Sunday, 2 November 2014

ನಾನೊಂದು ಆದಿ
ನಾನೊಂದು ಅಂತ್ಯ
ನಾನೇ ಜಗತ್ತು
ನಾನೇ ಶೂನ್ಯ
ನಾನೊಂದು ಕಡಲ ಜಲದ ಹನಿ
ಆದ್ಯಂತರಹಿತ ಕಡಲೇ ನಾನು

ಏಕಾಂತ ನನ್ನ ಮಿತಿ
ಒಂದು ಕ್ಷಣಕ್ಕೆ ನಾ ಸ್ಥಬ್ಧ
ನನಗಾಗಿ ನನ್ನದೇ ವ್ಯರ್ಥ ಹುಡುಕಾಟ
ನಾನಿಲ್ಲ ನಾನಿರುವೆಗಳ ನಡುವೆ
ಕಣ್ಣ ಮುಚ್ಚಾಲೆಯಾಟ
ಮೂಲೆಮೂಲೆಯಲ್ಲೂ ನನ್ನನ್ನೇ
ತುಂಬಿಕೊಳ್ಳಲು ಪರದಾಟ

ಅಸ್ಪಷ್ಟ ನೀತಿ ನಿಯಮಗಳ ನಡುವೆ
ನನ್ನ ಯೋಚನೆಗಳು ಜೀರ್ಣವಾಗದೆ
ನಿರಂತರ ಪ್ರಶ್ನೆಗಳ ಸುರಿಮಳೆ
ನಿರುತ್ತರದ ಸ್ಥಿತಿಯಲ್ಲಿ ತಲೆಬಾಗುವೆ
ನಾನಾ ಪರವಸ್ತುವಿಗೆ

ಎನ್ನ ಪದಗಳಿಂದ ನಾನಮರ
ಗೋರಿಗಳಿಂದೆದ್ದು ಕೂಗುವ
ಎನ್ನ ಪೂರ್ವಜರ ಕರೆಗಳಿಂದ,
ಬರೆಯುವುದೆನ್ನ ಹಕ್ಕು, ಧರ್ಮ

ಅಣಕವಾಡುವವರು, ಅಣಕಿಸಲಿ
ಹೊಗಳುವವರ ಗುಣಗಾನವಿರಲಿ
ವಿದ್ವಜ್ಜನರೊಪ್ಪಿಕೊಳ್ಳಲಿ, ಸೂರ್ಯನ
ಕಡೆ ಮುಖಮಾಡಿ ನಾಯಿ ಬೊಗುಳಲಿ


ನಾನೊಂದು ಆದಿ ನಾನೊಂದು ಅಂತ್ಯ



ರವಿ ತಿರುಮಲೈ 
೧. ೧೧. ೨೦೧೪

Saturday, 14 June 2014

ಜೂನ್ ೫ ನೇ  ತಾರೀಖಿನಂದು ಬೆಂಗಳೂರಿನಿಂದ ಪ್ರಕಟಗೊಳ್ಳುವ " ಉದಯವಾಣಿ
" ಪತ್ರಿಕೆಯಲ್ಲಿ ಕಗ್ಗ ರಸಧಾರೆ-ಸಂಪುಟ ೨ ನ್ನು ಕುರಿತು ಪುಸ್ತಕ ವಿಮರ್ಶಾ ಲೇಖನ ಪ್ರಕಟವಾಗಿತ್ತು



ತಾರೀಕು ೭.೬.೨೦೧೪
ರ ಹೊಸ ದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಕಗ್ಗ ರಸಧಾರೆ ಪುಸ್ತಕದ ಸುಧೀರ್ಘ ವಿಮರ್ಶೆ 





ವಿಜಯ ಕರ್ನಾಟಕದ ಸಾಪ್ತಾಹಿಕ ಪತ್ರಿಕೆ " ಭೋಧಿವೃಕ್ಷ" ದಲ್ಲಿ ಕಗ್ಗ ರಸಧಾರೆ ಸಂಪುಟ ಎರಡರ ಪುಸ್ತಕ ಪರಿಚಯ

ಪ್ರಕಟಣಾ ದಿನಾಂಕ ೧೪.೬.೨೦೧೪  

Monday, 24 March 2014

ಹರಸಿರೆನ್ನನು

ನನ್ನ ಹುಟ್ಟುಹಬ್ಬದಂದು ನನ್ನ ಮಿತ್ರರಲ್ಲಿ 'ಹರಸಿ' ರೆಂದು ಬೇಡಿದ ಪರಿ ಹೀಗಿತ್ತು 


=============================
ಹರಸಿರೆನ್ನನು 
=============================


ಹರಸಿರೆನ್ನನು ಇಂದು 

ನೂರ್ಕಾಲ ಬಾಳೆಂದು

ಆ ನಿಮ್ಮ ಹರಕೆಯೆಲ್ಲವು

ಸಫಲವಾಗಲೆಂದು. 



ಸವೆಸಿ ಬಂದಿಹೆ ನಾನು 

೫೯  ವಸಂತಗಳನು 

ಶೇಷವೆಷ್ಟೋ ನಾ ಅರಿಯೆ 

ಕ್ಲೇಶವೆಷ್ಟೋ ಅದ ಸವೆಯೆ 



ಕಷ್ಟಸುಖಗಳ ಮಿಶ್ರಣದಿಂ ಕಳೆದೆ 

ಅನುಭವದ ಸಾರದಿಂ ನಾ ಬೆಳೆದೆ 

ಏರು ತಗ್ಗುಗಳ ನಾ ದಾಟಿ ಬಂದೆ 

ಸೋಲುಗೆಲುವುಗಳ ನಾ ಮೆಟ್ಟಿನಿಂದೆ 



ಪ್ರೀತಿ ಪ್ರೇಮಗಳನೆಷ್ಟು ಸವಿದೆನೋ 

ದ್ವೇಷಾಸೂಯೆಗಳನೆಷ್ಟು ಸಹಿಸಿದೆನೋ 

ಗತವೆನೆಲ್ಲವ ಮರೆತು ಬಾಳಬೇಕೆಂದಿಹೆನು 

ಇಂದೇ ನಿಜ ಇದುವೇ ಸುಖ ಎಂದು ನಂಬಿಹೆನು 



ನಿಮ್ಮೊಲವು ಪ್ರೀತಿಯೇ ಜೀವಸತ್ವವು ಎನಗೆ 

ನಿಮ್ಮಂತರಂಗದಲಿ ತಾವು ಕೊಡಿರೆನಗೆ

ಮಾಸದಿರಲಿ ನೆನಪೆನ್ನ ನಿಮ್ಮ ನೆನಪಿನೊಳಗೆ 

ನಾ ನಿಮ್ಮ ದಾಸ ಎನ್ನ ಕೊನೆಯುಸಿರಿನವರೆಗೆ   


ರವಿ ತಿರುಮಲೈ 
೨೧.03.೨೦೧೪

ದುರಿತಗಳಾ ಹರಿಸೋ


ದುರಿತಗಳಾ ಹರಿಸೋ ಶ್ರೀ ಹರಿ 
ಅರಿಯದಾಗಿಹೆ ದಾರಿ ನಾ \ ದುರಿತ\

ಆವ ಕರ್ಮದಿ ಆವ ಪಾಪವೋ
ಆವ ಕರ್ಮದಿ ಆವ ಪುಣ್ಯವೋ
ಪರಿಯನರಿಯದೆ ಪರಿತಪಿಸಿಹೆ
ದಾರಿತೊರೋ ಅರಿಗಳರಿಯೇ \ ದುರಿತ\

ಸುರರಿಗಮೃತವ ಸುರಿದು ಪೊರೆಯುತ
ನರೆಯನೆರೆದಿಹೆ ನರರಿಗೇತಕೋ
ಚರದಿ ಮೆರೆಸುವ ಹರಿವನಿರಿಸಿದೆ
ಸ್ಥಿರವ ಮರೆಸುವ ಪರಿಯಿದೇತಕೋ \ದುರಿತ\

ಮೂರು ಜನುಮದಿ ದ್ವಾರಪಾಲರ
ವೈರಿಯಂದದಿ ಹರಿದೆ ಶಾಪವ
ಶಿರದಿಯಿರಿಸುತ ಚರಣಕಮಲವ
ಪೊರೆದೆ ಬಲಿಯನು ವರವ ಕರುಣಿಸಿ \ದುರಿತ\

ಅರಳಿ ನಿಲ್ಲೋ ಹರಿಯೆ ಹೃದಯದಿ
ಅರಿವನಿರಿಸೋ ಗರುವ ಮುರಿಯುತ 

ಮರಳಿ ಜನನವು ಬಾರದಿರುವಾ

ಪರಮಪದವನು ತೋರಿ ಹರಸೋ \ ದುರಿತ\
 


ಸಾಗರದ ಶ್ರೀ ನಂಜುಂಡ ಭಟ್ಟರ ಕೃಪೆಯಿಂದ 
ರವಿ ತಿರುಮಲೈ


Thursday, 12 December 2013

ಪ್ರಾರ್ಥನೆ

ನಿನ್ನ ಭಾವ
ಎನ್ನ ಭಕ್ತಿ
ಮುನ್ನ ಅರಿಯದಾದೆನು

ಹೊನ್ನೆಲ್ಲವು
ಮಣ್ಣಲ್ಲವೇ
ಬೇಧ ಕಾಣದಾದೆನು

ತಡೆಯಲಾರೆ
ಕಡೆಯತನಕ
ಕರ್ಮಶೇಷದ ಹೊರೆಯನು

ತೀರದಲ್ಲಿ ನಿಂದಿಹೆನು
ಭಾರಹೊತ್ತು ಬಂದಿಹೆನು
ತೋರು ಕೃಪೆಯ ದಾತನೆ