Saturday, 22 June 2013

ಅಂತರಂಗದ ಗಾವಿಲರು




ಗಿರಿ ಶಿಖರ ಸುತ್ತಿಹರು 
ಮರಗಿಡವ ಮುತ್ತಿಹರು 
ಅಂತರಂಗದಿ ದೈವವ
ಕಾಣದಾ ಗಾವಿಲರು 

ಹೆಸರು ಸಾವಿರಾರು 
ರೂಪ ನೂರ ಕೊಟ್ಟಿಹರು 
ಇಲ್ಲದಾ ಆಕಾರ ಕಾಣ್ಬ 
ಹಂಬಲದ ಹುಚ್ಚರಿವರು 

ಹಲವು ಆಚಾರಗಳ 
ಬಲವಂತರಿವರು 
ಕೆಲವು ನಂಬಿಕೆಗಳ 
ಗುಣವಂತರಿವರು 

ವರ್ಣನೆಗೆ ಪರಿ ಪರಿಯ 
ಪುರಾಣಗಳ ಕಟ್ಟಿಹರು 
ವರ್ಣನಾತೀತನನು 
ಅಮಿತ ವರ್ಣಿಸಿಹರು

ನಂಬಿಕೆಗೆ ತಲೆತೋಕೆಗಳಿಲ್ಲ
ಹುಂಬತನಕೆ ಕೊನೆಮೊದಲಿಲ್ಲ 
ತಮ್ಮ ಕೂಪವ ತಾವೇ ತೋಡಿ
ಸುಮ್ಮನಿಹ ದೈವವನು 
ಹಳಿದು ದೂರುತಿಹರು 

ಅಂತರಂಗದಿ ದೈವವ
ಕಾಣದಾ ಗಾವಿಲರು 

ರವಿ ತಿರುಮಲೈ 

Sunday, 19 May 2013

ಮಹಿಳೆ ಎಷ್ಟು ಸ್ವತಂತ್ರಳು?




ಇತ್ತೀಚಿಗೆ ಹೆಣ್ಣಿನ ಸ್ಥಾನಮಾನ ಮತ್ತು ರಕ್ಷಣೆಯ ಬಗ್ಗೆ ಒಂದು ಸಕಾರಾತ್ಮಕವಾದ ' ಕೂಗು' ಕೇಳಬರುತ್ತಿದೆ. ಹೆಣ್ಣಿನ ಮೇಲೆ ಶೋಷಣೆ ಎಲ್ಲಾದರೂ ಗುರುತರವಾಗಿ ಹೆಚ್ಚಾದರೆ ಆಗ ಒಂದು ಕೂಗು. ಮತ್ತೆ ಎಲ್ಲ ತಣ್ಣಗೆ ಮಾಮೂಲು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಂತಹ ಸ್ಥಾನಮಾನವಿದೆ ಎಂದು ಸಾವಿರಾರು ವರ್ಷಗಳಿಂದ ಜಿಜ್ಞಾಸೆಗೆ ಒಳಗಾಗಿರುವ ವಿಷಯವೆಂದು ಎಲ್ಲರಿಗೂ ಗೊತ್ತು. 

ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣೇನು, ಗಂಡಿನ ಸ್ಥಿತಿಗತಿಗಳೂ ಸಹ ಬದಲಾಗುತ್ತಲೇ ಇದೆ. ಒಂದು ಕಾಲಕ್ಕೆ ಕೇವಲ ಗೃಹಿಣಿಯಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದ ಹೆಣ್ಣು ಇಂದು ಆರ್ಥಿಕ, ಸಾಮಾಜಿಕ ಇತ್ಯಾದಿ ರಂಗಗಳಲ್ಲಿಯೂ ಸಮಭಾಗಿತ್ವವನ್ನು ನಿರ್ವಹಿಸುತ್ತಿದ್ದಾಳೆ. 

ಹೆಣ್ಣು ಅಬಲೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇದು ನಿಜವೇ? ಹೌದು ಮತ್ತು ಅಲ್ಲ, ಎರಡೂ ಉತ್ತರವನ್ನು ಕೊಡಬಹುದು. 'ಹೌದು' ಏಕೆಂದರೆ ದೈಹಿಕವಾಗಿ ಸಾಮಾನ್ಯವಾಗಿ ಹೆಣ್ಣಿಗೆ ಕಡಿಮೆ ಬಲ . ಆ ಅರ್ಥದಲ್ಲಿ ಆಕೆ 'ಅಬಲೆ'. ಅಂದರೆ ಬಳವಿಲ್ಲದವಳು ಎಂದು ಅರ್ಥ. 'ಅಲ್ಲ'  ಏಕೆಂದರೆ ಮಾನಸಿಕವಾಗಿ  ಹೆಣ್ಣು ಬಲು ಬಲವಂತೆ. ಗಂಡಿಗಿಂತ  ಹೆಣ್ಣು ಅಧಿಕ ದೃಢ ಮನೋಭಾವನ್ನು ಹೊಂದಿದ್ದಾಳೆ.  

ನಮ್ಮ ಭಾರತೀಯ ಸಮಾಜದಲ್ಲಿ ' ಸಂಸಾರ'ಕ್ಕೆ ಬಹಳ ಮಹತ್ವ. ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಸಂಸಾರಕ್ಕೆ ಬದ್ಧರಾಗಿರುತ್ತಾರೆ ಅಥವಾ ಬದ್ಧರಾಗಿರಬೇಕು. ಇದು ನಿಯಮ. ಇಬ್ಬರೂ ಸಂಸಾರವೆಂಬ ಬಂಡಿಯನ್ನು ಎಳೆಯುವ ಜೋಡಿ ಎತ್ತುಗಳಂತೆ ಎಂದು ನಮ್ಮಲ್ಲಿ ಹೇಳುತ್ತಾರೆ, ಅಲ್ಲವೇ? 

ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ  ಒಬ್ಬ 'ಬ್ರಹ್ಮಪುತ್ರ'ನ ಹೊರತು. .'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ:' ಎಂದು ಹೇಳಿದ್ದೇನು, ಸ್ತ್ರೀಯಲ್ಲಿ ದೇವತೆಗಳ ಕಂಡಿದ್ದೇನು, ಸ್ತ್ರೀಯನ್ನು ಹಾಡಿ ಹೊಗಳಿದ್ದೇನು. ಆದರೂ ಸ್ತ್ರೀಯರಿಗೆ ಇರಬೇಕಾದ ಸ್ಥಾನ ಮಾನವು ಇಂದಿನ ಸಮಾಜದಲ್ಲಿ ಇಲ್ಲವೆಂಬ ಕೂಗೂ ಸಹ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಬರುತ್ತಿದೆ.   

ಇಂದಿನ ಸ್ತ್ರೀ ಬದಲಾಗಿದ್ದಾಳೆ. ಅವಳ ಸ್ವಭಾವ ಸ್ವತಂತ್ರವಾಗುತ್ತಿದೆ. ಅವಳ ಉಡುಗೆ ತೊಡುಗೆ ಬದಲಾಗುತ್ತಿದೆ. ಅವಳ ವಿದ್ಯಾಭ್ಯಾಸ ಉತ್ತಮವಾಗುತ್ತಿದೆ. ಅವಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಇಂದು ಸ್ತ್ರೀ ಸ್ವತಂತ್ರಳಾಗುತ್ತಿದ್ದಾಳೆ. ಇದು ಬಹುಶಃ ನಮ್ಮ ಸಮಾಜದ ಕೆಲವರ ಮಟ್ಟಿಗೆ ಅಥವಾ ಕೆಲ ಪ್ರದೇಶಗಳಿಗೆ ಸತ್ಯವೆನ್ನಬಹುದು. ಆದರೆ ಇನ್ನೂ 'ಪುರುಷ ಪ್ರಧಾನ ಸಮಾಜ' ದಲ್ಲಿ ಹೆಣ್ಣಿಗೆ ಸಿಗಬೇಕಾದ ಸ್ಥಾನ ಮಾನ ಮರ್ಯಾದೆಗಳ ಕೊರತೆ ಎದ್ದು ಕಾಣುತ್ತದೆ. ಇದು ಬಹುತೇಕೆ ಅವಿದ್ಯಾವಂತರ, ಕಡಿಮೆ ವಿದ್ಯಾವಂತರ ಮತ್ತು ವಿದ್ಯಾವಂಥರಾದರೂ 'ಸಂಸ್ಕಾರ ಹೀನ' ರಲ್ಲಿ ನಿಚ್ಚಳವಾಗಿ ಕಾಣುತ್ತದೆ.  

ಒಂದು ಕಾಲಕ್ಕೆ ಗಂಡಿನ ದರ್ಪಕ್ಕೆ, ದಬ್ಬಾಳಿಕೆಗೆ ಹೆದರಿ ಎಷ್ಟೇ ಕಷ್ಟ ಬಂದರೂ ಅ ಮನೆಗೆ ಮತ್ತು ಸಂಸಾರಕ್ಕೆ ಅಂಟಿಕೊಂಡಿರುತ್ತಿದ್ದ ಮಹಿಳೆ ಇಂದು ಧೈರ್ಯ ತಂದುಕೊಂಡು ಸ್ವತಂತ್ರವಾಗಿ ಯೋಚಿಸುವ, ತನ್ನ ದಿಶೆಯನ್ನು ತಾನೇ ರೂಪಿಸಿಕೊಳ್ಳುವ ಮತ್ತು ಬಹುತೇಕ ಸಂದರ್ಭಗಳಲ್ಲಿ ಗಂಡಿಗೆ ಮಾರ್ಗ ದರ್ಶನ ಮಾಡುತ್ತಾ , ಆ ಮೂಲಕ ತನ್ನ ಮನೆಯನ್ನು ಮತ್ತು ತನ್ನ ಸಂಸಾರವನ್ನು ಒಂದು ಸರಿಯಾದ ಮಾರ್ಗದಲ್ಲಿ ಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಂಡಿದ್ದಾಳೆ. 

ಸ್ತ್ರೀ ಯೂ ಆ ಪರಮಾತ್ಮನ ಸೃಷ್ಟಿಯಲ್ಲಿ ಪುರುಷನಂತೆಯೇ ಸೃಷ್ಟಿಸಲ್ಪಟ್ಟಿರುವವಳು. ಅವಳಿಗೂ ಸ್ವತಂತ್ರವಾಗಿ ಬದುಕಲು ಪುರುಷನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕಿದೆ.ಆದರೆ ಪುರುಷ ಪ್ರಧಾನವಾದ ಈ ಜಗತ್ತಿನಲ್ಲಿ ಅವಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದರೆ ಅತಿಶಯೋಕ್ತಿ 
ಆಗಲಾರದು. ಇದಕ್ಕೆ ಗಂಡಿನ ಅಹಂಕಾರವೇ ಕಾರಣವೆಂದರೆ ತಪ್ಪಾಗಲಾರದು. ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ, ಸಹೋದ್ಯೋಗಿಯಾಗಿ ಗಂಡಿನ ಒಡನಾಟದಲ್ಲಿರುವ ಹೆಣ್ಣಿಗೆ ಹಲವಾರು ಸಂದರ್ಭಗಳಲ್ಲಿ ಗಂಡಿನ ಮತ್ತು ಅ ಗಂಡಿನ ಮೂಲಕ ಒಟ್ಟು ಸಮುದಾಯದ 'ರಕ್ಷಣೆ' ಬಹಳ ಅವಶ್ಯಕ.     

ಭಾರತೀಯ ಶಾಸ್ತ್ರಗ್ರಂಥಗಳಲ್ಲಿ "ಮನು ಧರ್ಮ ಶಾಸ್ತ್ರವು" ಪ್ರಮುಖವಾದದ್ದು. ಇದರಲ್ಲಿ ಒಂದು ಶ್ಲೋಕವಿದೆ. 


"ಪಿತಾ  ರಕ್ಷತಿ ಕೌಮಾರೇ 
ಭರ್ತಾ ರಕ್ಷತಿ ಯೌವನೆ 
ರಕ್ಷಂತಿ ಸ್ಥವಿರೆ ಪುತ್ರಾಃ
ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು 

ಇಲ್ಲಿ ಮೊದಲ ಮೂರು ಸಾಲನ್ನು ನೋಡಿ. ಇಲ್ಲಿ ಯಾರು ಸ್ತ್ರೀಯನ್ನು ಯಾವ ಯಾವ ಸಂದರ್ಭದಲ್ಲಿ ರಕ್ಷಿಸುತ್ತಾರೆ ಎಂದು ಉಲ್ಲೇಖಮಾಡಲಾಗಿದೆ. ಇಲ್ಲಿ ದೈಹಿಕ ರಕ್ಷಣೆಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ನಾವು ನೋಡಬೇಕು.  ಆದರೆ ನಮ್ಮವರು ಕೊನೆಯ "ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ'  ಎಂಬ ಸಾಲಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು " ಸ್ತ್ರೀ ಸ್ವಾತಂತ್ರಕ್ಕೆ ಅನರ್ಹಳು " ಎಂದು ಪ್ರತಿಪಾದಿಸುತ್ತಾ, ಸಮಾಜದ ಎಲ್ಲ ರಂಗಗಳಲ್ಲಿಯೂ ಅವಳನ್ನು ತುಳಿತಕ್ಕೆ ಒಳಪಡಿಸಿದ್ದಾರೆ. ಇದು ಪುರುಷ ಸಮಾಜದ ಘೋರ ಅಪರಾಧವಲ್ಲದೆ ಮತ್ತೇನು? ಕೇವಲ ದೈಹಿಕ ರಕ್ಷಣೆಯೇ ಮುಖ್ಯವಲ್ಲದೆ ಸ್ತ್ರೀಯನ್ನು ಮತ್ತೆ ಯಾವ ಯಾವ ಪ್ರಸಂಗಗಳಲ್ಲಿ ರಕ್ಷಿಸಬೇಕು ಮತ್ತು ಹಾಗೆ ರಕ್ಷಿಸುವುದರಿಂದ ಒಂದು  ಕುಟುಂಬಕ್ಕೆ ಅಥವಾ ಒಂದು ಸಮಾಜಕ್ಕೆ ಯಾವ ರೀತಿ ಒಳಿತಾಗುತ್ತದೆ ಎಂದು ಮೇಲೆ ಉಲ್ಲೇಖಿಸಿದ 'ಮನು ಧರ್ಮ ಶಾಸ್ತ್ರ' ದಲ್ಲೇ ಹೇಳಲ್ಪಟ್ಟಿದೆ. 

ಸೂಕ್ಷ್ಮ್ಯೇಭ್ಯೋಪಿ ಪ್ರಸಂಗೇಭ್ಯಃ  
ಸ್ತ್ರಿಯೋರರ್ಕ್ಷ್ಯಾ ವಿಶೇಷತಃ  
ದ್ವಯೋರ್ಹಿ ಕುಲಯೋ:
ಶೋಕಮಾವಹೇಯು:ಅರಕ್ಷಿತಾಃ

ಸೂಕ್ಷ್ಟರ ಪ್ರಸಂಗಗಳಲ್ಲಿ ಎಂದರೆ ಗಲಭೆ,ದೊಂಬಿ ಯುದ್ಧದಂತಹ ಪ್ರಸಂಗಗಳಲ್ಲಿ ಮತ್ತು ದುಷ್ಟ ಜನರಿಂದ ಸ್ತ್ರೀಯರನ್ನು ವಿಶೇಷವಾಗಿ ರಕ್ಷಿಸಬೇಕು. ಹಾಗೆ ರಕ್ಷಣೆ ಮಾಡದಿದ್ದ ಪ್ರಸಂಗದಲ್ಲಿ " ದ್ವಯೋರ್ಹಿ ಕುಲಯೋ:ಶೋಕಮಾವಹೇಯು:" ರಕ್ಷಣೆ ಮಾಡಬೇಕಾದವರು ಮತ್ತು ರಕ್ಷಿಸಲ್ಪಡಬೇಕಾದವರು, ಎರಡೂ ಕುಲದವರು ದುಃಖಪಡಬೇಕಾದ ಸ್ಥಿತಿ ಒದಗುತ್ತದೆ ಎಂದು ಹೇಳುತ್ತಾ ಸ್ತ್ರೀ ರಕ್ಷಣೆಗೆ ಒತ್ತು ನೀಡಿದ್ದಾನೆ ಮನು. ಆದರೆ ನಮ್ಮ ಸಮಾಜದಲ್ಲಿ ಇದು ನಡೆಯುತ್ತಿದೆಯೇ. ಎಲ್ಲ ರೀತಿಯಲ್ಲಿಯೂ ರಕ್ಷಿಸಲ್ಪಡಬೇಕಾದ ಸ್ತ್ರೀಯನ್ನು ರಕ್ಷಿಸದೇ, " ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ" ಎಂದು ಕೇವಲ ಅವಳನ್ನು ತುಳಿಯಲಿಕ್ಕಾಗಿಯೇ ತಮಗನುಕೂಲವಾಗುವಂತೆ ಶಾಸ್ತ್ರವನ್ನು ತಿರುಚಿದರೆ ಇದು ಪುರುಷ ಸಮಾಜದ 'ದುಷ್ಟ'ತನವಲ್ಲದೆ ಮತ್ತೇನು. 

ಭಾರ್ಯಾ ಎಂದರೆ ಸಹಧರ್ಮಿಣಿ ಎಂದು ಅರ್ಥ. 'ಬಿಭ್ರತಿ ಇತಿ ಭಾರ್ಯಾ', ಎಂದರೆ  ಎಲ್ಲವನ್ನೂ ಭರಿಸುತ್ತಾಳಾದ್ದರಿಂದ ಭಾರ್ಯಾ. ಇವಳು ಎಲ್ಲವನ್ನೂ ಭರಿಸಬೇಕು. ಆದರೆ ಅವಳನ್ನು ರಕ್ಷಿಸಲು, ಭರಿಸಲು ಪುರುಷನಿಗೆ ಸಾಧ್ಯವಿಲ್ಲ. ತನ್ನ ಮನೆ, ಮಕ್ಕಳು ಎಲ್ಲವನ್ನೂ ಭರಿಸುವ ಮತ್ತು ರಕ್ಷಿಸುವ ಅವಳನ್ನು ಏಕೆ ಮತ್ತು ಹೇಗೆ ರಕ್ಷಿಸಬೇಕು ಎಂದು ಮನು ಹೀಗೆ ಹೇಳುತ್ತಾನೆ

ಭಾರ್ಯಾಯಾಂ ರಕ್ಷ್ಯಮಾಣಾಯಾಂ
ಪ್ರಜಾ ಭವತಿ ರಕ್ಷಿತಾಃ 
ಪ್ರಜಾಯಾಂ ರಕ್ಷ್ಯಮಾಣಾಯಾಂ 
ಆತ್ಮಾ ಭವತಿ ರಕ್ಷಿತಃ 

ಭಾರ್ಯೆ, ಎಂದರೆ ಸಹಧರ್ಮಿಣಿಯನ್ನು ರಕ್ಷಿಸಿದರೆ, ಅವಳಿಂದ ಪಡೆದ ಮಕ್ಕಳು ರಕ್ಷಿಸಲ್ಪಡುತ್ತಾರೆ ಮತ್ತು ಮಕ್ಕಳು ರಕ್ಷಿಸಲ್ಪಟ್ಟರೆ ತಾನೂ ಎಂದರೆ ಪುರುಷನೂ ರಕ್ಷಿಸಲ್ಪಡುತ್ತಾನೆ ಎಂದು ಅರ್ಥ. ಒಂದು ಸಂಸಾರದಲ್ಲಿ ತಾಯಿ ಅರಕ್ಷಿತಳಾದರೆ, ಇದೇ ಸಂಸಾರ ಛಿದ್ರ ಛಿದ್ರವಾಗಿರುವುದನ್ನು ನಾವು ನೋಡಿಲ್ಲವೇ? ಅಷ್ಟೇ ಅಲ್ಲ ಗಂಡ ತನ್ನ ಹೆಂಡತಿಯನ್ನು ರಕ್ಷಿಸದೇ ಇದ್ದಾಗ ಸ್ತ್ರೀ ತನ್ನ ಸ್ವ-ಶಕ್ತಿಯಿಂದ ತನ್ನ  ರಕ್ಷಣೆಯನ್ನು ಮಾಡಿಕೊಂಡು, ಮಕ್ಕಳನ್ನು ರಕ್ಷಿಸಿ,  ಪೋಷಿಸಿ, ಬೆಳೆಸಿ ಯೋಗ್ಯರನ್ನಾಗಿಸಿದ ಉದಾಹರಣೆಗಳು ನಮಗೆ ಹೇರಳವಾಗಿ ಸಿಗುತ್ತದೆ. ಆದರೆ "ಭರ್ತ" ಎಂದು ಕರೆಸಿಕೊಂಡರೂ,  ಸ್ತ್ರೀ ಸಕ್ರಿಯವಾಗದಿದ್ದಾಗ ಕುಟುಂಬದ ಅಥವಾ ಸಂಸಾರದ ಭಾರವನ್ನು ಹೊತ್ತು ಕುಟುಂಬ ಮತ್ತು ಮಕ್ಕಳನ್ನು ಯೋಗ್ಯರನ್ನಾಗಿಸಿ ಸಫಲತೆಯನ್ನು ಪಡೆದ ಪುರುಷರ ಉದಾಹರಣೆಗಳು ಸಿಗುವುದೇ ಇಲ್ಲ. 

ಸ್ತ್ರೀಯನ್ನು ರಕ್ಷಿಸಿದರೆ ಆಗುವ ಪ್ರಯೋಜನಗಳನ್ನು ಮುಂದುವರೆಸುತ್ತಾ ಮನು ಹೀಗೆ ಹೇಳುತ್ತಾನೆ

"ಸ್ವಾಂ ಪ್ರಸೂತಿಂ ಚರಿತ್ರಂ 
 ಚ ಕುಲಂ ಆತ್ಮಾನಮೇವ ಚ 
 ಸ್ವಂ ಚ ಧರ್ಮಂ  ಪ್ರಯತ್ನೇನ 
 ಜಾಯಾಂ ರಕ್ಷನ್ ಹಿ ರಕ್ಷತಿ" 

ಎಂದು ಹೇಳುತ್ತಾ, ಸ್ತ್ರೀ ರಕ್ಷಣೆಯಿಂದ ಅವಳ ಮಕ್ಕಳನ್ನು, ಮಕ್ಕಳ, ಮನೆಯ, ತನ್ನ ಚರಿತ್ರೆಯೂ ರಕ್ಷಿತವಾಗುತ್ತದೆ. 'ಜಾಯಾ' ಅಂದ್ರೆ ಹೆಂಡತಿಯ ರಕ್ಷಣೆಯಿಂದ ಅವನ ಧರ್ಮವನ್ನು ಮತ್ತು ಸಂಸ್ಕಾರಗಳನ್ನು ರಕ್ಷಿಸಿಕೊಂಡಂತೆ ಆಗುತ್ತದೆ ಎನ್ನುತದೆ ಈ ಶ್ಲೋಕ. ನೋಡಿ ನಮ್ಮ ಭಾರತೀಯ ಸಂಸ್ಕಾರಗಳಲ್ಲಿ ಸ್ತ್ರೀ ಇಲ್ಲದೆ  ಯಾವ ಶುಭ ಕಾರ್ಯ ಮಾಡಲು ಪುರುಷನಿಗೆ ಶಾಸ್ತ್ರ ಪ್ರಕಾರ ಹಕ್ಕೂ ಇಲ್ಲ ಅರ್ಹತೆಯೂ ಇಲ್ಲ. ಹಾಗೆ ಇವನಿಗೆ ಪುಣ್ಯ ತರುವ ಕೆಲಸಗಳಿಗೆ "ಅವಳು" ಬೇಕು. ಆದರೆ ಇವನು ಮಾಡುವ ಪಾಪ ಕರ್ಮಗಳಿಗೆ ಇವಳು ಗುರಿಯಾಗಬೇಕು. ಇದು ಅನ್ಯಾಯವಲ್ಲದೆ ಮತ್ತೇನು? 


ಶಾಸ್ತ್ರ ಅವಳಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ ಮತ್ತು ಅವಳಿಗೆ ಎಷ್ಟೊಂದು ಜವಾಬ್ದಾರಿಯನ್ನು ನೀಡಿದೆ ಎಂದು ಅದೇ ಮನುಧರ್ಮ ಶಾಸ್ತ್ರ ಹೇಳುತ್ತದೆ.

'ಅರ್ಥಸ್ಯ ಸಂಗ್ರಹೆ ಚೈನಾಮ್
ವ್ಯೆಯೇಚೈವಂ ನಿಯೋಜಯೇತ್ 
ಶೌಚೆ ಧರ್ಮೇ ಅನ್ನಪಕ್ತ್ಯಾಂ ಚ 
ಪಾರಿಣಾಹ್ಯಸ್ಯ ವೇಕ್ಷಣೆ ". 

ನೋಡಿ ಹಣವನ್ನು ಸಂಪಾದಿಸುವುದಷ್ಟೇ ಪುರುಷನ ಕೆಲಸ ಎಂದು ಸ್ಪಷ್ಟವಾಗಿ ಹೇಳುವ ಈ ಶ್ಲೋಕ, ಆ ಹಣವನ್ನು ಸಂಗ್ರಹ ಮಾಡಿಕೊಳ್ಳುವುದು, ವ್ಯಯ ಮಾಡುವುದು ಮತ್ತು ಗೃಹದ ಶುದ್ಧಿಯ, ಅನ್ನ ವಿತರಣೆಯ ಮತ್ತು ಸಮಾರಂಭಗಳ ಮೇಲ್ವಿಚಾರಣೆಯನ್ನೂ ಸಹ ಸ್ತ್ರೀಯರಿಗೆ ಒಪ್ಪಿಸಿದೆ ಶಾಸ್ತ್ರ. 

ಹೀಗಿರುವಾಗ ಸ್ತ್ರೀ ಪುರುಷನಿಗಿಂತ ಯಾವ ರಂಗದಲ್ಲೂ ಕೀಳಲ್ಲ ಎಂದು ಶಾಸ್ತ್ರವೇ ಒಪ್ಪಿಕೊಂಡಿದೆ. ಆದರೆ ಮನುವಿನ ಇಷ್ಟು ಶ್ಲೋಕಗಳಲ್ಲಿ ಮಿಕ್ಕದ್ದನ್ನೆಲ್ಲಾ ಬಿಟ್ಟು, 'ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ'  ಎಂಬ ಒಂದನ್ನು ಹಿಡಿದುಕೊಂಡು, "ನೋಡಿ ಈ ಮನು ಒಬ್ಬ ಸ್ತ್ರೀ ವಿರೋಧಿ. ಅವನೇ ಹೀಗೆ ಹೇಳಿದ್ದಾನೆ, ಅವನು ಲಫಂಗ ಅವನನ್ನು ವಿರೋಧಿಸುವುದೇ ನಮ್ಮ ಮೂಲಭೂತ ಧ್ಯೇಯ" ವೆಂಬಂತೆ ವರ್ತಿಸುವ  ಸ್ತ್ರೀ ಪರ ಸಂಘಗಳು ತಪ್ಪು ಮಾಡುತ್ತಾ "ಸ್ತ್ರೀಪರ" ಎಂದು ತಮ್ಮನ್ನು   ತಾವು ಕರೆದುಕೊಂಡರೂ ಸ್ತ್ರೀ ವಿರೋಧಿ ಕೆಲಸಗಳನ್ನು ಮಾಡುತ್ತಿವೆ ಎಂದು ಅನ್ನಿಸುತ್ತದೆ. 

ಸ್ತ್ರೀಯರ ಮೇಲೆ ಆಗುತ್ತಿರುವ ಅತ್ಯಾಚಾರಗಳಿಗೆ ಮೂಲತಃ ' ಗಂಡು ಹೆಣ್ಣನ್ನು  ಭೋಗ ವಸ್ತು' ಎಂದು ತಿಳಿದಿರುವ  ಪುರುಷಾಹಂಕಾರವೇ ಕಾರಣ.ಇಂದಿನ ಸಮಾಜದಲ್ಲಿ ಸ್ತ್ರೀಯರೂ ಸಹ ತಮ್ಮ ಉಡುಗೆ ತೊಡುಗೆಗಳಿಂದ ಅಂತಹ ಭಾವನೆಗೆ ಪ್ರೋತ್ಸಾಹವನ್ನೇ ನೀಡುತ್ತಾರೆ. ಇದು ಎಲ್ಲೆಡೆಯಲ್ಲೂ ನಿಚ್ಚಳವಾಗಿ ಕಾಣುತ್ತಿದೆ. ಏಕೆ ಒಂದು ಸಿನಿಮಾವನ್ನೇ ನೋಡಿ. ಅದರಲ್ಲಿ ಗಂಡಿಗೆ ಮೈತುಂಬ ಬಟ್ಟೆ ಮತ್ತು ಹೆಣ್ಣಿಗೆ ಸಾಧ್ಯವಾದಷ್ಟು ಕಡಿಮೆ.  

"ದ್ರುಷ್ಯಮಾಣೇ ಭವೇತ್ ಪ್ರೀತಿಃ " ಎಂದರೆ 'ಕಂಡರೆ ಪಡೆಯಬೇಕೆನ್ನುವ ಆಸೆ '.ಗಂಡಸರಿಗೆ ಮೊದಲೇ ಪುರುಷಾಹಂಕಾರ,  ಅದರ ಮೇಲೆ ಸಂಯಮ  ಕಡಿಮೆ. ಅದಕ್ಕೆ ಇಂಬುಕೊಡುವಂತೆ ಸ್ತ್ರೀಯರ ಉಡುಗೆ ತೊಡುಗೆಗಳೂ ಸಹ ಪ್ರಚೋದಕವಾಗಿರುತ್ತವೆ. ಹತ್ತು ಹಲವಾರು ಕಾರಣಗಳಲ್ಲಿ ಇದೂ ಸಹ ಒಂದು . ಇನ್ನು ನಮ್ಮ ಜಾಹೀರಾತುಗಳು, ಕೇವಲ ಬಾಹ್ಯ ಸೌಂದರ್ಯಕ್ಕಷ್ಟೇ ಗಮನ. ಈ ಎಲ್ಲ ನಿಟ್ಟಿನಲ್ಲೂ ಹೆಣ್ಣು ಯೋಚನೆ ಮಾಡಿದರೆ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು.   


ಮೂಲತಃ ಸ್ತ್ರೀ ತಡೆದುಕೊಳ್ಳುತ್ತಾಳೆ. ಅವಳಿಗೆ ತಾಳ್ಮೆ ಹೆಚ್ಚು. ಅವಳು ಬಹಳ ಸೂಕ್ತವಾಗಿ  ಯೋಚಿಸುತ್ತಾಳೆ . ಏಕೆಂದರೆ ಅವಳು ತನ್ನ ಸಂಸಾರದ ಜವಾಬ್ದಾರಿಯನ್ನು ಸ್ವ-ಇಚ್ಚೆಯಿಂದ ಹೊರುತ್ತಾಳೆ. ಸಂಸಾರದಲ್ಲಿ  ಗಂಡು ಸೋತರೆ ಆ ಸಂಸಾರವನ್ನು ಹೇಗಾದರೂ ನಿಭಾಯಿಸಿಸುವ ಕ್ಷಮತೆ, ಧೈರ್ಯ ಮತ್ತು ಛಲ ಹೆಣ್ಣಿಗೆ ಇರುತ್ತದೆ. ಆದರೆ ಒಂದು ಹೆಣ್ಣು ಸೋತರೆ ಆ ಸಂಸಾರವನ್ನು ಅಷ್ಟು ಸಮರ್ಪಕವಾಗಿ ಗಂಡು ನಿಭಾಯಿಸಲಾರ. ಅಂತಹ ಸಂಸಾರವನ್ನು ಆ ದೇವರೇ ಕಾಪಾಡಬೇಕು. 

ಸ್ತ್ರೀ ಎಲ್ಲ ರೀತಿಯಲ್ಲೂ ಅಬಲೆಯಲ್ಲ. ಪುರುಷ ಸಮಾಜದ ದುಷ್ಟತನಕ್ಕೆ ಬಲಿಯಾದ ಸ್ತ್ರೀ ಈಗ ಸಕ್ರಿಯವಾಗಿ ಎಚ್ಚೆತ್ತುಕೊಂಡಿದ್ದಾಳೆ. ತನ್ನನ್ನು ತಾನು ನೋಡಿಕೊಳ್ಳುವಷ್ಟು ರಕ್ಷಿಸಿಕೊಳ್ಳುವಷ್ಟು ಬಲವನ್ನು ಸ್ತ್ರೀ ಪಡೆದಿದ್ದಾಳೆ. ಸ್ತ್ರೀ ಪುರುಷರಿಬ್ಬರೂ ಸಮಾಜದಲ್ಲಿ ಸಮಾನವಾಗಿ, ಯಾರೊಬ್ಬರೂ ತಾವು ಮೇಲು ಎನ್ನುವ ಭಾವ ಬಿಟ್ಟು ಸಮನ್ವಯದಿಂದ ಬಾಳಿದರೆ ಸಮಾಜದಲ್ಲಿ ಗೊಂದಲಗಳು ಕಡಿಮೆಯಾಗಿ ಶಾಂತಿ ಬರಬಹುದು. 

"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ " ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ  ಎಂದು ಹೇಳಿದ ಭಾರತೀಯ ಸಂಸ್ಕೃತಿಯಲ್ಲಿ, ನಾರಿಯರ ಮೇಲೆ ಇಷ್ಟೊಂದು ಅತ್ಯಾಚಾರದ ಸಮಾಚಾರಗಳು ನಾವು ಕೇಳಿಬರುವುದು ಒಂದು ವಿಪರ್ಯಾಸವಲ್ಲವೇ? ನಾರಿಯರನ್ನು ಪೂಜಿಸದಿದ್ದರೂ " ಗಂಡು - ಹೆಣ್ಣು" ಸಹಭಾಗಿತ್ವದ ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಗೌರವವಿದ್ದರೆ ಸಾಕಲ್ಲವೇ?   


ರವಿ ತಿರುಮಲೈ 
19.5.2013

Saturday, 13 April 2013

ಹೀಗೂ ಒಂದು ಕವಿತೆ

ನಿನ್ನ ಒಲುಮೆಗಾಗಿ 

ಎಷ್ಟು ದಿನ ಕಾದರು 
ಬೀಸದದು ತಂಬೆಲರು 
ಬಿರಿ ವಿರಹದ ನಿಟ್ಟುಸಿರು   

ಅರಿಯದಾದೆ ನೀ ಎನ್ನೊಲವ 
ತೋರದಾದೆ ಬಗಿದು ನಾ ಎನ್ನ ಮನವ 

ಕಾಣಲಾದರೆ ನೀ ನೋಡು ಇಣುಕಿ 
ಅಂತರಂಗದಿ  ಅಡಗಿಹುದು ವಿರಹದಾ ಬೆಂಕಿ  

ನಿನ್ನ ದಾರಿಯ ತುಳಿಯಲು ನಾ ಸಿದ್ಧನಿದ್ದೆ 
ನಿನ್ನೊಂದು 'ಸರಿ'ಕಾರಕ್ಕೆ ಬಲಿಯಾಯ್ತು ನಿದ್ದೆ 

ನಿನ್ನ ನೆನಪಲಿ ವರುಷಗಳೇ ಸರಿದಿವೆ 
ನಿನ್ನೊಡನಾಟದಾ ನೆನಪುಗಳೇ ಸುರಿದಿವೆ 

ಬರುವೆಯೋ ಇಲ್ಲವೋ ತಿಳಿಯುವುದು ಹೇಗೆ 
ಸೇರೆನ್ನ ಸನಿಹವಾ ತಾಳಲಾರೆನು ಬೇಗೆ 



ರವಿ ತಿರುಮಲೈ 

Wednesday, 23 January 2013

ವರ್ಣಾಶ್ರಮ -ಶೂದ್ರ




ಹೌದು ನಾ ಶೂದ್ರ ಹೌದು 
ಶುದ್ಧ ಶೂದ್ರ ಹೌದು. 
ನಿಮಗೆ ಬೇಸರವಾದರೂ  
ನನಗಿಲ್ಲ ಚಿಂತೆ ಕಿಂಚಿತ್ತಾದರೂ 

ನಾ ಓದುವ ದಿನಗಳಲ್ಲಿ 
ಜ್ಞಾನದ ಓಣಿಗಳಲ್ಲಿ 
ಓಡುವಾಗ ನಾ, ಓಲಾಡುವಾಗ  
ಬ್ರಾಹ್ಮಣನಾಗಿದ್ದೆ. 

ಮುಂದೆ ಮನೆ ಮಡದಿ 
ಎಂದು ಸಂಸಾರ ಕಟ್ಟಿಕೊಂಡಾಗ 
ನಮಗೆ ಮಕ್ಕಳು ಹುಟ್ಟಿಕೊಂಡಾಗ 
ಹೊಟ್ಟೆಪಾಡಿಗೆ ಧನಾರ್ಜನೆ ಮಾಡುವಾಗ,
ನಾ ವೈಶ್ಯನೂ ಆಗಿದ್ದ ದಿನಗಳು ಇತ್ತಾಗ.

ಪಾಪ ಇವರಿಗೆ ನಾನೇ ಗತಿಯಂದು 
ಇವರೆಲ್ಲ ನೀ ಕಾಯಬೇಕೆಂದಾಗ 
ಕೈಯ್ಯಲ್ಲಿ ಕತ್ತಿ ಹಿಡಿಯದಿದ್ದರೂ, ನನ್ನವರ 
ಕ್ಷಾತ್ರ ತೇಜಸ್ಸಿನಿಂದ ಕಾಯುತ್ತಿದ್ದೆ 
ಕ್ಷತ್ರಿಯವತಾರ ಹೊತ್ತಿದ್ದೆ.

ಹೌದು ಈಗ ಶೂದ್ರ ನಾನು 
ಚರಂಡಿ ತೊಳೆಯುವ ಶೂದ್ರ ನಾನು 
ಮನಸ್ಸಿನ ಓಣಿಗಳಲ್ಲಿನ ಗಲ್ಲಿಗಲ್ಲಿಯ 
ಕೊಳೆ ತೊಳೆಯುವ ಶೂದ್ರ ನಾನು 

ಬದುಕ ಓಟದಲ್ಲಿ ನಾ ಸುತ್ತಿದ 
ಬೀದಿಗಳ ಧೂಳಿಂದ ಗಲೀಜಾದ ಮನವ 
ತೊಳೆಯುವ ಶೂದ್ರ ನಾನು 
ಆರು ಅರಿಗಳ ಸಂಗದಲ್ಲಂಟಿಸಿಕೊಂಡ 
ಪರಿಪರಿಯಾದ ಹೊಲಸ ತೊಳೆಯುವ ಶೂದ್ರ ನಾನು.  

ಬುದ್ಧಿಗಂಟಿದ ಹೊಲಸನ್ನು ತೊಳೆಯುವ 
ಶುದ್ಧ ಶೂದ್ರ ನಾನು, ಹಿತವಾಗಿಸುವ 
ಕಾರ್ಯಮಾಡುವ ಶೂದ್ರ ನಾನು 
ಆತ್ಮ ಶುದ್ಧಿಮಾಡುವ ಶೂದ್ರ ನಾನು 

ನಾಲ್ಕೂ ವರ್ಣಗಳಲ್ಲಿ ತೂರಿಬಂದ 
ನನಗೆ ಬಹಳ ಹೆಮ್ಮೆ, ನಾ ಶೂದ್ರನೆಂದು
ಹೊಲಸ ತೊಳೆಯುವ ಶ್ರೇಷ್ಟನೆಂದು 
ಆತ್ಮೋದ್ಧಾರಕ್ಕೆ ದಾರಿ ಮಾಡುವವನೆಂದು.  


ರವಿ ತಿರುಮಲೈ 
  

Wednesday, 10 October 2012

ನಂಬಿಕೆ ಮತ್ತು ಅಧ್ಯಾತ್ಮ




Photo

ಹಿಂದಿನವರ ಅನುಭವವೇ ಆಧ್ಯಾತ್ಮ ಸಾಧಕನಿಗೆ ನಂಬಿಕೆಯಾಗುತ್ತದೆ. ನಂಬಿಕೆ ತೀವ್ರವಾಗಿ, ಅನುಭವವನ್ನು ಪಡೆಯಬೇಕೆಂಬ ಆಸೆ ಉತ್ಕಟವಾದಾಗ ನಂಬಿಕೆಯೇ ಶ್ರಧ್ಧೆಯಾಗುತ್ತದೆ. ನಂಬಿಕೆ ಶ್ರಧ್ಧೆಯಾಗಿ  ಪ್ರಯತ್ನಪೂರ್ವಕವಾಗಿ ಅನುಭವ ಪಡೆದಾಗ ಜ್ಞಾನವಾಗುತ್ತದೆ. ತಂದೆ ಮಗನಿಗೆ" ಮಾವು ಸಿಹಿಯಾಗಿದೆ "  ಎಂದು ಹೇಳಿದರೆ ಮಗನಿಗೆ ಅದು ನಂಬಿಕೆಯಾಗುತ್ತದೆ. ಆ ಮಗು ಹಣ್ಣನ್ನು ತಿಂದಾಗ ಹಣ್ಣಿನ ಸವಿ ಸವಿದಾಗ ಮಾವಿನ ಸವಿತನ ಮಗುವಿಗೆ ಜ್ಞಾತವಾಗುತ್ತದೆ. ಇದು ತತ್ಕ್ಷಣ ಅರಿವಿಗೆ ಬರುವಂತ ಜ್ಞಾನ.

ಕಾಪರ್ನಿಕಸ್ಸನು, ಅಂದು ಪ್ರವರ್ತಮಾನದಲ್ಲಿದ್ದ ನಂಬಿಕೆಗೆ ಭಿನ್ನವಾಗಿ, ಭೂಮಿ ಸೂರ್ಯನ ಸುತ್ತ ತಿರುಗುತ್ತದೆ ಎಂದು ಕಂಡು ಕೊಂಡನಂತೆ. ಆದಿಯಲ್ಲಿ ಕೆಲವು ಜನ ಅವನ ವಾದವನ್ನು ನಂಬಿದರು ಆದರೆ ಬಹಳಕಾಲದ ಮೇಲೆ  ಆ ಸಿಧ್ಧಾ೦ತವನ್ನು  ಎಲ್ಲರೂ ಒಪ್ಪಿಕೊಂಡಾಗ ಅದು ಸಾರ್ವಜನಿಕ ಜ್ಞಾನವಾಯಿತು. ಇಲ್ಲಿ ನಂಬಿಕೆ ಜ್ಞಾನವಾಗಿ ಪರಿವರ್ತನೆಯಾಗಲು ಬಹಳ ಸಮಯ ಬೇಕಾಯಿತು. ಏನೂ ಅರಿಯದವನಿಗೆ, ಸತ್ಯವನ್ನರಿತು ಜ್ಞಾನ ಪಡೆಯಲು, ನಂಬಿಕೆಯೇ ಮೊದಲ ಹೆಜ್ಜೆ. ಅದು ಬಧ್ಧಾವಸ್ತೆಯಿಂದ ಜಾಗೃತಾವಸ್ತೆಗೆ ಹೋಗುವ ಪ್ರಕ್ರಿಯೆ. ನಂಬಿಕೆ ಮಾನವನನ್ನು ಚುರುಕಾಗಿಸಿ ಕಾರ್ಯೋನ್ಮುಖನನ್ನಾಗಿಸುತ್ತದೆ.  ಈ ಪ್ರಕ್ರಿಯೆಯಲ್ಲಿ ನಂಬಿಕೆ ಬದಲಾಗಿತ್ತಿರುವಂತೆ ಕಾಣಿಸುತ್ತದೆ. ಈ ಬದಲಾವಣೆಯೇ ಚೈತನ್ಯದ ಪ್ರತೀಕ.  ಉದಾಹರಣೆಗೆ  ಭೌತಿಕ ವಿಜ್ಞಾನದಲ್ಲಿ  ಸಿಧ್ಧಾ೦ತಗಳು ನ್ಯೂಟನ್ನಿನಿಂದ ಆಯಿನ್ಸ್ಟೀನ್ನಿನವರೆಗೆ ಹೇಗೆ ಬದಲಾಗಿವೆ ನೋಡಿ.

ನಾವು ನಂಬಿಕೆ ಎನ್ನುವ ಪದವನ್ನು ಉಪಯೋಗಿಸಿದರೆ, ಬುಧ್ಧಿಜೀವಿಗಳು " ವೈಜ್ಞಾನಿಕತೆ ಕಳೆದುಹೋಗಿದೆ" ಎಂದು ಅರುಚುತ್ತಾರೆ. ಅವರ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ವಿಧಾನ ಎಲ್ಲವೂ ಅವರ ಹಿಂದಿನ ತಲೆಮಾರಿನ ವಿಜ್ಞಾನಿಗಳ ಶೋದನೆ ಮತ್ತು ಸಂಶೋದನೆಗಳ ಮೇಲಿನ ನಂಬಿಕೆಯ ಮೇಲೆಯೇ ಅಧಾರಪಟ್ಟಿರುತ್ತದೆ ಮತ್ತು ಅವಲಂಬಿಸಿರುತ್ತದೆ ಎಂಬುದನ್ನು ಇವರುಗಳು ಒಪ್ಪುವುದೇ ಇಲ್ಲ. ಅವರುಗಳು ನಂಬಿಕೆಯೆನ್ನೇ ಜ್ಞಾನವೆಂದು ಅಪಾರ್ಥಮಾಡಿಕೊಂಡಿರುತ್ತಾರೆ.  ನಮ್ಮ  ಬಲವಾದ ನಂಬಿಕೆಯ ಅರಿವು ಅನುಭವದ ಮೂಲಕ ಸತ್ಯವಾಗಿ ಗೋಚರಿಸಿ ಜ್ಞಾನವಾಗಿ ಮಾರ್ಪಾಡಾಗುವುದೆಂಬ, ವೇದಾಂತದ ಮೂಲಭೂತ ತತ್ವ ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಶ್ರಧ್ಧ್ದಾಪೂರ್ವಕ ನಂಬಿಕೆಯಲ್ಲಿನ ಸತ್ಯ ಗೋಚರವಾದಾಗ, ಆ ವ್ಯಕ್ತಿಯ ನಂಬಿಕೆಯೇ ಅವನಲ್ಲಿ ಜ್ಞಾನವಾಗಿ ಪ್ರಕಟಗೊಳ್ಳುತ್ತದೆ. 

"
ಒಂದು ತತ್ವದಲ್ಲಿ ಶುಧ್ಧ ನಂಬಿಕೆ ಮತ್ತು ಅದರಲ್ಲಿರುವ ಅಂತಃಸತ್ಯವನ್ನು ಅರಿಯಲು ಇರುವ ತೀವ್ರ ತವಕವೇ ವಿಶ್ವಾಸ "ಎನ್ನುತ್ತಾರೆ  ಸ್ವಾಮಿ ವಿವೇಕಾನಂದ. ಸ್ವಾಮಿ ರಾಮಕೃಷ್ಣ ಪರಮಹಂಸರು ಇದಕ್ಕೊಂದು ಅದ್ಭುತ ಉದಾಹರಣೆಯನ್ನು ಕೊಡುತ್ತಾರೆ." ಒಂದು ಕೊಠಡಿಯಲ್ಲಿ ಒಬ್ಬ ಕಳ್ಳನಿದ್ದಾನೆಂದು ಇಟ್ಟುಕೊಳ್ಳೋಣ. "ಪಕ್ಕದ  ಕೊಠಡಿಯಲ್ಲಿ ಒಂದು ಚೀಲದ ತುಂಬಾ ಚಿನ್ನವಿದೆ" ಎಂದು ಅವನಿಗೆ ಹೇಳಿದರೆ, ಅವನ ಮನಃಸ್ಥಿತಿ ಹೇಗಿರಬಹುದೆಂದು ಊಹಿಸಿ ನೋಡೋಣ. ಅವನ ಬುಧ್ಧಿ. ಮಲಗಿದರೆ ನಿದ್ದೆ ಬರುವುದಿಲ್ಲ. ಅಲ್ಲಿರುವ ಚಿನ್ನವನ್ನು ಹೇಗಾದರೂ ಪಡೆಯಬೇಕು ಎಂದು ಯೋಚಿಸುತ್ತಾನೆ. ಪಡೆಯುವ ಮಾರ್ಗಗಳನ್ನೆಲ್ಲ ಕಲ್ಪನೆಯಲ್ಲೇ  ರೂಪಿಸಿಕೊಳ್ಳುತ್ತಾನೇ ಹೊರತು ಬೇರೇನನ್ನೂ ಯೋಚಿಸುವುದಿಲ್ಲ.  
ಇಲ್ಲಿ ಮೂರು ವಿಷಯಗಳನ್ನು ಗಮನಿಸ ಬೇಕು:

1 .
ಅವನು ಮೂಲತಃ ಕಳ್ಳನಾಗಿದ್ದಾನೆ.  
2 .
ಅವನು ತಾನು ಸ್ವತಃ ನೋಡದಿದ್ದರೂ,  ಆ ಕೊಠಡಿಯಲ್ಲಿ ಚಿನ್ನವಿದೆ ಎಂದು ಯಾರೋ ಹೇಳಿದ್ದನ್ನು  ನಂಬಿದ್ದಾನೆ.    
3 .
ಅವನು ಕಾತರನಾಗಿ ತಳಮಳಿಸುತ್ತಿದ್ದಾನೆ. ಆ ಚಿನ್ನ ಅವನ ಕೈಗೆ ಸಿಕ್ಕಾಗ ಅವನಿಗೆ ಸಂತೋಷವಾಗುತ್ತದೆ ಮತ್ತು ಅದನ್ನು ಪಡೆಯಲು ಅವನು ಪ್ರಯತ್ನ ಪಡಬೇಕಾಗಿದೆ. 


ಇಲ್ಲಿ " ಕಳ್ಳ " ಎಂಬ ಪದಕ್ಕೆ " ವೈದ್ಯ, ವಕೀಲ, ಇಂಜಿನಿಯರ್, ಅಧಿಕಾರಿ, ವ್ಯಾಪಾರಿ, ಕ್ರೀಡಾಪಟು, ಸಾಮಾನ್ಯ ಉದ್ಯೋಗಿ" ಹೀಗೆ ಯಾವುದಾದರೂ ಪದವನ್ನು ಬದಲಿಸಿಕೊಳ್ಳಿ ಹಾಗೆಯೇ ಅಪೇಕ್ಷೆಯ ವಸ್ತುವಾದ  " ಚಿನ್ನ " ಎಂಬ ಪದಕ್ಕೆ, ಕೀರ್ತಿ, ಯಶಸ್ಸು, ಜಯ, ಲಾಭ ಮುಂತಾದ ಯಾವುದಾದರೂ ಪದವನ್ನು ಬದಲಿಸಿ ಉಪಯೋಗಿಸಿಕೊಳ್ಳಿ. ಫಲಾಪೇಕ್ಷೆಯಿಂದಕೂಡಿದ ಉತ್ಕಟ ಆಸೆ ಇರುತ್ತದೆ ಮತ್ತು ಆ ಆಸೆ ಈಡೇರಿದಾಗ ಆ ವ್ಯಕ್ತಿಗೆ ಸಂತೋಷ ಅಥವಾ ಆನಂದವಾಗುತ್ತದೆ.  ಇಲ್ಲಿ ಸಾದನೆಯ ಉತ್ಕಟಾಪೇಕ್ಷೆಯೇ ಶ್ರಧ್ಧೆಯಾಗಿ ಮಾರ್ಪಾಡಾಗುತ್ತದೆ, ಆದರೆ ಈ ರೀತಿ ಸಿಗುವ ಆನಂದಾನುಭಾವಗಳೆಲ್ಲಾ ಕ್ಷಣಿಕವಾದದ್ದು. ಅವು ನಮ್ಮ ಮನಸ್ಸು ಬುಧ್ಧಿಗಳಿಗೆ ಕಚಗುಳಿ ಇಡುತ್ತದೆ. ಆದರೆ ಮೇಲೆ ಹೇಳಿದಂತೆ " ಕಳ್ಳ " ನಿಗೆ ಬದಲಾಗಿ " ಸಾಧಕ" ಎಂದಿಟ್ಟುಕೊಂಡು " ಚಿನ್ನ" ದ ಬದಲು "ದೇವರು" ಎಂದು ಬದಲಾಯಿಸಿಕೊಂಡರೆ ನಮಗೆ ಪರಮಾತ್ಮ ಸಂಬಂಧವಾದ ಜ್ಞಾನಾರ್ಜನೆಯಾಗಿ ನಿರಂತರ ಆನಂದ ಸಿಗುತ್ತದೆ. 

ವಿಶೇಷಾಧಿಕಾರ :
ನಾವು ಯಾವರೀತಿಯ ಶ್ರಧ್ಧೆಯನ್ನು ಬೆಳೆಸಿಕೊಳ್ಳುತ್ತೀವೋ, ನಮಗಿರುವ  ವಿಶೇಷಾಧಿಕಾರವೂ ಅದೇ ರೀತಿ ಇರುತ್ತದೆ. ಉದಾಹರಣೆಗೆ ನಮಗೆ ಐಹಿಕ ಸುಖ-ಭೋಗಗಳಲ್ಲಿ ಹೆಚ್ಚು ಆಸಕ್ತಿ ಇದೆಯಾದರೆ, ನಾವು ಹಣ, ಅಧಿಕಾರ, ವಿಧ್ಯಾಭ್ಯಾಸ ಮುಂತಾದ ಐಹಿಕ ಸುಖ-ಭೋಗಗಳಿಗೆ ಒತ್ತಾಸೆ ನೀಡುವ ವಸ್ತುಗಳನ್ನು ಪಡೆಯಲು ಹೆಚ್ಚು ಹೆಚ್ಚು  ಅಧಿಕಾರ ಪಡೆಯಲು ಪ್ರಯತ್ನಿಸುತ್ತೇವೆ. ಇಂದ್ರಿಯ ಅಥವಾ ಐಹಿಕ ಸುಖ ಭೋಗಗಳಿಗೆ  ಹೆಚ್ಚು ಮಹತ್ವನೀಡುವ ಸಮಾಜದಲ್ಲಿ ಜಾತಿ ಅಥವಾ ವರ್ಣ ಪ್ರಾಬಲ್ಯ ಮತ್ತು ಕೇವಲ ಕೆಲವರ ಆರ್ಥಿಕಾಭಿವೃಧ್ಧಿಯನ್ನೇ ಹೆಚ್ಚಿಸಲು ಬೇಕಾದ ವಿಶೇಷಾಧಿಕಾರವನ್ನು ಪಡೆಯಲು ಪ್ರಯತ್ನಪಡುತ್ತದೆ. ಹಾಗೆಯೇ, ತಾಂತ್ರಿಕಾಧಿಕ್ಯವಿರುವ ಮತ್ತು ಹಣವಂತ ದೇಶಗಳು, ಬಡ ರಾಷ್ಟ್ರಗಳ ಮೇಲೆ ಪ್ರಭಾವ ಅಥವಾ ಅಧಿಪತ್ಯ ಸ್ಥಾಪಿಸಲು ಪ್ರಯತ್ನಪಡುತ್ತವೆ. 
ಪ್ರತಿ ಮಾನವನ ಜೀವನದಲ್ಲೂ  ಎಂದಾದರೂ ಒಂದು ದಿನ ನಂಬಿಕೆಗಳು ಬದಲಾಗುತ್ತಾ, ಸಂಸ್ಕಾರಗೊಂಡು, " ಮಾನವ ಸೇವೆಯೇ ಮಾಧವ ಸೇವೆ" ಅಥವಾ " ಪಡೆಯುವವನೆ ಕೊಡುವವನಿಗಿಂತ ಉತ್ತಮ "   ಎನ್ನುವ ತತ್ವಗಳು ಮನದಟ್ಟಾಗುತ್ತವೆ. ಹಾಗಾದಾಗ, ಅವನ ಮನಸ್ಸಿನಿಂದ ವಿಶೇಷ ಅಧಿಕಾರದ ಅಥವಾ ಅಧಿಪತ್ಯದ ಭಾವ ಮನಸ್ಸಿನಿಂದ ಅಳಿಸಿ ಹೋಗುತ್ತದೆ.
ಇಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ " ಮರ ಕಡಿಯುವವನ" " ಮುಂದೆ ಹೋಗು" ಎನ್ನುವ ಸಣ್ಣ ಕಥೆ ಉಲ್ಲೇಖನೀಯ.  
ಒಂದು ಬಾರಿ ಒಬ್ಬ ಮರ ಕಡಿಯುವವ ಕಾಡಿಗೆ ಮರಕಡಿಯಲು ಹೋದಾಗ, ಅಲ್ಲಿ ಕಡಿಯಲು ಯೋಗ್ಯವಾದ ಮರಗಳು ಅವನಿಗೆ ಕಾಣಲೇ ಇಲ್ಲ. ಏನು  ಮಾಡುವುದೆಂದು ಯೋಚಿಸುತ್ತಿರುವಾಗ, ಒಬ್ಬ ಸಾಧು ಪುಂಗವನು ಅವನಿಗೆ, " ಮುಂದೆ ಹೋಗು " ಎಂದು ಹೇಳಿದನಂತೆ. ಅಲ್ಲಿಂದ ಮುಂದೆ ಹೋಗಲು ಅಲ್ಲಿ ಅವನಿಗೆ ಕೆಲವು ಶ್ರೀ ಗ೦ಧದ ಮರಗಳು ಕಂಡವಂತೆ.  " ಮುಂದೆ ಹೋಗು " ಎಂದು ಸಾಧು ಹೇಳಿದ್ದನಲ್ಲವೇ, ನಿಲ್ಲಲು ಹೇಳಿಲ್ಲವಲ್ಲ  ಎಂದು ಯೋಚಿಸಿ ಅವನು ಇನ್ನೂ ಸ್ವಲ್ಪ ಮುಂದೆ ಹೋದನಂತೆ. ಅಲ್ಲಿ ಅವನಿಗೆ ಬೆಳ್ಳಿಯ ಗಣಿಗಳು ಗೋಚರಿಸಿದವಂತೆ. ಇನ್ನೂ ಮುಂದೆ ಹೋಗಲು ಅಲ್ಲಿ ಅವನಿಗೆ ಬಂಗಾರದ ಗಣಿಗಳು ಕಂಡವಂತೆ. ಇನ್ನೂ ಮುಂದೆ ಹೋಗಲು ಅವನಿಗೆ ವಜ್ರಗಳ ಮತ್ತು ಅಮೂಲ್ಯ ಹರಳುಗಳ ಗಣಿಗಳು ಕಂಡವಂತೆ. ಅವನು ಅವುಗಳನ್ನು ಪಡೆದು ಬಹಳ ಧನಿಕನಾದನoತೆ.
ಹೀಗೆ ಆ ಸಾಧು ಪುಂಗವನ " ಮುಂದೆ ಹೋಗು" ಎನ್ನುವ ಉಪದೇಶ ಅವನ ಮನಸ್ಸಿನಲ್ಲಿ ನಾಟಿತ್ತು. ಅವನು, ಮುಂದೆ ಸಂಪತ್ತಿನ ಭಂಡಾರವೇ ಇದೆ, ಎಂದು ಸೂಚ್ಯವಾಗುವ ಆ ಸಾಧುವಿನ ಉಪದೇಶದಲ್ಲಿ ಸಂಪೂರ್ಣವಾಗಿ ನಂಬಿಕೆ ಇಟ್ಟಿದ್ದ. " ಆದರೆ ಆ ಸಾಧುವು ತನಗೆ ತಿಳಿದಿದ್ದ ಆ ಸಂಪತ್ತಿನ ಭಂಡಾರವನ್ನು ತಾನೇ ಏಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಉದ್ಭವವಾಗಬಹುದು. ಅದಕ್ಕೆ ವೇದಾಂತವು ಹೀಗೆ ಉತ್ತರಿಸುತ್ತದೆ. ಆ ಸಾಧುವು ಇನ್ನೂ "ಮುಂದೆ ಹೋಗಿ"  ಮೇಲೆ ಹೇಳಿದ ಎಲ್ಲ ನಿಧಿ ಸಂಪತ್ತುಗಳಿಗೂ  ಮಿಗಿಲಾದ ಆತ್ಮ ಜ್ಞಾನದ ಸಂಪತ್ತನ್ನು ಪಡೆದುಕೊಂಡಿದ್ದನು. ಹಾಗಾಗಿ ಅವನಿಗೆ  ಚಂದನ, ಬೆಳ್ಳಿ, ಚಿನ್ನದಂತಹ ವಸ್ತುಗಳಿಗೆ ಯಾವ ಬೆಲೆಯೂ ಇರಲಿಲ್ಲ. ಈ ಕಥೆಯನ್ನು ಸ್ವಲ್ಪ ಮುಂದುವರೆಸಿದರೆ, ಆ ಮರಕಡಿಯುವವನೂ ಸಹ ಈ ಸಂಪತ್ತುಗಳ ಅನುಭವವನ್ನು ಪಡೆದು ಇನ್ನೂ ಮುಂದೆ ಹೋದಲ್ಲಿ ಅವನಿಗೂ ಅವುಗಳನ್ನೆಲ್ಲ ತ್ಯಜಿಸಿ ಆತ್ಮಜ್ಞಾನವನ್ನು ಪಡೆಯುವ ಯೋಗ ಲಭಿಸಬಹುದು.



ನಂಬಿಕೆ ಮತ್ತು ಅಧ್ಯಾತ್ಮ :
ನಂಬಿಕೆಯ ನಮ್ಮ ಪರಿಭಾಷೆ ಮತ್ತು ನಾವು ಎಷ್ಟು ಮುಂದೆ ಹೋಗಿದ್ದೇವೆ ಎನ್ನುವುದರನ್ನು ಅವಲಂಬಿಸಿ ನಮಗೆ ಮೇಲಿನ ಕಥೆ ಅರ್ಥವಾಗುತ್ತದೆ. ಕೆಲವರಿಗೆ ಇದು ಪೊಳ್ಳಾಗಿ, ಕೆಲಸಕ್ಕೆ ಬಾರದ ಮಾತಾಗಿ ಕಾಣಬಹುದು. ಕೆಲವರಿಗೆ ಸುಮ್ಮನೆ ಓದುವ ಮತ್ತು ಯೋಚಿಸುವ ವಿಷಯವಾಗಿ ಕಾಣಬಹುದು. ಮತ್ತೂ ಕೆಲವರಿಗೆ ಈ ಕಥೆಯೇ "ಮುಂದೆ ಹೋಗಲು" ಪ್ರೇರಕವಾಗಿ ಸುಲಭ ಲಭ್ಯವಲ್ಲದಂತಹ ಆಧ್ಯಾತ್ಮ ಜ್ಞಾನ ಪಡೆಯಲು ಉಪಕರಣವಾಗಬಹುದು.  
ಆದರೆ ಪ್ರಸಕ್ತ ಮಾನವ ವಿಕಾಸದ ಹಂತದಲ್ಲಿ ಇದು ಇಂದು ಯಾರು ಯಾರು ಏನೇನ್ನನ್ನು ನಂಬಿ, ಶ್ರಧ್ಧೆಯನ್ನು ಬೆಳೆಸಿಕೊಂಡು ಅವರವರು ಅಪೇಕ್ಷೆ ಪಟ್ಟ, ಹಣ, ಹೆಸರು, ಯಶಸ್ಸು, ಅಧಿಕಾರ ಮುಂತಾದವುಗಳನ್ನು ಪಡೆದುಕೊಳ್ಳಲು ಮಾರ್ಗವಾಗಬಹುದು. ಮಾರ್ಮಿಕವಾಗಿ ಪ್ರತಿಯೊಬ್ಬರನ್ನೂ ಗಮನಿಸಿದಾಗ, ಅವರವರು ಮಾಡುವ ಕೆಲಸಗಳಿಂದ ಅವರುಗಳ ನಂಬಿಕೆಯ ಸ್ವರೂಪ ನಮಗೆ ಅರ್ಥವಾಗಬಹುದು. ದೊಡ್ಡ ದೊಡ್ಡ ತತ್ವಗಳನ್ನು ಬರೆವ ನಾನು ಈ ತತ್ವಗಳನ್ನು ಸ್ವತಃ ಪಾಲಿಸದಿದ್ದರೆ, ನನ್ನ ನಂಬಿಕೆ, ಮಾತ್ರ ಬರೆಯುವುದರಲ್ಲಿದಿಯೇ ಹೊರತು, ಅದಕ್ಕಿಂತ " ಮುಂದೆ ಹೋಗಿಲ್ಲ" ಎಂದರ್ಥವಲ್ಲವೇ?  ಅಂದರೆ ನಾನಿನ್ನೂ ಚಂದನವನ್ನೋ, ಬೆಳ್ಳಿಯನ್ನೋ ಅಥವಾ ಚಿನ್ನವನ್ನೋ, ನಂಬಿ, ಕೆದಕಿ, ತೆಗೆದು ಅನುಭವಿಸುವ ಮಟ್ಟದಲ್ಲೇ ಇದ್ದೇನೆ ಎಂದರ್ಥವಲ್ಲವೇ? 
ಈ ಸ್ಥಿತಿಯಲ್ಲಿ ನಮಗೆ ಬೇಧಗಳೆಲ್ಲವೂ ನಿಚ್ಚಳವಾಗಿ ಕಾಣುತ್ತವೆ ಅಥವಾ ನಾವಿನ್ನೂ ಭೇಧಗಳನ್ನೇ ನೋಡುತ್ತಿದ್ದೇವೆ ಎಂದರ್ಥ. ಇಲ್ಲಿಂದ ನಾವು "ಮುಂದೆ ಹೋಗುವ" ಪ್ರವೃತ್ತಿ ಬೆಳೆಸಿಕೊಳ್ಳಲು ನಮಗೆ ಮಾರ್ಗದರ್ಶಕರು, ಒಬ್ಬ ಗುರುವಿನ ರೂಪದಲ್ಲಿ ಬೇಕು. ಅಂತಹ ಗುರುಗಳು ತಾವು ನಂಬಿದ ಮತ್ತು ಶ್ರಧ್ಧೆಯಿಂದ ಆ ನಂಬಿಕೆಯನ್ನು ಬೆಳೆಸಿಕೊಂಡು, ಕಂಡುಕೊಂಡಂತಹ  ಸತ್ಯವನ್ನು ಪ್ರಸಾರಮಾಡಲು ಉಧ್ಯುಕ್ತರಾಗುತ್ತಾರೆ. ಈ ನಿಟ್ಟಿನಲ್ಲಿ ನಾವು ಮುಂದೆ ಹೋದಾಗ, ನಮಗೆ " ಎಲ್ಲ ಪ್ರಾಣಿಗಳಲ್ಲೂ ಒಂದೇ ರೂಪದಲ್ಲಿರುವುದು  ಆ ಪರಮಾತ್ಮ" ಎಂಬ ಅದ್ವೈತ ಸಿಧ್ಧಾಂತದ ತಿರುಳು ಅರ್ಥವಾಗುತ್ತದೆ. ಆಗ ಈ ತತ್ವ ಶಾಸ್ತ್ರವು ಕೇವಲ ವಿಷಯಾಧಾರಿತ ಎಂದು ಅರ್ಥವಾಗುತ್ತದೆ. ನಾನು ಬದಲಾದರೆ, ನನ್ನ ದೃಷ್ಟಿಕೋನ ಬದಲಾದರೆ ಇಡೀ ಪ್ರಪಂಚವೇ ನನಗೆ  ಭಿನ್ನವಾಗಿ ಕಾಣುತ್ತದೆ. ವಿಷಯದ ವ್ಯಾಪ್ತಿ ವಿಶಾಲವಾಗುತ್ತಾ ಹೋಗಿ ಆಧ್ಯಾತ್ಮ-ಪ್ರೇಮ-ಚಿತ್ತಶುಧ್ಧಿ-ಸಜ್ಜನಿಕೆ ಬೆಳೆದು ನಾವು ಈ  ಪ್ರಪಂಚವನ್ನು ನೋಡುವ ದೃಷ್ಟಿಕೋನ ಖಂಡಿತ ಬದಲಾಗುತ್ತದೆ ಮತ್ತು ಆ ನಮಗೆ ಸಮಭಾವ ಬೆಳೆಯುತ್ತದೆ.
ಸಾಮಾನ್ಯರಿಗೆ, ಎಲ್ಲದರಲ್ಲೂ ಸುಖ-ದುಃಖ, ಸರಿ-ತಪ್ಪು, ಒಳ್ಳೆಯದು - ಕೆಟ್ಟದು ಮುಂತಾದ  ಭೇಧಗಳು ಗೋಚರವಾಗುತ್ತಾ ಇರುತ್ತದೆ.  ಇರಲಿ, ಆದರೆ " ಮುಂದೆ ಹೋಗುವ" ಪ್ರವೃತ್ತಿ ಬೆಳೆದರೆ ಸಾಕು.ಬೇರೆಯವರ ಕುಂದುಗಳನ್ನು ಕಂಡುಕೊಳ್ಳದೆ ಮುಂದೆ ಹೋಗಬೇಕು.  ಎಲ್ಲಿಯತನಕ ನಾವು ಅನ್ಯರನ್ನು, ಬಲಹೀನ, ಕೆಟ್ಟವ,  ಪಾಪಿ, ಮೂರ್ಖ ಅಥವಾ ಸ್ವಾರ್ಥಿ ಎಂದು ಗುರುತಿಸುತ್ತೇವೆಯೋ ಅಲ್ಲಿಯತನಕ ನಮ್ಮಲ್ಲಿ ಸಹ ಅಂಥಹ ಗುಣಗಳು ಸಂಪೂರ್ಣವಾಗಿ ಇನ್ನೂ ನಶಿಸಿಲ್ಲವೆಂದು ಅರ್ಥವಲ್ಲವೇ?
ವಸ್ತುಗಳು ಹೇಗೆ ಕ್ರಮೇಣ ಬದಲಾಗುತ್ತವೆಯೋ, ಅದೇ ರೀತಿ ನಮ್ಮ ನಂಬಿಕೆಯೂ ಕ್ರಮೇಣ ಬದಲಾಗುತ್ತದೆ. ಯಾವುದಾದರೂ ವಸ್ತು ಅಥವಾ ವಿಷಯದಲ್ಲಿ ನಾವು ಶ್ರಧ್ಧೆಯಿಂದ ನಂಬಿದಾಗ ಆ ವಿಷಯದ ಅಥವಾ ವಸ್ತುವಿನ ಜ್ಞಾನ ನಮಗೆ ಉಂಟಾಗುತ್ತದೆ. ಅಧ್ಯಾತ್ಮದಲ್ಲಿ ನಮಗೆ ಶ್ರಧ್ಧೆಯಿಂದ ಕೂಡಿದ ನಂಬಿಕೆ ಹೆಚ್ಚಾಗುತ್ತಾ ಹೋದಂತೆ,  ವಸ್ತು-ವಿಷಯಗಳಲ್ಲಿ ಭೇಧ ನಶಿಸಿ ಸೃಷ್ಟಿಯ ಏಕತ್ವದ ಅನುಭವವಾಗುತ್ತದೆ.  ಸ್ವಪ್ರೇಮ, ಸ್ವಜನ ಪ್ರೇಮ ಎಂಬ ಸಂಕುಚಿತ ಪ್ರೇಮ ವಿಶಾಲವಾಗಿ ನಮ್ಮಲ್ಲಿ ಇಡೀ ಸಮಾಜಕ್ಕೆ, ಪ್ರಪಂಚಕ್ಕೆ ಹಂಚುವಷ್ಟು ಪ್ರೀತಿ ಕರುಣೆ ಉಂಟಾಗುತ್ತದೆ. ಸೀಮಿತ "ಅಹಂ" ಕಾರ ನಮ್ಮ ಮನಸ್ಸಿನ ಮೇಲೆ ತನ್ನ ಹಿಡಿತವನ್ನು ಸಡಿಲಿಸಿ ನಮಗೆ ಒಂದು ಮುಕ್ತ ಭಾವದ ಅನುಭವವಾಗುತ್ತದೆ.
ದೈವದಲ್ಲಿ ಶ್ರಧ್ಧಾಪೂರಿತ ನಂಬಿಕೆಯಿದ್ದಾಗ ನಮಗೆ ದೈವಜ್ಞಾನ ಉಂಟಾಗುವುದು .  ಇದೇ  ಧರ್ಮಶ್ರಧ್ಧೆಯ ಅಡಿಪಾಯ.
ಮೇಲೆ ಉಲ್ಲೇಖ ಮಾಡಿದ ವಿಷಯವನ್ನು ಸಂಕ್ಷಿಪ್ತಗೊಳಿಸಿದರೆ ನಮಗೆ ಅರ್ಥವಾಗುವುದು ಇಷ್ಟು. ಪ್ರತಿ ಮಾನವನಿಗೂ ಮುಂದೆ ಹೋಗಲು ಸಾಧ್ಯ. ಹಾಗೆ ಮುಂದೆ ಹೋಗಲು, ಮೊದಲು ತಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂದು ಅರ್ಥಮಾಡಿಕೊಳ್ಳಬೇಕು. ನಂತರ ಮುಂದೆಹೋಗಲು, ಅನುಕೂಲವಾದ ಮಾರ್ಗದರ್ಶನ ಪಡೆದು, ನಂಬಿಕೆ ಬೆಳೆಸಿಕೊಂಡು  ಶ್ರಧ್ಧೆಯಿಂದ ಪ್ರಯತ್ನಪಡಬೇಕು. ಹಾಗಾದಲ್ಲಿ ಎಲ್ಲರೂ ತಾವಿರುವ ಸ್ತರದಿಂದ ಉತ್ತಮ ಸ್ಥಿತಿಗೆ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಸರ್ವೇ ಜನಾಃ ಸುಜನಾಃ ಭವಂತು 
ಸರ್ವೇ  ಸುಜನಾಃ  ಸುಖಿನಃ ಸಂತು 

Saturday, 1 September 2012

ಬಂಜೆ



ನಾ ಹೆರ್ಲಿಲ್ಲಾಂತ 
ಗೊಣಗ್ಲಿಲ್ಲ ಅವ್ನೆಂದೂ
ಮೂಗ್ಮುರಿಯೋ ಜನ
ಚಿಂತಿಲ್ಲ ಅವ್ನೀಗೆ

ಅವ್ನಿಗೆ ನಂದೇ ಚಿಂತೆ
"ನೀ ಚೆಂದಾಕಿರು ಚಿನ್ನ"
ದಿವ್ಸಕ್ಕೊಂದು ಹತ್ಕಿತ
ಹೇಳ್ದಿದ್ರೆ ಅರ್ಗಕಿಲ್ಲ ತಿನ್ದನ್ನ

ನನ್ಗಂತೂ ಒಳ್ಗೊಳ್ಗೆ ಬೇಸ್ರ
ವಂಸಕ್ಕೆ ಒಬ್ಬ ಮಗಾ ಬೇಕಂತ
ಮನ್ಸಾಗೆ ಬಂದಾಗೆಲ್ಲ ಕಣ್ಕಪ್ಪಾಗಿ
ದಡದಡಡ್ನೆ ಸುರೀತಿತ್ತು ಕಣ್ಣೀರ್

ಹಂಗೂ ಹಿಂಗೂ
ಹತ್ತು ವರ್ಸ ಕಳದಾಯ್ತು,
ಬಂಜೆ ಅಂತ ಬೇರೆ
ನಂಗೆ ಹೆಸ್ರಾಯ್ತು

ಬಸ್ರು ಕಟ್ದೆ ಇದ್ರೂ
ಹೆಸ್ರು ಮಾತ್ರ ಸಂತಾನಲಕ್ಷ್ಮಿ
ಸಾಕವ್ವಾಂತ ಹೆಸ್ರಿಟ್ಕೊಂಡರೂ
ಪಕದ್ಮನಿಯಾಕಿ ಹೆತ್ತವ್ಳಾರು

ಮುಪ್ಪಾತು, ಮಕ್ಳಿಲ್ಲಾಂತ
ಕೊರ್ಗ್ಹೆಚ್ಚಾತು, ಜೀವ್ನ ಸಾಕಾಯ್ತು
ನಾವಿಬ್ರೂ ಹೆಂಗೋ ಒಂದಂಗೆ
ನಿಟ್ಟುಸ್ರುಬಿಟ್ಕೊಂಡು ದಿವ್ಸ ದೂಡಾಯ್ತು,

ಪಟ್ಣಸೇರಿದ್ ಸಾಕವ್ವನ್ ಆರೂ ಮಕ್ಳು
ಬಂದವ್ರೆ ಅಂತ ಅವ್ರ ಮನೆ ಕುಟ್ಟೆ ಹೋದ್ರೆ
ಕಂಡದ್ದೇನುನಾ! ಯವ್ವ! ಎಲ್ಲ ಸೇರ್ಕೊಂಡು
ಅವ್ವನ್ ನೋಡ್ಕೊಳೋಕ್ ಆಗಾಕಿಲ್ಲ ಅಂತ

ವೃದ್ಧಾಶ್ರಮಕ್ ಸೇರಿಸ್ತೀವಿ ನಮ್ಮವ್ವನ್
ಅಂದಾಗ ಎದೀ ಧಕ್ ಅಂತು, ಅಯ್ಯೋ
ನಾ ಹೆತ್ತಿದ್ರೂ ಇದೆ ಗತೀ ಆಗ್ತಿತ್ತೋ ಏನೋ
ಅಂತ, ಬಾಯ್ಮುಚ್ಗೊಂಡು, ಮನೀಗ್ ಬಂದೆ.

"ಮಕ್ಲಿಲ್ದಿದ್ರೆ ಏನಾತು ಬಾಳೈತಲ್ಲ," ಅಂತ
ನಮ್ಮೆಜಮಾನ ಹೇಳಿದ್ ಮಾತ್ ನೆಪ್ಪಾಯ್ತು
'ಮಕ್ಳಿಲ್ದಿದ್ರೆ ಏನು ದುಃಖವಂತೂ ಇಲ್ವಲ್ಲ' ಅಂತ
ಮನೀಗ್ಬಂದ್ ಕುಂತಾಗ, ಮನ್ಸಿಗ್ ನಿರಾಳಾಯ್ತು

ರವಿ ತಿರುಮಲೈ

ಮರೆತ ಮದುವೆಯ ದಿನ

ಇಂದಾಯ್ತು ವರುಷ ಇಪ್ಪತ್ತೆಂಟು 
ಬಿದ್ದು ನನಗೆ ವೈವಾಹಿಕ ಗಂಟು 
"ಮರೆತೆಯಲ್ಲ ನೀ ಅದನು" ಎಂದು 
ಹೆಂಡತಿ ತೆಗೆದಳು ಸಕತ್ತಾಗಿ ಬೆಂಡು 

ತಪ್ಪಾಯ್ತು ಮಾರಾಯ್ತಿ ಮನ್ನಿಸೆನ್ನೆಂದು 
ಗೋಗರೆದು ಕೈಮುಗಿದು ಬೇಡಿದರು ಇಂದು 
ಗಂಟು ಕಟ್ಟಿದ ಮುಖ ತಿಳಿಯಾಗಲಿಲ್ಲಿನ್ನು 
ಪೂಸಿಹೊಡೆಯುವ ಪರಿ ಅರಿಯದಾದೆನಿನ್ನು 

ಹಿಂದೆಲ್ಲ ಮಕ್ಕಳ ಮಧ್ಯಸ್ಥಿಕೆಯೊಂದಿತ್ತು 
ಸ್ವಲ್ಪ ಸಮಯದ ನಂತರ ಸರಿಹೋಗುತ್ತಿತ್ತು 
ಮಗನೊಬ್ಬ ಗಡಿದಾಟಿ ಹೋಗಿರುವನು ಹಾರಿ 
ಮಗಳಂತೂ ಸೇರಿದಳು ಮೈಸೂರ ರೈಲನೇರಿ

ಉಂಟು ನನಗವಳು ಅವಳಿಗೆ ನಾನು 
ಸರಿಮಾಡಬೇಕು ಸ್ಥಿತಿ, ಏನಾದರೇನು 
ಬಿಗಿತವನು ಸಡಿಲಿಸಲು ಉಪಾಯವೇನು 
ಶರಣೆನ್ನದೆ ಕಾಣೆ ಬೇರೆ ದಾರಿಯೇನು. 

ಸಹೃದಯ ಮಿತ್ರರೇ ಶುಭವೆನಗೆ ಕೋರಿರಿ
ನಮ್ಮಿಬ್ಬರ ಬಾಳ್ವೆ ಹಸನಾಗಲೆಂದು 
ಶೇಷ ಜೀವನವೆಲ್ಲ ನಸು ನಗಲಿ ಎಂದು 
ಕಡೆಯ ತನಕ ನಾವು ಹಾಗೆ ಇರಲೆಂದು. 

ರವಿ ತಿರುಮಲೈ