Wednesday, 28 December 2011

ಶ್ರೇಷ್ಠ ಭಗವಧ್ಭಕ್ತನ ಲಕ್ಷಣ

ಮಿತ್ರರೇ ನೀವು ಪರಮಾತ್ಮನಲ್ಲಿ ನಂಬಿಕೆ ಇಟ್ಟಿದ್ದೀರಾ? 
ಅವನ ಕಲ್ಯಾಣ ಗುಣಗಳಿಂದಲೇ ಈ ಜಗದ್ವ್ಯಾಪಾರ ನಡೆಯುತ್ತದೆಂದು ನಂಬಿದ್ದೀರಾ? 

ಹಾಗಾದರೆ ಶ್ರೇಷ್ಠ ಭಗವಧ್ಭಕ್ತನ ಲಕ್ಷಣಗಳೇನು ಎಂಬುದನ್ನು ನೋಡೋಣ!!!!

ಯೇ ಹಿತಾಃ  ಸರ್ವಜ೦ತೂನಾಮ್  ಗತಾಸೂಯಾ  ಅಮತ್ಸರಾ  
ವಶಿನೋ ನಿಸ್ಪ್ರುಹಃ ಶಾಂತಸ್ತೇವೈ ಭಾಗವತೋತ್ತಮಾಃ '೧' 
ಯಾರು ಎಲ್ಲಾ ಜೀವಿಗಳ ಹಿತವನ್ನೇ ಬಯಸುತ್ತಾರೋ, ಅಸೂಯೆ, ಮತ್ಸರರಹಿತರೋ 
ಇಂದ್ರಿಯಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವರೋ,ನಿಸ್ಪ್ರುಹರೋ,ಶಾಂತರೋ ಅವರೇ ಉತ್ತಮ ಭಗವದ್ಭಕ್ತರು

ಕರ್ಮಣಾ ಮನಸಾ ವಾಚಾ ಪರಪೀಡಾಂ ನ ಕುರ್ವತೆ 
ಅಪರಿಗ್ರಹಾಶೀಲಾಸ್ಚ ತೇ ವೈ ಭಾಗವತಾಃ ಸ್ಮೃತಾಃ '೨' 
ಕಾಯಾ ವಾಚಾ ಮನಸಾ ಯಾರು ಪರರನ್ನು ಪೀಡಿಸುವುದಿಲ್ಲವೋ ಪರರಿಂದ 
ಏನನ್ನೂ ಪಡೆದುಕೊಳ್ಳುವುದಿಲ್ಲವೋ(ಗುಣವೊಂದನ್ನುಬಿಟ್ಟು)ಅವರನ್ನೇ ಉತ್ತಮ ಭಗವದ್ಭಕ್ತರೆಂದು ತಿಳಿಯಬೇಕು

ಸತ್ಕಥಾಶ್ರವಣೆ ಯೇಷಾಂ ವರ್ತತೆ ಸಾತ್ವಕೀ ಮತಿ:
ತತ್ಭಕ್ತ ವಿಷ್ಣುಭಕ್ತಾಸ್ಚ  ತೇವೈ ಭಾಗವತೋತ್ತಮಾಃ  '೩ ' 
ಯಾರ ಮನಸ್ಸು ಭಗವಂತನನ್ನು ಕುರಿತಾದ ಸತ್ಕಥೆಗಳನ್ನೇ ಕೇಳಲಿಚ್ಚಿಸುತ್ತವೆಯೋ 
ಅಂತಹವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.  

ಮಾತಾಪಿತ್ರೋಸ್ಚ ಶುಶ್ರೂಷಾಂ ಕುರ್ವಂತಿ ಯೇ ನರೋತ್ತಮಾಃ
ಗಂಗಾವಿಶ್ವೇಶ್ವರಧಿಯಾ ತೇವೈ ಭಾಗವತೋತ್ತಮಾಃ  '೪ ' 
ತಂದೆ ತಾಯಿಗಳ ಸೇವೆಯನ್ನು ಪಾರ್ವತೀ ಪರಮೇಶ್ವರರ ಪೂಜೆಯಂದರಿತು
ಯಾರು ಮಾಡುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ವ್ರತೀನಾಂ ಚ ಯತೀನಾಂ ಚ ಪರಿಚರ್ಯಾಸ್ಚ ಯೇ 
ವಿಯುಕ್ತ ಪರನಿದಾ೦ಸ್ಚ ತೇವೈ ಭಾಗವತೋತ್ತಮಾಃ"೫" 
ವ್ರತ ನಿರತರನ್ನು ಮತ್ತು ಯತಿಗಳ ಪರಿಚರ್ಯಯೆನ್ನು ಯಾರು ಮಾಡುತ್ತಾರೋ ಮತ್ತು 
ಪರನಿಂದೆಯನ್ನು ಯಾರು ಮಾಡುವುದಿಲ್ಲವೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಸರ್ವೇಷಾಂ ಹಿತವಾಕ್ಯಾನಿ ಯೇ ವದಂತಿ ನರೋತ್ತಮಾಃ 
ಯೇ ಗುಣಗ್ರಾಹಿಣೋ ಲೋಕೆ ತೇ ವೈ ಭಾಗವತಾಃ ಸ್ಮೃತಾಃ "೬"
ಎಲ್ಲರಲ್ಲೂ ಯಾರು ಹಿತವಾಕ್ಯಗಳನ್ನೇ ನುಡಿಯುತ್ತಾರೋ ಮತ್ತು ಈ ಲೋಕದಲ್ಲಿ ಅವಗುಣಗಳನ್ನು ಬಿಟ್ಟು
ಗುಣಗಳನ್ನೇ  ಗ್ರಹಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಆತ್ಮವತ್ ಸರ್ವಭೂತಾನಿ ಯೇ ಪಶ್ಯಂತಿ ನರೋತ್ತಮಾಃ 
ತುಲ್ಯಾ ಶತ್ರುಷು ಮಿತ್ರೇಷು  ತೇವೈ ಭಾಗವತೋತ್ತಮಾಃ"೭" 
ಎಲ್ಲ ಜೀವಿಗಳನ್ನೂ ತನ್ನಂತೆ ಯಾರು ತಿಳಿಯುತ್ತಾರೋ ಮತ್ತು ಶತ್ರುವಿನಲ್ಲೂ 
ಮಿತ್ರನಲ್ಲೂ ಸಮಭಾವದಿಂದಿರುವರೋ ಅವರೇ ನಿಜವಾದ ಭಗವದ್ಭಕ್ತರೆಂದು ಕರೆಯಲ್ಪಡುತ್ತಾರೆ.

ಅನ್ಯೇಶಾಂ ಉದಯಂ ದೃಷ್ಟ್ವಾ ಯೇsಅಭಿನಂದಂತಿ ಮಾನವಾಃ  
ಹರಿನಾಮಪರಾ ಯೇ ಚ ತೇವೈ ಭಾಗವತೋತ್ತಮಾಃ"೮" 
ಪರರ ಅಭ್ಯುದಯವನ್ನು ಕಂಡು ಯಾರೋ ಕರುಬದೆ ಸಂತೋಷಪಡುತ್ತಾರೋ, ಯಾರು 
ಸದಾ ಹರಿನಾಮ ಸ್ಮರಣೆಯಲ್ಲೇ ನಿರತರೋ ಅವರೇ ನಿಜವಾದ ಭಗವದ್ಭಕ್ತರು. 

ಶಿವೇ ಚ ಪರಮೇಶೇಚ ವಿಷ್ಣೌ ಚ ಪರಮಾತ್ಮನಿ 
ಸಮಭುಧ್ಯಾ ಪ್ರವರ್ತಂತೆ ತೇ ವೈ ಭಾಗವತಾಃ ಸ್ಮೃತಾ "೯" 
ಶಿವ ಮತ್ತು ವಿಷ್ಣು ಎಂಬ ಬೇಧಭಾವವಿಲ್ಲದೆ, ಎರಡೂ ರೂಪದಲ್ಲೂ 
ಸಮಭಾವ, ಸಮಬುಧ್ಧಿಯಿಂದ ಯಾರು ಪ್ರವರ್ತಿಸುತ್ತಾರೋ ಅವರೇ ನಿಜವಾದ ಭಗವದ್ಭಕ್ತರು.
 
ಮಿತ್ರರೇ ಎಲ್ಲರಲ್ಲೂ ಭಕ್ತಿಯಂಬುದು ಇರುತ್ತೆ. ಪ್ರಮಾಣ ಮತ್ತು ಉತ್ಕಟತೆ ಭಿನ್ನ ಭಿನ್ನವಾಗಿರುತ್ತದೆ. 
ಇಲ್ಲಿ  ನಾವೆಲ್ಲರೂ ಆತ್ಮಾವಲೋಕನಮಾಡಿಕೊಂಡು ಮೇಲೆ ಹೇಳಿದ ಗುಣಗಳಿದ್ದರೆ,ವೃಧ್ಧಿಮಾಡಿಕೊಳ್ಳಬೇಕು, 
ಇಲ್ಲದಿದ್ದರೆ ಬೆಳೆಸಿಕೊಳ್ಳಬೇಕು. ಬನ್ನಿ ನಾವೆಲ್ಲಾ ನಮ್ಮನ್ನು ನಾವೇ ಉದ್ಹ್ಧರಿಸಿಕೊಳ್ಳೋಣ.
ಸರ್ವೇ ಜನಾಃ ಸಜ್ಜನೋ ಭವಂತು
ಸರ್ವೇ ಸಜ್ಜನಾಃ ಸುಖಿನಃ ಸಂತು

ರವಿ ತಿರುಮಲೈ
96322 46255

Tuesday, 27 December 2011

ಆಧ್ಯಾತ್ಮಿಕ ಪ್ರಯಾಣ - ಒಂದು ಚಿಂತನೆ.


                                                    ಆಧ್ಯಾತ್ಮಿಕ ಪ್ರಯಾಣ - ಒಂದು ಚಿಂತನೆ. 


ಮಾನವನ ಅಧ್ಯಾತ್ಮಿಕ ಪ್ರಯಾಣ ನಿರಂತರವಾದದ್ದು. ಪ್ರತಿ ಜೀವಿಯೂ ಸತತವಾಗಿ ಆಧ್ಯಾತ್ಮಿಕ ಔನ್ನತ್ಯವನ್ನು ಪಡೆಯಲು ಪ್ರಯತ್ನಮಾಡುತ್ತಲೇ ಇರುತ್ತಾನೆ. ಈ ನಿರಂತರ ಪ್ರಯಾಣವನ್ನು ಅವನು ದೇಹವೆಂಬ ಬೇರೆ ಬೇರೆ ವಾಹನಗಳಲ್ಲಿ ಮಾಡುತ್ತಿರುತ್ತಾನೆ. 

ಮಾನವರಲ್ಲಿ ಯೋಚನೆ ಮಾಡುವ ಪ್ರಕ್ರಿಯೆ ಶುರುವಾದಂದಿನಿಂದ ಈ ಸೃಷ್ಟಿಯ ಪರಮ ಸತ್ಯವನ್ನು ಕಂಡು ಕೊಳ್ಳಲು ಎಲ್ಲಾ  ಕಾಲಕ್ಕೂ ತುಡಿತ ಮತ್ತು ಅದಕ್ಕೆ ಆಯಾಯ ಜೀವಿಯ ಶಕ್ತಿಯ ಪರಿಮಿತಿಯೊಳಗೆ , ತಕ್ಕಂಥ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಲಾಗಿದೆ. ಸಹಸ್ರಾರು ವರ್ಷಗಳಿಂದ ಮಾನವ ಆ ದೇವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾನೆ. ಆದರೆ ಇಂದಿಗೂ ಯಾರಿಗೂ ಸಂಪೂರ್ಣವಾಗಿ ಆ ರಹಸ್ಯವನ್ನು ಛೇದಿಸಲು ಸಾಧ್ಯವಾಗಿಲ್ಲ. ಏಕೆಂದರೆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಿರುವುದರಿಂದ ಕಾಲಕಾಲಕ್ಕೆ ದೇವರ ಕಲ್ಪನೆ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ನಮ್ಮಲ್ಲಿ ಒಬ್ಬ ದೇವನ ಬದಲಿಗೆ ಸಹಸ್ರಾರು ದೇವತೆಗಳಿದ್ದಾರೆ. ಯಾವುದನ್ನು ನಂಬುವುದು ಯಾವುದನ್ನು ಬಿಡಿವುದು ಎಂಬುದೇ ಮಾನವರ ಪೀಕಲಾಟ. ಋಗ್ವೇದದಲ್ಲಿರುವ ಪುರುಷ ಸೂಕ್ತದಲ್ಲಿ ಆ ಪರಮಾತ್ಮನ  ಸರ್ವ ಸಾಮರ್ಥ್ಯ ಮತ್ತು ಸರ್ವ ವ್ಯಾಪಕತ್ವವನ್ನು ಹೇಳಲ್ಪಟ್ಟಿದೆ. ಈ ಸರ್ವ ಸಮರ್ಥಶಾಲಿ ಮತ್ತು ಸರ್ವವ್ಯಾಪಕನಾಗಿರುವ ಪರಮ ಪುರುಷನು ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ವ್ಯಾಪಿಸಿಕೊಂಡು ಈ ಸೃಷ್ಟಿಯನ್ನು ಮೀರಿ ಹತ್ತು ಅಂಗುಲದಲ್ಲಿ ನಿಂತಿದ್ದಾನೆ ಎನ್ನುತ್ತದೆ "ಪುರುಷ ಸೂಕ್ತ ". ಈ ಇಡೀ ವಿಶ್ವದ ಸೂತ್ರದಾರನಾಗಿರುವ ಆ ಪರಮ ಪುರುಷನನ್ನು ತಿಳಿದುಕೊಳ್ಳುವುದೇ ಅಧ್ಯಾತ್ಮಿಕ ಪಯಣದ ಮತ್ತು ಔನ್ನತ್ಯವನ್ನು ಪಡೆಯುವ ಧ್ಯೇಯ ಮತ್ತು ಗುರಿ. ಈ ಪಯಣ ಆ ಪರಮ ಪುರುಷನನ್ನು ತಿಳಿದುಕೊಳ್ಳುವ ತನಕ ನಿರಂತರವಾದದ್ದು ಮತ್ತು ಪ್ರತಿ ಜೀವಿಯೂ ಈ ಪಯಣದ ಯಾವುದೋ ಒಂದು ಹಂತದಲ್ಲಿರುತ್ತಾನೆ. 

ಇದನ್ನು ನಾನು ಹೀಗೆ ಅರ್ಥ ಮಾಡಿಕೊಂಡಿದ್ದೇನೆ: 

ಮಕ್ಕಳು ಶಾಲೆಗೆ ಹೋಗಲು ಶುರು ಮಾಡಿದಾಗ, ಅವರಿಗೆ ತಾವು ಏತಕ್ಕಾಗಿ ಶಾಲೆಗೆ ಹೋಗಬೇಕು ಎಂದು ಯೋಚನೆ ಮಾಡುವ ಕ್ಷಮತೆ ಇರುವುದಿಲ್ಲ. ಹೌದಲ್ಲವೇ? ಆದರೆ ಅವರು ಹಲವಾರು ಕಾರಣಗಳಿಗಾಗಿ ಶಾಲೆಗೆ ಹೋಗುತ್ತಾರೆ. ಅಪ್ಪ-ಅಮ್ಮ ಖಡ್ಡಾಯಪಡಿಸುತ್ತಾರೆ, ಪಕ್ಕದ ಮನೆಯ ಹುಡುಗರೂ ಹೋಗುತ್ತಾರೆ, ಒಳ್ಳೆಯ ಯೂನಿಫಾರ್ಮ್ ಹಾಕಿಕೊಳ್ಳಲು ಸಿಗುತ್ತದೆ, ಬಸ್ಸಿನಲ್ಲಿ ಹೋಗುತ್ತೇವೆ, ಆ ಬೀದಿಯ ಮಕ್ಕಳೆಲ್ಲ ಅಲ್ಲಿ  ಸಿಗುತ್ತಾರೆ, ಅಮ್ಮ ಡಬ್ಬಿಯಲ್ಲಿ ಒಳ್ಳೆಯ ತಿಂಡಿ- ತಿನಿಸುಗಳನ್ನು ಹಾಕಿ ಕೊಡುತ್ತಾಳೆ, ಅಪ್ಪ ಬೈತಾರೆ, ಶಾಲೆಯಲ್ಲಿ ಎಲ್ಲಾ ಮಕ್ಕಳ ಜೊತೆಯಲ್ಲಿ ಆಟವಾಡಲು ಸಿಗುತ್ತೆ,  ಹೀಗೆ ಹತ್ತು ಹಲವಾರು ಕಾರಣಗಳಿಗೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಅವರಿಗೆ ಏನನ್ನು ಓದ ಬೇಕು, ಯಾಕೆ ಓದಬೇಕು, ಅಕ್ಷರವನ್ನು ಹೀಗೇ ಏಕೆ ಬರೆಯಬೇಕು ಎಂದೆಲ್ಲ ಯೋಚಿಸುವ ಬುಧ್ಧಿ ಇರುವುದಿಲ್ಲ. ಅವರಿಗೆ ಪ್ರತಿಯೊಂದನ್ನೂ ಹೇಳಿಕೊಡಬೇಕು, ಓದಲು, ಬೆರೆಯಲು ತಿದ್ದಬೇಕು. ಅವರ ಬಟ್ಟೆ ಬರೆ ಶೂ ಎಲ್ಲವನ್ನೂ ದೊಡ್ಡವರು ನೋಡಿಕೊಳ್ಳ ಬೇಕಾಗುತ್ತದೆ. 

ಸಾಮಾನ್ಯವಾಗಿ ಆಧ್ಯಾತ್ಮ ಪ್ರಯಾಣದಲ್ಲೂ ಬಹಳಷ್ಟುಜನ ಈ ಸ್ಥರದಲ್ಲಿರುತ್ತಾರೆ. ಇದು ಪ್ರಾಥಮಿಕ ಶಾಲೆಯ ಹಂತ. 

ಇಲ್ಲಿಂದ ಮಾಧ್ಯಮಿಕ ಶಾಲೆಯ ಹಂತಕ್ಕೆ ಹೋಗೋಣ. ಇಲ್ಲಿ ಮಕ್ಕಳಿಗೆ ಸ್ವಲ್ಪಮಟ್ಟಿಗೆ ಅರಿವು ಮೂಡಿ ತಮ್ಮ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಸ್ಥಿತಿಯನ್ನು ಮುಟ್ಟಿರುತ್ತಾರೆ. ಇಲ್ಲಿ, ಅವ ಅಥವಾ ಅವಳು ಶಾಲೆಗೆ ಸರಿಯಾಗಿ ಹೋಗುತ್ತಿದ್ದಾರೆಯೇ, ಹೋಂ ವರ್ಕ್ ಸರಿಯಾಗಿ ಮಾಡುತ್ತಿದ್ದಾರೆಯೇ, ಅಕ್ಷರ ಸರಿಯಾಗಿದೆಯೇ ಎಂದು  ಅವರನ್ನು ನೋಡಿ ಸೂಕ್ಷ್ಮ ಮಾರ್ಗದರ್ಶನ ಮಾಡಿದರೆ ಸಾಕು. 

ಇಲ್ಲಿಂದ ಅವರು ಹೈಸ್ಕೂಲ್ ಹಂತಕ್ಕೆ ಬಂದಾಗ ಅವರಿಗೆ ಕಲಿಕೆಯ ವಿಷಯಗಳ ಸ್ವಾತಂತ್ರ್ಯ ಸಿಗುತ್ತೆ. ಆದರೂ ಅದನ್ನು ಆರಿಸಿಕೊಳ್ಳುವಾಗ ಅವರಿಗೆ ಬೇರೆ ಹಿರಿಯರ ಮಾರ್ಗದರ್ಶನ ಬೇಕಾಗುತ್ತದೆ.  ಅವರು ಸ್ವತಂತ್ರರಾಗಿ ಓದುವ ಬರೆಯುವ ಹಂತವನ್ನು ತಲುಪಿರುತ್ತಾರೆ. ಅವರನ್ನು ಗಮನಿಸಿ, ಸೂಕ್ತ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರೆ ಸಾಕು. 

ನಂತರ ಕಾಲೇಜಿಗೆ  ಸೇರುವಾಗ ಸಂಪೂರ್ಣವಾಗಿ ಅವನ ಇಚ್ಚಾಪ್ರಕಾರ ಓದುವ ವಿಷಯಗಳನ್ನು ಆರಿಸಿಕೊಳ್ಳುವ ಬಹುತೇಕ ಶಕ್ತಿಯನ್ನು ಪಡೆದು ಕೊಂಡಿರುತ್ತಾರೆ ವಿಶೇಷವೇನೆಂದರೆ, ಇಲ್ಲಿ ಅವನು ಓದಬೇಕಾದ ವಿಷಯಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲ ವರ್ಷದಲ್ಲಿದ್ದಂತಹ ಕೆಲವು ವಿಷಯಗಳು ಎರಡನೇ ವರ್ಷಕ್ಕೆ ಇರುವುದಿಲ್ಲ. ಮೇಲೇರುತ್ತಾ ಅವನು ಅಥವಾ ಅವಳು ಕೇವಲ ಆ ವಿಷಯಗಳಲ್ಲಿ ಮಗ್ನರಾಗಿ ಅವುಗಳನ್ನೇ ಆಳವಾದ ಅಭ್ಯಾಸ ಮಾಡುತ್ತಾರೆ.ಮುಂದೆ ಸ್ನಾತಕೋತ್ತರ( Post graduation) ಪದವಿಗಾಗಿ   ಅಭ್ಯಾಸಮಾಡುವಾಗ,  ಎಲ್ಲಾ ಐಚ್ಚಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪರಿಣಿತಿ ಮತ್ತು ಪ್ರಾವೀಣ್ಯ ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಮುಂದೆ ಹೋಗಿ ಸಂಶೋದನಾ ಪದವಿ( ಪಿ ಹೆಚ್ ಡಿ) ಮಾಡುವಾಗ ಆ ಒಂದು ವಿಷಯದ ಯಾವುದಾದರೂ ಒಂದು ಭಾಗವನ್ನು ಆಯ್ಕೆ ಮಾಡಿ ಮತ್ತಷ್ಟು ಆಳವಾಗಿ ಅದನ್ನೇ ಅಭ್ಯಾಸಮಾಡಿ ಆ ವಿಷಯದಲ್ಲೇ ಪರಿಣಿತಿಯನ್ನು ಪಡೆಯುತ್ತಾರೆ. 

ಆಧ್ಯಾತ್ಮ ಔನ್ನತ್ಯದ ಹಾದಿಯೂ ಹೆಚ್ಚೂ ಕಡಿಮೆ ಇದೇ ರೀತಿಯದು. 

 ತಮ್ಮನ್ನು ತಾವು ನಾಸ್ತಿಕರೆಂದು  ಕರೆದುಕೊಳ್ಳುವ ಬೆರಳೆಣಿಕೆಯಷ್ಟು ಜನರನ್ನು ಸೇರಿಸಿ ಎಲ್ಲರೂ ಆಧ್ಯಾತ್ಮಿಕ ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿ ಇರುತ್ತಾರೆ. ಪ್ರೈಮರಿ ಶಾಲೆಗೆ  ಹೋಗಿ ವಿಧ್ಯಾಭ್ಯಾಸದ ಉನ್ನತ ಹಂತಕ್ಕೆ ತಲುಪುವಂತೆಯೇ, ಅಧ್ಯಾತ್ಮಿಕ ಪ್ರಯಾಣವೂ ಸಹ.  ಆದರೆ ವಿಡಂಬನೆ ಏನೆಂದರೆ, ಪ್ರಾಥಮಿಕ ಶಾಲೆಗೆ ಸೇರಿದ 1000 ಜನರಲ್ಲಿ ಪ್ರತಿ ಹಂತದಲ್ಲೂ ಹಲವರು ಉದುರಿಹೊಗುತ್ತಾ, ಕಡೇಗೆ ಪಿ ಹೆಚ್ ಡಿ ಹಂತಕ್ಕೆ 4-5 ಜನ ಮುಟ್ಟಬಹುದು, ಆಧ್ಯಾತ್ಮಿಕ ಪ್ರಯಾಣದಲ್ಲೂ ಸಹ ಹೀಗೇ.  ಪರಮ ಸತ್ಯವನ್ನು ಅರಿಯಲು ಪ್ರಯತ್ನಪಡುವವರಲ್ಲಿ, ಲಕ್ಷಕ್ಕೊಬ್ಬರಿಗೆ ಸಾದನೆಮಾಡಿ ಒಂದು ಹಂತಕ್ಕೆ ತಲುಪುವ ಸಾಧ್ಯತೆ ಇರಬಹುದು. 

ಜಯದ  ಗುಟ್ಟೇನು ? 

ಬಸ್ಸು ಮತ್ತು ರೈಲು ಪ್ರಯಾಣ ಮಾಡುವಾಗ " ಕಡಿಮೆ ಲಗ್ಗೇಜು ಹೆಚ್ಚು ಸುಖ " ಎಂಬ ಬರಹವನ್ನು ಸರ್ವೇ ಸಾಮಾನ್ಯ ನೀವು ಕಂಡಿರಬಹುದು.ಆಧ್ಯಾತ್ಮಿಕ  ವಿಕಾಸ ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲೂ ಇದು ಹೆಚ್ಚು ಪ್ರಸ್ತುತ. ಹೆಚ್ಚು ಲಗ್ಗೇಜು ಪ್ರಯಾಣವನ್ನು ಹೆಚ್ಚು ಶ್ರಮಪೂರಿತವಾಗಿಸುತ್ತದೆ. ಬಸ್ಸು ಮತ್ತು ರೈಲು ಪ್ರಯಾಣದಲ್ಲಿ ಹೇಗೋ ಕಷ್ಟಪಟ್ಟಾದರೂ ಗಮ್ಯವನ್ನು ತಲುಪಬಹುದು. ಆದರೆ ಆದ್ಯಾತ್ಮಿಕ ಪ್ರಯಾಣದಲ್ಲಿ ಅದು ಸಾಧ್ಯವೇ ಇಲ್ಲ. ಅಧ್ಯಾತ್ಮಿಕ ಪ್ರಯಾಣದ ಲಗ್ಗೇಜುಗಳೆಂದರೆ "ಅರಿಷಡ್ವರ್ಗಗಳು"  "ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ, ಧೀರನಾದ ಹರಿಯ ಪಾದ ಸೇರಬೇಕೆನ್ನುವರಿಗೆ, ಒಂದು ಬಾರಿ ಸ್ಮರಣೆ ಸಾಲದೇ"  ಎಂದು ಹರಿದಾಸರು ಹಾಡಿದ್ದಾರೆ. ಈ ಆರು ವೈರಿಗಳೇ, ಕಾಮ, ಕ್ರೋಧ, ಲೋಭ, ಮೋಹ,  ಮದ, ಮತ್ತು ಮಾತ್ಸರ್ಯಗಳು. ನಿರಂತರ ಅಭ್ಯಾಸದಿಂದ, ಬಹಳ ಶ್ರಮದ ಪ್ರಯತ್ನದಿಂದ, ಗುರುವಿನ ಮಾರ್ಗದರ್ಶನ ಮತ್ತು ಕೃಪೆಯಿಂದ ಮಾತ್ರ ಇವುಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ.

 " त्यागेनैके अमृतत्वमानाशु:" "ತ್ಯಾಗೇನೈಕೆ  ಅಮೃತತ್ವಮಾನಶು:"  ಎಂಬುದು ವೇದೋಕ್ತಿ. ತ್ಯಾಗದಿಂದ ಮಾತ್ರ ಅಮೃತತ್ವ ಅಥವಾ ಅಮರತ್ವ ದೊರಕುತ್ತದೆ ಎಂಬುದು ಇದರ ಅರ್ಥ. ಯಾವುದರ ತ್ಯಾಗ ಮಾಡಬೇಕೆಂದು ಕೇಳಿದರೆ, ಮೇಲೆ ಹೇಳಿದ ಆರು ಮಂದಿ ವೈರಿಗಳನ್ನು ತ್ಯಾಗ ಮಾಡಬೇಕು. ಮಾಡಿದರೆ ಮಾತ್ರ ಮುಕ್ತಿ. ನಾವು ಸೇರಬೇಕಾದ ಸ್ಥಳವನ್ನು ಸುಲಭವಾಗಿ ಸೇರಬಹುದು. ಇದಕ್ಕೆ ಶುಧ್ಧವಾದ ನಂಬಿಕೆ ಬೇಕು. ಆದರೆ ಈ ನಂಬಿಕೆ ಯಾವ ರೀತಿಯ ನಂಬಿಕೆ ಆಗಿರಬೇಕು ಎನ್ನುವುದನ್ನು ನೋಡೋಣ. 

ಅಂತರಿಕ್ಷಕ್ಕೆ  ಹಾರಿಬಿಡುವ ಉಪಗ್ರಹಗಳನ್ನು ಆಕಾಶಕ್ಕೆ ಕಳುಹಿಸಲು ಒಂದು" ರಾಕೆಟ್ ಲಾಂಚರ್ " ನ್ನು ಉಪಯೋಗಿಸುತ್ತಾರೆ. ಅದನ್ನು ಮುಂದಕ್ಕೆ ತಳ್ಳಲು ಒಂದು cryogenic engine ಅಥವಾ ಉಪಗ್ರಹ ಉಡಾವಣಾ ಯಂತ್ರವನ್ನು ಉಪಯೋಗಿಸಿ ರಾಕೆಟ್ಟು ಮತ್ತು ಅದರ ಮೇಲಿರುವ ಉಪಗ್ರಹ ಎಲ್ಲವನ್ನೂ ನಭೋಮಂಡಲಕ್ಕೆ ತಳ್ಳುತ್ತಾರೆ. ಹಾಗೆ ಭೂಮಿಯಿಂದ ಹೊರಟ ರಾಕೆಟ್ಟಿನ ತಲೆಯ ಮೇಲಿರುವ ಉಪಗ್ರಹ ತನ್ನ ಅಕ್ಷೆಯಲ್ಲಿ ಹೋಗಿ ಕೂಡ ಬೇಕಾದರೆ ಅದನ್ನು ಹೊತ್ತು ಹೋಗುವ ರಾಕೆಟ್ಟು ಹಿಂದಿನಿಂದ  ಸುಟ್ಟು ಕರಗಿ ಒಂದೊಂದೇ ಬಾಗವೂ ಬಿಡಿಬಿಡಿಯಾಗಿ ಬಿದ್ದುಹೋಗಿ,  ಮಾತ್ರ ಉಪಗ್ರಹವನ್ನು ಮೇಲೆ ಹೋಗಲು ಸಹಾಯ ಮಾಡುತ್ತದೆ. ಉಪಗ್ರಹವನ್ನು  ಹೊತ್ತು ಹೋಗುವ ರಾಕೆಟ್ಟು ತಾನು ಸುಟ್ಟು ಕರಕಾಗಿ ನೆಲಕ್ಕೆ ಬಿದ್ದು ಹೋದರೆ ಮಾತ್ರ ಉಪಗ್ರಹ ತನ್ನ ಗಮ್ಯವನ್ನು ಸೇರಲು ಸಾಧ್ಯ. ಆಧ್ಯಾತ್ಮ ಪ್ರಯಾಣವೂ ಸಂಪೂರ್ಣವಾಗಿ ಈ ಉಪಗ್ರಹದ ಪ್ರಯಾಣದಂತೆಯೇ ಅಲ್ಲವೇ? ಆತ್ಮವನ್ನು ಹಿಡಿದು ಹಿಂಡಿ ಹೀರಿಹಿಪ್ಪೆ ಮಾಡುವ ಅರಿಷಡ್ವರ್ಗಗಳೆಂಬ ಆರು ಮಂದಿ ವೈರಿಗಳನ್ನೂ ಸುಟ್ಟು ಹಿಂದಕ್ಕೆ ತಳ್ಳಿ ಕೆಳಕ್ಕೆ ಬೀಳಿಸಿದರೆ ಮಾತ್ರ ಆತ್ಮೋಧ್ಧಾರ  ಸಾಧ್ಯ. 

 ಈ ಅಧ್ಯಾತ್ಮಿಕ ಪ್ರಯಾಣದಲ್ಲಿ ಮಾನವ ಹಂತ ಮಂತವಾಗಿ ಬೆಳೆಯುತ್ತಾನೆ. ಒಂದು  ಜನ್ಮದಿಂದ ಇನ್ನೊಂದು ಜನ್ಮಕ್ಕೆ ಹೋಗುವಾಗ ತನ್ನ ಪೂರ್ವ ಜನ್ಮದ ಸಂಸ್ಕಾರಗಳನ್ನು ತೆಗೆದುಕೊಂಡೆ ಹೋಗುತ್ತಾನೆ ಎನ್ನುತ್ತದೆ, ಸನಾತನ ಧರ್ಮದ ಕೆಲವು ಅಂಗಗಳು. ಇದು ಹೇಗೆ ಎಂದು ನೋಡೋಣ. 
ನಾವು ಮನೆಗೆ ಅಂಗಡಿಯಿಂದ ಹುಣಸೆ ಹಣ್ಣನ್ನು ತರುತ್ತೇವೆ. ಸಾಮಾನ್ಯವಾಗಿ ಅದರೊಟ್ಟಿಗೆ ಕೆಲವು ಹುಣಸೆ ಬೀಜಗಳಿರಬಹುದು. ಅವುಗಳನ್ನು ಹೆಕ್ಕಿ ಹೊರಗೆ ಬಿಸಾಡುತ್ತೇವೆ. ಹಾಗೆ ಬಿಸಾಟ ಬೀಜದಲ್ಲಿ ಯಾವೊದೋ ಒಂದಕ್ಕೆ ನೆಲದ ಆಸರೆ ಸಿಕ್ಕು, ನೀರಿನ ಸಂಪರ್ಕವೂ ಸಿಕ್ಕಾಗ, ಅದು ಮೊಳೆಯುತ್ತದೆ. ಮೊಳೆಕೆ  ಸಸಿಯಾಗಿ, ಸಸಿ ಗಿಡವಾಗಿ, ಗಿಡ ಮರವಾಗಿ ಬೆಳೆಯುತ್ತದೆ. ಬೆಳೆದ ಮರದ ರೆಂಬೆ ಕೊಂಬೆಗಳ ವಿನ್ಯಾಸ, ಎಲೆಗಳ ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಹೂಗಳ  ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಕಾಯಿ ಮತ್ತು ಹಣ್ಣಿನ ಬಣ್ಣ, ಆಕಾರ, ವಾಸನೆ ಮತ್ತು ರುಚಿ ಹೀಗೆ ಎಲ್ಲಾ ಗುಣಗಳೂ ಆ ಬೀಜದಲ್ಲಿ ಅಡಕವಾಗಿತ್ತಲ್ಲವೇ? ಈ ಅಡಕವಾಗಿದ್ದ ಗುಣಗಳನ್ನೆಲ್ಲ ಆ ಬೀಜವು ತನ್ನ ತಾಯಿ ಮರದಿಂದ ಹೊತ್ತು ತಂದಿದ್ದಲ್ಲವೇ?  ಹೀಗೆ ಮನುಷ್ಯನೂ ಸಹ ತನ್ನ ಪೂರ್ವಜನ್ಮದಿಂದ ತನ್ನ ಎಲ್ಲ ಗುಣಗಳನ್ನೂ ಹೊತ್ತು ತರುತ್ತಾನೆ. ಆ ಗುಣಗಳನ್ನು ಪ್ರಸ್ತುತ ಜನ್ಮದಲ್ಲಿ ಅಭ್ಯಾಸದಿಂದ ಸಂಸ್ಕರಿಸಿಕೊಂಡು ಉತ್ತಮ ಹಂತಕ್ಕೆ ಹೋಗುವುದೇ ಅಧ್ಯಾತ್ಮಿಕ ಪ್ರಯಾಣದ ಮೂಲ ಉಧ್ಧ್ಯೇಶ. ಮೇಲೆ ಹೇಳಿದ ಬೀಜದ ದೃಷ್ಟಾಂತವನ್ನೇ ಮತ್ತೆ ನೋಡೋಣ. ಆ ಬೀಜವನ್ನು ಬಾಣಲಿಯಲ್ಲಿ ಹಾಕಿ ಹುರಿದು ಬಿಟ್ಟರೆ, ಅದರಲ್ಲಿ ಮತ್ತೆ ಚಿಗುರುವ ಗುಣಗಳು ನಶಿಸಿ ಹೋಗಿ ಮತ್ತೆ ಗಿಡವಾಗಿ ಮರವಾಗಿ ತನ್ನ ಗುಣಗಳನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನುಷ್ಯನೂ ಸಹ ತನ್ನನ್ನು ತಾನು ಸಂಸ್ಕರಿಸಿಕೊಂಡು ತನ್ನಲ್ಲಿರುವ ಅರಿಷಡ್ವರ್ಗಗಳಿಗೆ ಸಂಬಂಧಿಸಿದ ಗುಣಗಳನ್ನೆಲ್ಲ ಸುಟ್ಟರೆ, ಅಧ್ಯಾತ್ಮಿಕ ಔನ್ನತ್ಯವನ್ನು ಪಡೆಯ ಬಹುದು.  

ಭಯ ಮತ್ತು ಭಕ್ತಿ 

ಸಾದಾರಣವಾಗಿ ದೇವರನ್ನು ನಂಬುವ ಮತ್ತು ಆತ್ಮೋಧ್ಧಾರದ  ಹಾದಿಯಲ್ಲಿ ಪಯಣಿಸುವವರಲ್ಲಿ ಮೂಲಭೂತವಾದ ವ್ಯತ್ಯಾಸವಿದೆ.  ಸಾಮಾನ್ಯವಾಗಿ " ದೇವರನ್ನು ಭಯ ಭಕ್ತಿಯಿಂದ ಸೇವಿಸು" ಎಂದು  ಹೇಳುತ್ತಾರೆ. ಭಕ್ತಿಯೇನೋ ಸರಿ ಆದರೆ ಭಯವೇಕೆ? ಇದು ಒಂದು ವಿವಾದಾತ್ಮಕವಾದ ವಿಷಯ. ಇದರ ವಿವಾದಕ್ಕೆ ಇಳಿಯುವ ಮೊದಲು ಮಾನವರಿಗಿರುವ ಈ " ಭಯ "ವನ್ನು ಸ್ವಲ್ಪ ವಿಶ್ಲೇಷಣೆ ಮಾಡುವ.  ನಾವೆಲ್ಲರೂ ಈ ಜೀವನಕ್ಕೆ ಮತ್ತು ಜೀವನಕ್ಕೆ ಸಂಭಂಧಪಟ್ಟ ಎಲ್ಲಾ ವಿಷಯ ಮತ್ತು ವಸ್ತುಗಳಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುತ್ತೇವೆ.ಅಂದರೆ ನಮಗೇ ಸಂಭಂಧಪಟ್ಟ ಎಲ್ಲಾ ವಿಷಯ -ವಸ್ತುಗಳಿಗೂ ನಾವು ಅಂಟಿಕೊಂಡಿರುತ್ತೇವೆ.  ಈ ಅಂಟೆ ಎಲ್ಲಾ ಭಯಗಳಿಗೂ ಕಾರಣ.ನಮಗೆ ಎರಡು ರೀತಿಯ ಭಯವಿರುತ್ತದೆ. ಒಂದು, ನಮ್ಮಲ್ಲಿರುವ ವಸ್ತು-ವಿಷಯಗಳನ್ನು ನಾವು ಕಳೆದುಕೊಳ್ಳುವ ಭಯ ಅಥವಾ ನಾವು ಆಸೆಪಡುವ ವಸ್ತು-ವಿಷಯಗಳು ನಮಗೆ ಸಿಗುವುದಿಲ್ಲವೇನೋ ಎಂಬ ಭಯ. ನಾವು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾನವನ ಭಯ ಈ ಎರಡರಲ್ಲಿ ಯಾವುದಾದರೂ ಒಂದು ಭಾಗಕ್ಕೆ ಸೇರಲೇಬೇಕು. ಸಾಮಾನ್ಯವಾಗಿ ಎಲ್ಲಾ ಮಾನವರೂ ಮೇಲೆ ಹೇಳಿದ ಭಯದ ಕಾರಣದಿಂದಾಗಿ " ದೇವರನ್ನು" ಮೊರೆ ಹೋಗುತ್ತಾರೆ. ತಾವು ಅಪೇಕ್ಷೆಪಟ್ಟ ಆಸೆಗಳು ಈಡೇರಲೆಂದು ಆ ಭಗವಂತನನ್ನು ಬೇಡುತ್ತಾರೆ, ಹಲುಬುತ್ತಾರೆ, ಗೋಳುತ್ತಾರೆ. 

ಮಹಾಭಾರತದಲ್ಲಿ ಅರ್ಜುನನೂ ಸಹ, ಸಾಕ್ಷಾತ್ ಭಗವಂತನೆಂದೆ ಪರಿಗಣಿಸಲ್ಪಟ್ಟ, ಈ ಪ್ರಪಂಚಕ್ಕೆ ಭಗವದ್ಗೀತೆಯೆಂಥಹ ಅದ್ಭುತ ಕಾವ್ಯವನ್ನು ಕೊಟ್ಟಂತಹ ಶ್ರೀ ಕೃಷ್ಣನೇ ಜೊತೆಯಲ್ಲಿದ್ದರೂ, ಕುರುಕ್ಷೇತ್ರದ ಯುಧ್ಧರಂಗದಲ್ಲಿ ಹೋರಾಡಲು ಸನ್ನಧ್ಧರಾಗಿ ಎಲ್ಲರೂ ನಿಂತಿರುವಾಗ  ಶೋಕಾವಿಷ್ಟನಾಗಿ  " ಅಯ್ಯೋ ಈ ಯುಧ್ಧ ಏಕೆ ಬೇಕು, ಇಷ್ಟು ಜನರ ಹತ್ಯೆಯಿಂದ ಸಿಗುವ ರಾಜ್ಯ ಭೋಗಗಳೇಕೆ" ಎಂದು ಹಲುಬಲಿಲ್ಲವೇ. ಆ ದೈವದ ಸಹವಾಸದಲ್ಲಿದ್ದರೂ ಏನನ್ನೋ ಕಳೆದುಕೊಳ್ಳುವ ಭಯದಿಂದ ಅರ್ಜುನ ಗೋಳಾಡಲಿಲ್ಲವೇ? ಅವನ ಭಯವೂ ಸಹ ಜೀವನದ ವಿಷಯ -ವಸ್ತುಗಳಿಗೆ ಅವನು ಅಂಟಿಕೊಂಡಿದ್ದರ ಕಾರಣದಿಂದಲೇ ಉಧ್ಭವವಾಗಿದ್ದಲ್ಲವೇ?. 

ಆದರೆ ಈ ದೈವ ಭಯವೆಂಬುದು ಒಳ್ಳೆಯದೇ ಅಥವಾ ಕೆಟ್ಟದೇ?  

ಒಂದು ರೀತಿಯ ಸಾಮಾಜಿಕ ವ್ಯವಸ್ತೆ ಮತ್ತು ಸಂಸ್ಕೃತಿಯ ಬೆಳವಣಿಗೆ ಮತ್ತು ಬದಲಾಗುತ್ತಾ ಹೋಗುವ ಈ ಸಂಸ್ಕೃತಿಯ ಹತ್ತು ಹಲವಾರು ಆಯಾಮಗಳಿಗೆ ಈ ಭಯವೇ ಕಾರಣವೆಂದು ನಾವು ಅರಿತಾಗ ಮಾನವನ ಸಾಮಾಜಿಕ ಮತ್ತು ಪ್ರಾಪಂಚಿಕ ಜೀವನಕ್ಕೆ ಈ ಭಯವು ಪೂರಕವಾಗೆ ಇದೆ ಎಂದರೆ ತಪ್ಪಾಗಲಾರದು. "ಹೀಗೆ ಮಾಡಿದರೆ ತಪ್ಪು, ಇದನ್ನು ಮಾಡಿದರೆ ಕೆಟ್ಟ ಕರ್ಮ ಉಂಟಾಗುತ್ತದೆ, ಇದರಿಂದ ದೇವರ ಅವಕೃಪೆಗೆ ಪಾತ್ರನಾಗುತ್ತೀಯೇ ಮತ್ತು ದಂಡನೆಗೆ ಗುರಿಯಾಗುತ್ತೀಯೇ " ಎಂಬ ಭಯವನ್ನು ನಿಮ್ಮಲ್ಲಿ ಹುಟ್ಟಿಸಿದಾಗ, ನೀವು ಸಾಮಾಜಿಕ ಕಟ್ಟಲೆಗಳನ್ನು ಮೀರದೆ ಅವುಗಳ ಚೌಕಟ್ಟಿನಲ್ಲೇ ಇದ್ದಾಗ, ಒಂದು ಸುವ್ಯವಸ್ಥಿತ ಸಮಾಜ ನಿರ್ಮಾಣವಾದಾಗ, ಈ ಭಯವು ಒಳ್ಳೆಯದನ್ನೇ ಮಾಡುವುದಲ್ಲವೇ?  ನಮಗೇ ಅರ್ಥವಾಗದ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿರುವಾಗ ಮತ್ತು ನಮ್ಮ ಜೀವನದಲ್ಲಿ ನಡೆದ ಅಥವಾ ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣಗಳನ್ನು ಕಂಡುಕೊಳ್ಳಲು ಅಸಮರ್ಥರಾದಾಗ, ಅದನ್ನೇ ಮನಸ್ಸಿಗೆ ಅಂಟಿಸಿಕೊಂಡು ಯೋಚನೆ ಮಾಡೀ ಮಾಡೀ ಹಣ್ಣಾಗಿ ಹುಚ್ಚಾಗುವುದರ ಬದಲು, ಅದಕ್ಕೆಲ್ಲ ಆ ದೈವವೇ ಕಾರಣವೆಂದುಕೊಂಡು ನಮ್ಮ ನಮ್ಮ ಮನಸ್ಸುಗಳನ್ನು ತಹಬಂದಿಗೆ ತಂದುಕೊಂಡು ಸಮಾದಾನ ಚಿತ್ತರಾಗುವುದಾದರೆ ತಪ್ಪೇನು? ಈ ರೀತಿಯಲ್ಲಿ ಈ " ದೈವ ಭಯವು"  ನಮಗೇ ಒಳ್ಳೆಯದನ್ನೇ ಮಾಡಿದೆ ಅಲ್ಲವೇ? ಈ ದೈವ ಭಯವು ಸಾಮಾಜಿಕ ವ್ಯವಸ್ತೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡಿದೆಯಂದರೆ ತಪ್ಪಾಗಲಾರದು. ಹೀಗೆ ನಮ್ಮ ಹತೋಟಿಯಲ್ಲಿರದ ನಮ್ಮ ಕೆಲಸ ಕಾರ್ಯಗಳು ಮತ್ತು ಅದರಿಂದ ಬರುವ ಫಲಾಫಲಗಳು ಏನಾಗುವುದೋ ಅಥವಾ ಹೇಗಾಗುವುದೋ ಎಂಬ ಭಯವಿರುವ ಎಲ್ಲರೂ "ಮಂಗನ ಮರಿ ಬೀಳುವ ಭಯದಿಂದ ತನ್ನ ತಾಯಿಗೆ ಹೇಗೆ ಅಂಟಿಕೊಳ್ಳುವುದೋ"  ಹಾಗೆ ಈ ದೈವದ ಮೊರೆ ಹೋಗುತ್ತಾರೆ. 

ಆದರೆ ಈ ಭಯವು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಮಾರಕವಾಗಿರುತ್ತದೆ. ಈ ಭಯವು ಸುಖ-ದು:ಖಗಳನ್ನು ಸಮಭಾವದಿಂದ ತೆಗೆದುಕೊಳ್ಳಲು ಬಿಡುವುದಿಲ್ಲ. ಆಧ್ಯಾತ್ಮಿಕ ಉನ್ನತಿಗೆ ಭಯಕ್ಕಿಂತ ಭಕ್ತಿಯೇ ಮುಖ್ಯ. ಭಯವು ಭಕ್ತಿಯಾಗಿ ಮಾರ್ಪಾಡಾಗುವುದೇ ಆಧ್ಯಾತ್ಮಿಕ  ಪಯಣದ ಮೂಲ ಉಧ್ಧೇಶ. ಆದರೆ ಇದು ಒಂದು  ನಿಧಾನ ಪ್ರಕ್ರಿಯೆ. ಮುಕ್ತಿ ಸಿಗುವವರೆಗೆ ಜನ್ಮ ಜನ್ಮಾಂತರದಲ್ಲಿ ಸಂಸ್ಕಾರವಾಗಿ ಹಂತ ಹಂತವಾಗಿ ಮೇಲೇರುವುದೇ ಆಧ್ಯಾತ್ಮಿಕ ಪಯಣದ ರೀತಿ.   

ಇಲ್ಲಿ ಒಂದು ಉದಾಹರಣೆ ಅಗತ್ಯ. ದೇಹ ಸಂಬಂಧವನ್ನು ಹೊಂದಿದ ಎಲ್ಲಾ ಜೀವಾತ್ಮಗಳೂ ತನ್ನ ಮೂಲವಾದ ಪರಮಾತ್ಮನನ್ನು ಸೇರುವುದೇ ಆಧ್ಯಾತ್ಮಿಕ  ಪಯಣದ ಉಧ್ಧೇಶ . ಸೂರ್ಯನ ಶಾಖದಿಂದ ಕಡಲ ನೀರು ಆವಿಯಾಗಿ ಆಕಾಶ ಸೇರಿ ಮೋಡವಾಗಿ, ಸತ್ವದ( ಮೋಡದ ಸತ್ವವೆಂದರೆ ನೀರು ಎಂಬ ಅರ್ಥದಲ್ಲಿ) ಭಾರವನ್ನು ಹೆಚ್ಚಿಸಿಕೊಂಡು ಮಳೆಯಾಗಿ ಧರೆಗಿಳಿದು, ನದಿಯಾಗಿ ಹರಿದು ಮತ್ತೆ ಕಡಲನ್ನೇ ಸೇರುವ ಆಸೆಯಿಂದ  ಕಡಲ ಮುಖಮಾಡಿ ಹರಿದು ಕಡಲನ್ನೇ ಸೇರುವ ಆ ನೀರ ಹನಿಯಂತೆ, ಪ್ರತಿಯೊಂದು ಜೀವಾತ್ಮನೂ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಮಾಡುವ ಪ್ರಯತ್ನವೇ ಆಧ್ಯಾತ್ಮಿಕ  ಪ್ರಯಾಣದ ಗುರಿ. 

ಮೇಲೆ ಹೇಳಿದಂತೆ ಎಲ್ಲಾ ಜೀವಾತ್ಮನೂ ಪರಮಾತ್ಮವನ್ನು ಸೇರುವ ಪಯಣದ ಯಾವುದಾದರೂ ಒಂದು ಹಂತದಲ್ಲಿ  ಇದ್ದೇ ಇರುತ್ತಾನಾದುದರಿಂದ , ಯಾರನ್ನೂ ಹೀಗೆಳೆಯಲಾಗುವುದಿಲ್ಲ. ಸಾಧ್ಯವಾದರೆ ಮೇಲಿರುವವರು ಕೆಳಗಿರುವವರನ್ನು ಮೇಲೆತ್ತಲು ಪ್ರಯತ್ನ ಪಡಬೇಕು.(ಪೈಮರಿ ಶಾಲೆಯ ಹಂತ ದಿಂದಲೇ ಸ್ನಾತಕೋತ್ತರ ಪದವಿಯವರೆಗೆ ಬಂದವನು, ಪ್ರೈಮರಿ ಶಾಲೆಯ ಮಗುವನ್ನು ಕಂಡು ಹೀಗೆಳೆದರೆ ಅದು ಮೂರ್ಖತನವಲ್ಲದೆ ಮತ್ತೇನು ? ಆಧ್ಯಾತ್ಮಿಕವಾಗಿ ಎಲ್ಲರೂ ಬೆಳೆಯಬೇಕು ಎಂದು ಎಲ್ಲರೂ ಅದಕ್ಕೆ ಅವಶ್ಯವಾದ ಪ್ರಯತ್ನದ ಪ್ರಯಾಣವನ್ನು ಮಾಡಿ ಆದ್ಯಾತ್ಮಿಕ ಔನ್ನತ್ತ್ಯವನ್ನು ಪಡೆಯಬೇಕು. 
ಸರ್ವೇ  ಜನಾ: ಸಜ್ಜನೋ ಭವಂತು 
ಸರ್ವೇ ಸಜ್ಜನಾ: ಸುಖಿನ: ಸಂತು 



ರವಿ ತಿರುಮಲೈ 
14 .5.2011
96322 46255

Sunday, 25 December 2011

ಕ್ಷಮೆ-ಮಾನವನ ಶ್ರೇಷ್ಠ ಗುಣ

                                                                ಕ್ಷಮೆ-ಮಾನವನ ಶ್ರೇಷ್ಠ ಗುಣ 

ಕ್ಷಮೆಯೇ ಮಾನವನ ಶ್ರೇಷ್ಠ ಗುಣಗಳಲ್ಲೊಂದು. ಉತ್ಕೃಷ್ಟ ಬುಧ್ಧಿಮತ್ತೆಯ ಗುಣವಾದ ಕ್ಷಮಾಗುಣವೇ,ಅನ್ಯ ನಿಮ್ನ ಸ್ಥರದ ಪ್ರಾಣಿಗಳಿಂದ ಮಾನವನನ್ನು ಭಿನ್ನವಾಗಿಸುವುದು. 

ದೈವಭಕ್ತನ  ಅತಿಶಯ ಗುಣಗಳನ್ನು ವಿವರಿಸುವಾಗ, ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ," ದೈವ ಭಕ್ತನು ಅಸೂಯೆ ಮತ್ತು ಅಹಂಕಾರರಹಿತನಾಗಿರಬೇಕು. ಅವನು ಎಲ್ಲ ಪ್ರಾಣಿಗಳಲ್ಲೂ ಕರುಣಾಪೂರಿತನಾಗಿರಬೇಕು. ಪರಮಾತ್ಮನಲ್ಲಿ ತನ್ನನ್ನೇ ತಾನು ಸಮರ್ಪಿತನಾಗಿರಬೇಕು, ಸುಖ ದುಃಖಗಳಲ್ಲಿ ಸಮಭಾವವುಳ್ಳವನಾಗಿರಬೇಕು ಮತ್ತು ತನಗೆ ತೊಂದರೆಯನ್ನು ಉಂಟುಮಾಡುವವನಲ್ಲಿಯೂ, ಕ್ಷಮಾಬುಧ್ಧಿಯುಳ್ಳವನಾಗಿರಬೇಕು." ಎಂದು. ಇದು ಮಾನವರಲ್ಲಿರುವ ಮತ್ತು ಇರಬೇಕಾದ ಕ್ಷಮಾಗುಣದ ಮಹತ್ವವನ್ನು ಸ್ಪಷ್ಟೀಕರಿಸುತ್ತದೆ. 

ಭಾರತೀಯ ಪರಂಪರೆಯಲ್ಲಿ ಮತ್ತು ಪುರಾಣದ ಗ್ರಂಥಗಳಲ್ಲಿ, ಅತಿ ಪ್ರಚೋದನಾತ್ಮಕ ಮತ್ತು ಅವಮಾನಕರ ಸನ್ನಿವೇಶಗಳಲ್ಲೂ ಕೋಪಕ್ಕೆ ಬಲಿಯಾಗದೆ, ಕ್ಷಮಾ ಗುಣವನ್ನೇ ಪ್ರದರ್ಶಿಸಿದ, ಅವತಾರಗಳ, ಸಂತರ, ಋಷಿಮುನಿಗಳ, ಸಾಧುಜನರ ಮತ್ತು ಭಗವದ್ಭಕ್ತರ, ದೃಷ್ಟಾಂತಗಳು ಹೇರಳವಾಗಿ ಲಭಿಸುತ್ತವೆ. ಎಲ್ಲರನ್ನು ಕಾಯುವ ಮತ್ತು ಎಲ್ಲರ ಹಿತರಕ್ಷಕನೂ ಆದ ಪರಮ ಪುರುಷನು ಕ್ಷಮಾಗುಣದ ಮೂರ್ತರೂಪವಲ್ಲದೆ ಮತ್ತೇನು? 

ಕೋಪಾವಿಷ್ಟನಾದ ಭೃಗು ಮಹರ್ಷಿಯು ಶ್ರೀಮನ್ನಾರಾಯಣನ ವಕ್ಷಸ್ಥಲವನ್ನು ಕಾಲಿನಿಂದ ಒದ್ದರೂ, ಅವನ ಹೆಜ್ಜೆ ಗುರುತನ್ನು ತನ್ನೆದೆಯಲ್ಲೇ ಕಾಯ್ದಿರಿಸಿಕೊಂಡು, ಅವನನ್ನು ಕ್ಷಮಿಸಿದ ಕಥೆ ಪುರಾಣದಲ್ಲಿದೆ. 

ಮನವಾವತಾರದಲ್ಲಿ ಶ್ರೀರಾಮನಾದ, ಶ್ರೀಮನ್ನಾರಾಯಣನನ್ನು ತನ್ನ ವೈರಿಯೆಂದೆ ಪರಿಗಣಿಸಿ, ಸೀತೆಯನ್ನಪಹರಿಸುವಂತಹ ಘೋರ ಅಪರಾಧವನ್ನೇ ಮಾಡಿದರೂ ರಾವಣನನ್ನು ಕೊಂದಮೇಲೂ ಸಹ ಹುಟ್ಟು ಸಾವಿನ ಚಕ್ರದಿಂದ ಮುಕ್ತಗೊಳಿಸಿ ಅವನನ್ನು ಕ್ಷಮಿಸಲಿಲ್ಲವೇ,ಶ್ರೀರಾಮ?. ಅಷ್ಟೇ ಅಲ್ಲ ರಾವಣನಿಗೆ ಸಹಾಯಕರಾಗಿ ನಿಂತ  ತಾಟಕಾ,ವಿರಾಧ,ಖರದೂಷಣ, ಮಾರೀಚ ಮತ್ತು ಕು೦ಬಕರ್ಣರಂತಹ ರಾಕ್ಷಸರನ್ನು ಮುಕ್ತಿಯನ್ನಿತ್ತು ಕ್ಷಮಿಸಲಿಲ್ಲವೇ ರಾಮ? 

ಪೂರ್ಣಾವತಾರಿ ಶ್ರೀ ಕೃಷ್ಣ ಬಾಲ್ಯಾವಸ್ತೆಯಲ್ಲೇ, ತನ್ನನ್ನು ಕೊಲ್ಲಲು ಬಂದ ಪೂತನೆಯನ್ನು ಕೊಂದು, ಕ್ಷಮಿಸಿ ಮುಕ್ತಿ ನೀಡಲಿಲ್ಲವೇ? ಅದೇ ಕೃಷ್ಣಾವತಾರದಲ್ಲಿ, ಸ್ವಯಂ ದುರ್ಬುಧ್ಧಿಯಿಂದಲ್ಲದಿದ್ದರೂ, ಮಾತ್ರ ಕ೦ಸನಿ೦ದ ನಿರ್ದೇಶಿತರಾದ ವೃತ್ರಾಸುರ, ಬಕಾಸುರ, ಅಘಾಸುರ, ದೇನುಕಾಸುರ,ಕಾಲೀಯ, ಕುವಲಯಾಪೀಡ, ಚಾಣೂರ-ಮುಷ್ಟಿಕರಂತಹ ರಾಕ್ಷಸರನ್ನು ಕ್ಷಮಾಗುಣದಿಂದ ಕೊಂದು ಮುಕ್ತರನ್ನಾಗಿಸಲಿಲ್ಲವೇ? 

ಹೀಗೆ ಪರಮಾತ್ಮನು ತಾನೇ ಕ್ಷಮಾಗುಣವನ್ನು ಹಲವಾರು ಬಾರಿ, ನಾನಾ ಪ್ರಸಂಗಗಳಲ್ಲಿ, ಪ್ರದರ್ಶಿಸಿ, ಮಾನವರಿಗೆ ಅದನ್ನು ಅನುಕರಿಸುವಂತೆ ಮತ್ತು ಅನುಸರಿಸುವಂತೆಯೂ ಮಾರ್ಗದರ್ಶನಮಾಡಿದ್ದಾನೆ. ಹಲವಾರು ಋಷಿ ಮುನಿಗಳು, ಸಾಧು ಸಂತರು ಮತ್ತು ಭಗವದ್ಭಕ್ತರೂ ಸಹ ಪರಮಾತ್ಮನ ಈ ಸದ್ಗುಣವನ್ನು ರೂಡಿಸಿಕೊಂಡು ತಮ್ಮ ಜೀವನದಲ್ಲೂ ಪ್ರದರ್ಶಿಸಿದ್ದಾರೆ.  

ವಿಶ್ವಾಮಿತ್ರ - ವಸಿಷ್ಠರ ವೃತ್ತಾಂತವನ್ನೇ ತೆಗೆದುಕೊಳ್ಳೋಣ. ಅಯೋಧ್ಯೆಯ ರಾಜನಾದ ಕೌಶಿಕನು ಅಕಸ್ಮಾತ್ತಾಗಿ ವಸಿಷ್ಠನ ಆಶ್ರಮಕ್ಕೆ ಭೇಟಿನೀಡಿದಾಗ ಕಂಡ ನಂದಿನಿ ಎಂಬ ಕಾಮಧೇನುವನ್ನು ತನ್ನದಾಗಿಸಿ ಕೊಳ್ಳಬೇಕೆಂಬ ಅತ್ಯಾಕಾಂಕ್ಷೆಯಿಂದ ಮೊದಲುಗೊಂಡು, ಆ ಪ್ರಯತ್ನದಲ್ಲಿ ಸೋತು, ವಸಿಷ್ಠನಿಗೆ ಕೊಟ್ಟಂತಹ ತೊಂದರೆಗಳಿಗೇನು ಲೆಕ್ಕಉಂಟೆ. ಅವನ ಮಕ್ಕಳನ್ನೆಲ್ಲ ಕೊಂದು ಅವನ ಆಶ್ರಮವನ್ನು ದ್ವಂಸ ಮಾಡಿದರೂ, ವಸಿಷ್ಠ ಶಾಂತನಾಗಿ ಎಲ್ಲವನ್ನೂ ಸಹಿಸಿಕೊಂಡು ಅವನನ್ನು ಕ್ಷಮಿಸಿಲಿಲ್ಲವೇ. ಒಂದು ಹುಣ್ಣಿಮೆಯ ರಾತ್ರಿ ಹೇಗಾದರೂ ವಸಿಷ್ಠನನ್ನು ಕೊಲ್ಲಬೇಕೆಂದು ಆಶ್ರಮದ ಹಿಂದಿನ ಪೊದರುಗಳಲ್ಲಿ ಕಾದು ಕುಳಿತ ವಿಶ್ವಾಮಿತ್ರನ ಉದ್ದ್ಯೇಷವನ್ನರಿತ ವಸಿಷ್ಠನು ತನ್ನ ಪತ್ನಿ ಅರುಂದತಿಗೆ
"ಈ ಹುಣ್ಣಿಮೆಯ ಬೆಳಕು ಎಲ್ಲ ಕಡೆ ಪಸರಿಸಿರುವಂತೆ ವಿಶ್ವಾಮಿತ್ರನ ತಪಸ್ಸಿನ ಕಾಂತಿಯೂ ಎಲ್ಲ ಕಡೆ ಹರಡಲಿದೆ" ಎಂದು ಹೇಳುತ್ತಾನೆ. ಅದನ್ನಾಲಿಸಿದ ವಿಶ್ವಾಮಿತ್ರನಿಗೆ ತನ್ನ ಅಲ್ಪತನದ ಅರಿವಾಗಿ ಹೊರಬಂದು ವಸಿಷ್ಠನ ಕಾಲಿಗೆರಗಿ,ಕ್ಷಮಾಯಾಚನೆ ಮಾಡಿದನಂತೆ. ತನಗೆಷ್ಟು ತೊ೦ದರೆ  ಕೊಟ್ಟರೂ ಅವನನ್ನು ಮನ್ನಿಸಿ ಅವನಿಗೆ ಆತ್ಮೋಧ್ಧಾರದ ಮಾರ್ಗವನ್ನು ತೋರಿಸಿ ಕ್ಷಮಿಸಿದ ವೃತ್ತಾಂತ ಕ್ಷಮಾಗುಣದ ಔನ್ನತ್ಯವನ್ನು ಎತ್ತಿ ತೋರಿಸುತ್ತದೆ.    

ಭಕ್ತ ಪ್ರಹ್ಲಾದನನ್ನು ಅವನ ತಂದೆ ಹಿರಣ್ಯಕಶಿಪು ಕೊಲ್ಲಲು ಕಳುಹಿಸಿದ, ಶಾಂದ ಮತ್ತು ಅಮರ್ಕರೆಂಬ ದಾನವ ಪೂಜಾರಿಗಳು ರಾಕ್ಷಸ ರೂಪದಲ್ಲಿ ಪ್ರಹ್ಲಾದನನ್ನು ಕೊಲ್ಲಲು ಬಂದಾಗ ಹರಿನಾಮ ಸ್ಮರಣಾನಿರತನಾದ ಪ್ರಹ್ಲಾದನನ್ನು ಕಾಪಾಡಲು ಶ್ರೀ ಹರಿಯ ಚಕ್ರ ಬಂದು ಆ ಇಬ್ಬರು ರಾಕ್ಷಸರನ್ನೂ ತುಂಡರಿಸಿತಂತೆ. ಆಗ ಕರುಣಾ ಪೂರಿತನಾದ ಪ್ರಹ್ಲಾದನು ಶ್ರೀ ಹರಿಯನ್ನು ಕುರಿತು " ಹೇ ಪ್ರಭು, ನನ್ನನ್ನು ಕೊಲ್ಲಬಂದವರಲ್ಲಿ ನನಗೆ ದ್ವೇಷವಿಲ್ಲದಿದ್ದಲ್ಲಿ, ನನ್ನನ್ನು ನಾಶಮಾಡಬಂದ ರಾಕ್ಷರು, ಹಾವುಗಳು, ಆನೆಗಳು, ಸಿಂಹಗಳು ಇವೆಲ್ಲವುಗಳಲ್ಲಿ ನಾನು ನಿರಂತರ ನಿನ್ನನ್ನೇ ಕಂಡಿದ್ದೆನಾದರೆ, ಕರುಣೆಯಿಂದ ಈ ಇಬ್ಬರಿಗೂ ಜೀವದಾನಮಾಡು"  ಎಂದು ಬೇಡಿದಾಗ, ಅವರಿಬ್ಬರೂ ತತ್ಕ್ಷಣ   ಜೀವಂತರಾಗಿಬಿಟ್ಟರಂತೆ. ಕ್ಷಮಾಗುಣದ ಪ್ರತೀಕವೇ ಪ್ರಹ್ಲಾದನೆಂದರೆ ತಪ್ಪಾಗಲಾರದು.  

ರಾಜ ಅಂಬರೀಶನು ಮಹಾನ್ ಭಕ್ತನಾದುದರಿಂದ ಶ್ರೀಮನ್ನಾರಾಯಣನು ತನ್ನ ಸುದರ್ಶನವನ್ನು ಅವನ ರಾಜ್ಯದ ಸಂರಕ್ಷಣೆಗೆ ನಿಯೋಜಿಸಿದ್ದನಂತೆ. ಏಕಾದಶಿಯಂದು ಉಪವಾಸವಿದ್ದು ಮರುದಿನ ಆಹಾರ ಸೇವಿಸುತ್ತಿದ್ದನಂತೆ. ಹೀಗೆ ಒಂದು ಬಾರಿ ದ್ವಾದಶಿಯ ದಿನ ಇನ್ನೇನು ಆಹಾರ ತೆಗೆದುಕೊಳ್ಳುವ ಸಮಯಕ್ಕೆ, ಅಲ್ಲಿಗೆ ದೂರ್ವಾಸ ಮಹಾ ಮುನಿ ಆಗಮಿಸಿದನಂತೆ. ತನ್ನೊಡನೆ ಆಹಾರ ಸ್ವೀಕರಿಸಲು ಆಹ್ವಾನಿಸಿದಾಗ, ಆ ಮುನಿ" ಸ್ನಾನಮಾಡಿ ಬರುತ್ತೇನೆ " ಎಂದು ಹೇಳಿ ಹೊರಟುಹೋದನಂತೆ. ಆಹಾರ ಸ್ವೀಕರಿಸುವ ಸಮಯ ಮೀರಲಿದ್ದಾಗ, ದೂರ್ವಾಸ ಆಗಮಿಸುವ ಸುಳಿವಿಲ್ಲದಾಗ "ಇನ್ನೂ ಈ ಮುನಿ ಬರಲಿಲ್ಲವೇ! ಧೀರ್ಘ ಧ್ಯಾನದಲ್ಲೇನಾದರೂ ಮುಳುಗಿದರೋ" ಎಂದು ಯೋಚಿಸಿ, ರಾಜ ಅಂಬರೀಶನು ತನ್ನ ಪುರೋಹಿತರನ್ನು ಸಂಪ್ರತಿಸಿ, ಅಲ್ಪಮಾತ್ರ ಗಂಗಾಜಲವನ್ನು ಸೇವಿಸಿದನಂತೆ. ಇದನ್ನರಿತ, ದೂರ್ವಾಸನು, ಕೋಪಾವಿಷ್ಟನಾಗಿ, ಕುಪಿತಗೊಂಡು, ಅಂಬರೀಷನನ್ನು ಕೊಲ್ಲಲು ಒಬ್ಬ ದೈತ್ಯನನ್ನು ಸೃಷ್ಟಿಮಾಡಿದನಂತೆ. ಆ ದೈತ್ಯನು ಅಂಬರೀಷನನ್ನು ಕೊಲ್ಲಲುಪಕ್ರಮಿಸಿದಾಗ, ಶ್ರೀಮನ್ನಾರಾಯಣನ ಸುದರ್ಶನವು ಆ ದೈತ್ಯನನ್ನು ಕೊಂದು, ದೂರ್ವಾಸನನ್ನು ಬೆನ್ನಟ್ಟಿತಂತೆ. ಹೆದರಿ ಕಂಗಾಲಾದ ಆ ದೂರ್ವಾಸನು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರನ್ನು ಮೊರೆ ಹೋಗಲು,ಅವರು ದೂರ್ವಾಸನಿಗೆ, ರಾಜ ಅಂಬರೀಶನನ್ನೇ ಮೊರೆಹೋಗುವಂತೆ ಆದೇಶಿಸಲು,ದೂರ್ವಾಸನು ಅಂಬರೀಷನನ್ನು  ಆಶ್ರಯಿಸಲು, ಅವನು ಸುದರ್ಶನನನ್ನು ಶಾಂತವಾಗಲು ಬೇಡಿ, ತನ್ನನ್ನೇ ನಾಶಮಾಡಲುಪಕ್ರಮಿಸಿದ ದೂರ್ವಾಸನನ್ನು ಕ್ಷಮಿಸಿ ಕಾಪಾಡಿದನೆಂದು, ಪುರಾಣಗಳು ಹೇಳುತ್ತವೆ. ಅಂಥಹ ಮಹನೀಯರ ಕ್ಷಮಾಗುಣವು, ಅನುಕರಣೀಯವಲ್ಲವೇ? 

ಗೋದಾವರಿ ನದಿಯಲ್ಲಿ ನಿತ್ಯ ಸ್ನಾನ ಮಾಡುವುದು  "ಸಂತ ಏಕನಾಥ"ನ ನಿತ್ಯದ ಪರಿಪಾಟ. ಅವನು ನದಿಗೆ ಹಾದು ಹೋಗುವ ದಾರಿಯಲ್ಲಿ ಒಬ್ಬ ಮುಸಲ್ಮಾನ ಗೃಹಸ್ಥನ ಮನೆಯಿತ್ತು. ಆ  ಹಾದಿಯಲ್ಲಿ  ಹೋಗುವ ಹಿಂದುಗಳನ್ನು ಕುಚೇಷ್ಟೆ ಮಾಡುವುದು ಅವನಿಗೊಂದು ಮೋಜಿನ ವಿಷಯ. ಏಕನಾಥ ಪ್ರತಿನಿತ್ಯ ನದೀ ಸ್ನಾನ ಮುಗಿಸಿ ಹಿಂತಿರುಗುವಾಗ,  ಅವನು ಬಾಯಿ ಮುಕ್ಕಳಿಸಿ ಅವನ ಮೇಲೆ ಉಗಿಯುತ್ತಿದ್ದನಂತೆ. ತತ್ಕ್ಷಣ ಏಕನಾಥನು  ನದಿಗೆ ಹೋಗಿ ಮತ್ತೆ ಸ್ನಾನ ಮಾಡಿ ಬರುತ್ತಿದ್ದನಂತೆ. ಹಲವಾರು ದಿನ, ಇದು ನಾಲ್ಕೈದುಬಾರಿ ನಡೆಯುತ್ತಿತ್ತಂತೆ.ಆ ಮುಸಲ್ಮಾನನಿಗೋ ಎಲ್ಲಿಲ್ಲದ ಅಚ್ಚರಿ, "ತಾನು ಕೊಡುವ ಉಪಟಳವನ್ನು ಏಕನಾಥನು ಹೇಗೆ ಸಹಿಸಿಕೊಳ್ಳುತ್ತಾನೆ" ಎಂದು. ಒಂದು ದಿನ ಆ ಮುಸಲ್ಮಾನನು ಒಂದು 100 ಬಾರಿ ಹೀಗೆ ಏಕನಾಥನ ಮೇಲೆ ಉಗುಳಿದರೂ 100 ಬಾರಿಯೂ ಏಕನಾಥನು ನದೀಸ್ನಾನ ಮಾಡಿ ಬಂದನಂತೆ. ಏಕನಾಥನ  ಸಹನೆ, ಶಾಂತ ನಡವಳಿಕೆಗಳಿಂದ ಪರಿವರ್ತಿತನಾಗಿ  ಆ ಮುಸಲ್ಮಾನನು , ಏಕನಾಥನ ಕಾಲಿಗೆರಗಿ ಕ್ಷಮಿಸುವಂತೆ ಬೇಡಿದನಂತೆ. ತನ್ನ ಕಾಲಿಗೆರೆಗಿದ ಅವನನ್ನು ಕಂಡು " ಇದರಲ್ಲಿ ಕ್ಷಮಿಸುವಂಥಾದ್ದೇನಿದೆ? ನಿನ್ನ ಕೃಪೆಯಿಂದಲೇ ನನಗೆ ಇಂದು 108 ಬಾರಿ ಗೋದಾವರೀ ಸ್ನಾನ ಮಾಡುವ ಸುಯೋಗ ದೊರಕಿತು" ಎಂದು ಹೇಳಿ ಕ್ಷಮಾಗುಣದ ಉತ್ಕೃಷ್ಟ ರೂಪವನ್ನು ತೋರಿದನಂತೆ. 

ಕ್ರೈಸ್ತಮತವೂ ಸಹ ಕರುಣೆ ಮತ್ತು ಕ್ಷಮಾಗುಣಗಳಿಗೆ ಒತ್ತುನೀಡುತ್ತದೆ ಮತ್ತು ವೈರಿಗಳನ್ನೂ ಪ್ರೀತಿಸುವಂತೆ ಬೋಧಿಸುತ್ತದೆ. ಶಿಲುಬೆಯಮೇಲೆ ಏರಿದ ಕ್ರಿಸ್ತ " ಹೇ ದೇವರೇ ಇವರನ್ನು ಕ್ಷಮಿಸು. ಪಾಪ ಇವರಿಗೆ ತಾವೇನು ಮಾಡುತ್ತಿದ್ದೇವೆನ್ನುವುದರ ಅರಿವಿಲ್ಲ" ಎಂದು ತನ್ನನ್ನು ಘಾಸಿಗೊಳಿಸಿದವರನ್ನೂ, ಕ್ಷಮಿಸುವಂತೆ ಆ ದೇವರನ್ನು ಬೇಡಿ, ಉತ್ಕೃಷ್ಟ ಕ್ಷಮಾಗುಣದ ಮಾದರಿಯನ್ನು ಜಗಕ್ಕೆ ನೀಡಲಿಲ್ಲವೇ?      

ನವದ್ವೀಪದಲ್ಲಿ ಜೂಜಾಡುತ್ತಾ, ಕುಡಿದು ಮತ್ತರಾಗಿ, ಜನಗಳನ್ನು ಲೂಟಿಮಾಡುತ್ತಿದ್ದ, ಜಗಾಯ್ ಮತ್ತು ಮಘಾಯ್ ಎಂಬಿಬ್ಬರನ್ನು ಸ್ವಾಮೀ ಚೈತನ್ಯ ಮಹಾಪ್ರಭುವಿನ ಶಿಷ್ಯರಾದ ನಿತ್ಯಾನಂದ ಮತ್ತು ಹರಿದಾಸ ಎಂಬುವರು ಹರಿನಾಮಸ್ಮರಣೆಗೆ ಪ್ರೇರೇಪಿಸಿದಾಗ, ಅವರಿಬ್ಬರೂ ಹರಿದಾಸನ ತಲೆಗೆ ಹೊಡೆದು ಘಾಸಿ ಮಾಡಿದರಂತೆ. ವಿಷಯ ತಿಳಿದ ಚೈತನ್ಯ ಮಹಾಪ್ರಭು ಅವರಿಬ್ಬರನ್ನೂ ಶಿಕ್ಷಿಸಬೇಕೆಂದಿರುವಾಗ ಹರಿದಾಸನ  ಮನವಿಯಂತೆ ಅವರನ್ನು ಕ್ಷಮಿಸಿದಾಗ, ಅವರಲ್ಲಿ ಪರಿವರ್ತನೆಯಾಗಿ ತಮ್ಮ ದುರ್ಗುಣಗಳನ್ನು ಬಿಟ್ಟು ಹರಿ ಭಕ್ತರಾದರಂತೆ. 

ಈ ಹರಿದಾಸನು ಮೂಲತ: ಮುಸಲ್ಮಾನನಂತೆ. ಅದನ್ನರಿತ ಬಂಗಾಳವನ್ನು ಅಂದು ಆಳುತ್ತಿದ್ದ, ಖಲೀಫನಿಗೆ ಕೋಪ ಬಂದು ಅವನನ್ನು ಅರಮನೆಗೆ ಕರೆಸಿ" ಹರಿನಾಮ ಸ್ಮರಣೆಯನ್ನು ತೊರೆ" ಎಂದು ಆದೇಶಿಸಿದಾಗ ಹರಿದಾಸನು "ಒಲ್ಲೆ" ಎಂದನಂತೆ. ಹರಿನಾಮಸ್ಮರಣೆಯನ್ನು ತೊರೆಯಲು ನಿರಾಕರಿಸಿದ ಹರಿದಾಸನನ್ನು ಕೈ ಕಟ್ಟಿ ಚಾಟಿ ಏಟು ಹೊಡೆಯುತ್ತಾ ನಗರದ ಮುಖ್ಯ ಬೀದಿಗಳಲ್ಲಿ, ಮೆರವಣಿಗೆ ಮಾಡಿದರಂತೆ.ಖಲೀಫನ ಅಧಿಕಾರಿಗಳು ಹರಿದಾಸನನ್ನು"ಹರಿನಾಮ ಸ್ಮರಣೆ ಬಿಡುವೆಯೋ ಇಲ್ಲವೋ" ಎಂದು ಪ್ರತಿ ಬಾರಿ ಚಾಟಿಯಿಂದ ಹೊಡೆದಾಗಲೂ "ಮತ್ತೊಂದು ಬಾರಿ ಹರಿನಾಮಸ್ಮರಣೆಗೆ ಅವಕಾಶವಾಯಿತಲ್ಲಾ" ಎಂದು ಹರಿದಾಸ ಸಂತೋಷಪಡುತ್ತಿದ್ದನಂತೆ. ಹೊಡೆತ ತಿಂದು ತಿಂದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ, ಹರಿದಾಸನನ್ನು ಸತ್ತನೆಂದೆ ತಿಳಿದು, ನದೀ ತೀರಕ್ಕೆ ಒಯ್ದು ಬಿಸಾಡಿದರಂತೆ.ಆದರೆ ಜೀವಂತವಾಗಿದ್ದ ಹರಿದಾಸನು ಪ್ರಜ್ಞೆ ಮರುಕಳಿಸಿದ ತತ್ಕ್ಷಣ " ಹೇ ದೇವರೇ ಅರಿಯದ ಪ್ರಾಣಿಗಳಾದ ಆ ಖಲೀಫ ಮತ್ತು ಅವನ ಅಧಿಕಾರಿಗಳನ್ನು ಕ್ಷಮಿಸು" ಎಂದು ಬೇಡಿದನಂತೆ.ಇದಲ್ಲವೇ ಕ್ಷಮಾಗುಣದ  ಪ್ರತಿರೂಪ.  


ಆದರೆ ಬಹುದೊಡ್ಡ ಪ್ರಶ್ನೆಯಂದರೆ ಇಷ್ಟಾಗಿ ವಿವರಿಸಿದ ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಸುಲಭವೇ, ಸಾಮಾನ್ಯರಿಗೆ ಸಾಧ್ಯವೇ? ಹೌದು,ಕಷ್ಟ ಆದರೆ ಅಸಾಧ್ಯವಲ್ಲ.  

ಸಾಮಾನ್ಯ ಜನರಾದ ನಾವೂ ಈ ಕ್ಷಮಾಗುಣವನ್ನು ರೂಡಿಸಿಕೊಳ್ಳಬಹುದೇ?  ಅಥವಾ ಈ ಕ್ಷಮಾಗುಣವನ್ನು ರೂಡಿಸಿಕೊಳ್ಳುವ ಅವಶ್ಯಕತೆ ನಮಗೆ ಉಂಟೆ? ಇಂದಿನ ಪರಿಸ್ಥಿತಿಯಲ್ಲಿ, ನಾವು ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಹೆಚ್ಚು ಪ್ರಸ್ತುತ. ಏಕೆಂದರೆ ಅತೀ ಜಂಜಾಟದ, ಪೋಟಿಯ,ಸ್ವಾರ್ತಪೂರಿತ ಮನೋಭಾವವಿರುವ ಜನಗಳೇ ತುಂಬಿರುವ, ಕುಬುಧ್ಧಿ, ಕುತ್ಸಿತ ಮತ್ತು ಕುಟಿಲತೆಯೇ ಸಾಮಾನ್ಯ ಜನರ ಒಟ್ಟಾರೆ ಮನೋಭಾವವಾಗಿರುವಾಗ, ನಮಗೆ ಕ್ಷಮಾಗುಣವಿದ್ದರೆ, ಇಂತಹ ಕೆಟ್ಟ ವಾತಾವರಣದಲ್ಲಿಯೂ ನಾವು ಶಾಂತರಾಗಿ, ಆನಂದದಿಂದ ಇರಲು ಸಾಧ್ಯ. ಇಲ್ಲದ್ದಿದ್ದರೆ ಮಾನಸಿಕ ಪ್ರಕ್ಷುಬ್ಧತೆಯಿಂದ ನಮ್ಮ ನೆಮ್ಮದಿ ಹಾಳಾಗಿ ಸಂಕಟ ಪಡಬೇಕಾಗುತ್ತದೆ. ಹಾಗಾಗಿ ನಾವೂ ಸಹ ಕ್ಷಮಾಗುಣವನ್ನು ನಮ್ಮ ಸ್ವಾಭಾವವನ್ನಾಗಿಸಿ ಕೊಳ್ಳುವುದು ಹೆಚ್ಚು ಪ್ರಸ್ತುತ.   

 ಆದರೆ ಕ್ಷಮಾಗುಣವನ್ನು ರೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಕೋಪ,ಸ್ವಾರ್ಥ,ಸೇಡು,ಇಂತಹ ಗುಣಗಳನ್ನು ಬಿಡಬೇಕು. ಅಲ್ಪ ಪ್ರಚೋದನೆಗೂ ತೀವ್ರವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿ ಬಿಡಬೇಕು. ಉದಾಹರಣೆಗೆ 'ನಾವು ದ್ವಿಚಕ್ರ ವಾಹನದಲ್ಲಿ ಹೋಗುವಾಗ, ತಡೆ ಚಿನ್ಹೆಯಾದ ಕೆಂಪುದೀಪವನ್ನು ಕಂಡು ಗಾಡಿ ನಿಲ್ಲಿಸುತ್ತೇವೆ. ನಮ್ಮ ಮುಂದೆ ಒಂದಿಷ್ಟು  ವಾಹನಗಳು ಮತ್ತು ನಮ್ಮ ಹಿಂದಷ್ಟು ವಾಹನಗಳಿರುತ್ತವೆ. ಮುಂದೆ ಹೋಗಲು ಹಸಿರು ದೀಪ ಕಂಡ ತತ್ಕ್ಷಣ ನಿಮ್ಮ ಮುಂದಿರುವ ವಾಹನಗಳು ಚಲಿಸಲುಪಕ್ರಮಿಸುವ ಮುನ್ನ ನಾವು ಮುಂದೆ ಹೋಗಲಾಗುವುದಿಲ್ಲ. ಆದರೆ ಆತುರಕ್ಕೆ ನಮ್ಮ ಹಿಂದಿನವ ಸುಮ್ಮನೆ ಶಬ್ದ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಆಗ ನಮಗೆ ಕಿರಿಕಿರಿಯಾಗಿ ಕೋಪ ಬರುತ್ತದೆ. ಹಾಗೆ ನಾವು ಕೋಪಿಸಿಕೊಳ್ಳದಿದ್ದರೆ, ಆಗುವ ನಷ್ಟವೇನೂ ಇಲ್ಲಾ. ಆದರೆ ನಮಗೆ ಸಹನೆ ಕಡಿಮೆಯಾದುದರಿಂದ, ನಾವು ಕೋಪಿಸಿಕೊಳ್ಳುತ್ತೇವೆ,ಜಗಳಕ್ಕೆ ಇಳಿಯುತ್ತೇವೆ ಮತ್ತು ಆ ಜಗಳ ಪ್ರಕೋಪಕ್ಕೆ ಹೋಗಿ ಅನಾಹುತವೇ ಆಗುವ ಸಾಧ್ಯತೆಗಳೂ ಉಂಟು. ಕ್ಷಣಿಕ ಅಸಹನೆಯಿಂದ ಎಷ್ಟೊಂದು ಪ್ರಮಾದ. ಅಕಸ್ಮಾತ್, ನಾವು ಕೋಪಿಸಿಕೊಳ್ಳದೆ, ತಾಳ್ಮೆಯಿಂದ ಕಾದು ಮುಂದೆ ಹೊರತು ಹೋದರೆ, ಆ ವಿಷಯ ಮತ್ತು ಪ್ರಸಂಗ ಬೆಳೆಯದೆ ಅಲ್ಲೇ ಮುಗಿದು ಹೋಗುತ್ತದೆ. ಇವೆರಡರಲ್ಲಿ ಯಾವುದು ಉತ್ತಮ ನೀವೇ ನೋಡಿ. 

ಸಹನೆ, ಪರ ಸಹಿಷ್ಣುತೆ ಇವೆರಡು ಗುಣಗಳನ್ನು ಬಲವಾಗಿ ರೂಡಿಸಿಕೊಂಡರೆ, ನಮಗೆ ಸುಖ. ಕೋಪವನ್ನು ಗೆಲ್ಲಬೇಕು. ಸೇಡನ್ನು ಗೆಲ್ಲಬೇಕು. ಸುಖ ದುಃಖದ ಸಮಯದಲ್ಲಿ ಮಾನಸಿಕ ಸಂತುಲನೆ ಮತ್ತು ಸಮಭಾವವನ್ನು ಬೆಳೆಸಿಕೊಳ್ಳಬೇಕೆಂಬ ಧೃಡ ನಿರ್ಧಾರ ಬೇಕು. ಹಾಗಾದಾಗ  ಕ್ಷಮಾಗುಣ ನಮ್ಮ ಸ್ವಭಾವವೇ ಆಗುತ್ತದೆ.  

ಶ್ರೀ ಕೃಷ್ಣ ಅರ್ಜುನನಿಗೆ ಆದೇಶಿಸುತ್ತಾನೆ"ಸುಖ-ದುಃಖ, ಜಯ-ಅಪಜಯ,ಲಾಭ-ನಷ್ಟಗಳ ಬಗ್ಗೆ ಯೋಚಿಸದೆ ನೀ ಯುದ್ದ ಮಾಡಿದ್ದಲ್ಲಿ ನಿನಗೆ ಯಾವ ಪಾಪವೂ ಅಂಟುವುದಿಲ್ಲ." ಎಂದು. ಹಾಗಾಗಿ ಯಾರು ಯಾವುದೇ ರೀತಿಯ ಅಪೇಕ್ಷೆಯಿಲ್ಲದೆ ತನ್ನ ಕರ್ತವ್ಯವನ್ನು ಮಾಡುತ್ತಾ, ಪರಮಾತ್ಮನಿಗೆ ಸಂಪೂರ್ಣವಾಗಿ ಶರಣಾಗುವರೋ ಅಂತಹ ವ್ಯಕ್ತಿಗಳು ಸಮಭಾವ ಮತ್ತು ಕ್ಷಮಾಗುಣವನ್ನು ಬೆಳೆಸಿಕೊಳ್ಳಲು ಸಾಧ್ಯ.  

" ನನ್ನನ್ನು ಎಲ್ಲದರಲ್ಲಿಯೂ ಮತ್ತು ಎಲ್ಲವನ್ನೂ ನನ್ನಲ್ಲಿ, ಯಾರು ಕಾಣಬಲ್ಲರೋ, ಅವರಿಗೆ ನಾನು ಸದಾ ಗೋಚರನಾಗಿರುತ್ತೇನೆ ಮತ್ತು ಅವರು ಸದಾ ನನ್ನ ದೃಷ್ಟಿಯಲ್ಲಿರುತ್ತಾರೆ".ಎಂಬುದು ಶ್ರೀ ಕೃಷ್ಣನ ಗೀತಾವಾಣಿ. ಹಾಗಾಗಿ ಎಲ್ಲ ಪ್ರಾಣಿಗಳಲ್ಲೂ ಯಾರು  ಪರಮಾತ್ಮನನ್ನೇ  ಕಾಣಬಲ್ಲರೋ, ಯಾರು ಮಿತ್ರ-ಶತ್ರು, ಧನಿಕ-ದರಿದ್ರ, ಜಾತಿ-ವರ್ಣಗಳ ಭೇದಗಳನ್ನು ತೊರೆದು ಎಲ್ಲವೂ ಆ ಪರಮಾತ್ಮನೇ ಎಂಭ ಭಾವದಿಂದಿರುತ್ತಾರೋ ಅಂಥಹವರು ಕ್ಷಮಾಶೀಲರಾಗುತ್ತಾರೆ. 

ಮೇಲೆ ಹೇಳಿದಂತೆ ಇಂದಿನ ಪ್ರಸಕ್ತ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವರು ಕ್ಷಮಾಶೀಲರಾಗುವುದು ಹೆಚ್ಚು ಅವಶ್ಯಕ ಮತ್ತು ಪ್ರಸ್ತುತವಲ್ಲವೇ? ಸಮಾಜದ  ಎಲ್ಲರಲ್ಲಿಯೂ ಈ ಗುಣ ವರ್ಧಿಸಿದರೆ ಇಡೀ ಪ್ರಪಂಚವೇ ಜೀವಿಸಲಿಕ್ಕೆ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ!  

                                                                ಸರ್ವೇ ಜನಾಃ ಸಜ್ಜನೋ ಭವಂತು 
                                                              ಸರ್ವೇ ಸಜ್ಜನಾಃ ಸುಖಿನೋ ಭವಂತು  




ರವಿ ತಿರುಮಲೈ 

9632246255

Tuesday, 13 December 2011

ಎತ್ತ ಪೋದನೋ ಶ್ಯಾಮ


ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣನಿಗೆ ಇದ್ದ ಮಧುರವಾದ ಮತ್ತು ಒಂದು ದೈವೀಕವಾದ ಸಂಬಂಧ ನಮ್ಮ ಮಹಾಭಾರತ -ಭಾಗವತದಲ್ಲಿ ಹೇರಳವಾಗಿ ಸಿಗುತ್ತದೆ. ಆಕಾಶದಿಂದ ಬಿದ್ದ ಒಂದೊಂದು ಮಳೆ ಹನಿಯು ಮತ್ತೆ ತನ್ನ ಗಮ್ಯವಾದ ಸಾಗರವನ್ನು ಸೇರಲು ಹಾತೊರೆಯುವ ಹಾಗೆ ಗೋಪಿಕಾ ಸ್ತ್ರೀಯರು ಸದಾ ಕೃಷ್ಣನ ಸಂಗದಲ್ಲಿ ಇರಲು ಇಚ್ಚಿಸುತ್ತಿದ್ದರು. ಸ್ವಲ್ಪ ಸಮಯ ಕಣ್ಣಿಗೆ ಕಾಣದೆ ಹೋದರು ಪರಿತಪಿಸುತ್ತಿದ್ದರು. ಹಾಗೆ ಪರಿತಪಿಸುವ ಒಬ್ಬ ಗೋಪಿಯ ಭಾವ ಹೀಗಿರಬಹುದೇ. 

ಎತ್ತ ಪೋದನೋ ಶ್ಯಾಮ 
ಇಲ್ಲೇ ಎಲ್ಲೋ ಕಂಡೆನಲ್ಲೇ " ಎತ್ತ" 

ಅನುಜೆ ಕೃಷ್ಣೆ ಇವನ ಕರೆಯೆ
ಒದಗಲೆಂದೇ ಪೋದನೋ 
ಓರಗೆಯ ತುಡುಗರೊಡನೆ 
ಹುಡುಗಾಟಕೆ ಪೋದನೋ "ಎತ್ತ" 

ಗುರು ತನುಜನ ಸೆರೆಯಲಿಂದ 
ಬಿಡಿಸಲೆಂದೇ ಪೋದನೋ 
ಕೌರವಾಗ್ರಜನ ಸೊಕ್ಕ 
ಮುರಿಯಲೆಂದೇ ಪೋದನೋ "ಎತ್ತ" 

ಅಕ್ಕ ಪಕ್ಕದ ಮನೆಗಳಲ್ಲಿ 
ನವನೀತವ ಚೋರಿಸಲೋ 
ಚದುರಿಹೋದ ಯಾದವರಾ 
ಒಂದುಗೂಡಿ ಸೇರಿಸಲೋ "ಎತ್ತ"

ಲುಪ್ತವಾದ ಧರ್ಮ ಪಥವ 
ಮತ್ತೆ ಹಿಡಿದು ನಿಲ್ಲಿಸಲೋ 
ಆರ್ತಜನರ ಮೊರೆಯ ಕೇಳಿ 
ಕರುಣೆಯಿಂದ ಪಾಲಿಸಲೋ " ಎತ್ತ" 

ಈ ಮೇಲಿನ ಹಾಡನ್ನು ಉತ್ತರಾದಿ ಶೈಲಿಯಲ್ಲಿ ರಾಗ "ದುರ್ಗಾ" ದಲ್ಲಿ ಹಾಡಿದರೆ ಮೂಲ ಭಾವ ವ್ಯಕ್ತವಾಗುತ್ತದೆ.

Sunday, 11 December 2011

ಹೆಣ್ಣೇ ನಿನಗೆ ನಮೋ ನಮಃ

ಮೊನ್ನೆ ಬೆಳಗ್ಗೆ ಶಟಲ್ ಆಟ ಮುಗಿಸಿ, ಭಟ್ರ ಹೋಟೆಲ್ಲಿನಲ್ಲಿ ಇಡ್ಲಿಗೆ ಆರ್ಡರ್ ಮಾಡಿ, ಎದುರುಗಡೆ ಇನ್ನೂ ತೆಗೀದೇ ಇರೋ ಅಂಗಡಿ ಮುಂದೆ ಜಗಲೀ ಮೇಲೆ ಪಟ್ಟಂಗ ಹೊಡೆಯೋಕೆ   ಕೂತ್ಕೊಂಡಾಗ, ನಮ್ಮ ಎಂಟು - ಹತ್ತು ಜನದ ಹರಟೆ ಶುರುವಾಯ್ತು. ಅದೂ ಇದೂ ಮಾತಾಡ್ತಾ  ಇರೋವಾಗ, ದುತ್ತಂತ ಒಂದು ಪ್ರಶ್ನೆ ನಮ್ಮ ಮುಂದೆ ಬಂದು ಬಿತ್ತು."ಈ ಜಗತ್ತಿನಲ್ಲಿ. ಎಲ್ಲಾ ರೀತೀಲೂ ಹೊಂದ್ಕೊಂಡು, ಪರಸ್ಪರ ಅರ್ಥ ಮಾಡ್ಕೊಂಡು, ಅನ್ಯೋನ್ಯವಾಗಿರೋ  ಗಂಡ-ಹೆಂಡತಿ ಇರೋಕ್ಕೆ ಸಾಧ್ಯಾನಾ?" ಅಂತ. ತಕ್ಷಣ ನಮ್ ಶಿವಣ್ಣ" ಏಯ್ ಸಾಧ್ಯ ಇಲ್ಲಾ ಬಿಡಿ " ಅಂದ್ಬಿಟ್ರು. ಮಿಕ್ಕವರೆಲ್ಲಾ ಸ್ವಲ್ಪ ಯೋಚನೆ ಮಾಡಿದ ಹಂಗೆ ಮಾಡಿ " ಹೌದು ಸಾಧ್ಯಾನೆ ಇಲ್ಲಾ " ಅಂದರು. 


ಅಷ್ಟರೊಳಗೆ ನಮ್ಮ ತರಲೆ ತಿರುಮಲೈ  ತನ್ನ ಅತೀ ಬುಧ್ಧಿವಂತಿಕೆ ಎಲ್ಲಾ ಉಪಯೋಗಿಸಿ, ಪುರಾಣ ಇತಿಹಾಸ ಎಲ್ಲಾ ಕೋಟ್ ಮಾಡಿ, ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ ಇರಕ್ಕೆ" ಸಾಧ್ಯಾನೆ ಇಲ್ಲಾ" ಅಂತ ಡಿಸೈಡ್ ಮಾಡಿದ ಹಂಗೆ ರೂಲಿಂಗ್ ಕೊಟ್ಟ. ಮಿಕ್ಕೆಲ್ಲಾರೂ ಒಪ್ಪಿಕೊಂಡಹಾಗೆ ತಲೆ ಆಡಿಸಿ ಇಡ್ಲಿ ತಿಂದು ಕಾಫಿ ಕುಡಿದು ಬೈ ಬೈ ಹೇಳಿ ತಮ್ಮ ತಮ್ಮ ದಾರಿ ಹಿಡ್ಕೊಂಡು ಹೊರಟೇ ಬಿಟ್ಟರು. 

ನನಗಂತೂ ತಲೇಲಿ ಹುಳ ಬಿಟ್ಟ ಹಂಗೆ ಆಗಿ ಕೊರೆತ ಶುರುವಾಯ್ತು. ಎಷ್ಟೋ ಜನ ಗಂಡ-ಹೆಂಡಿರನ್ನ ನೋಡಿದ್ದೇನೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರ್ತಾವೆ. ಆದ್ರೆ ಆ ತರಲೆ ತಿರುಮಲೈ ಹೇಳ್ದಂಗೆ " ಸಾಧ್ಯಾನೇ ಇಲ್ವಾ" ಅಂತ ಯೋಚನೆ ಮಾಡೀ ಮಾಡಿ ನನಗೂ ಹೌದು " ಸಾಧ್ಯಾನೇ ಇಲ್ಲ" ಅಂತ ಅನ್ನಿಸ್ತು. ಆದರೂ ಅದನ್ನೇ ಧೃಡಪಡಿಸಕೊಳ್ಳಲಿಕ್ಕೆ, ನನಗೆ ಗೊತ್ತಿರುವ ಒಬ್ಬೊಬ್ಬರನ್ನೇ ಮಾತಾಡ್ಸಿ, ಕ್ಯಾಶುಅಲ್ ಆಗಿ ಅವರ ಅಭಿಪ್ರಾಯಾನೂ ಕಲೆಕ್ಟ್ ಮಾಡ್ದೆ. ಕಡೇಗೆ  ಗೊತ್ತಾಗಿದ್ದು ಇಷ್ಟು. ಎಲ್ಲಾ ಕಡೇನೂ ತೂತೆ. " ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ  ಈ ಜಗತ್ತಿನಲ್ಲಿ ಇರಕ್ಕೆ ಸಾಧ್ಯಾನೆ ಇಲ್ಲಾ" ಅನ್ನೋ ಮಟ್ಟಕ್ಕೆ ತೀರ್ಮಾನಿಸೋ ಘಟ್ಟಕ್ಕೆ ತಲುಪಿತ್ತು ನನ್ನ ಸಂ-ಶೋಧನೆ. 

ನನ್ನ ವೈಯಕ್ತಿಕ ಅನುಭವಾನೂ ಹೆಚ್ಚೂ ಕಡಿಮೆ ಅದೇ ಆಗಿತ್ತು. ನನ್ನ ಹೆಂಡ್ತಿನೇ ಉದಾಹರಣೆಯಾಗಿ ತೊಗೊಂಡ್ರೆ, ಅವಳು ನನಗೆ ನೂರಾರು ಪ್ರಶ್ನೆ ಕೇಳ್ತಾನೆ ಇರ್ತಾಳೆ. ನಾನು ಎನ್ ಮಾಡಿದರೂ ಅವಳಿಗೆ ತಪ್ಪಾಗೇ  ಕಾಣಿಸುತ್ತೆ. ಅವಳನ್ನು ಮೆಚ್ಚಿಸಲಿಕ್ಕೆ 26 ವರ್ಷಗಳಿಂದ ನನಗೆ ಸಾಧ್ಯಾನೆ ಆಗಿಲ್ಲ. ಅವಳನ್ನು ಮೆಚ್ಚಿಸಲಿಕ್ಕೆ ಅವಳನ್ನು ಹುಟ್ಟಿಸಿದ ಆ ಪರಮಾತ್ಮನಿಗೂ  ಸಾಧ್ಯ ಇಲ್ಲಾಂತ ಅನ್ನಿಸುತ್ತೆ. ಅವಳಿಗೂ ನನ್ನ ಬಗ್ಗೆ ಹಂಗೇ ಅನ್ನಿಸ್ತಾ ಇರಬಹುದು. ಹೀಗೆ ನನ್ನ ಸ್ವಂತ ಅನುಭವ ಮತ್ತು ನಾ  ಮಾಡಿದ ಸಂ-ಶೋಧನೆ ಎರಡನ್ನೂ ಕೂಡಿಸಿ, ಗುಣಿಸಿ, ಭಾಗಿಸಿ, ಕಳೆದರೂ "ಸಂಪೂರ್ಣವಾಗಿ ಪರಸ್ಪರ ಅರ್ಥಮಾಡ್ಕೊಂಡ  ಗಂಡ-ಹೆಂಡತಿ  ಈ ಜಗತ್ತಿನಲ್ಲಿ ಇರಕ್ಕೆ ಸಾಧ್ಯಾನೆ ಇಲ್ಲಾ" ಅನ್ನೋ ತೀರ್ಮಾನಕ್ಕೆ ಬಂದೆ. ಅದು ವಸ್ತು ಸ್ಥಿತಿ. ಆದರೆ ಅದು ಯಾಕೆ ಹೀಗೆ ಅಂತ ಮತ್ತೆ ತಲೆಯಲ್ಲಿ ಕೊರೆತ ಶುರುವಾಯ್ತು. ಅದನ್ನೇ ಯೋಚನೆ ಮಾಡ್ತಾ ಮಾಡ್ತಾ ನನ್ನ ಅಲ್ಪ-ಸ್ವಲ್ಪ ಬುಧ್ಧಿಗೆ ಹೊಳೆದಿದ್ದು ಇಷ್ಟು.

ಹೆಣ್ಣಿನ ಮತ್ತು ಗಂಡಿನ ಸ್ವಭಾವ ಬೇರೆ ಬೇರೆ. ಹೆಣ್ಣು ಸ್ವಭಾವತಃ ತುಂಬಾ ಪ್ರಾಕ್ಟಿಕಲ್ಲಾಗಿ ಯೋಚನೆ ಮಾಡ್ತಾಳೆ. ಆದ್ರೆ ಗಂಡು ಬರೀ ಎಮೋಷನಲ್ ಅಥವಾ ಭಾವನಾತ್ಮಕ ಜೀವಿ. ಹಾಗಾಗಿ ಸ್ವಭಾವ ಜನ್ಯವಾದ ಅಭಿಪ್ರಾಯಭೇದಗಳು ಸಹಜವಾಗೇ ಇದೆ. 

ಹೆಣ್ಣಿನ ಸ್ವಭಾವ ನೋಡಿ. ತನ್ನ ಮನೆ, ತನ್ನ ಗಂಡ, ಮಕ್ಕಳು ಇವುಗಳ ಬಗ್ಗೆ ಅವಳ ಮೊದಲ ಚಿಂತೆ-ಕಾಳಜಿ. ಎಲ್ಲಾರೂ ಚೆನ್ನಾಗಿರಬೇಕು, ಆರೋಗ್ಯವಂತರಾಗಿರಬೇಕು, ಯೋಗ್ಯರಾಗಿರಬೇಕು, ಪ್ರಯೋಜಕರಾಗಿರಬೇಕು, ಹೀಗೆ ಹತ್ತು ಹಲವಾರು ಆಕಾಂಕ್ಷೆಗಳನ್ನು ಹೊತ್ತು ಸಂಸಾರ ನಡಸ್ತಾಳೆ. ತನ್ನ ಸಂಸಾರದ ಬಗ್ಗೆ ಯಾರೂ ಚಕಾರ ಎತ್ತಬಾರದು. ಮನೆಯ ಇತರೆ ಸದಸ್ಯರೂ ಸಹ, ಅಂದರೆ ಅತ್ತೆ, ಮಾವ, ನಾದಿನಿ, ಮೈದುನ, ಹೀಗೆ ಎಲ್ಲಾರೂ ಚೆನ್ನಾಗಿರಬೇಕು ಅಂತ ಅಪೇಕ್ಷೆಪಟ್ಟು, ಒಟ್ಟಾರೆ ತನ್ನ ಸಂಸಾರ ಮತ್ತು ಅದರ ಸದಸ್ಯರು ಆದರ್ಶವೇ ಮೂರ್ತವೆತ್ತಂತಿರಬೇಕು ಎನ್ನುವುದೇ ಅವಳ ಆಶಯ.  ಈ ಆಶಯ ನೆರವೇರುವುದಕ್ಕೆ ಅವಳು ಶತಾಯ ಗತಾಯ ಮತ್ತು ನಿರಂತರ ಪ್ರಯತ್ನ ಮಾಡ್ತಾನೆ ಇರ್ತಾಳೆ. ಅದನ್ನು ಸಾಧಿಸುವ ನೈತಿಕ ಹೊಣೆಯನ್ನು ತಾನೇ ತಾನಾಗಿ ತನ್ನ ಮೇಲೆ ಹೇರಿಕೊಂಡಿರುತ್ತಾಳೆ. ಅಷ್ಟೇ ಅಲ್ಲ ಮನೆಗೆ ಬಂದು ಹೋಗುವ ಬಂಧು ಮಿತ್ರರನ್ನೂ ಸಹ ಯಾವ ಲೋಪವೂ ಇಲ್ಲದಂತೆ ನೋಡಿಕೊಂಡು ಮನೆಯ ಮತ್ತು ಸಂಸಾರದ ಮರ್ಯಾದೆಯನ್ನು ಕಾಪಾಡಲು ಹೆಣಗಾಡುತ್ತಾಳೆ. ಎಲ್ಲರ ಅವಶ್ಯಕತೆಗಳನ್ನೂ ಸಮರ್ಪಕವಾಗಿ ಪೂರೈಸುವ ಹೊಣೆ ಹೊತ್ತಿರುತ್ತಾಳಾದ್ದರಿಂದ, ಎಲ್ಲರೂ ತಮ್ಮ ತಮ್ಮ ಅವಶ್ಯಕತೆಗಳ ಪೂರೈಕೆಗೆ ಅವಳ ಮೇಲೆ ಆಧಾರಪಟ್ಟಿರುತ್ತಾರೆ. ಮನೆಯ ಮುಂದೆ ಬರುವ ಭಿಕ್ಷುಕ ಸಹ" ಅಮ್ಮಾ ತಾಯೆ" ಅನ್ನುತ್ತಾನೆ ಹೊರತು "ಅಪ್ಪಾ" ಎಂದು ಎಂದಾದರೂ ಅಂದಿದ್ದು ಕಂಡಿದ್ದೀರಾ. ವ್ಯಾಪಕ ವಾಗಿ ಬಳಕೆಯಲ್ಲಿರುವ ಕಂಪ್ಯೂಟರ್ ಕಂಡುಹಿಡಿದಾತನೋ ಅಥವಾ ಬೇರೆ ಯಾರೋ ಅದರಲ್ಲಿರುವ ಮತ್ತು ಎಲ್ಲಾ ಮೌಸ್, ಕಿ ಬೋರ್ಡ್ ಮಾನಿಟರ್  ಮತ್ತು RAM  ನಂತಹ ಬಿಡಿಬಾಗಗಳೆಲ್ಲಾ, ತಮ್ಮ ಕಾರ್ಯ ಕ್ಷಮತೆಗಾಗಿ ಅಂಟಿಕೊಂಡಿರುವ ಒಂದು ಬೋರ್ಡ ಗೆ ' ಮಥರ್  ಬೋರ್ಡ" ಅಂತ ಎಷ್ಟು ಅರ್ಥಗರ್ಭಿತವಾಗಿ ಹೆಸರು ಇಟ್ಟಿದ್ದಾನೆಂದರೆ, ಈ ಹೆಣ್ಣಿನ ಮೇಲೆ ಅಥವಾ ತಾಯಿಯ ಮೇಲೆ ಅಧಾರಪಡುವ ಗುಣ ಮತ್ತು ಪರಿಪಾಟ, ವಿಶ್ವವ್ಯಾಪಿ ಎಂದರೆ ತಪ್ಪಾಗಲಾರದು.  

ಈ ರೀತಿ ಹೆಣ್ಣಿನ ಮೇಲೆ ಅಧಾರ ಪಡುವ ಅಥವಾ ಹೆಣ್ಣೇ ಬಹಳವಾಗಿ ಸಂಧರ್ಭಕ್ಕನುಸಾರವಾಗಿಯೋ ಅಥವಾ ಸ್ವಚ್ಚೆಯಿಂದಲೋ, ಎಲ್ಲಾ ಹೊಣೆಯನ್ನೂ ತಾನೆ ಹೊರುವ ಗುಣ ಪಶು ಪಕ್ಷಿಗಳಲ್ಲೂ ಒಂದು ಸೀಮಿತ ಮಟ್ಟಕ್ಕೆ ಕಾಣಬಹುದು. 

" ಪ್ರತಿಯೊಬ್ಬ ಯಶಸ್ವೀ ಗಂಡಿನ ಹಿಂದೆ ಒಂದು ಹೆಣ್ಣು ಇರುತ್ತಾಳೆ" ಎನ್ನುವುದು ಇಂಗ್ಲೀಷ್ ನಾಣ್ನುಡಿ. ನಾಣ್ನುಡಿ ಸಾರ್ವಕಾಲಿಕ ಸತ್ಯವನ್ನೇ ನುಡಿಯುತ್ತದೆ. ಒಂದು ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣು ಸಕಾರಾತ್ಮಕವಾಗಿ ಅಂದರೆ ಪಾಸಿಟೀವ್ ಆಗಿ ಬೆಂಬಲಿಸುತ್ತಾಳೆ ಎಂಬುದು ಅರ್ಥ. ಆದರೆ ಒಂದು ಹೆಣ್ಣಿನ ಯಶಸ್ಸಿನ ಹಿಂದೆ, ವಿಡಂಬನಾತ್ಮಕವಾಗಿ ಒಂದು ಗಂಡಿನ ನೆಗಟೀವ್ ಗ್ರೋತ್ ಅಥವಾ ಸೋಲು ಅಥವಾ ಕ್ರಿಯಾಹೀನತೆ ಕಾರಣವಾಗಿರುತ್ತದೆ. 

ಸಂಸಾರದ ಬಂಡಿಗೆ ಗಂಡ-ಹೆಂಡಿರು ಜೋಡಿ ಎತ್ತುಗಳಹಾಗೆ ಅಂತಾರೆ. ಆದರೆ ನೀವು ಯಾವುದಾದರೂ ಸಂಸಾರವನ್ನು ತೆಗೆದುಕೊಳ್ಳಿ, ಅಲ್ಲಿ ಹೆಣ್ಣು ತುಂಬಾ ಪ್ರಾಕ್ಟಿಕಲ್ ಆಗಿ, ವಾಸ್ತವವಾದಿ ಅಥವಾ ಆದರ್ಶವಾದಿಯಾಗಿರ್ತ್ತಾಳೆ. ಆದರೆ ಗಂಡು ಯೂಫೋರಿಕ್ ಅಥವಾ ಭ್ರಮೆ ಅಥವಾ ಭಾವನಾಲೋಕದಲ್ಲಿ ಇರುತ್ತ್ತಾನೆ. ಇದು ನೂರಕ್ಕೆ 95 % ಸತ್ಯ. ಯಾವುದೇ ಸಂಸಾರದಲ್ಲಿ ಗಂಡು ಬೇಜವಾಬುದಾರಿಯಿಂದ ವರ್ತಿಸಿ ಸಂಸಾರದೆಡೆಗೆ , ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದಲ್ಲಿ " ಹೆಣ್ಣು" ಸ್ವಯಂಪ್ರೇರಣೆಯಿಂದ ಆ ಜವಾಬುದಾರಿಯನ್ನು ಹೊತ್ತು ಸಮರ್ಪಕವಾಗಿ ನಿಭಾಯಿಸಿ, ಆ ಸಂಸಾರವನ್ನು ದಡ ಮುಟ್ಟಿಸುತ್ತಾಳೆ. ಆದರೆ ಹೆಣ್ಣೇನಾದರೂ ( ಹಾಗೆ ಆಗುವ ಸಂಧರ್ಭಗಳು ತೀರ ಕಡಿಮೆ) ದಾರಿ ತಪ್ಪಿ ತನ್ನ ಸಂಸಾರವನ್ನು ಕೈ ಬಿಟ್ಟರೆ, ಗಂಡೂ ಸೋತು, ಮಕ್ಕಳೆಲ್ಲಾ ಹಾದಿ ತಪ್ಪಿ, ಸಂಸಾರ ಛಿದ್ರ ಛಿದ್ರವಾಗುತ್ತದೆ. ಏಕೆಂದರೆ ಗಂಡಿಗೆ ಹೆಣ್ಣೇ ಬಲ. 

ಮೇಲ್( Male )  ಅಂದರೆ ಗಂಡು.  ಫಿಮೇಲ್ (Female ) ಅಂದರೆ ಹೆಣ್ಣು. ಎಲ್ಲರಿಗೂ ಗೊತ್ತಿರುವ ವಿಚಾರಾನೆ  ಅಂತೀರಾ. ಆದ್ರೆ ಅರ್ಥಮಾಡಿಕೊಳ್ಳಬೇಕಾದ್ದು  ಏನಂದರೆ, ಮೇಲ್( Male ) ಹಿಂದೆ ಎಫ್ ಇ (Fe) ಸೇರಿಸಿದರೆ ಅದು Female ಅಂದರೆ ಹೆಣ್ಣು ಎಂದರ್ಥ. Fe ಅಂದರೆ Chemistry ಅಂದರೆ ರಸಾಯನ ಶಾಸ್ತ್ರದಲ್ಲಿ ಉಕ್ಕು ಅಥವಾ ಕಬ್ಬಿಣ ಎಂದರ್ಥ. ಅನ್ವರ್ಥವಾಗಿ ಗಂಡಿನ ಹಿಂದೆ ಉಕ್ಕು ಅಥವಾ ಕಬ್ಬಿಣದ ರೀತಿ ಗಟ್ಟಿಯಾಗಿ ನಿಲ್ಲುವವಳೇ ಹೆಣ್ಣು ಎಂದು ಅರ್ಥವಾಗಲಿಲ್ಲವೇ. 

ಹಾಗೆಯೇ Man ಅಂದರೆ ಗಂಡು woman ಅಂದರೆ ಹೆಣ್ಣು. ಈ woman ಅನ್ನುವ ಪದದಲ್ಲಿ ಒಂದು man ಅನ್ನುವ ಭಾಗದ ಹಿಂದೆ ಇರುವುದು Wo.ಈ  Wo ವನ್ನು ವಿಶ್ಲೇಸಿದಾಗ ಗೋಚರವಾಗುವುದು Welfare of ಅಥವಾ ಯೋಗಕ್ಷೇಮ ಎಂದರ್ಥ ಅಂದರೆ ಗಂಡಿನ (Man) ಯೋಗಕ್ಷೇಮವನ್ನು ನೋಡಿಕೊಳ್ಳುವವಳೇ ಹೆಣ್ಣು ( Wo man) ಎಂದರ್ಥವಲ್ಲವೇ? 

ಅದೇ ಗಂಡನ್ನು ನೋಡಿ . ದುಡೀತಾನೆ, ಹಣ ಸಂಪಾದನೆ ಮಾಡ್ತಾನೆ, ಅಂಗಡಿ ಇಂದ ಸಾಮಾನು ಸರಂಜಾಮುಗಳನ್ನೆಲ್ಲ ತರ್ತಾನೆ, ತಾನೇ ಮನೇನ ನೋಡ್ಕೋತಾ ಇದ್ದೀನಿ ಅಂದ್ಕೊಂಡಿರುತ್ತಾನೆ. ಆದರೆ  ಇವನ ಎಲ್ಲ ಕಾರ್ಯ ಕೆಲಸಗಳು ಮನೆಯಲ್ಲಿರುವ ಹೆಣ್ಣಿನ ಮೇಲೆ ಆಧಾರಗೊಂಡಿರುತ್ತೆ.  ಅವಳಿಲ್ಲದೆ ಇದ್ದರೆ ಇವನಿಗೆ ಜೀವಿಸುವ ಯಾವ ಆಸ್ಥೆ-ಆಸೆಗಳೂ ಇರಕ್ಕೆ ಸಾಧ್ಯವೇ ಇಲ್ಲ. 

ಮೇಲೆ ಹೇಳಿದ ಯಾವುದನ್ನೂ ಸಾಮಾನ್ಯವಾಗಿ ಯಾವ ಗಂಡಸೂ ಒಪ್ಪಿಕೊಳ್ಳುವುದೇ ಇಲ್ಲ. ಅದು ಅವನ ಸ್ವಭಾವ. ಗಂಡಿನ ಹಿರಿಮೆ, ಅಹಂ, ಅಧಿಕಾರ, ಕ್ಷಮತೆ, ಅಧಿಕಾರ, ದರ್ಪ, ದಬ್ಬಾಳಿಕೆ, ಹೀಗೆ ಎಲ್ಲಕ್ಕೂ ಹೆಣ್ಣು ಇದ್ದರೇನೆ " ಬಲ" ಇಲ್ಲದಿದ್ದರೆ ಅವಕ್ಕೆಲ್ಲ "ಬರ" ಹಾಗಾಗಿ 

                            ಹೆಣ್ಣೇ ನಿನಗೆ ನಮೋ ನಮಃ 


ರವಿ ತಿರುಮಲೈ

ಮೂಡ ನಂಬಿಕೆಗಳು ಎಷ್ಟು ಸರಿ ಎಷ್ಟು ತಪ್ಪು



ಮೂಡ ನಂಬಿಕೆಗಳು ಎಷ್ಟು ಸರಿ ಎಷ್ಟು ತಪ್ಪು


ಮೂಢ ನಂಬಿಕೆ ಎಂದರೆ ಏನು? ಮೌಡ್ಯದಿಂದ ಕೂಡಿದ ನಂಬಿಕೆ. ಅಂದರೆ ಸತ್ಯದ ಅರಿವಿಲ್ಲದೆ ಒಂದು ವಿಷಯವನ್ನೋ ಅಥವಾ ವಸ್ತುವನ್ನೋ  ಅಥವಾ ವ್ಯಕ್ತಿಯನ್ನೋ ನಂಬುವುದು ಮೂಡ ನಂಬಿಕೆ. ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಲ್ಲೂ ಎಲ್ಲಾ ಜನರೂ ಯಾವುದೋ ಒಂದು ರೀತಿಯ ಮೂಡ ನಂಬಿಕೆಗಳನ್ನು ರೂಡಿ ಮಾಡಿಕೊಂಡಿರುತ್ತಾರೆ. ಏಕೆಂದರೆ ಎಲ್ಲಾ ಜನರಿಗೂ ಸತ್ಯದ ಅರಿವಿರುವುದಿಲ್ಲ. ಈ ಮೂಡ ನಂಬಿಕೆಗಳು ಹೇಗೆ ನಮ್ಮ ಜೀವನದಲ್ಲಿ ಹೊಗುತ್ತವೆ ಎಂಬುದನ್ನು ನೋಡೋಣ.


ಮೂಲತ: ಕೆಲವು ಆಚಾರಗಳು ಸತ್ಯದ ಮತ್ತು ಸತ್ವದ ಆಧಾರದ ಮೇಲೆ ರೂಪಿಸಲ್ಪಟ್ಟಿರುತ್ತವೆ. ಆದರೆ ಕಾಲಾನುಕಾಲಕ್ಕೆ ಅದನ್ನಾಚರಿಸುವ  ಜನರು ಸತ್ವವನ್ನು ಬೆಳೆಸಿಕೊಳ್ಳದೆ ಮತ್ತು ಮೂಲ ತತ್ವವನ್ನರಿಯದೆ ಆ ಆಚಾರಗಳನ್ನು ನಡೆಸಿಕೊಂಡು ಹೋಗುತ್ತಾರೆ. ಹೀಗೆ ಹಲವರ ಮನೆಗಳಲ್ಲಿ ಹಿಂದಿನಿಂದ ನಡೆದು ಬಂದಿರುವ ಆಚಾರಗಳನ್ನೂ ಮುಂದಿನ ಎಷ್ಟೋ ತಲೆಮಾರಿನ ಜನ ಚಾಚೂತಪ್ಪದೆ ನಡೆಸಿಕೊಂಡು ಹೋಗುತ್ತಾರೆ. ಅವರಿಗೆ ಆ ಆಚಾರಗಳನ್ನು ಏಕೆ ಪಾಲಿಸಬೇಕು ಎಂಬುದು ಗೊತ್ತಿರದಿದ್ದರೂ ಆ ಆಚಾರದ ಪ್ರಸ್ತುತತೆಯನ್ನು ಪ್ರಶ್ನಿಸದೆ ನಡೆಸಿಕೊಂಡುಹೋಗುತ್ತಾರೆ. ಯಾರಿಗೂ ಅದನ್ನು ಪ್ರಶ್ನಿಸುವ ಅಥವಾ ಅದರ ಹಿಂದಿರುವ ತತ್ವವನ್ನು ಕೇಳಿ ತಿಳಿದುಕೊಳ್ಳುವ ತಾಳ್ಮೆ ಅಥವಾ ಧೈರ್ಯ ಅಥವಾ ಕುತೂಹಲ  ಇರುವುದಿಲ್ಲ. ಅಕಸ್ಮಾತ್ ಯಾರಾದರೂ ಧೈರ್ಯಮಾಡಿ ಮಾತ್ರ ತಿಳಿದುಕೊಳ್ಳುವ ಜಿಜ್ಞಾಸೆಯಿಂದ, ಕೇಳಿದರೆ, ಸಾಮಾನ್ಯವಾಗಿ ಬರುವ ಉತ್ತರ " ತಲೆ ಹರಟೆ, ಸುಮ್ನೆ ಹೇಳ್ದಷ್ಟು ಮಾಡೋ ಕೆಲಸಕ್ಕೆಬಾರ್ದ ಪ್ರಶ್ನೆ ಕೇಳಬೇಡ." ಹೀಗೆ ಹೇಳಿಸಿಕೊಂಡ ನೂರರಲ್ಲಿ ಒಬ್ಬನೋ- ಇಬ್ಬರೋ ಅಚಾರವನ್ನೇ ಬಿಡುವ ಧೈರ್ಯ ಮಾಡಬಹುದು. ಮಿಕ್ಕವರೆಲ್ಲರೂ ಮನೆಯಲ್ಲಿ ಹಿರಿಯರ ಹೆದರಿಕೆಯಿಂದ ಅಥವಾ ಗೌರವದಿಂದ ತುಟಿಪಿಟಕ್ಕೆನ್ನದೆ ಅವುಗಳನ್ನೇ ನಂಬಿ ಆಚರಿಸುತ್ತಾ ಹೋಗುತ್ತಾರೆ. ಹೀಗೆ ಆಚರಿಸುವವರಿಗೆ ಅದು ಅಭ್ಯಾಸವಾಗಿ ಹೋಗುತ್ತದೆ ಮತ್ತು ಅದು ಅವರ ಸ್ವಭಾವವೇ ಆಗುತ್ತದೆ.  ಇದು ಒಂದು ರೀತಿ


ಎರಡನೆಯದಾಗಿ ನಾವಿರುವ ಸಮಾಜದಲ್ಲಿ ಅನೂಚಾನವಾಗಿ ನಡೆಸಿಕೊಂಡುಬಂದಿರುವ ಆಚಾರ ವಿಚಾರಗಳನ್ನು, ಸಮಾಜದ ಸಧಸ್ಯನಾಗಿ ನಡೆಸಿಕೊಂಡು ಹೋದರೆ ಸಮಾಜದಲ್ಲಿ ಇರಲು ಅವಕಾಶ ಮತ್ತು ಸೌಹಾರ್ಧಯುತವಾದ ಬಾಳ್ವೆ ಎಂಬ ನಂಬಿಕೆಯಿಂದ ನಡೆಸಿಕೊಂಡುಹೋಗುವುದು.  ಆಂತರಿಕವಾಗಿ ಆ ಆಚಾರಗಳನ್ನು ಪ್ರಶ್ನಿಸಬೇಕು ಅಥವಾ ವಿರೋಧಿಸಬೇಕು ಎಂಬ ವಿಚಾರ ಮತ್ತು ಭಾವನೆಗಳು ಮನಸ್ಸಿನಲ್ಲಿ ಉಧ್ಭವವಾದರೂ, ಹೆದರಿಕೆಯಿಂದ ಅಥವಾ ಸಂಕೋಚದಿಂದ ಹಾಗೆ ಮಾಡದೆ ತಾನೂ ಸಮಾಜದಲ್ಲಿ ಒಂದೆಂಬಂತೆ, ಪಾಲಿಸಿಕೊಂಡು ಹೋಗುವವರೇ ಜಾಸ್ತಿ.

ಮೂರನೆಯದಾಗಿ ಹೆದರಿಕೆ. ಹೀಗೆ ಮಾಡದಿದ್ದರೆ ಏನಾಗುವುದೋ ಎಂಬ ಭಯ. ಈ ಭಯ ಮನುಷ್ಯನನ್ನು ಏನನ್ನಾದರೂ
ಮಾಡಿಸುತ್ತದೆ.  ಇರುವುದನ್ನು ಕಳೆದುಕೊಳ್ಳುವ ಭಯ ಅಥವಾ ಆಸೆಪಟ್ಟದ್ದು ಸಿಗದೇನೋ ಎಂಬ ಭಯ. ಈ ಹಾಳು ಭಯವೇ ಸಾಕಷ್ಟು ಮೂಡ ನಂಬಿಕೆಗಳಿಗೆ ಕಾರಣ. ಎಲ್ಲಾ ಕಾಲಕ್ಕೂ ಈ ಭಯ ಎಲ್ಲಾ ಜನಾಂಗವನ್ನೂ ಕಾಡಿದೆ. ಆರೋಗ್ಯ, ವಿಧ್ಯಾಭ್ಯಾಸ, ವೈವಾಹಿಕ ಜೀವನ, ವೃತ್ತಿ, ವ್ಯವಹಾರ, ಹಣ, ಪ್ರಯಾಣ, ಹೀಗೆ ಹತ್ತು ಹಲವಾರು ಕಾರಣಗಳಿಗಾಗಿ ಮಾನವ ಮೂಡ ನಂಬಿಕೆಗಳಿಗೆ ದಾಸನಾಗುತ್ತಾನೆ. "ಬೆಕ್ಕು ಅಡ್ಡಬಂದರೆ ಕೆಡುಕು" ಎಂಬ ನಂಬಿಕೆಗೆ ಯಾವ ಅಧಾರ? ಪಾಪ ಆ ಬೆಕ್ಕೇನು ಮಾಡುತ್ತದೆ. ಆದರೆ ಇದನ್ನು ನಂಬುವವರು ಎಷ್ಟುಮಂದಿ ನೋಡಿ.


ಆದರೆ ನಮ್ಮ ಸಮಾಜದಲ್ಲಿ, ಜನರ ನಂಬಿಕೆಗಳನ್ನು ಹೀಗೆಳೆಯುವರು ಸಾಕಷ್ಟುಜನ ಸಿಗುತ್ತಾರೆ. ಅವರಿಗೂ ಸಹಾ, ಒಂದು ವಿಷಯವನ್ನೋ, ವಸ್ತುವನ್ನೋ ಅಥವಾ ಒಬ್ಬ ವ್ಯಕ್ತಿಯನ್ನೋ ನಂಬದಿರಲು ಅಥವಾ ವಿರೋಧಿಸಲು ಕಾರಣಗಳು ಹಲವಾರು. ವೈಯಕ್ತಿಕ  ಅಹಂಕಾರದಿಂದ, ವ್ಯಕ್ತಿಗತ ದ್ವೇಷದಿಂದ, ತನಗೆ ಎಲ್ಲಾ ಗೊತ್ತು ಎಂಬ ಹುಂಬತನದಿಂದ, ತನಗೆ ಗೊತ್ತಿರುವುದೇ ಸತ್ಯ ಎಂಬ ಮೌಡ್ಯದಿಂದ ಅಥವಾ ಅವರದೇ ಆದ ಬೇರೆ ಬೇರೆ ಕಾರಣಗಳಿಂದ ವಿರೋಧ ಉಂಟಾಗಬಹುದು. ಆದರೆ ಇದು ಸರಿಯಲ್ಲ. ವಿರೋಧಕ್ಕೆ ಸತ್ಯದ ಅರಿವಿನ ಅವಶ್ಯಕತೆಯುಂಟು. ಸತ್ಯದ ಅರಿವಿಲ್ಲದೆ ಮಾತ್ರ ವಿರೋಧಕ್ಕಾಗಿ ವಿರೋಧಿಸುವುದೂ ಸಹ ಮೂಡ ನಂಬಿಕೆಯಷ್ಟೇ ತಪ್ಪು.


ಮೇಲೆ ಹೇಳಿದಂತೆ ಸತ್ಯದ ಅರಿವಿಲ್ಲದೆ ನಂಬಿಕೆಗಳನ್ನು ಬೆಳೆಸಿಕೊಳ್ಳುವುದು ಮೂಡ ನಂಬಿಕೆ.
ಆದರೆ ಸತ್ಯದ ಅರಿವು ಆಗಬೇಕಾದರೆ ವಿಚಾರ ಬೆಳೆಯ ಬೇಕು. ವಿಚಾರ ಬೆಳೆಯಲು ಜಿಜ್ಞಾಸೆ ಬೆಳೆಯ ಬೇಕು.
ವಿಧ್ಯೆಯಿಂದಲೇ ವಿಚಾರ ಬೆಳೆಯಬೇಕು.ವಿಚಾರವೆಂದರೆ, ನಮ್ಮ ಗಮನಕ್ಕೆ ಬಂದ ವಿಷಯವನ್ನು ಸತ್ಯದ ಒರೆಗೆ ಹಚ್ಚಿ ತಿಕ್ಕಿ ವಿಷಯದ ದಿರುವ ತತ್ವವನ್ನು ಮತ್ತು ಸತ್ಯವನ್ನು .  ವಿಚಾರ ಬೆಳೆದರೆ ಮೌಡ್ಯ ತೊಲಗುತ್ತದೆ. ಮೌಡ್ಯ ತೊಲಗಿದರೆ ಮೂಡ ನಂಬಿಕೆಯೂ ತೊಲಗುತ್ತದೆ.


ಆದರೆ ಎಲ್ಲರಿಂದಲೂ ಮೇಲೆ ಹೇಳಿದ ಹಲವಾರು ಕಾರಣಗಳಿಂದಾಗಿ ವಿಚಾರ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮೂಡ ನಂಬಿಕೆಗಳೂ ಸಹ ಕೊನೆಯಾಗುವುದೇ ಇಲ್ಲ.


ಮೂಡನಂಬಿಕೆ ಸರಿಯೇ ಅಥವಾ ತಪ್ಪೇ?    


ವಿಚಾರವಂತರಿಗೆ ಮೂಡನಂಬಿಕೆ ಸರಿಯೆಲ್ಲ ಎಂಬ ಧೃಢ ನಂಬಿಕೆ . ಆದರೆ ವಿಚಾರವಂತರಲ್ಲದವರಿಗೆ ಮೂಡನಂಭಿಕೆ ಒಂದು ಅಧಾರ ಸ್ಥಂಭ. ಅವುಗಳ ಅಧಾರದಿಂದಲೇ ಅವರು ತಮ್ಮ  ಜೀವನವನ್ನು ನಡೆಸುತ್ತಾರೆ. ಅದರ ಆಧಾರದಮೇಲೆ ಅವರು ತಮ್ಮ ಮಾನಸಿಕ ಸಂತುಲನೆಯನ್ನು ಕಾಪಾಡಿಕೊಳ್ಳುತ್ತಾರೆ. ಯಾವುದೋ ಒಂದನ್ನು  ನಂಬುವುದರಿಂದ ಅವರಿಗೆ ಸುಖ, ಶಾಂತಿ, ನೆಮ್ಮದಿ ಅಥವಾ ಸಂತೋಷ ಸಿಗುತ್ತದೆ ಎಂದರೆ ಏಕೆ ವಿರೋದಿಸಬೇಕು. ಎಂದೋ ಒಂದು ದಿನ ಅವರಲ್ಲೂ ವಿಚಾರ ಮೂಡಿ, ಸತ್ಯದ ಅರಿವಾಗಿ, ಮೌಡ್ಯ ತೊಲಗಿ ಮೂಡ ನಂಬಿಕೆಗಳನ್ನೂ ಬಿಡಬಹುದು.


ಉದಾಹರಣೆಗೆ, ಯಾರೋ ಒಬ್ಬರು ವೃತ್ತಿರೀತ್ಯ ಬಹಳ ಸಂಕಷ್ಟದಲ್ಲಿ ಇದ್ದಾರೆ ಎಂದು ಇಟ್ಟುಕೊಳ್ಳೋಣ. ಕಷ್ಟದಲ್ಲಿ ಇದ್ದಾಗ ಅದರ ಪರಿಹಾರಕ್ಕಾಗಿ ಯಾರು ಏನು ಹೇಳಿದರೂ ನಂಬುವುದು ಸಹಜ. ಯಾರೋ ಅವರಿಗೆ ಒಂದು ತಾಯತವನ್ನುಕಟ್ಟಿಕೊಳ್ಳಲೋ, ಯಾವುದೋ ಮಂತ್ರವನ್ನು ಪುನರುಚ್ಚಾರಣೆ ಮಾಡಲೋ ಅಥವಾ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ತಲೆ ಬೋಳಿಸಿಕೊಳ್ಳಲೋ, ನೂರು ತೆಂಗಿನಕಾಯಿ ಒಡೆಯಲೋ ಅಥವಾ ಉರುಳು ಸೇವೆಯನ್ನೂ ಮಾಡಲೋ  ಹೇಳಿದರೆ, ಅವರು ಹಾಗೆ ಮಾಡಿ ಅವರ ಕಷ್ಟ ಪರಿಹಾರವಾದಲ್ಲಿ, ಆ ವ್ಯಕ್ತಿಗೆ ಹಾಗೆ ಹೇಳಿದವರ ಮೇಲೆ ಆಚಲವಾದಂತ ವಿಶ್ವಾಸ ಮೂಡುತ್ತದೆ. ತನಗೆ ಸಿಕ್ಕ ಪರಿಹಾರವನ್ನು ತನ್ನ ಪರಿಚಯದ ಎಲ್ಲಾ ವ್ಯಕ್ತಿಗಳಿಗೂ ಹೇಳುತ್ತಾನೆ. ಮತ್ತ್ಯಾರಾದರೂ ಕಷ್ಟದಲ್ಲಿ ಇದ್ದರೆ, ಅವರಿಗೆ, ತನಗೆ ಪರಿಹಾರ ಸೂಚಿಸಿದವರ ಬಳಿಗೆ ಹೋಗಲು ಸೂಚಿಸುತ್ತಾನೆ ಅಥವಾ ಅವರನ್ನು ತಾನೇ ಕರೆದುಕೊಂಡು ಹೋಗುತ್ತಾನೆ. ಹೀಗೆ ಇವರು  ಅವರ ಬಳಿ ಮತ್ತು ಅವರು ಸೂಚಿಸಿದ ಹಾದಿಯಲ್ಲಿ , ಮತ್ತೆ ಬೇರೆಯವರು ಮತ್ತ್ಯಾರಲ್ಲಿಗೋ, ಇದು ಬೆಳೆಯುತ್ತಾ ಹೋಗುತ್ತದೆ. ಒಟ್ಟಾರೆ, ಅವರವರು ನಂಬಿದ ನಂಬಿಕೆಗಳಿಂದ ಅವರವರಿಗೆ ಸುಖ, ಶಾಂತಿ, ನೆಮ್ಮದಿ ಅಥವಾ ಸಂತೋಷ ಸಿಗುತ್ತದೆ ಎಂದಾದರೆ, ತಪ್ಪೇನು. ಮಾನವರು ಸಂತೋಷದಿಂದ, ಆನಂದದಿಂದ ಇರಲು ಇಷ್ಟಪಡುತ್ತಾರೆ. ಅವರಿಗೆ ತಮ್ಮ ನಂಬಿಕೆಯಿಂದ ಅದು ಸಿಗುವುದಾದರೆ ತಪ್ಪೇನು? ನಂಬಿಕೊಳ್ಳಲಿ ಬಿಡಿ.


ಆದರೆ ಈ ಮೂಡ ನಂಬಿಕೆಗಳನ್ನು ಹುಟ್ಟು ಹಾಕುವವರು ಸಮಾಜಘಾತಕರು. ಏಕೆಂದರೆ ಜನರ ಸಮಸ್ಯೆಗಳನ್ನೇ ಬಂಡವಾಳವಾಗಿಟ್ಟುಕೊಂಡು, ಜನಗಳ ಆತಂಕ- ಭಯಗಳನ್ನೇ ಬಂಡವಾಳವಾಗಿರಿಸಿಕೊಂಡು  ತಮ್ಮ ಬೇಳೆ ಬೇಯಿಸಿಕೊಳ್ಳುವ  ಡೋಂಗಿಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಜನರಿದ್ದಾರೆ. ಇದು ದರೋಡೆ. ಇದರಿಂದ ಪಾರಾಗಲಾದರೂ ಜನಗಳು ಮೂಡನಂಬಿಕೆಗಳನ್ನು ಬಿಡಬೇಕು. ಇಂತಹವರನ್ನು ನಂಬಿ ಒಂದೇ ಸಮಸ್ಯಗೆ ಹತ್ತಾರು ಜನರಲ್ಲಿ ಹೋಗಿ, ಅವರುಗಳು ಹೇಳಿದನ್ನೆಲ್ಲ ಮಾಡಿ ಕೈ ಸುಟ್ಟುಕೊಂಡವರು ಎಷ್ಟುಜನ ಬೇಕು? ಮತ್ತೆ ಕೆಲವರು ಒಂದೇ ಸಮಸ್ಯೆಗೆ ಹಲವಾರು ಪರಿಹಾರಗಳ ಪ್ರಯೋಗ  ಮಾಡಿ ಸುಸ್ತಾಗಿ ಬೇಸತ್ತು, ಕಡೆಗೆ " ಅಯ್ಯೋ ನಮ್ಮ ಕರ್ಮವೇ ಹಾಗಿದೆ. ಏನು ಮಾಡುವುದು" ಎಂದು ಸಮಾಧಾನಪಟ್ಟುಕೊಳ್ಳುವವೇಳೆಗೆ, ಮಾನಸಿಕವಾಗಿ ಜರ್ಝಾರಿತರಾಗಿ, ಹಣವನ್ನೂ ಪೋಲು ಮಾಡಿ ಸುಸ್ತಾಗಿರುತ್ತಾರೆ.  


ಆದರೆ ಸಾವಿರಾರು  ಡೋಂಗಿಗಳು ಇರುವಲ್ಲಿ ಬೆರಳೆಣಿಕೆಯಷ್ಟು ಸತ್ಪುರುಷರೂ ಇದ್ದಾರೆ. ಕೇವಲ ಪರರ ದು:ಖಕ್ಕೆ  ಮಿಡಿಯುವ, ಇನ್ನೊಬ್ಬರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಬೇಕೆನ್ನುವ ಸಧ್ಭುಧ್ಧಿ ಇರುವ ಜನರೂ ಇದ್ದಾರೆ. ಆದರೆ ಅವರು ಪ್ರಖ್ಯಾತರಾಗಿರುವುದಿಲ್ಲ, ಏಕೆಂದರೆ ಅವರಲ್ಲಿ ಸತ್ಯದ ಬಲವಿರುತ್ತದೆ.ಸೋಗು ಇರುವುದಿಲ್ಲ. ಜನರನ್ನು ಮೋಸಮಾಡಿ ಹಣ ಮಾಡುವ ಅತ್ಯಾಸೆ ಇರುವುದಿಲ್ಲ.  ಅವರು ಹೇಳುವ ಪರಿಹಾರದ ಬಗ್ಗೆ ಯಾರೂ ಚಕಾರವೆತ್ತದೆ ಪಾಲಿಸಿದರೂ ಆ ರೀತಿಯ ಪರಿಹಾರಗಳು ಸತ್ಯದ ಮೇಲೆ ಅಧಾರವಾಗಿರುತ್ತದಾದ್ದರಿಂದ ಮತ್ತು ಆ ಸತ್ಯದ ಒಳಗುಟ್ಟು ಹೇಳಿದರೂ ಸಾಮ್ಮನ್ಯರಿಗೆ ಅರಿವಾಗುವಿದಿಲ್ಲವಾದ್ದರಿಂದ , ಅವರು ಪ್ರಖ್ಯಾತರಾಗುವುದಿಲ್ಲ. ಆದರೆ ಅವರು ಸೂಚಿಸುವ ಪರಿಹಾರವನ್ನು ಕಾರಣ ಕೇಳದೆ ಮೌಡ್ಯದಿಂದಾದರೂ ನಂಬುವುದೇ ಲೇಸು.


ಮೂಡ ನಂಬಿಕೆಗಳನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದೇ? ಹೌದು. ಆದರೆ ಮೇಲೆ ಹೇಳಿದಂತೆ ವಿಚಾರ ಬೆಳೆಸಿಕೊಂಡರೆ, ಸತ್ಯದ ಅರಿವಾಗಿ ಮೌಡ್ಯ ಬಿಟ್ಟು ಮೂಡ ನಂಬಿಕೆಗಳನ್ನು ಬಿಡಬಹುದು. ವಿಚಾರ ಬೆಳೆಸಿಕೊಳ್ಳಲು ಮೇಲೆ ಹೇಳಿದಂತೆ ಜಿಜ್ಞಾಸೆ, ವಿಚಾರ ವಿನಿಮಯ ಮತ್ತು ಸತ್ಯವನ್ನು ಅರಿಯುವ ತವಕ ಬೇಕು. ಪ್ರತಿ ವ್ಯಕ್ತಿಗೂ ಸತ್ಯದ ಅರಿವಾದಾಗ ಯಾವುದೇ ಅಚಾರವನ್ನು ವಿಚಾರದ ಒರೆಗಲ್ಲಿಗೆ ತಿಕ್ಕಿದರೆ  ಮರ್ಮದ ಅರಿವಾಗಿ  ಮೌಡ್ಯವನ್ನು ತೊರೆದು ಮೂಡ ನಂಬಿಕೆಗಳ ಸ್ಥಾನವನ್ನು ಶುಧ್ಧ ನಂಬಿಕೆಗಳು ಆಕ್ರಮಿಸುತ್ತವೆ. ಇದು ಒಳ್ಳೆಯ ಬೆಳವಣಿಗೆ ಮತ್ತು ಇಂದು ಸಮಾಜದಲ್ಲಿ ಹೆಚ್ಚಾಗಿರುವ ಡೋಂಗಿ ಬಾಬಾಗಳ, ಕಳ್ಳಸ್ವಾಮಿಗಳ ಕಧೀಮ ಸನ್ಯಾಸಿಗಳ ಆಟಾಟೋಪ ಮತ್ತು ಸಮಾಜದಲ್ಲಿ ಅವರು ಕೊಡುವ ಕಿರುಕುಳ ಮತ್ತು ಮಾಡುವ ಕಳ್ಳಾಟಕ್ಕೆ ತಕ್ಕ ಉತ್ತರವಾಗುತ್ತದೆ.


ರವಿ ತಿರುಮಲೈ


ಬೆಂಗಳೂರು


9632246255

ವೃಧ್ಧಾಪ್ಯ ಶಾಪವಲ್ಲ


ವೃಧ್ಧಾಪ್ಯ  ಶಾಪವಲ್ಲ 

"ಯದ್ ಭಾವಂ ತದ್ಭವತಿ" ಎನ್ನುವುದು ಉಕ್ತಿ. ಇದರಂತೆ ಮಾನವರು ತಾವು ಏನನ್ನು ನೆನೆಸುತ್ತಾರೋ ಅದೇ ಆಗುತ್ತಾರಂತೆ. ನೀವು ಪದೇ ಪದೇ " ನನ್ನ ಕೈಲಿ ಈ ಕೆಲಸ ಮಾಡಲಾಗುವುದಿಲ್ಲ" ಎಂದು ನಿಮಗೇ ನೀವು  ಹೇಳಿಕೊಳ್ಳುತ್ತಾ ಹೋದರೆ ನಿಮ್ಮಲ್ಲಿ ನಿಜವಾಗಲೂ ಆ ಕೆಲಸ ಮಾಡುವ ಕ್ಷಮತೆ ಕರಗಿ, ಆ ಕೆಲಸವನ್ನು ಮಾಡಲಾಗದಂತಹ ಸ್ಥಿತಿಗೆ ಖಂಡಿತವಾಗಿಯೂ ತಲುಪುತ್ತೀರ. ನಿಮ್ಮ ಕ್ಷಮತೆಗೆ ಮೀರಿದ ಕೆಲಸಗಳನ್ನು ಮಾಡಲು,ನಿಮ್ಮ ಸ್ವಭಾವ, ಆತ್ಮವಿಶ್ವಾಸ ಮತ್ತು ನಂಬಿಕೆಗಳಿಂದ  ಮಾತ್ರ ಸಾಧ್ಯವಾಗುವುದು. 

ಈ ಭೂಮಿಯಮೇಲೆ ಇರುವುದಷ್ಟೇ ಜೀವನವಲ್ಲ. ವೃಧ್ಧಾಪ್ಯವೆಂದರೆ ಉಪಯುಕ್ತ ಜೀವನದ ಅಂತ್ಯವೆಂದು ಅರ್ಥವಲ್ಲ. ವೃಧ್ಧಾಪ್ಯ ಬಂದರೆ ಒಪ್ಪಿಕೊಳ್ಳಿ, ವಿರೋಧಿಸಬೇಡಿ. ಏಕೆಂದರೆ ವೃಧ್ಧಾಪ್ಯದಲ್ಲಿ  ಬೇರೇನನ್ನೋ ಕಲಿಯುವ ಸದವಕಾಶ ಒದಗಿ ಬರುತ್ತದೆ ಎಂದು ತಿಳಿಯಬೇಕು. ಹೊಸತಾದುದೇನನ್ನೋ ಕಲಿಯುವ ಅವಕಾಶ ದೊರಕುತ್ತದೆ. ಹುಟ್ಟು,ಬೆಳವಣಿಗೆ,ಜೀವನ,  ವೃಧ್ಧಾಪ್ಯವನ್ನು  ಸಮಭಾವದಿಂದ ತೆಗೆದುಕೊಳ್ಳುವ ಮತ್ತು ಸಾವನ್ನು ಅದೇ ಸಮಭಾವದಿಂದ ರಾಜಾರೋಷವಾಗಿ ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಬದುಕಿನ ಎಲ್ಲಾ ಮಜಲುಗಳೂ ಜಗಮಗಿಸುವುದಿಲ್ಲ. ಆದರೆ ಪ್ರತಿಯೊಂದು ಮಜಲೂ ತನ್ನದೇ ಆದ ವೈಶಿಷ್ಟತೆಯನ್ನು ಬೆಳಗುತ್ತದೆ. ವಯಸ್ಸು ನಮ್ಮನ್ನು ಮುದುಕರನ್ನಾಗಿಸುವುದಿಲ್ಲ. ನಮ್ಮನ್ನು ಮುದುಕರನ್ನಾಗಿಸುವುದು ನಮ್ಮ ಮನೋಭಾವ. ಪ್ರಶ್ನೆ  ಏನೆಂದರೆ, ನಾವು ನಲವತ್ತು ವರ್ಷದ ಮುದುಕರಂತೆ ಯೋಚಿಸುತ್ತೇವೆಯೋ  ಅಥವಾ ಎಂಬತ್ತು ವರ್ಷದ ಯುವಕರಂತೆ ಯೋಚಿಸುತ್ತೇವೆಯೋ ಎಂಬುದು.  

ಜೀವನದ  ಅನುಭವಗಳು ಹತ್ತು ಹಲವಾರು. ಒಮ್ಮೆ ಅದು ಚೈತನ್ಯದ ಬುಗ್ಗೆಯಾದರೆ ಮತ್ತೊಮ್ಮೆ ಬತ್ತಿದ ಸೆಲೆಯಂಥಹ ಅನುಭವ. ಕೆಲಕಾಲಕ್ಕೆ ಜೀವನ ಹಚ್ಚ  ಹಸಿರಾದ, ಬಣ್ಣ ಬಣ್ಣದ ಹೂ ಹಣ್ಣುಗಳಿಂದ ತುಂಬಿದ, ಸಂಬಂಧಗಳ, ಸಡಗರದ ಮತ್ತು ಸಂಭ್ರಮದ ಭಾವಗಳಿಂದ ತುಂಬಿದಂತೆ ಅನಿಸಿದರೆ  ಮತ್ತೊಮ್ಮೆ, ಬರಡು ಬರಡಾಗಿ, ಬತ್ತಿದಂತಾಗಿ, ಎಲ್ಲವೂ ಖಾಲಿಯದಂತಾಗಿ, ಜೀವನಕ್ಕೆ ಕಾರ್ಮೋಡ ಮುಸುಕಿದಂತಾಗಿ ತೋರುತ್ತದೆ. ಸಂತೋಷದ ಗಳಿಗೆಗಳು ಹಿಂದಕ್ಕೆ ಸರಿದು ಆಳವಾದ ಒಂಟಿತನ ಆವರಿಸಿ, ನಿರುತ್ಸಾಹದ ಕೂಗು ಮತ್ತೆ ಮತ್ತೆ ಪ್ರತಿಧ್ವನಿಸಿದಂತಾಗಿ, ದುಃಖ ಮತ್ತು ನೋವಿನ ಕಡಲಿನಲ್ಲಿ ಮುಳುಗಿದಂತಾಗುತ್ತದೆ. ಸಂತೋಷದಿಂದ ಎಲ್ಲರಿಗೂ ಆನಂದವನ್ನು ಹಂಚಿವ ಹೃದಯವೇ ಕಲ್ಲಾಗಿ ಆಂತರ್ಯದಲ್ಲಿ ಒತ್ತಿದಂತಾಗುತ್ತದೆ. ನೋವಿನ ಮಳೆಯಲ್ಲಿ ಜೀವನದ ಎಲ್ಲಾ ಬಣ್ಣಗಳೂ ಕೊಚ್ಚಿ ಹೋದಂತಾಗುತ್ತದೆ. 

ನಾವುಗಳು ಎಷ್ಟೋಬಾರಿ ಸ್ವಾನುಕಂಪ ಮತ್ತು ಗೋಳಿನಲ್ಲಿ ಮುಳುಗಿರುತ್ತೇವೆ. " ಅಯ್ಯೋ, ಆ ದೇವರು ನಮಗೇ ಯಾಕೆ ಹೀಗಾಗಲು ಬಿಡುತ್ತಾನೆ. ಈ ದರಿದ್ರ ಬಾಳಿನ ಅರ್ಥವಾದರೂ ಏನು" ಎಂದು ಗೋಳುತ್ತೇವೆ. ಬದಲಿಗೆ, ನಾವು ಸ್ವಾನುಕಂಪವನ್ನು ಮತ್ತು ಸ್ವಕರುಣೆಯನ್ನು  ಬಿಟ್ಟು, ನಮ್ಮನ್ನು ನಾವೇ ಗುಣಪದಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಹೃದಯದ ಒಳಗುಟ್ಟನ್ನು ಮಾತನಾಡಲು ಬಿಟ್ಟು ಅದಕ್ಕೊಂದು ಸಾಂತ್ವನದ ಆಲಿಕೆಯನ್ನು ಕೊಡಬೇಕು. ಮನಸ್ಸಿನ  ಮುರಿದ ಕನಸುಗಳ ಬಗ್ಗೆ ಅಕ್ಕರೆಯಿಂದ ಕೇಳಬೇಕು. ನಾವು ನಮ್ಮದೇ ಆದ ಸಾಧನೆಗಳು ಮತ್ತು ಜಾಣ್ಮೆಗಳನ್ನು ಗುರುತಿಸಿಕೊಳ್ಳಬೇಕು. ನಮ್ಮಲ್ಲಿರತಕ್ಕ ಸುಗುಣಗಳನ್ನು ಗುರುತಿಸಿಕೊಂಡು ನಮ್ಮ ಕ್ಷಮತೆಯನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ನಾವು ಏನಾಗಬೇಕೋ ಅದಾಗಬಹುದು. ಜೀವನವೇ ಒಂದು ಪಾಠಶಾಲೆ ಮತ್ತು ಅನುಭವವೇ ಗುರು. 
ಜೀವನದಲ್ಲಿ ನಾವು ಪಡೆದುಕೊಂಡದ್ದೆಷ್ಟು ಎಂಬುದನ್ನು ಎಣಿಸಿ ನೋಡಿದಾಗ ಕಳೆದುಕೊಂಡದ್ದು ಗೌಣವಾಗಿ ಕಾಣಬೇಕು.  

ಎಷ್ಟೇ ಕಷ್ಟವಾದರೂ ಜೀವನ ಸುಂದರ. ಎಷ್ಟೇ ಸುಂದರವಾಗಿದ್ದರೂ ಜೀವನ ತುಂಬಾ ಕಷ್ಟ. ಈ ವಿಡಂಬನೆಯು ಹೃದಯವನ್ನು ಮುಕ್ತವನ್ನಾಗಿಸಿ ಕರುಣೆ ಮತ್ತು ಅನುಕಂಪವನ್ನು ತುಂಬುತ್ತದೆ. ಸುಖದ ನುಣುಪಾದ ಸೋಪಾನದ ಮೇಲೆ ನೀವು ಹೋಗುತ್ತಿರುವಾಗಲೇ ತಟ್ಟಂತ ನೀವು ಕಲ್ಲು ಮುಳ್ಳುಗಳ ಹಾದಿಯಲ್ಲಿ ಬೀಳಬಹುದು. ನಿಮಗೊಂದು ಉಪಯುಕ್ತ ಜೀವನ ಇದೆ. ನೀವು  ಎಲ್ಲರಿಗೂ ಬೇಕಾಗಿ ಎಲ್ಲರಿಂದಲೂ ಹೊಗಳಿಕೆಗೆ ಪಾತ್ರರಾಗಿದ್ದೀರಿ ಎಂಬ ಒಂದು ಸುಂದರ ಅನುಭವದಲ್ಲಿರುವಾಗಲೇ, ವಿಧಿಯ ಒಂದು ತಿರುವಿನಿಂದ ಎಲ್ಲಾ ತಾರುಮಾರಾಗಿ ತಟ್ಟೆಂದು ನೀವು ಎಲ್ಲಾ ಕಳೆದುಕೊಂಡು, ನಿರಾಶರಾಗಿ, ಒಬ್ಬಂಟಿಯಾಗಿ ಜೀವನದ ಒಂದು ತಿರುವಿನಲ್ಲಿ ನಿಂತಂತಹ  ಭಾವ ನಿಮ್ಮನ್ನು ಆವರಿಸುತ್ತದೆ.  ಬಹುಷಃ ನಿಮ್ಮ ಜೀವನ ಸಂಗಾತಿಯನ್ನು ನೀವು ಕಳೆದುಕೊಂಡಿರಬಹುದು, ನಿಮ್ಮ ಮಕ್ಕಳು ತಮ್ಮದೇ ಆದ ಸಂಭಂದಗಳನ್ನು ಸೃಷ್ಟಿಮಾದಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ,  ನಿಮ್ಮ ಸ್ನೇಹಿತರೊಡನೆ  ಮತ್ತು ನಿಮ್ಮ ಸಂಭಂಧಿಕರೊಡನೆ ಎಲ್ಲಾ ಸಂಪರ್ಕವನ್ನೂ ಕಳೆದುಕೊಡಿದ್ದೀರಿ ಮತ್ತು ನಿಮ್ಮನ್ನು ಒಂಟಿತನ ಕಾಡುತ್ತದೆ. ಯಾರಿಗೂ ಬೇಡವಾದಂತವರಾಗಿ ದಿಕ್ಕಿಲ್ಲದವರಂತ ಭಾವನೆ ನಿಮ್ಮನ್ನು ಆವರಸಿಕೊಂಡಂತಾಗಿದೆ. 

ಇಂತಹ ಸಮಯದಲ್ಲಿ ದುಃಖದಲ್ಲಿ ಮುಳುಗಿದವರಂತಾಗದೆ, ಸ್ವಾನುಕಂಪದಲ್ಲಿ ತೊಳಲಾಡದೆ,  ವೃಧ್ಧಾಪ್ಯವೂ ಒಂದು ಅವಕಾಶವೆಂದು ಅರಿತು ಶಾಂತತೆಯಿಂದ ಧ್ಯಾನಮಗ್ನರಾಗುವುದರಿಂದಲೋ ಪ್ರಾರ್ಥನೆಯಿಂದಲೋ ಆತ್ಮಜ್ಞಾನವನ್ನು ಪಡೆಯಲು ಪ್ರಯತ್ನಿಸಬಹುದಲ್ಲವೇ? ಈ ಸಮಯದಲ್ಲಷ್ಟೇ ನೀವು ನಿಮ್ಮದೇ ಸಾಂಗತ್ಯವನ್ನು ಅನುಭವಿಸಲು ಸಾಧ್ಯ. ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಕಷ್ಟವಾದರೂ, ನೀರು ಯಾವ ಪಾತ್ರೆಯಲ್ಲಿದ್ದರೆ ಆ ಪಾತ್ರೆಯ ಆಕಾರವನ್ನೇ ಪಡೆದುಕೊಳ್ಳುವಂತೆ, ನೀವಿರುವ ಸ್ಥಿತಿಯಲ್ಲಿ ಸಂತೋಷದಿಂದಿರಲು ಪ್ರಯತ್ನಪಟ್ಟರೆ, ಶೇಷ ಜೀವನವನ್ನು ಆಧ್ಯಾತ್ಮಿಕ ಪ್ರಯಾಣದಂತೆ, ನಂಬಿಕೆಯ ಹಾಯಿಯನ್ನು ವಿಧಿಯಂಬ ಗಾಳಿಗೊಡ್ಡಿ ಮುಂದಕ್ಕೆ ಸಂತೋಷದಿಂದ ಹೋಗಬಹುದು. 

ನಿಮ್ಮ ಪ್ರೀತಿಪಾತ್ರರ ಸಹವಾಸದಿಂದ ವಂಚಿತರಾದಂಥಹ ಸ್ಥಿತಿಯಲ್ಲಿ, ನಿಮ್ಮ ಒಳಗೆ ಇರುವಂಥಹ, ನಿಮ್ಮ ಸ್ನೇಹಿತನೆಡೆಗೆ ನೀವು ತಿರುಗಬೇಕು. ಏಕಾಂತದಲ್ಲೂ ಎಕಾಂಗಿಯಾಗಿರದೆ, ಆತ್ಮ ಸಂಬಂಧವನ್ನು ಬೆಳೆಸಿಕೊಂಡು ಅಂಥರ್ಮುಖಿಯಾಗಿ ಸಂತೋಷಪಡಬೇಕು. ನಿಮಗೆ ಆತ್ಮ ಸಂಬಂಧದಿಂದ ಅಹಂಕಾರ ಕಡಿಮೆಯಾಗುತ್ತದೆ. ಏಕಾಂತತೆಯನ್ನು ಸಂತೋಷದಿಂದ ಅನುಭವಿಸುತ್ತಾ,ಆಧ್ಯಾತ್ಮಿಕ ಬೆಳವಣಿಗೆಗೆ,  ಶೇಷ ಜೀವನವನ್ನು ಉಪಯೋಗಿಸಿಕೊಂಡಾಗ, ವೃಧ್ಧಾಪ್ಯ ಹೊರೆ ಎನಿಸುವುದಿಲ್ಲ. ನಿಮ್ಮಲ್ಲಿರುವ ಕ್ರಿಯಾತ್ಮಕ ಶಕ್ತಿಯನ್ನು ಪುನ:ಚೇತನ ಗೊಳಿಸಲು ಮತ್ತು ಶೇಷ ಜೀವನವನ್ನು ಹಸನಾಗಿಸಿಕೊಳ್ಳಲು ನೀವೇನೂ ಚಿಗುರೆ ಮರಿಯಂತೆ ಓಡಲು ಶಕ್ತಿ ಇಲ್ಲದಿದ್ದರೂ, ನಿಮ್ಮ ಅಂಥ:ಶಕ್ತಿಯನ್ನು  ಉಪಯೋಗಿಸಿ ಆಮೆಯ ನಡಿಗೆಯಲ್ಲಾದರೂ, ನಕಾರಾತ್ಮಕ ಭಾವನೆಗಳನ್ನು ಗೆದ್ದು, ಸಕಾರಾತ್ಮಕವಾಗಿ ಜೀವನವನ್ನು ಗೆಲ್ಲಬಹುದು.

ಜೀವನದ ಯಾವುದೇ ಸ್ತರದಲ್ಲಿ ನಾವು ಹೊಸದಾಗಿ ಕಲಿಕೆಗೆ ಸದಾ ಸಿದ್ಧರಾಗಿರಬೇಕು. ಹೊಸ ಹೊಸ ಪಾಠಗಳು ನಮಗೆ ಹೊಸ ಹೊಸ ವಿವೇಕವನ್ನು ತರುತ್ತವೆ. ಅಹಂಕಾರವನ್ನು ತೊರೆದು ವಿನಯಿಗಳನ್ನಾಗಿಸುತ್ತದೆ. ಯಾವುದಾದರೂ ವಿಷಯವನ್ನು ಹೊಸದಾಗಿ ಕಲಿಯಲು ಶುರುಮಾಡಿದರೆ ಜೀವನದಲ್ಲಿ ಉತ್ಸಾಹ ಮತ್ತು ಸಾಹಸ ಬೆಳೆಯುತ್ತದೆ. ಇಷ್ಟುದಿನ ಕಳೆದ ಜೇವನದಲ್ಲಿ ನಮಗೇ ನಮ್ಮ ಅಂತರ್ವಾಣಿಯನ್ನು ಕೇಳಲು ಸಮಯವೇ ಸಿಕ್ಕಿರಲಿಕ್ಕಿಲ್ಲ . ಆದರೆ ಈಗ ನಾವು ನಮ್ಮ ಮೇಲೆ ನಾವೇ ಹೇರಿಕೊಂಡ, ಮಾಡಲೇಬೇಕಾದ ದೈನಂದಿನ ಕರ್ತವ್ಯಗಳಿಂದ ಮುಕ್ತರಾಗಿ ಹೊಸದೊಂದು ಜೀವನಕ್ಕೆ ಮನಸ್ಸಿನ ಕದವನ್ನು ತೆಗೆಯಲನುಕೂಲವಾಗುತ್ತದೆ. ನಮಗೆ ನಮ್ಮೊಳಗಿನ ಪ್ರತಿಭೆಯನ್ನು ಬೆಳಗಿಸಿಕೊಳ್ಳಲಿಕ್ಕೆ ಮತ್ತು ನಮ್ಮನ್ನು ನಾವು ನಮಗೇ ಹಿತವಾದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಲ್ಲಲಿಕ್ಕೆ ಸಮಯಸಿಕ್ಕಂತಾಗುತ್ತದೆ. ನೀವು ನಿಮ್ಮ ಮನಸ್ಸನ್ನು ಇಂಪಾದ ಸುಶ್ರಾವ್ಯವಾದ ಸಂಗೀತದೆಡೆಗೆ ತಿರುಗಿಸಿ ಅಥವಾ ನಿಮ್ಮಾತ್ಮವನ್ನು ಭಕ್ತಿ ಸಂಗೀತದೊಳಗೋ, ಭಜನೆಗಳಲ್ಲೋ ಮುಳುಗಿಸಿ ಆನಂದಪಡಿ ಅಥವಾ ಮಹಾನ್ ಋಷಿಮುನಿಗಳು ಮತ್ತು ಪ್ರಸಿಧ್ಧ ಲೇಖಕರು ನಮಗೆ ನೀಡಿರುವ ಅದ್ಭುತವಾದ ಸಾಹಿತ್ಯದ ಓದು ಅಥವಾ ಅಭ್ಯಾಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಈ ಪ್ರಪಂಚ ಸಂಬಂಧಕ್ಕಿಂತ ಒಂಟಿತನದಲ್ಲೂ ಸುಂದರವಾದ ವಸ್ತುಗಳ ಸಂಬಂಧವನ್ನು ನೀವು ಪಡೆಯುತ್ತೀರಲ್ಲವೇ?
ಪ್ರಪಂಚದ ಪ್ರತಿ ವ್ಯಕ್ತಿಯೂ ಯಾವುದೋ ಒಂದನ್ನು  ಕೊಡಲು ಸಮರ್ಥನಾಗಿರುತ್ತಾನೆ. ವೃಧ್ಧರು  ತಮ್ಮ ಅಮೂಲ್ಯ ಅನುಭವದ ಸಂಪತ್ತನ್ನು ಹೊಂದಿದವರಾಗಿರುತ್ತಾರೆ. ಆದರೆ ಅವರು ಶಾಂತರಾಗಿ ವಾಚನಾಲಯದ ಅರೆಗಳಲ್ಲಿರುವ, ಪರಾಮರ್ಶಕ ಪುಸ್ತಕದಂತೆ ( reference book), ತಮ್ಮ ಅನುಭವವನ್ನು  ಅನ್ಯರ  ಉಪಯೋಗಕ್ಕಾಗುವಂತೆ ಕೊಡಬೇಕು .
ಸಾಮಾನ್ಯವಾಗಿ ಜನರು ಯವ್ವನದಿಂದಲೇ ಅಥವಾ ಯುವಕರಾಗಿಯೇ ಇರಲು ಇಚ್ಚಿಸುತ್ತಾರೆ. ಕೆಲವರು ವಯಸ್ಸಾಗುತ್ತಿದ್ದರೂ ಸ್ವಭಾವ ಮತ್ತು ಉತ್ಸಾಹದಿಂದ ಯುವಕರಾಗೆ ಇರುತ್ತಾರೆ. ವಯಸ್ಸಾಗುತ್ತ ದೇಹ ಜರ್ಜರಿತವಾಗಿ ರೋಗಗ್ರಸ್ತವಾಗುತ್ತದೆ. ಆ ಸಮಯದಲ್ಲಿ ಒಬ್ಬ ವ್ಯಕ್ತಿಗೆ, ತನ್ನ ಕುಟುಂಬದ ಸಹಾಯ ಮತ್ತು ಒತ್ತಾಸೆ ಬೇಕಾಗುತ್ತದೆ. ಅವರಿಗೆ ಅನುಕಂಪ ಬೇಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆಧ್ಯಾತ್ಮಿಕದ ಕಡೆಗೆ ತಿರುಗುವುದು ಬಹಳ ಒಳ್ಳೆಯದು. ಯಾವ ದೈವ ನಮಗೆ ನೋವು ಮತ್ತು ದು:ಖವನ್ನು ಕೊಟ್ಟಿದೆಯೋ ಅದೇ ದೈವವು ನಮಗೆ ಆ ನೋವು ಮತ್ತು ದು:ಖವನ್ನು ತಡೆದುಕೊಳ್ಳಲೂ ಶಕ್ತಿ ಸಹ  ಕೊಟ್ಟೀತು. ದೇಹಬಲ ಕುಗ್ಗಿದಾಗ, ಆತ್ಮ ಬಲ ಹೆಚ್ಚಿದರೆ, ಆತ್ಮ ಬಲವು ದಣಿದ ದೇಹಕ್ಕೆ ಸಾಂತ್ವನ ನೀಡಿ, ಜೀವನದಲ್ಲಿ ಬೆಳಕನ್ನು ತೋರಿ ಮುಂದಿರುವ ಹಾದಿಯನ್ನು ನಿಚ್ಚಳವಾಗಿಸುತ್ತದೆ. 
ಹುಟ್ಟು, ಬದುಕು ಮತ್ತು ಸಾವುಗಳು ಪ್ರಪಂಚದ ಎಲ್ಲಾ ಪ್ರಾಣಿಗಳಿಗೂ ಸಮವಾಗಿ ಅನ್ವಯಿಸುವುದು. ಹುಟ್ಟಿನಲ್ಲಿ,  ತಾಯಿ ನೋವಿನಿಂದ ಕನಳುತ್ತಾಳೆ ಮತ್ತು ಮಗು ಜಿಗುಪ್ಸೆಯಿಂದ ಕಿರುಚುತ್ತದೆ. ಅದು ಮಿಕ್ಕೆಲ್ಲರಿಗೂ ಹಬ್ಬದ ವಾತಾವರಣ. ಎಲ್ಲಾ ನೋವು,  ದು:ಖ ಮತ್ತು ಸಂಕಟಗಳಿಗೆ ಮಂಗಳವನ್ನು ಹಾಡುವ ಸಾವನ್ನು ಎಲ್ಲರೂ ದ್ವೇಷಿಸುತ್ತಾರೆ. ಸಾವು ನಿಶ್ಶಬ್ಧ, ನೀರವ ಮತ್ತು  ಶಾಂತ. ಅದು ಒಟ್ಟಾರೆ ಜೀವನದ ಪರಿವರ್ತನಾ ಬಿಂದು. 

ಜೀವನದ ಅವಧಿ ಎಷ್ಟೇ ದೊಡ್ಡದಾದರೂ ಆತ್ಮಕ್ಕೆ ಅದು ಅಲ್ಪ ಕಾಲವಷ್ಟೆ. ಏಕೆಂದರೆ ಆತ್ಮದ ನಿರಂತರ ಪ್ರಯಾಣದಲ್ಲಿ ಹುಟ್ಟು ಸಾವುಗಳು ಕೇವಲ ಘಟನೆಗಳಷ್ಟೇ. ಬದುಕಿನ ಯಶಸ್ಸಿನ ಮಾಪನ ಜೀವನದ ಅವಧಿಯಿಂದ ಅಲ್ಲದೆ, ಜೀವನದ ಸಾಧನೆಗಳಿಂದ ಮಾಡಬೇಕು.  ಸಾಧನೆಯೆಂದರೆ ಆಂತರಿಕವಾಗಿ ಎಷ್ಟು ಬೆಳೆದಿದ್ದೇವೆ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ದೇಹಕ್ಕೆ ವಯಸ್ಸಾದರೂ ಸಕಾರಾತ್ಮಕವಾದ ಯೋಚನೆಗಳಿಂದ, ವ್ಯಕ್ತಿಯು ಮನಸ್ಸು ಮತ್ತು ಭಾವನೆಗಳಿಂದ ಯವ್ವನವನ್ನು ಉಳಿಸಿಕೊಳ್ಳಬಹುದು. ನಕಾರಾತ್ಮಕವಾದ ಆಲೋಚನೆ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ. ನಕಾರಾತ್ಮಕ ಯೋಚನೆಯಿಂದ, ಎಲ್ಲಾ ಸಾರ್ಥಕ ಚಟುವಟಿಕೆಗಳನ್ನೂ ತೊರೆದು ಸ್ವಕರುಣೆಯಿಂದ, ನಿಟ್ಟುಸಿರು ಬಿಡುತ್ತಾ, ಎಂದೋ ಬರುವ ಸಾವನ್ನು ಅಪೇಕ್ಷಿಸುತ್ತಾ ತೊಳಲಾಡುತ್ತಾ ಇರುವುದಕ್ಕಿಂತ,  
ವೃಧ್ಧಾಪ್ಯವನ್ನು ಒಂದು ಅವಕಾಶವೆಂದು ಭಾವಿಸಿ, ಹೊಸ ಹೊಸ ವಿಚಾರ ವಿಧ್ಯಮಾನಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಆರಾಮವಾಗಿ ಜೀವನವನ್ನು ಮತ್ತು ಅದರ ಸಾರವನ್ನು ಸವಿಯುತ್ತಾ ಶೇಷ ಜೀವನವನ್ನು ಸುಂದರವಾಗಿ ಕಳೆಯಲು ಬೇಕಾದ ಸುಂದರವಾದ ವಾತಾವರಣವನ್ನು ಸೃಷ್ಟಿಮಾಡಿಕೊಳ್ಳುವುದು, ಒಳ್ಳೆಯದಲ್ಲವೇ. ಏಕೆಂದರೆ ಏಕಾಂಗಿಯಾಗಿರುವಾಗ, ನೀವೇ ನಿಮ್ಮ ಸ್ನೇಹಿತ, ನೀವೇ ನಿಮ್ಮ ನಾಯಕ, ನೀವೇ ನಿಮ್ಮ ವಿಶ್ಲೇಷಕ. 

ಹಾಗಿದ್ದರೆ ಪ್ರತಿ ನಿತ್ಯ ದಿನದಂತ್ಯದಲ್ಲಿ ಹಾಸಿಗೆಯಲ್ಲಿ ಒರಗಿದಾಗ, ಸಂತೃಪ್ತ ಭಾವದಿಂದ ನಿದ್ದೆ ಬಂದರೆ, ಸಾವನ್ನು ಆಹ್ವಾನಿಸಲು ಮತ್ತು ನಿಶ್ಚಿಂತೆಯಿಂದ ಅದನ್ನು ಅಪ್ಪಿಕೊಳ್ಳಲು ಒಂದು ಪೂರ್ವ ಪ್ರಯೋಗವೆಂದೆ ( rehersal )  ತಿಳಿದು ಕೊಂಡು ಹಾಯಾಗಿರಿ. 

ಸಾವು ಬರಲಿ. ಆದರೆ ಅದು ಬರುವುದಕ್ಕೆ ಮುನ್ನವೇ ಸಾಯುವುದಕ್ಕಿಂತ, ಬರುವ ಕಡೆಯ ಗಳಿಗೆಯವರೆಗೆ, ಜೀವನವನ್ನು ಸವಿಯಿರು, ಸಂತೃಪ್ತಿಯಿಂದ ಬದುಕಿರಿ. 

 ರವಿ ತಿರುಮಲೈ 
9632246255