವಿರಳ. 

ನಮಗೆ ಕೋಪ,  ಸಾಮಾನ್ಯವಾಗಿ ಹಲವಾರು ಕಾರಣಗಳಿಗೆ ಬರುತ್ತದೆ. ಅದರಲ್ಲಿ ಮುಖ್ಯವಾಗಿ, ನಾವು ಅಂದುಕೊಂಡ ಕೆಲಸ ನಾವಂದುಕೊಂಡ ಹಾಗೆ ಆಗದಿದ್ದಲ್ಲಿ, ನಾವು ಹೇಳಿದ ಕೆಲಸವನ್ನು ನಾವು ಹೇಳಿದ ರೀತಿ ಅನ್ಯರು ಮಾಡದಿದ್ದಲ್ಲಿ, ನಮ್ಮ ಪ್ರಮೇಯವೇ ಇಲ್ಲದೆ ಅನ್ಯರು ನಮಗೆ ಘಾಸಿಮಾಡಿದಲ್ಲಿ, ನಾವು ಬಹುವಾಗಿ ನಂಬಿದವರು ನಮಗೆ ನಂಬಿಕೆ ದ್ರೋಹ ಮಾಡಿದ್ದಲ್ಲಿ ಅಥವಾ ನಮ್ಮ ಮೇಲೆ ಸಕಾರಣವಾಗಿಯೋ ಅಥವಾ ವಿನಾಕಾರಣವಾಗಿಯೋ ಯಾರಾದರೂ ಕೋಪಗೊಂಡಲ್ಲಿ,  ಹೀಗೆ ಹಲವು ಕಾರಣಗಳಿಗೆ ನಮಗೆ ಕೋಪ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ನಾವು ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿದರೆ ನಮಗೆ ಎರಡು ವಿಷಯಗಳು ತಿಳಿಯುತ್ತದೆ. ಒಂದು ನಾವು ಅನ್ಯರನ್ನು ಅರ್ಥಮಾಡಿಕೊಳ್ಳುವುದರಲ್ಲಿ ತಪ್ಪಾಗಿ,  ನಾವು ಅವರ ಮೇಲೆ ಕೋಪಗೊಂಡಿರಬಹುದು ಅಥವಾ ನಾವೇ ತಪ್ಪು ಮಾಡಿ ನಮ್ಮ ಲೋಪವನ್ನು ಮುಚ್ಚಿಕೊಳ್ಳಲು ನಾವು ಕೋಪಗೊಂಡಿರಬಹುದು. ಈ ಎರಡೂ ಸಂದರ್ಭದಲ್ಲಿ ನಾವು ಕೋಪಮಾಡಿಕೊಳ್ಳದೆ ಇರುವುದಕ್ಕೆ ಮಾರ್ಗವಿದೆ. ಅವರ ತಪ್ಪಿಲ್ಲವೆಂದು ಅರಿತು ನಾವು ಅವರ ಮೇಲೆ ಕೋಪಗೊಳ್ಳದೆ ಇರುವುದು ಮತ್ತು ನಮ್ಮ ತಪ್ಪನ್ನು ಒಪ್ಪಿಕೊಂಡು, ಕೋಪಗೊಳ್ಳದೆ ಇರುವುದು. ಆಗ ನಾವು ನಮ್ಮ ಕೋಪವನ್ನು ನೀಗಿಕೊಂಡು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು. 

ಕೋಪವೆಂಬುವುದು ಒಂದು ಮಾನಸಿಕ ರೋಗ. ಕೋಪವು, ಅಗ್ನಿ ಅಥವಾ ಯಾವುದೇ ಭೂಕಂಪಕ್ಕಿಂತ ಅಧಿಕ ವಿನಾಶಕಾರಿ.  ನಾವು ಕೋಪಗೊಂಡಾಗ ದೇಹದಲ್ಲಿನ ಕೆಲವು ಗ್ರಂಥಿಗಳು ಸಕ್ರಿಯವಾಗುತ್ತವೆ. ಇದು ನಮ್ಮ ದೇಹದೊಳಗೆ  ಅಡ್ರಿನಾಲಿನ್  ಮತ್ತು ಇತರೆ ಒತ್ತಡ ಪ್ರೇರಕವಾದ ಹಾರ್ಮೋನುಗಳನ್ನು ಅಧಿಕವಾಗಿ ಸ್ರವಿಸಿ, ಗಮನೀಯವಾದ ದೈಹಿಕ ಬದಲಾವಣೆಗೆ ಕಾರಣವಾಗುತ್ತದೆ. ಮುಖ ಕೆಂಪಾಗುತ್ತದೆ, ರಕ್ತದೊತ್ತಡ ಅಧಿಕವಾಗುತ್ತದೆ, ಉಸಿರಾಟ ತ್ವರಿತವಾಗುತ್ತದೆ, ಹೃದಯದ ಬಡಿತ ಜೋರಾಗುತ್ತದೆ ಮತ್ತು ಕೈಕಾಲುಗಳ ಸ್ನಾಯುಗಳು ಬಿಗಿದುಕೊಂಡು, ದೇಹದಲ್ಲಿ ಒತ್ತಡ ಹೆಚ್ಚಾಗುತ್ತದೆ. ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ, ಹೃದಯದ ಬೇನೆಯುಂಟಾಗಿ ಜೀವಕ್ಕೆ ಮಾರಕವಾದ ಪಾರ್ಶ್ವ ವಾಯು, ಉದರದ ಹುಣ್ಣು (ulcers)  ತೀವ್ರ ರಕ್ತದೊತ್ತಡದಂತಹ  ಖಾಯಿಲೆಗಳಿಗೆ ನಾವು ತುತ್ತಾಗಬಹುದು.  ಹಾಗಾಗಿ  ಕೋಪವು ನಮ್ಮನ್ನು ಸುಡುವ ಮುನ್ನ ನಾವೇ ಕೋಪವನ್ನು ನುಂಗಿಬಿಡುವುದು ಬಹಳ ಸೂಕ್ತ ಪರಿಹಾರ.  

ಭಗವದ್ಗೀತೆಯ ( ೧೬-೨೧) ಶ್ಲೋಕವು ಈ ರೀತಿಯಿದೆ. 

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಾತ್ಮಾನಂ । 
ಕಾಮಃ ಕ್ರೋಧಸ್ತಥಾ ಲೋಭ: ತಸ್ಮಾದೇತತ್ರಯಂ ತ್ಯಜೇತ್ ।  

ನರಕದಂತಹ ಸಂಕಟಮಯ ಸ್ಥಿತಿಗೆ ಹೋಗಲು ನಮಗೆ ಮೂರು ಬಾಗಿಲುಗಳಿರುತ್ತವೆ. ಅವುಗಳೇ, ಕಾಮ ಕ್ರೋಧ ಮತ್ತು ಲೋಭ. ಅವುಗಳು ಆತ್ಮನನ್ನು ನಾಶಮಾಡುತ್ತವೆ. ಇದನ್ನರಿತು ಅವುಗಳನ್ನು ತ್ಯಜಿಸಿಬಿಡಬೇಕು, ಎನ್ನುತ್ತಾನೆ ಭಗವಾನ್ ಶ್ರೀ ಕೃಷ್ಣ. 

ಈ ಶ್ಲೋಕವನ್ನು ಶ್ರೀ ವಿಜಯನಾಥ ಭಟ್ಟ(ಕೌಂಡಿನ್ಯ) ರವರು ತಮ್ಮ ' ವಿಜಯಿನಿ ' ಎಂಬ ಭಗವದ್ಗೀತೆಯ ಕನ್ನಡ ಅವತರಿಣಿಕೆಯಲ್ಲಿ " ಕೀಳ್ಗತಿಯು ನರಕಕ್ಕೆ ಮೂರು ದಾರಿಗಳುಂಟು, ಅವುಗಳನ್ನರಿತು ಜಾಗ್ರತೆಯಲ್ಲಿರಬೇಕು। ವಿಷಯಲಾಲಸೆ, ಸಿಟ್ಟು, ಲೋಭ - ಈ ದೋಷಗಳ ಕುರಿತರಿತು ಅವುಗಳಿಂ ದೂರವಿರಬೇಕು ।" ಎಂದು ಹೇಳಿ ಸಿಟ್ಟು ಅಥವಾ ಕೋಪದ ಪರಿಣಾಮವನ್ನು ವಿವರಿಸಿದ್ದಾರೆ.  

ನಾವು ಶಾಂತವಾಗಿದ್ದರೆ, ನೆಮ್ಮದಿಯಾಗಿದ್ದರೆ, ಸಂತೋಷವಾಗಿದ್ದರೆ ನಮ್ಮ ದೇಹದ ಪಚನ ಕ್ರಿಯೆ ಸುಸೂತ್ರವಾಗಿ ನಡೆಯುತ್ತದೆ. ಕೋಪಗೊಂಡಾಗ ಅದು ಏರುಪೇರಾಗುತ್ತದೆ. ಹಾಗಾಗಿ ಆಹಾರ ಸೇವಿಸುವಾಗ ಪ್ರಸನ್ನ ಚಿತ್ತರಾಗಿರಬೇಕೆಂದು ವೈದ್ಯರುಗಳು ಸಲಹೆ ನೀಡುತ್ತಾರೆ. ಏಕೆಂದರೆ ಕೋಪವು ಇಡೀ ದೇಹವನ್ನು ವಿಚಲಿತಗೊಳಿಸುತ್ತದೆ. ಕೋಪವು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಯವಾಗಿ ಸುಡುವ ' ನಂಜು ಯಾ ವಿಷ'  ಎಂದು ಅರಿಯಬೇಕು.  

ನಮಗೆ ಬರುವ ಕೋಪವನ್ನು ನಿಭಾಯಿಸಲು ಮೂರು ದಾರಿಗಳುಂಟು. ಮೊದಲಿನದು ನಮ್ಮ ಪ್ರತಿಕ್ರಿಯೆ. ನಾವು ನಮ್ಮ ಮನಸ್ಸಿನ ಭಾವವನ್ನು ಒಳಗೆ ಇಟ್ಟುಕೊಳ್ಳದೆ ವ್ಯಕ್ತಪಡಿಸಿದರೆ ಮನಸ್ಸು ನಿರಾಳವಾಗುತ್ತದೆಯಾದ್ದರಿಂದ, ಕೋಪವನ್ನು ವ್ಯಕ್ತಪಡಿಸುವುದು ಉತ್ತಮ ಎಂದು 'ಮನಃಶಾಸ್ತ್ರಜ್ಞರು' ಹೇಳುತ್ತಾರೆ. ಆದರೆ ಹಾಗೆ ಸಿಗುವ ಮಾನಸಿಕ ನೆಮ್ಮದಿ ಕೇವಲ ತಾತ್ಕಾಲಿಕ.  ಅದರಿಂದ ಅಸಮಾಧಾನ ಮತ್ತೆ ಅಧಿಕವಾಗುತ್ತದೆ ಮತ್ತು ಅದನ್ನು ಹೊರಹಾಕಲು ಪ್ರಯತ್ನಿಸುತ್ತೇವೆ. ಆಗ ಮತ್ತೆ ಕೋಪ ಬರುತ್ತದೆ. ಕ್ರಮೇಣ ಕೋಪಮಾಡಿಕೊಳ್ಳುವುದು ಅಭ್ಯಾಸವಾಗಿ, ನಾವು ಅದರ ಗುಲಾಮರಾಗುತ್ತೇವೆ. ಕೋಪವು ನಮ್ಮನ್ನು ನಿಯಂತ್ರಿಸುತ್ತದೆ. ಅದು ನಮಗೆ ವೈಪರೀತ್ಯದ ಯಜಮಾನನಂತೆ ಆಗುತ್ತದೆ.    

ಎರಡನೆಯದಾಗಿ ಇರುವ ಮಾರ್ಗವೆಂದರೆ, ಅದನ್ನು ಹೊರಗೆಡುಹದೆ ಅದುಮಿಡುವುದು. ಆದರೆ ಅದು ಸರಿಯಾದ ಮಾರ್ಗವಲ್ಲ. ಏಕೆಂದರೆ, ಹಾಗೆ ಮಾಡಿದಾಗ ಕೋಪವು ನಮ್ಮ ಅಂತರಂಗದಲ್ಲೇ ಉಳಿದು ನಮ್ಮ ಮನಸ್ಸಿನೊಡನೆ ಚೆಲ್ಲಾಟವಾಡುತ್ತದೆ, ನಮ್ಮ ರಕ್ತದೊತ್ತಡ ಅಧಿಕವಾಗುತ್ತದೆ   ಹಾಗಾಗಿ ಕೋಪವನ್ನು ವ್ಯಕ್ತಪಡಿಸುವುದಾಗಲೀ ಅಥವಾ ವ್ಯಕ್ತಪಡಿಸದೆ ಮುಚ್ಚಿಟ್ಟುಕೊಳ್ಳುವುದಾಗಲೀ, ಎರಡೂ ಸರಿಯಾದ ಮಾರ್ಗ ಅಥವಾ ಪರಿಹಾರವಲ್ಲ. ಏಕೆಂದರೆ ಅದು ನಮಗೆ ಬಂದ ಕೋಪದಿಂದ ನಮಗೆ ಮುಕ್ತಿಯನ್ನು ಕೊಡುವುದಿಲ್ಲ ಅಥವಾ ನಾವು ಅದರಿಂದ ಮುಕ್ತರಾಗುವುದಿಲ್ಲ.   

ಹಾಗಾಗಿ ಮೂರನೆಯ ದಾರಿಯೇ, ' ಕ್ಷಮೆ-ತಾಳ್ಮೆ-ಸಹನೆ'. ಇವುಗಳು ಕೋಪವನ್ನು ನೀಗಿಕೊಳ್ಳುವದಕ್ಕೆ ಸೂಕ್ತವಾಗಿ ಪರಿಣಾಮವನ್ನು ನೀಡುತ್ತವೆ. ನಮಗೆ ಯಾರಮೇಲೆ ಕೋಪ ಬಂದಿದೆಯೋ ಅವರನ್ನು ಕ್ಷಮಿಸಿಬಿಟ್ಟರೆ, ನಾವು ಕೋಪದಿಂದ ಮುಕ್ತರಾಗಬಹುದು. ಪ್ರತಿ ರಾತ್ರಿ ಮಲಗುವ ಮುನ್ನ ಅಂದಿನ ದಿನದಲ್ಲಿ ನಡೆದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡು, ನಮಗೆ ಮೋಸಮಾಡಿದವರನ್ನೋ, ನೋವುಂಟುಮಾಡಿದವರನ್ನೋ, ಘಾಸಿಮಾಡಿದವರನ್ನೋ ಅಥವಾ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡವರನ್ನೋ ನೆನೆದು, ಅವರ ಹೆಸರನ್ನು ಹೇಳಿ  'ಹೇ!! ನಾನು ನಿನ್ನನ್ನು ಕ್ಷಮಿಸಿದ್ದೇನೆ, ಹೋಗು' ಎಂದು ಹೇಳಿದರೆ ನಾವು ಅವರನ್ನು ಕ್ಷಮಿಸದಂತಾಗುತ್ತದೆ, ನಮ್ಮ ಕೋಪ ಕರಗುತ್ತದೆ ಮತ್ತು ಶಾಂತಿಯಿಂದ ನಿದ್ದೆ ಬರುತ್ತದೆ.    

ಎರಡನೆಯ ಫ್ರೆಡರಿಕ್ ಎನ್ನುವ ಪರ್ಷಿಯಾ ದೇಶದ ರಾಜನೊಬ್ಬನ ಜೀವನದಲ್ಲಿ ನಡೆದ ಘಟನೆಯೊಂದು ಇಲ್ಲಿ ನೆನಪಿಸಿಕೊಳ್ಳಬೇಕು. ಒಂದು ದಿನ ಅವನು ತನ್ನ ಬೆಳ್ಳಿಯ ನಶ್ಯದ ಡಬ್ಬಿಯಿಂದ, ತನ್ನ ಸೇವಕ ಸ್ವಲ್ಪವೇ ನಶ್ಯವನ್ನು ಕದಿಯುವುದನ್ನು ಕಂಡ. ಆಗ ರಾಜ ಬಹಳ ಸರಳವಾಗಿ " ನಿನಗೆ ಈ ಬೆಳ್ಳಿಯ ನಶ್ಯದ ಡಬ್ಬಿ ಇಷ್ಟವಾಯಿತೇ?" ಎಂದು ಆ ಹುಡುಗನನ್ನು ಕೇಳಿದ.  ಕದಿಯುವಾಗ ಸಿಕ್ಕಿಬಿದ್ದ ಆ ಸೇವಕ ತಬ್ಬಿಬ್ಬಾಗಿ, ನಿರುತ್ತರನಾದ. " ನಿನಗೆ ಈ ನಶ್ಯದ ಡಬ್ಬಿ ಇಷ್ಟವಾಯಿತೇ? " ರಾಜ ಮತ್ತೊಮ್ಮೆ ಪ್ರಶ್ನಿಸಿದ. ಆ ಸೇವಕ ತಲೆಯೆತ್ತಿ  "ಹೌದು ಪ್ರಭುಗಳೇ, ಇದೊಂದು ಬಹಳ ಸುಂದರವಾದ ನಶ್ಯದ ಡಬ್ಬಿ" ಎಂದನಂತೆ. ಆ ರಾಜನಿಗೆ ತನ್ನ ಸೇವಕ ಮಾಡಿದ್ದರಿಂದ ಅಸಮಾಧಾನವಿದ್ದರೂ ಅವನನ್ನು ಕ್ಷಮಿಸಿ, "ಹಾಗಾದರೆ ಇದನ್ನು ನೀನೆ ತೆಗೆದುಕೋ, ಅದು ನಮ್ಮಿಬ್ಬರಿಗೆ ಬಹಳ ಸಣ್ಣದಾಗುತ್ತದೆ" ಎಂದು ಹೇಳಿ ತನ್ನ ಕೋಪದ ಮೇಲೆ ವಿಜಯವನ್ನು ಸಾಧಿಸಿದನಂತೆ.  

ಮುಂಗೋಪಿಯಾದ ಒಬ್ಬ ಸನ್ಯಾಸಿಯೊಬ್ಬ ಒಂದು ಆಶ್ರಮದಲ್ಲಿದ್ದ. ಅವನ ಮುಂಗೋಪದ ಕಾರಣ ಅವನಿಗೆ ಇತರ ಆಶ್ರಮವಾಸಿಗಳೊಡನೆ ಇರಲು ಬಹಳ ಕಷ್ಟವಾಗುತ್ತಿತ್ತು. ಕಾಡಿನಲ್ಲಿ ಏಕಾಂತ ಸ್ಥಳದಲ್ಲಿ ಶಾಂತಿಯಿಂದ ಇರಬಹುದು, ಕೋಪವನ್ನು ಗೆಲ್ಲಬಹುದು ಎಂದು ಎಣಿಸಿದ ಮತ್ತು ನಿವಾಸ ಮಾಡಲು ನಿರ್ಧರಿಸಿದ.  ಅಲ್ಲಿ,  ಮೊದಮೊದಲಿಗೆ ಅವನಿಗೆ ಶಾಂತಿ ಮತ್ತು ನೆಮ್ಮದಿಯಿತ್ತು. ಅವನು ಸಂತೋಷವಾಗಿದ್ದ. ಒಂದು ದಿನ ಅವನು ಹತ್ತಿರದ ನದಿಯಲ್ಲಿ ಒಂದು ಮಡಕೆಯಲ್ಲಿ ನೀರು ತರಲು ಹೋದ. ನೀರನ್ನು ತುಂಬಿಕೊಂಡು ಆ ಮಡಕೆಯನ್ನು ನೆಲದ ಮೇಲೆ ಇಟ್ಟ. ಅದು ಉರುಳಿಕೊಂಡು ನೀರೆಲ್ಲ ನೆಲದ ಪಾಲಾಯಿತು. ಅವನು ಮತ್ತೆ ನೀರನ್ನು ತುಂಬಿಕೊಂಡ. ಮತ್ತೆ ನೆಲದ ಮೇಲೆ ಇಟ್ಟೊಡನೆಯೇ ಆ ಮಡಕೆ ಮತ್ತೆ ಉರುಳಿತು. ಹೀಗೆ ತುಂಬುವುದು ಉರುಳುವುದು ಹಲವು ಬಾರಿ ನಡೆದು, ಅವನಿಗೆ ಕೋಪಬಂದು ಆ ಮಡಕೆಯನ್ನು ಚೂರಾಗುವಂತೆ ಒಡೆದು ಹಾಕಿದ. ಸ್ವಲ್ಪ ಸಮಯದ ನಂತರ ಅವನಿಗೆ ತನ್ನ ತಪ್ಪಿನ ಅರಿವಾಯಿತು. ' ಅಯ್ಯೋ , ನಾನು ಕೋಪವನ್ನು ತೊರೆಯಲು ಆಶ್ರಮವನ್ನು ಬಿಟ್ಟು, ಕಾಡಿಗೆ ಬಂದೆ. ಆದರೆ ಆ ಕೋಪವು ನನ್ನನ್ನು ಈ ಕಾಡಿಗೂ ಹಿಂಬಾಲಿಸಿಕೊಂಡು ಬಂದಿದೆಯಲ್ಲಾ' ಎಂದು ಪಶ್ಚಾತ್ತಾಪ ಪಟ್ಟ. 

ಈ ಜಗತ್ತಿನಲ್ಲಿ ತಪ್ಪು ಮಾಡದೆ ಇರುವವರು ಯಾರೂ ಇಲ್ಲ. ಡಿ. ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ "  ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? ಆತುಮದ ಪರಿಕಥೆಯನರಿತವರೆ ನಾವು? ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ,   ನೀತಿ ನಿಂದೆಯೊಳಿರದು – ಮಂಕುತಿಮ್ಮ. " ಎನ್ನುತ್ತಾ ಈ ಜಗತ್ತಿನಲ್ಲಿ ನಿರ್ಮಲನಾರು ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ತಪ್ಪು ಎಲ್ಲರೂ ಮಾಡುವುದರಿಂದ " ಕ್ಷಮೆ ದೋಷಿಗಳಲಿ' ಎಂದು ಹೇಳುತ್ತಾ ಒಬ್ಬರು ಮತ್ತೊಬ್ಬರೊಡನೆ ಕೋಪಗೊಳ್ಳುವುದು ಸೂಕ್ತವಲ್ಲ, ಕ್ಷಮೆಯೇ ಸೂಕ್ತ ಮಾರ್ಗ ಎನ್ನುತ್ತಾರೆ.   

ಕನ್ನಡದ ಕವಿ 'ರತ್ನ' ಸರ್ವಜ್ಞ ಕವಿಯು,  "ಕೋಪವೆಂಬುದು ತಾನು , ಪಾಪವ ನೆಲೆಗಟ್ಟು ಆಪತ್ತು , ಸುಖವು ಸರಿ ಎಂದು ಪೋಪಗೆ,  ಪಾಪವೆಲ್ಲಿಹುದು - ಸರ್ವಜ್ಞ" ಎಂದು ಹೇಳಿದ್ದಾನೆ. ಸರ್ವಜ್ಞ ಕವಿಯ ಪ್ರಕಾರ ಕೋಪವೇ ಎಲ್ಲಾ ಪಾಪಗಳಿಗೂ ಮೂಲ. ಕೋಪ ಮತ್ತು ಪಾಪವನ್ನು ತೊರೆದವನು ಪರಮಾತ್ಮನನ್ನು ಪಡೆಯುವನು ಎನ್ನುತ್ತಾ "ಮುನಿದಂಗೆ ಮುನಿಯದಿರು , ಕಿನಿವಂಗೆ ಕಿನಿಯದಿರು ಮನಸಿಜಾರಿಯನು ಮರೆಯದಿರು , ಶಿವಕೃಪೆಯು ಘನಕೆ ಘನವಕ್ಕು , ಸರ್ವಜ್ಞ"  ಎಂದು ಹೇಳುತ್ತಾ, " ಕೋಪಕ್ಕೆ ಪ್ರತಿಕೋಪವನ್ನು ತೋರಬೇಡ ಜಗಳಕ್ಕೆ ಪ್ರತಿ ಜಗಳವಾಡಬೇಡ, ಸ್ನೇಹ ಮತ್ತು ಸೌಹಾರ್ದತೆಯೇ,  ಶಾಂತಿ ಮತ್ತು ಸಂತೋಷಕ್ಕೆ ಮಾರ್ಗವೆಂದು ಬುದ್ಧಿಮಾತನ್ನು ಹೇಳುತ್ತಾನೆ. 

ನಮಗೆ ಕೋಪ ಏಕಾಗಿ ಬರುತ್ತದೆ ಎನ್ನುವುದಕ್ಕೆ ಡಿವಿಜಿಯವರು ತಮ್ಮ ಮತ್ತೊಂದು ಮುಕ್ತಕದಲ್ಲಿ " ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು,  ಅದಕಾಗಿ ಇದಕಾಗಿ ಮತ್ತೊಂದಕಾಗಿ,  ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು,  ಕುದಿಯುತಿಹುದಾವಗಂ – ಮಂಕುತಿಮ್ಮ" ಎಂದು ಹೇಳಿ ನಮ್ಮ ಆಸೆಗಳು, ಹುಡುಕಾಟಗಳು, ಅಸಹನೆಗಳು, ಅಸೂಯೆಗಳು ನಮ್ಮನ್ನು ಸದಾಕಾಲ ಕುದಿಯುವಂತೆ ಮಾಡುತ್ತದೆ ಎನ್ನುತ್ತಾರೆ. 'ಸಹನೆ, ತಾಳ್ಮೆ, ತೃಪ್ತಿ' ಗಳು ಖಂಡಿತವಾಗಿಯೂ ನಮ್ಮನ್ನು ' ಕೋಪ' ವೆಂಬ 'ಪಾಪ' ದಿಂದ ಮುಕ್ತವಾಗಿಸಬಹುದು. 

ಪರಿಸ್ಥಿತಗಳಾಗಲಿ ಅಥವಾ ವ್ಯಕ್ತಿಗಳಾಗಲೀ ನಮಗೆ ಕೋಪ ತರಿಸುವುದಿಲ್ಲ. ಆ ಪರಿಸ್ಥಿತಿಗಳಿಗೆ ಮತ್ತು ವ್ಯಕ್ತಿಗಳಿಗೆ ನಾವು ನೀಡುವ ಪ್ರತಿಕ್ರಿಯೆಯೇ ಆ ಪರಿಸ್ಥಿತಿ ಅಥವಾ ವ್ಯಕ್ತಿಯ ಪ್ರತಿ ನಾವು ಸಮಾಧಾನವಾಗಿದ್ದೇವೋ ಅಥವಾ ಕೋಪಗೊಂಡಿದ್ದೇವೋ ಎನ್ನವುದನ್ನು ನಿರ್ಧರಿಸುತ್ತದೆ. ಹಾಗಾಗಿ ನಾವು ಶಾಂತ ಚಿತ್ತರಾದರೆ, ಕ್ಷಮಾಶೀಲರಾದರೆ, ಸಹನೆಯನ್ನು ರೂಢಿಸಿಕೊಂಡರೆ ನಮ್ಮ ಬದುಕಿನ ಕೋಪದಿಂದ ವಿಮುಕ್ತಿಯನ್ನು ಪಡೆಯಬಹುದು.  ಅಂತಹ ಸ್ಥಿತಿಗೆ ತಲುಪಬೇಕು ಎಂದು ದೃಢ ನಿಶ್ಚಯದಿಂದ  ಪ್ರಯತ್ನಿಸದವರಿಗೆಲ್ಲಾ ಅದು ಸಾಧ್ಯ.   


ರವಿ ತಿರುಮಲೈ