Thursday, 26 April 2018

ಅಂತರಂಗದ ಯುದ್ಧ.



'ಯುದ್ಧ'  ಯುದ್ಧರಂಗದಲ್ಲೇ ನಡೆಯಬೇಕಾಗಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಯುದ್ಧ ಬಹಿರಂಗವಾಗಿಯೂ ನಡೆಯುವುದಿಲ್ಲ. ವ್ಯಕ್ತಿ ವ್ಯಕ್ತಿಗಳ ಸಂಬಂಧಗಳಲ್ಲಿ, ಸಂಸ್ಥೆಗಳಲ್ಲಿ, ಸಮಾಜದಲ್ಲಿ, ಸಂಸಾರದಲ್ಲಿ, ಸರಿ ತಪ್ಪುಗಳ ನಡುವೆ, ಧರ್ಮ ಅಧರ್ಮಗಳ ನಡುವೆ, ನ್ಯಾಯ ಅನ್ಯಾಯಗಳ ನಡುವೆ, ನಿತ್ಯ ಯುದ್ಧ ನಡೆಯುವುದು ಉಂಟು.ಇನ್ನು ಆಂತರ್ಯದಲ್ಲಿ ಅರಿಷಡ್ವರ್ಗಗಳ ಕೋಟೆಯಲ್ಲಿ, ಮೋಹ ಮಮಕಾರಗಳು ರಚಿಸಿರುವ ಚಕ್ರವ್ಯೂಹದಲ್ಲಿ, ನಿತ್ಯ ಅನಿತ್ಯಗಳ ನಡುವೆ ನಡೆಯುವ ಯುದ್ಧ ಅಂತೂ ಇನ್ನೂ ತೀಕ್ಷ್ಣತಮ. ಇಂತಹ ವಿಭಿನ್ನ ರೀತಿಯ ವಿಭಿನ್ನ ಸ್ತರಗಳಲ್ಲಿ ನಡೆವ ನಿತ್ಯ ಯುದ್ಧವನ್ನು ಸಹಿಸಲಾಗದೆ ನಾವು ಕುಗ್ಗುವುದುಂಟು, ಒಮ್ಮೊಮ್ಮೆ ಯುದ್ಧಕ್ಕೆ ಅಂಜಿ ಹಿಂಜರಿಯುವುದುಂಟು.

ಅರ್ಜುನನಂತಹ ಮಹಾಪರಾಕ್ರಮಿಯೇ ಯುದ್ಧ ಬೇಡವೆಂದು ಹಿಮ್ಮೆಟ್ಟುವಾಗ ಸಾಮಾನ್ಯರಾದ ನಾವು ದಿನ ನಿತ್ಯದ ಸಂಸಾರದ ಸೆಣೆಸಾಟಕೆ ಅಂಜುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಈ ಸಂಸಾರದಲ್ಲಿ ಹೆಜ್ಜೆ ಇಟ್ಟಾದ ಮೇಲೆ ಹೆಜ್ಜೆ ಹೆಜ್ಜೆಯಲ್ಲೂ ನಾವು ಕಾದಾಡಲೇ ಬೇಕಿದೆ - ಒಮ್ಮೊಮ್ಮೆ ಹೊರಗಿನ ಶತ್ರುಗಳ ಜೊತೆಗೆ ಒಮ್ಮೊಮ್ಮೆ ಒಳಗಿನ ಶತ್ರುಗಳ ಜೊತೆಗೆ. ನಿತ್ಯ ಸಮರ ಅನಿವಾರ್ಯವೇ ಆಗಿರುವಾಗ ಒಳಗಿನ ವೈರಿ ಆರ್ಭಟಿಸುತ್ತಿರುವಾಗ ಅಬಲರಾಗಿದ್ದರೂ ನಾವು ಯುದ್ಧ ಮಾಡಲೇ ಬೇಕು. ಸಮರ ಸಹಿಸಲಾಗದೆ ಅರ್ಜುನನಂತೆ ಹಿಮ್ಮೆಟ್ಟುವಂತಾದಾಗ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿ ಮಾತನ್ನು ನೆನಪಿಸಿಕೊಂಡು ಪುನಶ್ಚೇತನ ಪಡೆದುಕೊಳ್ಳಬೇಕು, ಮತ್ತೆ ಯುಯುತ್ಸುಗಳಾಗಿ ಹೋರಾಡಬೇಕು. ಕೃಷ್ಣ ಹೇಳುತ್ತಾನೆ  "ಕ್ಷುದ್ರಮ್ ಹೃದಯ ದೌರ್ಬಲ್ಯಮ್ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದರೆ ಶೋಭೆ ತರದ ಹೃದಯ ದೌರ್ಬಲ್ಯ ತ್ಯಜಿಸಿ ಎದ್ದು ಹೋರಾಡು ಮತ್ತು "ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುದ್ಧ್ಯ ಚ"  ಎಲ್ಲಾ ಸಂದರ್ಭದಲ್ಲಿ ನನ್ನ ನೆನಪು ಮಾಡಿಕೊಂಡು ಹೋರಾಡು ಎಂದು. ಅದಕ್ಕೆ ನಮ್ಮ ಪುರಂದರ ದಾಸರು "ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣಾ ಎನಬಾರದೆ" ಎಂದು ಹೇಳುತ್ತಾ ಜೀವನದಲ್ಲಿ ಎಂತಹದೇ ಬಿಕ್ಕಟ್ಟಿರಲಿ ಭಗವಂತನ ಸ್ಮರಣೆ ಮಾಡುತ್ತಾ ಹೋರಾಡಬೇಕು. ಆಗ ನಮ್ಮ ಬವಣೆ ನಮಗೆ ಭಾರವಾಗುವುದಿಲ್ಲ ಎಂದು ಆದೇಶಿಸಿದ್ದಾರೆ.

ಬದುಕಿನಲ್ಲಿ ನಾವು ನಿರಂತರವಾಗಿ ಹೋರಾಡುತ್ತೇವೆ, ಕೆಲವೆಡೆ ಸೋಲುತ್ತೇವೆ ಮತ್ತು ಕೆಲವೆಡೆ ಗೆಲ್ಲುತ್ತೇವೆ. ಅಂತರಂಗದ ಅಥವಾ ಬಹಿರಂಗದ ಹೋರಾಟಗಳು ಬರುತ್ತವೆ ಹೋಗುತ್ತವೆ.  ಆದರೆ ನಮ್ಮ ಜೀವನದಲ್ಲಿ ನಮ್ಮೊಡನೆ ನಾವು ಮಾಡುವುದೇ ಅತೀ ದೊಡ್ಡ ಹೋರಾಟ. ಅಂತರಂಗದ ಯುದ್ಧ ಬಹಳ ಧೀರ್ಘಕಾಲದ್ದಾಗಿದ್ದು, ಅಂತ್ಯವೇ ಇಲ್ಲದಂತೆ ಗೋಚರಿಸುತ್ತದೆ ಮತ್ತು ಅದು ನಮ್ಮನ್ನು ಒಳಗಿನಿಂದ ಛಿದ್ರಛಿದ್ರವಾಗಿಸುತ್ತದೆ. ಮನಸ್ಸಿನಲ್ಲಿ ತಿಳಿಯಾದ ಆಲೋಚನೆಗಳು ಮತ್ತು ಸರಿಯಾದ ಕರ್ಮಗಳು ಬಲುದೂರವೆನಿಸುತ್ತದೆ.

ನಿನ್ನೆಯ ದಿನ ನಾ ಏನು ಮಾಡಿದೆ? ನಾನೇಕೆ ತಪ್ಪಾದ ಆಯ್ಕೆಯನ್ನು ಮಾಡಿದೆ? ನಾನು ಇದರ ಬದಲು ಅದನ್ನು ಮಾಡಿದ್ದರೆ ಚೆನ್ನಾಗಿತ್ತೋ ಏನೋ? ನಾನು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಚೆನ್ನಾಗಿ ಗಮನ ಕೊಟ್ಟಿದಿದ್ದರೆ, ಇಂದು ಬದುಕಿನಲ್ಲಿ ಹೋರಾಟ ಕಡಿಮೆಯಾಗುತ್ತಿತ್ತೋ ಏನೋ?  ನಾನು ಇವಳ(ನ)ನಲ್ಲದೆ ಮತ್ಯಾರನ್ನಾದರೂ ವಿವಾಹವಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನನಗೆ ಇನ್ನೂ ಒಂದೆರಡು ಮಕ್ಕಳಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನಾನು ಅಂದು ಧೈರ್ಯವಾಗಿ ಎದ್ದು ನಿಂತು ಮಾತನಾಡಿದ್ದಿದ್ದರೆ ಒಳಿತಾಗುತ್ತಿತ್ತೋ ಏನೋ? ಬಹುಶಃ ಎಲ್ಲವೂ ಸರಿಯಾಗುತ್ತೋ ಇಲ್ಲವೋ? ನಾನಂದು ಅಲ್ಲಿಗೆ ಹೋಗಿರದಿದ್ದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ? ಅಯ್ಯೋ ಕೆಲಸ ಕೆಟ್ಟರೆ ಏನು ಮಾಡುವುದು? ಏನಾದರೂ ಭಯಂಕರ ಖಾಯಿಲೆ ಬಂದು ನಾನು ನರಳುವಂತಾದರೆ?   ಅಯ್ಯೋ ನನ್ನ ಹೆಂಡತಿಯ(ಗಂಡನ )ಆರೋಗ್ಯ ತೀರಾ ಹದಗೆಟ್ಟರೆ ಏನು ಮಾಡುವುದು? ನಾನು ಕೆಲಸ ಕಳೆದುಕೊಂಡರೆ ಏನು ಮಾಡುವುದು? ಬದುಕಿನುದ್ದಕ್ಕೂ ಬೇಕಾಗುವಷ್ಟು ಹಣ ನನ್ನ ಬಳಿ ಸಾಕಷ್ಟು ಇದೆಯೇ?  ಅನ್ಯ ಜನರು ನನ್ನನ್ನು ಇಷ್ಟಪಡುವಂತೆ ನಾ ಹೇಗೆ ಇರುವುದು? ಏನು ಮಾಡಿದರೆ ನಾನು ಅಧಿಕ ಖ್ಯಾತಿ, ಕೀರ್ತಿ ಮತ್ತು ಹಣ ಗಳಿಸಬಹುದು? ನಾ ಮಾಡಿದ್ದು ತಪ್ಪಾಯಿತೋ ಏನೋ? ಅನ್ಯರು ನನ್ನನ್ನು ಏಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ? ಹೀಗೆ ಇನ್ನೂ ನೂರಾರು ಅಥವಾ ಸಾವಿರಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಸದಾಕಾಲ ಬಗ್ಗೆ ಬಗ್ಗೆಯಾಗಿ ಮೇಲೇಳುತ್ತಲೇ ಇರುತ್ತವೆ, ಅಲ್ಲವೇ?

ನಮ್ಮ ಅಂತರಂಗದಲ್ಲಿ ನಡೆಯುವ ತುಮುಲ ಮತ್ತು ಹೋರಾಟಕ್ಕೆ ಕಾರಣವಾಗುವುದು ಈ ರೀತಿಯ ಹತ್ತು ಹಲವಾರು ಪ್ರಶ್ನೆಗಳೇ ಅಲ್ಲವೇ? ನಾವು ಹಿಂದೆ ಯಾವ ರೀತಿಯ ಕೆಲಸವನ್ನು ಮಾಡಿದ್ದೇವೆ, ನಾವು ನಮ್ಮನ್ನೇ ಸುಧಾರಿಸಿಕೊಳ್ಳಲು ಯಾವ ರೀತಿಯ ಗಟ್ಟಿ ಪ್ರಯತ್ನವನ್ನು ಮಾಡಿದ್ದೇವೆ ಎನ್ನುವುದನ್ನು ಪರಿಗಣಿಸದೆಯೇ ಬಡವ-ಬಲ್ಲಿದ, ಯುವಕ- ಮುದುಕ, ಹೆಣ್ಣು-ಗಂಡು ಎಂಬ ಬೇಧವಿಲ್ಲದೆಯೇ  ಪ್ರತೀ ಮನುಷ್ಯನ ಮನಸ್ಸುಗಳಲ್ಲಿ ಈ ರೀತಿಯ ಪ್ರಶ್ನೆಗಳು ಸದಾಕಾಲ ಉದ್ಭವವಾಗುತ್ತಲೇ ಇರುತ್ತವೆ ಮತ್ತು ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ನಿರಂತರ ಪ್ರಯತ್ನವೂ ನಡೆಯುತ್ತಿರುತ್ತದೆ.  ಹೀಗೆ, ಸರಿ-ತಪ್ಪುಗಳ ನಡುವೆ, ಒಳಿತು- ಕೆಡುಕುಗಳ ನಡುವೆ ನಡೆಯುವ ಒಳಗಿನ ಯುದ್ಧ ಅಥವಾ ಹೋರಾಟ ನಮ್ಮನ್ನು ಛಿಧ್ರಗೊಳಿಸುತ್ತದೆ, ಜಿಗುಪ್ಸೆ ಹುಟ್ಟಿಸುತ್ತದೆ, ಖಿನ್ನರಾಗಿಸುತ್ತದೆ ಮತ್ತು ನಮ್ಮಿಂದ ದೂರವಿರುವ ಮತ್ತು  ಸಿಕ್ಕರೂ ತಾತ್ಕಾಲಿಕವೆನ್ನಿಸುವ ಮಾನಸಿಕ  ಶಾಂತಿ ಮತ್ತು  ಆನಂದವನ್ನು ಹುಡುಕುವಂತೆ ಮಾಡುತ್ತದೆ.

ಇದು ಒಬ್ಬಿಬ್ಬರ ಕಥೆಯಲ್ಲ. ಇದು ಇಡೀ ಮನುಕುಲದ ಕಥೆ. ಸದಾಕಾಲ ತನ್ನ ಅಂತರಂಗದಲ್ಲಿ ತನ್ನದೇ ವಿಷಯಗಳ ತುಮುಲಗಳಲ್ಲಿ ಮತ್ತು ದ್ವಂದ್ವಗಳಲ್ಲಿ ಹೋರಾಡದೆ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ನಮಗೆ ಸಿಗಲಾರ. ಒಂದಾದಮೇಲೆ ಒಂದರಂತೆ ಆಲೋಚನೆಗಳ ಮಹಾಪೂರವೇ ಹರಿಯುತ್ತಿರುತ್ತದೆ, ನಮ್ಮ ಮನಸ್ಸುಗಳಲ್ಲಿ. ಈ ಆಲೋಚನೆಗಳು ನಮ್ಮನ್ನು ಕುರಿತಾದದ್ದೇ ಆಗಿರದೆ ನಮ್ಮ ಮನಸ್ಸಿಗೆ ಬರುವ ಎಲ್ಲಾ ಹೊರಗಿನ ವ್ಯಕ್ತಿಗಳು, ವಿಷಯಗಳು ಮತ್ತು ವಿಚಾರಗಳದ್ದೂ ಆಗಿರುತ್ತದೆ.  ಅವನೇಕೆ ಹಾಗೆ ಮಾಡಿದ? ಅವನೇಕೆ ನನಗೆ ಅವಮಾನ ಮಾಡಿದ? ನಾನು ವೈದ್ಯನೋ, ಎಂಜಿನೀಯರೋ ಆಗುವುದಕ್ಕೆ ನನ್ನ ತಂದೆ ನನ್ನನ್ನು ಏಕೆ ತಡೆದರು? ನನ್ನ ತಾಯಿ ನನ್ನನ್ನು ಈ ಹುಡುಗ/ಹುಡುಗಿಯನ್ನು ವಿವಾಹವಾಗಲು ಏಕೆ ಒತ್ತಾಯ ಮಾಡಿದರು? ನನಗಿಂತ ನನ್ನ ಒಡಹುಟ್ಟಿದವರಿಗೆ ನನ್ನ ತಂದೆ ತಾಯಿಯರು ಏಕೆ ಹೆಚ್ಚು ಗಮನವನ್ನು ನೀಡುತ್ತಾರೆ? ನನ್ನ ಸ್ನೇಹಿತ ಇಷ್ಟು ಸಣ್ಣ ವಯಸ್ಸಿನಲ್ಲಿ ' ಕ್ಯಾನ್ಸರ್ ' ಗೆ ಏಕೆ ತುತ್ತಾದ? ಅಯ್ಯೋ ಈ ರೀತಿಯ ಪ್ರಶ್ನೆಗಳಿಗೆ ಅಂತ್ಯವುಂಟೆ? 

ಈ ರೀತಿಯ ಪ್ರಶ್ನೆಗಳು ಉಂಟುಮಾಡುವ ಅಂತರಂಗದ ಯುದ್ಧವನ್ನು ತಡೆಯುವುದು ಹೇಗೆ? ಮಾನಸಿಕ ಸಮನ್ವಯ ಮತ್ತು ಶಾಂತಿಯನ್ನು ಸಾಧಿಸುವುದು ಹೇಗೆ? ನಮ್ಮ ಬದುಕು ಹೀಗೆ ಚಿಂತೆ, ಆತಂಕ, ಅಪಾರ್ಥ, ಅಪರಾಧಿ ಭಾವ, ಕೋಪ, ಜಿಗುಪ್ಸೆ, ದ್ವೇಷ, ಭಯ ಮತ್ತು ದುರಾಸೆಗಳಿಂದ ತುಂಬಿದೆ.  ಇದು ಸಾಮನ್ಯವಾಗಿ ಎಲ್ಲರ ಮನೋಭಾವವೂ ಹೌದೋ ಅಥವಾ ನಾವು ಮಾತ್ರ ಈ ರೀತಿಯ ಆಲೋಚನೆಗಳಿಂದ ತುಂಬಿದ್ದೇವೋ? ಇದಕ್ಕೆ ಪರಿಹಾರವುಂಟೆ? ಈ ಎಲ್ಲಾ ದ್ವಂದ್ವ ಮತ್ತು ಅಂತರಂಗದ ಹೋರಾಟದಿಂದ ಮುಕ್ತರಾಗಿ ಮಾನಸಿಕ ಶಾಂತಿಯನ್ನು ಪಡೆಯುವ ಮಾರ್ಗವಾವುದಾರೂ ಉಂಟೆ? ಈ ರೀತಿಯ ಪ್ರಶ್ನೆಗಳು ಸಾಮಾನ್ಯವಾಗಿ ಪ್ರಮಾಣ ಬೇಧವಿದ್ದರೂ ಎಲ್ಲರ ಮನಸ್ಸುಗಳಲ್ಲೂ ಉದ್ಭವವಾಗುತ್ತಲೇ ಇರುತ್ತದೆ.

ಮಾರ್ಗವಿದೆ, ಆದರೆ ಅದು ಸುಲಭವಲ್ಲ. ಬದುಕಿನಲ್ಲಿ ಒಳ್ಳೆಯದಾವುದೂ ಸುಲಭವಾಗಿ ದಕ್ಕುವುದಿಲ್ಲ. ಕೆಟ್ಟದ್ದು ಅಥವಾ ದುಷ್ಟದ್ದು ಬಹಳ ಸುಲಭವಾಗಿ ಬಂದುಬಿಡುತ್ತದೆ. ಲಾಭ ಬರಲು ಬಹಳ ವಿಳಂಬವಾಗುತ್ತದೆ, ಆದರೆ ನಷ್ಟ ಒಂದೇ ಘಳಿಗೆಯಲ್ಲಾಗಿಬಿಡಬಹುದು.  ಜಯಕ್ಕಿಂತ ಸೋಲು ಶೀಘ್ರವಾಗಿ ಆಗುತ್ತದೆ.  ಖಾಯಿಲೆ ಬೀಳುವುದು ಬಹಳ ಸುಲಭ ಆದರೆ ಸಂಪೂರ್ಣ ಗುಣಮುಖವಾಗುವುದು ನಿಧಾನದ ಪ್ರಕ್ರಿಯೆ.  ನ್ಯಾಯಯುತವಾಗಿ ದುಡಿದು ಕೋಟ್ಯಾಧಿಪತಿಯಾಗುವುದಕ್ಕೆ ದಶಮಾನಗಳೇ ಬೇಕಾಗುತ್ತದೆ. ಆದರೆ ವಾಮಮಾರ್ಗದಲ್ಲಿ ಕೇವಲ ಐದು ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಿಬಿಡಬಹುದುದು. ಹಾಗಾಗಿ ಬದುಕಿನಲ್ಲಿ ಒಳಿತಿಗಿಂತ ಕೆಡುಕು ಶೀಘ್ರವಾಗಿ ಕೆಲಸಮಾಡುತ್ತದೆ.

ಮನವನ್ನು ಶಾಂತಗೊಳಿಸಲು ಮತ್ತು ಅಂತರಂಗದ ಯುದ್ಧವನ್ನು ಕಡಿಮೆಮಾಡಲು ಅಥವಾ ನಿಲ್ಲಿಸಲು, ನಮಗೆ ಧೈರ್ಯ, ಭರವಸೆ ಮತ್ತು ಉತ್ತೇಜನವೀಯುವ, ಒಂದು ದಾರಿ ದೀಪದ ಅವಶ್ಯಕತೆಯಿದೆ.  ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಧಾರ ಸಿಗುತ್ತದೆ. ಕೆಲವರಿಗೆ ಕೆಲಸದಲ್ಲಿ, ಕೆಲವರಿಗೆ ಹವ್ಯಾಸದಲ್ಲಿ, ಕೆಲವರಿಗೆ ವ್ಯಸನದಲ್ಲಿ ಮತ್ತೆ ಕೆಲವರಿಗೆ ಧ್ಯಾನ, ಪ್ರಾರ್ಥನೆ, ಪೂಜೆ ಮತ್ತು ಆಧ್ಯಾತ್ಮದಲ್ಲಿ.  ಒಂದು ಶಾಂತ ಸ್ಥಿತಿಯನ್ನು ಕಾಣಲು ನಂಬಿಕೆ ಮತ್ತು ಒಪ್ಪಿಕೊಳ್ಳುವಿಕೆ ಬೇಕು. ನಮ್ಮೆಲ್ಲಾ ಅಂತರಂಗದ ಯುದ್ಧಗಳು ಕೇವಲ ನಮ್ಮ ನಂಬಿಕೆಯ ಮತ್ತು ವಿಶ್ವಾಸದ ಕೊರತೆಯಿಂದ ಉಂಟಾಗುತ್ತದೆ. ಬದುಕಿನಲ್ಲಿ ಸ್ವಚ್ಛಂದವಾಗಿ ಹಾರಾಡಲು ನಂಬಿಕೆ ಮತ್ತು ಒಪ್ಪಿಕೊಳ್ಳುವಿಕೆಗಳೆಂಬ ಎರಡು ರೆಕ್ಕೆಗಳು ಇದ್ದರೆ ಸಾಕು. ಅದರ ಬದಲು, ಭಯ ಕಾತರತೆ, ಅತಿಯಾಸೆ, ಅಪರಾಧೀ ಭಾವ ಮುಂತಾದ ರೆಕ್ಕೆಗಳನ್ನು ಕಟ್ಟಿಕೊಂಡರೆ ಹಾರಾಟ ದಿಕ್ಕುತಪ್ಪುತ್ತದೆ.

ದೇವರು, ಸೃಷ್ಟಿ, ಪರಮಾತ್ಮ, ಪ್ರಕೃತಿ, ಅಗೋಚರ ಶಕ್ತಿ ಹೀಗೆ ನೀವು ಅದನ್ನು ಯಾವ ಹೆಸರಿನಿಂದಾಗಲೀ ಕರೆಯಿರಿ, ಅದರಲ್ಲಿ ಸಂಪೂರ್ಣ ನಂಬಿಕೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಭಾವವನ್ನು ಒಪ್ಪಿಕೊಳ್ಳುವಿಕೆಯೊಂದೇ ನಮ್ಮೆಲ್ಲಾ ಗೊಂದಲಗಳಿಂದ ಹೊರಬರುವ ನಮಗಿರುವ ಏಕೈಕ  ಮಾರ್ಗ. ಹಿಂದೆ ನಡೆದ, ಇಂದು ನಡೆಯುತ್ತಿರುವ ಮತ್ತು ಮುಂದೆ ನಡೆಯುವುದೆಲ್ಲವೂ, ಕೋಟ್ಯಂತರ ವರ್ಷಗಳಿಂದ ಇರುವ ಆ ದೈವೀ ವಿನ್ಯಾಸದ ಪ್ರಕಾರ ನಡೆಯುತ್ತಿದೆ ಮತ್ತು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಬೇಕು.  ಇಲ್ಲಿರುವುದೆಲ್ಲವೂ ಆ ದೈವೀ ಶಕ್ತಿಯ ಪ್ರಕಟರೂಪವಷ್ಟೇ. ನಾವು, ಅದು ಬೇರೆಯ ರೀತಿಯಲ್ಲಿರಬೇಕೆಂದು ಬಯಸುವುದು, ಆ ದೈವಕ್ಕೇ ಸವಾಲೆಸೆದಂತೆ ಆಗುತ್ತದೆ. ಇರುವುದಕ್ಕಿಂತ ಬೇರೆಯದನ್ನೇ ಬಯಸಿದರೆ ನಾವು ಸಕಲವನ್ನೂ ಸೃಷ್ಟಿಸಿರುವ ಆ ಪರಮಾತ್ಮನೊಡನೆ ಯುದ್ಧಕ್ಕೆ ನಿಂತ ಹಾಗಾಗುತ್ತದೆ. ಖಂಡಿತವಾಗಿಯೂ ನಾವು ಆ ಯುದ್ಧದಲ್ಲಿ ಜಯಿಸಲು ಆಗುವುದೇ ಇಲ್ಲ.  ಪರತತ್ವದಲ್ಲಿ ದೃಢ ಮತ್ತು ಶುದ್ಧ ನಂಬಿಕೆಯಿದ್ದರೆ ಆಗ ಸಮಸ್ಯೆಗಳನ್ನು ಸಮಸ್ಯೆಗಳಂತೆ ಅಲ್ಲದೆ ದೈವ ನಿಯಮಿತಗಳೆಂದು ಪರಿಗಣಿಸಲು ಸಾಧ್ಯ.  ಬೇರೆಬೇರೆಯವರ ಅದೃಷ್ಟ ಭಿನ್ನಭಿನ್ನವಾಗಿ ಇರುತ್ತದೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಆದರೆ ಒಂದು ಬಾರಿ, ನಮ್ಮ ಬದುಕು ನಮ್ಮಿಂದಲೇ ನಡೆಸಲ್ಪಡುವುದಿಲ್ಲ, ಅದನ್ನು ನಡೆಸುವುದು ಒಂದು ಅಗೋಚರ ದೈವೀ ಶಕ್ತಿ.  ನಾವು ಕೇವಲ ಆ ದೈವ ತನ್ನ ಕಾರ್ಯಗಳನ್ನು ನಡೆಸಲು ಬಳಸುವ ಉಪಕರಣಗಳು ಮಾತ್ರ, ಎಂಬ ವಾದವನ್ನು ಒಪ್ಪಿಕೊಂಡರೆ, ಸೋಲು ಮತ್ತು ಗೆಲುವುಗಳಿಗೆ ನಾವು ಭಾಧ್ಯರಾಗದೆ, ನಮ್ಮ ಮನಸ್ಸು ನಿರಾಳವಾಗಿ ನಮಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ.  ಆಗ ನಮ್ಮೊಳಗೇ ' ಆಹಂ '  ಕರಗಿ, ನಾವು ಅನುಭವಿಸುತ್ತಿದ್ದ ಸೋಲು ಗೆಲುವಿನ ಭಾಧ್ಯತೆಯ ಹೊರೆ ಕಡಿಮೆಯಾಗುತ್ತದೆ.  ನಮ್ಮಲ್ಲಿ ಅಹಂಕಾರ ನಶಿಸಿದರೆ ಆಗ ನಮ್ಮ ' ಅಂತರಂಗದಲ್ಲಿ ನಡೆಯುವ ಯುದ್ಧ ನಿಲ್ಲುತ್ತದೆ. ಮನಸ್ಸು ಶಾಂತವಾಗಿ ಆನಂದದ ನೆಲೆಯಾಗುತ್ತದೆ. ದ್ವಂದ್ವ ಮತ್ತು ವೈರುಧ್ಯವನ್ನು
ನಿವಾರಿಸಿಕೊಳ್ಳುವುದು ಹೇಗೆ?


ಅವುಗಳನ್ನು ನಿವಾರಿಸಲು ಪ್ರಯತ್ನಿಸಬಾರದು; ಪ್ರೀತಿ, ದಯೆ ಮತ್ತು ನಮ್ರತೆಯಿಂದ ಅವುಗಳನ್ನು ತಿದ್ದಿ, ರೂಪಿಸಿ, ಸರಿಪಡಿಸಲು ಸಮಯ ನೀಡಬೇಕು. ಆ ಸಮಯದಲ್ಲಿ ನಮ್ಮ ಜೀವನದಲ್ಲಿ ಬೇರೆಯೇ ಒಂದು ಶಕ್ತಿಯು ಹರಿಯುತ್ತದೆ. ಅಂತಹ ಶಕ್ತಿಗಳಲ್ಲಿ ಎರಡು ವಿಧಗಳಿವೆ - ಒಂದು, ತನ್ನ ಅಸ್ತಿತ್ವಕ್ಕೆ ಕಾರಣಗಳನ್ನು ಮತ್ತು ಗುರಿಗನ್ನಿಟ್ಟುಕೊಂಡಂತಹ ನಮ್ಮ ಅಹಂಕಾರವನ್ನು ಬೆಂಬಲಿಸುವ ಒಂದು ಸಾಮಾನ್ಯ ಶಕ್ತಿ ಮತ್ತು ಮತ್ತೊಂದು ನಮ್ಮ ಅಹಂಕಾರವನ್ನು ಕರಗಿಸಿ ನಾಶಮಾಡುವ ದೈವೀ ಶಕ್ತಿ. ಈ ಶಕ್ತಿ ನಮ್ಮ ಬದುಕಿಗೆ ಒಂದು ಹೊಸ ಆಯಾಮವನ್ನು ನೀಡುತ್ತದೆ. ಅಂತಹ ಶಕ್ತಿಯ ಒಳಹರಿವಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ಸಕಾರಾತ್ಮಕವಾಗಿ ಮುನ್ನಡೆಯಬೇಕು ಮತ್ತು ಅದರ ಹಾದಿಯಲ್ಲಿ ನಿರಂತರವಾಗಿರಬೇಕು. ನಮ್ಮಲ್ಲಿ ಮೂರು ಕೇಂದ್ರಗಳುಂಟು. ಅವುಗಳೇ ದೇಹ, ಭಾವನೆ ಮತ್ತು ಬುದ್ಧಿಶಕ್ತಿ. ಈ ಮೂರೂ ಕೇಂದ್ರಗಳು ನಮ್ಮ ನಿತ್ಯದ ಜೀವನದಲ್ಲಿ ಸಮನ್ವಯಗೊಂಡಾಗ ನಮ್ಮೊಳಗೇ ಒಂದು ದೈವೀಶಕ್ತಿಯು ಪ್ರವಹಿಸಿ ಅದ್ಭುತ ರೀತಿಯಲ್ಲಿ
ಬದಲಾವಣೆಗಳು ಕಂಡುಬರುತ್ತವೆ. ಆಗ ಜಗತ್ತೆಲ್ಲಾ ನಮಗೆ ಸುಂದರವಾಗಿ ಕಾಣಲಾರಂಭವಾಗುತ್ತದೆ.


ಮನಸ್ಸನ್ನು ನಿರಾಳವಾಗಿಸಿದರೆ ದೇಹ ಶಾಂತವಾಗುತ್ತದೆ. ದೇಹ ಶಾಂತವಾದರೆ ದೇಹಕ್ಕನುಕೂಲವಾದ ರಸಗಳ ಉತ್ಪತ್ತಿಯಾಗಿ ಆರೋಗ್ಯ ಉಂಟಾಗುತ್ತದೆ. ಹಾಗಲ್ಲದೆ, ಸದಾ ಚಿಂತೆಯಲ್ಲಿ ಮುಳುಗಿರುವ ಮನಸ್ಸು ದೇಹವನ್ನು ದಣಿಸುತ್ತಾ ಅನಾರೋಗ್ಯದ ಆಗರವಾಗುತ್ತದೆ. ಹಾಗಾಗಿ ಮನಸ್ಸನ್ನು ನಿರಾತಂಕಗೊಳಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಅತೀ ಅವಶ್ಯಕ.

ಆತಂಕದಿಂದ ಕೂಡಿದ ಮನಸ್ಸು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಯಾವುದೇ ಕೆಲಸವನ್ನು ಮಾಡುವಾಗಲೂ ನಿರಾತಂಕವಾಗಿರುವುದು ಬಹಳ ಅವಶ್ಯಕ. "ಸಂತೋಷವಾಗಿರಬೇಕಾದರೆ, ಸಂತೋಷವಾಗಿರಬೇಕು"  ಅಷ್ಟೇ. ವಸ್ತು ವಿಷಯ ಅಥವಾ ವ್ಯಕ್ತಿಗಳಿಂದ ಸಂತೋಷ ಸಿಗುತ್ತದೆ, ಆಗ ನಾನು ಸಂತೋಷವಾಗಿರುತ್ತೇನೆ ಎಂದೋ ಅಥವಾ ಇಂತಿಂತಹದ್ದು ಸಿಕ್ಕರೆ ನನಗೆ ಸಂತೋಷ ಸಿಗುತ್ತದೆ ಎಂದೋ ಭಾವಿಸಿದರೆ, ಅದು ಕೇವಲ ಭ್ರಮೆ ಅಷ್ಟೇ!!!! ಹಾಗೆ ಅವುಗಳು ಸಿಗದಿದ್ದರೆ ನಮಗೆ ಕೋಪಬರುತ್ತದೆ. ಆ ಕೋಪ, ಅವುಗಳನ್ನು ಪಡೆಯಲಾಗದ ನಮ್ಮ ಮೇಲೆಯೇ ಆಗಿರಬಹುದು ಅಥವಾ ನಾವು ದೂಷಿಸುವ ಅನ್ಯರ ಮೇಲಾಗಿರಬಹುದು. ಆದರೆ ಕೋಪ ಯಾವ ಕಾರಣಕ್ಕೆ ಬಂದರೂ, ಯಾರ ಮೇಲೆ ಬಂದರೂ,  ಅದು ಮೊದಲು ಭಾದಿಸುವುದು ಕೇವಲ ನಮ್ಮ ಮನಸ್ಸನ್ನು ಮತ್ತು ತತ್ಕಾರಣವಾಗಿ ನಮ್ಮ ದೇಹದ  ಆರೋಗ್ಯವನ್ನು. ಹಾಗಾಗಿ ಸಂತೋಷವಾಗಿರಬೇಕು. ನಗುನಗುತ್ತಾ ಸಂತೋಷವಾಗಿರಬೇಕು. ಅದೇ ಆನಂದಕ್ಕೆ ಸಿದ್ಧ ಔಷದಿ.  


ನಾವು ಸದಾಕಾಲ ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳ ಬಗ್ಗೆ ಜಾಗರೂಕರಾಗಿರಬೇಕು. ಪ್ರಯತ್ನಪೂರ್ವಕವಾಗಿ ನಮ್ಮೊಳಗೇ ಉಂಟಾಗುವ ಋಣಾತ್ಮಕ ಆಲೋಚನೆಗಳನ್ನು ಹತ್ತಿಕ್ಕಿ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲರಲ್ಲೂ ಪ್ರೀತಿಯಿಂದ ಇಡೀ ಜಗತ್ತನ್ನೇ
ಅಪ್ಪಿಕೊಳ್ಳುವಂತಹ ಮನೋಭಾವ ನಮ್ಮದಾಗಬೇಕು. 


ಆದರೆ ಈ ಧನಾತ್ಮಕ ಚಿಂತನೆ ಅಥವಾ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವದೇ ಸಮಸ್ಯೆ. ಇದಕ್ಕೆ ನಮ್ಮ ಪೂರ್ವಜರು ನಮಗೆ ಅನೇಕಾನೇಕ ಮಾರ್ಗಗಳನ್ನು ತೋರಿದ್ದಾರೆ. ಭಕ್ತಿ, ಧ್ಯಾನ, ಸೇವೆ, ಅಧ್ಯಯನ, ಶ್ರದ್ಧೆ, ತ್ಯಾಗ ಮುಂತಾದ ಗುಣಗಳನ್ನು ಪ್ರಯತ್ನಪೂರ್ವಕವಾಗಿ ನಮ್ಮಲ್ಲಿ ಬೆಳೆಸಿಕೊಂಡರೆ ಆಗ ಋಣಾತ್ಮಕ ಗುಣಗಳಾದ ದ್ವೇಷ, ಅಸೂಯೆ, ಕೋಪ ಮುಂತಾದವುಗಳು ನಮ್ಮನ್ನು ತೊರೆದು ಹೋಗುತ್ತವೆ.  ನಮ್ಮ ಬದುಕಿನಲ್ಲಿ ನಡೆಯುವ ವಿದ್ಯಮಾನಗಳೇ ನಮಗೆ ಪಾಠ ಕಲಿಸುತ್ತವೆ.   


 ರವಿ ತಿರುಮಲೈ


Wednesday, 7 March 2018

ಆಧ್ಯಾತ್ಮದ ಹಾದಿಯಲ್ಲಿನ ಪಯಣ


ನಿರಂತರ ಒತ್ತಡದ ಜೀವನ,  ಜನರನ್ನು ಶಾಂತಿ ಮತ್ತು ನೆಮ್ಮದಿಯನ್ನು ಹುಡುಕಿಕೊಂಡು ಹಲವಾರು ದಿಕ್ಕುಗಳಿಗೆ ಹೋಗುವಂತೆ ಮಾಡುತ್ತದೆ.  ನಮ್ಮಲ್ಲಿ ಬಹಳಷ್ಟು ಜನರ ಬದುಕೊಂದು ಸುಖ ಮತ್ತು ದುಃಖಗಳ, ಉತ್ಸಾಹ ಮತ್ತು ಖಿನ್ನತೆಗಳ, ನಲಿವು ಮತ್ತು ನೋವಿನ, ಸ್ವಾಭಾವಿಕ ಚಕ್ರವೆಂದು ಒಪ್ಪಿಕೊಂಡೂ ಬಿಡುತ್ತೇವೆ. ಬದುಕಿನ ಇಂತಹ ಎಲ್ಲಾ ವಿಷಮ ಪರಿಸ್ಥಿತಿಗಳನ್ನೂ ನಾವು ಒಗ್ಗಿಕೊಂಡು ಬಿಡುತ್ತೇವೆ. ಬದುಕಿನ ಮತ್ತು ಸಂಸಾರದ ಅನ್ಯ ಜವಾಬ್ದಾರಿಗಳೊಂದಿಗೆ ಬದುಕುವಾಗ, ಎಲ್ಲ ರೀತಿಯ ವಿರೋಧಾಭಾಸಗಳೊಂದಿಗೆ ಜೀವಿಸುವುದು ಅನಿವಾರ್ಯ ಕರ್ತವ್ಯ ಅಥವಾ ನಮ್ಮ ಜವಾಬ್ದಾರಿಯನ್ನುವಂತೆ ಜೀವಿಸುತ್ತೇವೆ. ಯಾರೂ ಬದುಕಿನ  ಸಂಕಷ್ಟಗಳಿಂದಾಗಲೀ ಅಥವಾ ಕರ್ತವ್ಯಗಳಿಂದಾಗಲೀ ಪಲಾಯನ ಮಾಡಲಾಗುವುದಿಲ್ಲ. ನಾವೆಲ್ಲಾ ' ತನ್ನ ಮೂಗಿಗೆ ಮುಳ್ಳು ಚುಚ್ಚಿ ರಕ್ತ ಸುರಿದರೂ ಅದೇ  ಮುಳ್ಳಗಿಡದ ಎಲೆಗಳನ್ನು ತಿನ್ನುವಂತಹ ಒಂಟೆಯಂತೆ' ಬದುಕುತ್ತೇವೆ.  

ಮತ್ತೆ ಹಲವರು, ಮುಖ್ಯವಾಗಿ ಯುವಜನರು ಬದುಕಿನ ಒತ್ತಡಗಳಿಂದ ಹೊರಬರಲು, ಧೂಮಪಾನ, ಸುರಾಪಾನ, ಜೂಜು, ಅತಿಯಾಗಿ ಟಿ ವಿ ನೋಡುವಿಕೆಯಲ್ಲಿ ಮುಳುಗುವುದು ಇತ್ಯಾದಿ ವ್ಯಸನಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಕೆಲವರಂತೂ ಮಧ್ಯಪಾನ ಮತ್ತು ಮಾದಕ ದ್ರವ್ಯಗಳ ವ್ಯಸನಿಗಳಾಗಿ ಅಧೋಗತಿಗೆ ಇಳಿಯುತ್ತಾರೆ. ಇನ್ನು ಮೂರನೆಯ ಗುಂಪಿನ ಜನರಿದ್ದಾರೆ. ಅವರಿಗೆ ಜೀವನದ ಅಥವಾ ಬದುಕಿನ ಒತ್ತಡಗಳನ್ನು ಸಮರ್ಪಕವಾದ ರೀತಿಯಲ್ಲಿ ನಿಭಾಯಿಸಲಾಗದೆ ಮಾನಸಿಕ ಒತ್ತಡ, ಖಿನ್ನತೆ ಮತ್ತು ನರದೌರ್ಬಲ್ಯ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಾರೆ.   

ಬೆರಳೆಣಿಕೆಯಷ್ಟು ಅದೃಷ್ಟಶಾಲಿಗಳು ಬದುಕಿನ ದುರಂತಗಳನ್ನು ಅನುಭವಿಸಿ, ನೊಂದು, ಬದುಕಿನ ಹಿಂಜರಿತಗಳನ್ನು ಅನುಭವಿಸಿ ಹೋರಾಟದ ವ್ಯರ್ಥತೆಯನ್ನು ಮನಗಂಡು ಆಧ್ಯಾತ್ಮದ ಹಾದಿಯಲ್ಲಿ  ನಡೆಯಲುದ್ಯುಕ್ತರಾಗುತ್ತಾರೆ. ಈ ಅವಕಾಶವನ್ನು ಅವರುಗಳು ಪ್ರಾಪಂಚಿಕ ಬಂಧನಗಳಿಂದ ಬಿಡುಗಡೆಯ ಮತ್ತು ಆತ್ಮಜ್ಞಾನಕ್ಕೆ ಸೂಕ್ತಮಾರ್ಗವೆಂದು ಅರಿತು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ.  ಅಂತಹ ಭಾವಗಳು ಒಬ್ಬ ವ್ಯಕ್ತಿಯನ್ನು, ತನ್ನ  ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುವ ಯಾವುದಾದರೂ ಆಶ್ರಮದ ಬಾಗಿಲಿಗೋ ಅಥವಾ ಯಾರಾದರೂ ಸದ್ಗುರುವಿನ ಪಾದತಲಕ್ಕೋ ಕೊಂಡೊಯ್ಯುತ್ತದೆ. ಆದರೆ ಬಹಳಷ್ಟು ಬಾರಿ ಇದು ಸಂಸಾರದಿಂದ ತಾತ್ಕಾಲಿಕ ವಿಮುಖತೆಯಾಗುತ್ತದೆ.  ಒಂದು ಬಾರಿ ತನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ ಶ್ರೀ ರಾಮಕೃಷ್ಣ ಪರಮಹಂಸರು ' ಚಿನ್ನದ ಲಾಲಸೆ ' ಎಂದು ಯಾವುದನ್ನು ಕರೆದರೋ ಹಾಗೆ ಆ ವ್ಯಕ್ತಿ ಮತ್ತೆ ಸಾಂಸಾರಿಕ ಬಂಧನಗಳಲ್ಲಿ ತಾನೇ ಬಂದು ಸಿಲುಕಿಕೊಳ್ಳುತ್ತಾನೆ.  ಹೀಗೆ ಸಾಂಸಾರಿಕ ಸುಳಿಯಲ್ಲಿ ಸಿಲುಕಿಕೊಂಡ ಮನುಷ್ಯ ' ಆತ್ಮದ ಕರೆ ' ಯನ್ನೂ ಮರೆಯುತ್ತಾನೆ ಮತ್ತು ಆ ಸಾಧು ಸತ್ಪುರುಷರ ವಾಣಿಯನ್ನೂ ಸಹ ಮರೆಯುತ್ತಾನೆ.  

ಒಂದು ಕಡೆ ಗುಮಾಸ್ತೆಯ ಕೆಲಸ ಮಾಡುತ್ತಿದ್ದ ಒಬ್ಬ ಜೀವನದ ಜಂಜಾಟದಿಂದ ಜಿಗುಪ್ಸೆಗೊಂಡು ತನ್ನ ಕೆಲಸವನ್ನುಬಿಟ್ಟುಬಿಟ್ಟು ತಾನೆಲ್ಲವನ್ನೂ ತೊರೆದಿದ್ದೇನೆ ಎಂದು ಹೇಳುತ್ತಾ ಸನ್ಯಾಸಿಯಾಗಬೇಕೆಂದು 'ಕಾಶಿ ' ಗೆ ಬಂದು ಸೇರಿದವನ ಕಥೆಯನ್ನು ' ಶ್ರೀ ರಾಮಕೃಷ್ಣ ಪರಮಹಂಸ' ರು ಹೇಳುತ್ತಿದ್ದರು. ಆದರೆ ಅಲ್ಲಿ ಅವನಿಗೆ ಹೆಚ್ಚಿನ ಸಂಬಳದ  ಹೊಸ ಕೆಲಸ ಸಿಕ್ಕೊಡನೆಯೇ ' ಸನ್ಯಾಸಿ'  ಯಾಗುವ ತನ್ನ ಬಯಕೆ ಮತ್ತು ನಿರ್ಧಾರಕ್ಕೆ ತಿಲಾಂಜಲಿ ಕೊಟ್ಟನಂತೆ. ಇದು ತಾತ್ಕಾಲಿಕ ವೈರಾಗ್ಯ. ಸಾಮಾನ್ಯವಾಗಿ ಸತ್ಯವಾಗಿ ವೈರಾಗ್ಯ ಬಂದರೆ ಅದರಿಂದ ಯಾರೂ ವಿಮುಖರಾಗುವುದಿಲ್ಲ. ಆದರೆ ಯಾವುದೋ ಒಂದು ಕಾರಣಕ್ಕೆ ವೈರಾಗ್ಯಬಂದರೆ ಆ ಕಾರಣ ನಿವಾರಣೆಯಾದಕೂಡಲೇ ಆ ವೈರಾಗ್ಯವೂ ಮಾಯವಾಗಿಬಿಡುತ್ತದೆ. ಈ ರೀತಿಯ ವೈರಾಗ್ಯಗಳಲ್ಲಿ ಹಲವಾರು ವಿಧಗಳಿವೆ. ಉದಾ: ಸ್ಮಶಾನ ವೈರಾಗ್ಯ, ಎಂದರೆ ಯಾರಾದರೂ ಸತ್ತಾಗ ' ಆಯ್ಯೋ ಜೀವನವೆಂದರೆ ಇಷ್ಟೆಯೇ? ಸಾವು ಎಲ್ಲಕ್ಕೂ ಒಂದು ಅಂತ್ಯವಲ್ಲವೇ? ಈ ಬದುಕು ಎಷ್ಟೊಂದು ವ್ಯರ್ಥ, ... ಹೀಗೆ ಹಾಲವಾರು ರೀತಿಯ ವೈರಾಗ್ಯದ ಭಾವಗಳು ಬರುತ್ತವೆ. ಆದರೆ ಸತ್ತ ವ್ಯಕ್ತಿಯನ್ನು ಸ್ಮಶಾನದಲ್ಲಿ ಶವಸಂಸ್ಕಾರಮಾಡಿ ಮನೆಗೆ ಬಂದೊಡನೆಯೇ ಅಲ್ಲಿ ಉಂಟಾದ ಎಲ್ಲಾ ವೈರಾಗ್ಯದ ಭಾವಗಳೂ ಮಾಯವಾಗಿಬಿಡುತ್ತವೆ. ಇದೇ ರೀತಿ ಪ್ರಸವ ವೈರಾಗ್ಯ, ಅಭಾವ ವೈರಾಗ್ಯ,  ಕ್ಲಿಷ್ಟತೆಯಲ್ಲಿ ವೈರಾಗ್ಯ, ಇತ್ಯಾದಿ. ಇದು ಕಠೋಪನಿಷತ್ತಿನಲ್ಲಿ ಹೇಳಿದಂತೆ ' ಕತ್ತಿಯ ಮೇಲಿನ ಸಾಮು' 

ಹಾಗಾದರೆ ಪರತತ್ವವನ್ನು ಅರಿಯುವ ಹಾದಿಯಲ್ಲಿರುವ ಕ್ಲಿಷ್ಟತೆಗಳನ್ನು, ಅರಿಯಬೇಕೆಂದು ಬಯಸುವವರಿಗೆ ಏಕಾಗಿ ತಿಳಿಸುವುದಿಲ್ಲ? ಪ್ರಯತ್ನಿಸಿದ ಲಕ್ಷಾಂತರ ಜನರಲ್ಲಿ ಯಾರೋ ಒಬ್ಬರಿಗೆ ಯಶಸ್ಸು ಸಿಗುತ್ತದೆ ಮತ್ತು ಮಿಕ್ಕವರೆಲ್ಲರೂ ಗುರಿಗೆ ಬಹಳ ದೂರವಾಗಿಯೇ ಉಳಿಯುತ್ತಾರೆ ಎನ್ನುವುದಾದರೆ, ಏಕಾಗಿ ಪ್ರತಿಯೊಬ್ಬರನ್ನೂ ಆಧ್ಯಾತ್ಮದ ಸಾಧನೆಯನ್ನು ಮಾಡಲು ಹೇಳುತ್ತಾರೆ? ಇಂತಹ ಪ್ರಶ್ನೆಗಳು ಸಾಧಕನನ್ನು ಆಧ್ಯಾತ್ಮದ ಸಾಧನೆಯ ಆರಂಭದ ದಿನಗಳಲ್ಲಿ ಕಾಡುತ್ತವೆ. ಅವನಿಗೆ ಸಾಧನೆಯ ಅಂತಿಮ ಗುರಿಯೇ ಪರಮಾತ್ಮಾನುಭವ ಮತ್ತು ಆತ್ಮನೆದುರು ನಿಲ್ಲುವುದು ಎಂದೆಲ್ಲಾ ಹೇಳಲಾಗುತ್ತದೆ. ಇದು ಬಹಳ ಸರಳವಾಗಿ ಕಂಡರೂ ಅರ್ಥೈಸಿಕೊಳ್ಳಲು ಮತ್ತು ಸಾಧಿಸಲು ಬಹಳವೇ ಕಷ್ಟತರವಾದ ವಿಷಯ. ಇಂತಹ ಸೂಚನೆಗಳ ಆಂತರ್ಯವನ್ನು ಚಿಂತಿಸುವುದು ಮತ್ತು ಅರಿಯುವುದು ಬಹಳ ಕ್ಲಿಷ್ಟತೆಯಿಂದ ಕೂಡಿರುತ್ತದೆ.  
 
ಆಧ್ಯಾತ್ಮದ ಹಾದಿಯಲ್ಲಿರುವ ಬಹಳಷ್ಟು ಜನರ ಮನೋಭಾವ ಹೇಗಿರುತ್ತದೆಂದರೆ, ವಿಫುಲವಾದ ವ್ಯಾಸಂಗವಿಲ್ಲದೆ, ಆಧ್ಯಾತ್ಮದ ವಿಷಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಮಹಾನ್ ಸಾಧು ಮತ್ತು ಸಿದ್ಧರೊಡನೆ ಪೈಪೋಟಿಗೆ ನಿಂತಂತೆ ಮಾತನಾಡುತ್ತಾರೆ. ಅವರ ಅಹಂಕಾರ ಉಬ್ಬಿ 'ಆತ್ಮನಿಗೆ ಜಯ' 'ಪರಮಾತ್ಮಾನುಭವ' ಮುಂತಾದ ಪದಗಳನ್ನು ಬಳಸುತ್ತಾ ಆ ವಿಚಾರದಲ್ಲಿ ಉಪನ್ಯಾಸಗಳನ್ನೂ ಕೊಡುತ್ತಾ ಆ ವಿಷಯಗಳಲ್ಲಿ ಲೇಖನವನ್ನೂ ಬರೆಯುತ್ತಿರುತ್ತಾರೆ.   

ಆದರೆ ಸಾಧಕನ ಸಾಧನೆಯ ಪ್ರಯಾಣ ಮುಂದುವರೆಯುತ್ತದೆ. ಅದು ಕಷ್ಟಗಳಿಂದ ಕೂಡಿ, ನಯವಾಗಿ ಸಾಗುತ್ತಾ, ಆಗಾಗ ಹೊಸಹೊಸ ಹೊಳಹುಗಳು ಮಿಂಚಿನಂತೆ ಬರುತ್ತಾ, ಮತ್ತೆ ಕತ್ತಲಾವರಿಸಿದಂತೆ ಆಗುತ್ತಾ ಮುಂದುವರೆಯುತ್ತದೆ. ಅಸಂಖ್ಯಾತ ಆಧ್ಯಾತ್ಮಿಕ ವಿಚಾರಗಳಲ್ಲಿ, ಜ್ಞಾನ, ಭಕ್ತಿ, ಕರ್ಮ ಮತ್ತು ರಾಜಯೋಗಕ್ಕೆ ಸಂಬಂಧಿಸಿದ ಯಾವುದಾದರೊಂದು ವಿಚಾರ ಭಾಗಶಃ ಹೊಳೆಯಬಹುದು. 

ಇದು ಸಾಧಕನಿಗೆ ಹೊಸ ಹೊಸ ಆಯಾಮಗಳ ಪರಿಚಯವನ್ನು ಮಾಡಿಸುತ್ತದೆ. ಇಲ್ಲಿ ಸಾಧಕನು, ಸತ್ಯವನ್ನರಿಯುವುದು ಮತ್ತು ಅಸತ್ಯವನ್ನು ತೊರೆಯುವ ಪ್ರವೃತ್ತಿಯಲ್ಲಿ ತೊಡುಗುತ್ತಾನೆ. ಅನ್ಯರು ಕೇವಲ ' ಪೂಜೆ ಅಥವಾ ಭಕ್ತಿ' ಅಥವಾ 'ಸಮಾಜಸೇವೆ' ಅಥವಾ ' ಮನೋನಿಗ್ರಹ' ಮುಂತಾದ  ಏಕಮುಖ ವಿಷಯಗಳಲ್ಲಿ ನಿರತರಾಗಿ ಪರಮಾತ್ಮ ಅಥವಾ ಪರತತ್ವವನ್ನು ಅರಿಯುವ ವಿಷಯಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳಿದ್ದರೂ ಗುರಿಮಾತ್ರ ಒಂದೇ ಆಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಸಾಧಕ ವಿಶಾಲಮನೋಭಾವವನ್ನು ಬೆಳೆಸಿಕೊಂಡು ಆಧ್ಯಾತ್ಮದ ಅಭ್ಯಾಸದಲ್ಲಿ ತೊಡಗಿರುವವರನ್ನೆಲ್ಲರನ್ನೂ ತನ್ನ ಸಹವಾಸಿಗಳೆಂದು ಭಾವಿಸುತ್ತಾನೆ. ಆತ್ಮಜ್ಞಾನವನ್ನು ಪಡೆಯುವ ಪ್ರಯತ್ನದಲ್ಲಿ  ಅವನು ನಾಲ್ಕೂ 'ಯೋಗ ಮಾರ್ಗ' ಗಳನ್ನೂ ಒಳಗೊಂಡಂತಹ ಮಾರ್ಗವನ್ನು ಅನುಸರಿಸುತ್ತಾನೆ. ಅವನ ಹೃದಯದಲ್ಲಿ ' ಮಹಾಯೋಗ ' ದ ಭಾವ ಸ್ಫುರಿಸುತ್ತದೆ. ಇದು ಆಧ್ಯಾತ್ಮಿಕತೆಯನ್ನು ಅರಸುವವನ ಬದುಕಿನಲ್ಲಿ ಒಂದು ಮುಖ್ಯ ಮುಂಹೆಜ್ಜೆಯಾಗುತ್ತದೆ. ಈ ದಿಕ್ಕಿನ ಉಪಕ್ರಮದಲ್ಲಿ ಇರುವ ಅಪಾಯಗಳನ್ನು ಮತ್ತು ಮುಂದೆ ಬರಬಹುದಾದ ಮತ್ತಷ್ಟು ಎಡರು ತೊಡರುಗಳನ್ನು ಎದುರಿಸಲು ಮತ್ತು ಅವುಗಳನ್ನು ದಾಟಿ ಮುನ್ನಡೆಯಲು ಬೇಕಾದ ಶಕ್ತಿಯನ್ನು ಸಾಧಕ ಪಡೆದುಕೊಳ್ಳುತ್ತಾನೆ.  

ಈ  ಸ್ಥಿತಿಯಲ್ಲಿ ಸಾಧಕ ತಾತ್ವಿಕವಾಗಿ 'ಅದ್ವೈತ ವೇದಾಂತ' ದ ತತ್ವವನ್ನು ಅರಿಯಲು ಉಪಕ್ರಮಿಸುತ್ತಾನೆ. ಅಲ್ಪಸ್ವಲ್ಪ ಸಂಶಯಗಳಿದ್ದರೂ ಸರ್ವವ್ಯಾಪಕವಾದ ಪರಮ ಚೈತನ್ಯವನ್ನು ಏಕಮೇವಾದ್ವಿತೀಯವೆಂದು ಒಪ್ಪಿಕೊಳ್ಳಲು ಮುಂದಾಗುತ್ತಾನೆ. ಸಾಧನೆಯ ಈ ಸಮಯದಲ್ಲಿ ಸಾಧಕನಿಗೆ  ಶಾಸ್ತ್ರ ಮತ್ತು ಗುರುವಿನ ಭೋದನೆಯಲ್ಲಿ  ನಂಬಿಕೆ ಮತ್ತು ಶ್ರದ್ಧೆಯ ಮಹತ್ವದ ಅರಿವಾಗುತ್ತದೆ. ಆತ್ಮವನ್ನು ಜ್ಞಾನದ, ಅಸ್ತಿತ್ವದ ಮತ್ತು ಆನಂದದ ಸ್ವರೂಪವೆಂದು ಒಪ್ಪಿಕೊಳ್ಳುತ್ತಾನೆ. ತನ್ನಲ್ಲಿರುವ ಅಜ್ಞಾನವೇ, ಆತ್ಮದ ನಿಜಸ್ವರೂಪವನ್ನು ಅರ್ಥಮಾಡಿಕೊಳ್ಳಲು ತನಗೆ ಅಡ್ಡಿಯಾಗಿದೆ ಎಂದು ಒಪ್ಪಿಕೊಳ್ಳುತ್ತಾನೆ.  ಮನಸ್ಸು ಬುದ್ಧಿಗಳ ಸಂಕೀರ್ಣತೆಗಳ ನಡುವೆ,  ಕೆಲಬಾರಿ ಚೈತನ್ಯವು ತನ್ನ ಸ್ವ-ರೂಪವನ್ನು ಮರೆಮಾಚಿಕೊಳ್ಳುತ್ತದೆ ಎಂದು ಅರಿತುಕೊಳ್ಳುತ್ತಾನೆ.  ಇಂದ್ರಿಯಾನುಭವಗಳೇ ಸತ್ಯ ಎನ್ನುವಂತಹ ಭಾವ ಕೇವಲ ಮಾಯಾ ಜನ್ಯವೆಂದು ಸಾಧಕ ಅರಿತುಕೊಳ್ಳುತ್ತಾನೆ.  

 
ಇಲ್ಲಿಯೂ ಸಹ ದ್ವಂದ್ವಗಳ ಕಾರಣವಾಗಿ ಸಾಧನೆಯ ಕೊರತೆಯಿಂದ ಸೃಷ್ಟಿಯ ಮಾಯೆ ಒಡ್ಡುವ ತಡೆಗಳ ನಡುವೆ ಸಾಧಕ ಸಂಪೂರ್ಣವಾಗಿ ಮಾಯೆಯ ಪರದೆಯನ್ನು ದಾಟಿ ಸತ್ಯವನ್ನು ಅರಿಯಲು ಅಸಮರ್ಥನಾಗುತ್ತಾನೆ. ಅಂತಹ ಸ್ಥಿತಿಯಲ್ಲಿ ಸಾಧಕ ಹೋರಾಡುತ್ತಾ ಸೋಲುತ್ತಾ, ಬೀಳುತ್ತಾ ಮತ್ತೆ ಏಳುತ್ತಾ ಮುಂದೆ ಸಾಗುತ್ತಾನೆ. ಈ ದಿಶೆಯಲ್ಲಿನ ಮುನ್ನಡೆ ಅವನಿಗೆ ಸಾಂತ್ವನ ನೀಡುತ್ತದೆ. ಕಡೆಯವರೆಗೂ ಇರುವ ದ್ವಂದ್ವಗಳ ನಡುವೆಯೂ, ಗುರುವಾಣಿ ಮತ್ತು ನಾಮಜಪದ ಬಲದಿಂದ ಮುನ್ನಡೆಯುವ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ.  ನಿರಂತರ ಸಾಧನೆಯಿಂದ ಸಾಧಕ ಶಾಂತನಾಗುತ್ತಾನೆ. ಅವನ ಮನಸ್ಸು ಬುದ್ಧಿಗಳು ಸಂಶಯಗಳ ಸುಳಿಯಿಂದ ಹೊರಬಂದು, ಶುದ್ಧ ಆತ್ಮಜ್ಞಾನವನ್ನು ಪಡೆದಿಲ್ಲವಾದರೂ ತಾತ್ವಿಕವಾಗಿ ವೇದಾಂತದ ಸೂತ್ರಗಳಿಂದ ದೊರೆತ ಸಾಂತ್ವನದ ಕಾರಣ ಶಾಂತನಾಗುತ್ತಾನೆ. ಅವನ ಈ ಸ್ಥಿತಿಯೇ ಅವನನ್ನು ಆ ಹಾದಿಯಲ್ಲಿ ಮುನ್ನಡೆಸುತ್ತದೆ.  

ಕೆಲ ಸಾಧಕರು ಈ ಘಟ್ಟದಲ್ಲಿ 'ವೇದಾಂತ' ದ ಪಾಂಡಿತ್ಯದ ಸ್ಥರದಲ್ಲಿ ಸ್ಥಗಿತವಾಗಿ ನಿಂತುಬಿಡುತ್ತಾರೆ. ಬೇರೆ ಯಾವುದೇ ವಿಷಯದ ಅಧ್ಯಾಪಕರಂತೆ ಅವರೂ ಸಹ, ತಮ್ಮ ಸುತ್ತುಮುತ್ತಲಿನ ಜನರಿಗೆ ವೇದಾಂತದ ವಿಷಯಗಳ ಭೋದನೆಯನ್ನು ಮಾಡುತ್ತಾರೆ. ಹಾಗಾದಾಗ ಅವರ ವೈಯಕ್ತಿಕ ಸಾಧನೆ ಸ್ಥಗಿತವಾಗುತ್ತದೆ ಅಥವಾ ಹಿನ್ನಡೆಯನ್ನು ಪಡೆಯುತ್ತದೆ. ಕೆಲವರು ಶೀಘ್ರ ಆಧ್ಯಾತ್ಮಿಕ ಸಾಧನೆಗಾಗಿ ಅಥವಾ ರಕ್ತದೊತ್ತಡ, ಮದುಮೇಹ ಅಥವಾ ಮಾನಸಿಕ ಖಿನ್ನತೆಯಂತಹ ಖಾಯಿಲೆಗಳ ಉಪಶಮನಕ್ಕಾಗಿ ' ಯೋಗ' ದ  ಶಾಲೆಯನ್ನು ಆರಂಭಿಸುತ್ತಾರೆ. ಇಲ್ಲಿ ಅವರ ಆಧ್ಯಾತ್ಮಿಕ ಸಾಧನೆ ನಿಂತುಹೋಗುತ್ತದೆ ಮತ್ತು ಅವರುಗಳು ತಮ್ಮ ಸಾಧನೆಯ ಗುರಿಯ ಪಥದಿಂದ ಸರಿದು ಹೋಗುತ್ತಾರೆ.  

ಕೇವಲ ಕೆಲವೇ ಪುಣ್ಯವಂತರು ಪುಸ್ತಕದ ಕಲಿಕೆ ಮತ್ತು ಪ್ರವಚನಗಳಿಗಿಂತ, ಶಾಂತ ಸಾಧನೆಯ ಮಹತ್ವವನ್ನು ಅರಿತುಕೊಳ್ಳುತ್ತಾರೆ. ಅಂತಹವರು ತಮ್ಮ ನಂಬಿಕೆ, ಶ್ರದ್ಧೆ ಮತ್ತು ಪ್ರಯತ್ನವನ್ನು ಶಾಸ್ತ್ರ ಮತ್ತು ಗುರುವಿನ ಭೋದನೆಯ ಮೂಲಕ ಆತ್ಮಜ್ಞಾನವನ್ನು ಪಡೆಯಲು ವಿನಿಯೋಗಿಸುತ್ತಾರೆ.  ಅಂತಹ ಸಾಧಕರು  ಸಂಯಮ, ತ್ಯಾಗ, ಮನೋ ನಿಗ್ರಹ ಮತ್ತು ಸ್ವಾರ್ಥರಹಿತ ಸೇವೆಯಿಂದಾಗಿ ಆತ್ಮಾನಂದವನ್ನು ಅನುಭವಿಸುತ್ತಾ ತಾವೂ ಸಹ ' ಶುದ್ಧಾತ್ಮ ' ರಾಗುತ್ತಾರೆ.   ಸಾಧನೆಯ ಹಾದಿ ಬಹಳ ಕಠಿಣವಾದದ್ದು. ಆದರೆ ಒಂದುಬಾರಿ ಆ ದಾರಿಯಲ್ಲಿ ನಡೆದು ಅದರ ಅನುಭವಾಮೃತವನ್ನು ಸವಿದವರಿಗೆ ಈ ಜಗತ್ತಿನ ಅನ್ಯವಿಷಯಗಳಲ್ಲಿ ಕಿಂಚಿತ ಆಸಕ್ತಿಯೂ ಇಲ್ಲದೆ ಅವರು ಈ ಭಾವ ಬಂಧನದಿಂದ ಮುಕ್ತರಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. 
 

ರವಿ ತಿರುಮಲೈ