Sunday, 4 September 2016

ಕಣ್ಣ ಹನಿಗಳು



ಜಾರಿ ಬೀಳುವ ಕಣ್ಣ ಹನಿಗಳ ತಡೆದು
'ನಿಲ್ಲಿ ನೀವೇಕೆ ಬಂದಿರೆಂದು' ಕೇಳಲು
' ಮೂರ್ಖ ನಮಗೆ ಜನ್ಮವಿತ್ತ ನಿನ್ನ
ದುಃಖವನ್ನು ಕೇಳು ' ಎಂದಿತು.

' ದುಃಖವೇ ನೀನೇಕೆ ಬಂದೆ'
ಎಂದದನು ಕೇಳಲು, ' ನಿನ್ನ ಬೇಸರವೇ
ನನಗೆ ತಾಯಿ, ನೀನದಕೇಳು ' ಎನ್ನಲು
ನಾ ಮುಂದುವರೆದು

'ಹೇ ಬೇಸರವೇ, ನೀನೇಕೆ ಆದೆ '
ಎಂದು ಕೇಳಲು ' ನಿನ್ನ ನಿರಾಸೆಯೇ
ನನ್ನಸ್ಥಿತ್ವಕ್ಕೆ ಕಾರಣವಲ್ಲವೇ?' ಎಂದಿತು

ಕೈಗೂಡದ ಆಸೆಯನ್ನು' ಆಸೆ ನಿರಾಸೆಯಾದದ್ದು'
ಹೇಗೆ ಎಂದು ವಿಚಾರಿಸೆ, 'ತೃಪ್ತಿಯಿಲ್ಲದ ನಿನಗೆ '
ಬೇರೆ ಫಲವಿಲ್ಲವಲ್ಲ, ಎಂದಿತು. ಮನವ
ತೃಪ್ತನಾಗಿಸಲು ಒಳಹೊಕ್ಕೆ,

ಸಿಕ್ಕುಸಿಕ್ಕಾದ, ಗೋಜಲುಗೋಜಲಾದ
 ಮನದ ಪದರಗಳಲ್ಲಿ ನಾನೂ ಸಿಕ್ಕಿಕೊಂಡು
ತೊಳಲಾಡುತ್ತಿದ್ದೇನೆ ಪರದಾಡುತ್ತಿದ್ದೇನೆ.
ಮುಕ್ತಿ ಎಂದೋ ಆ ದೇವರೇ ಬಲ್ಲ.

ರವಿ ತಿರುಮಲೈ

Sunday, 19 June 2016

ಹೀಗೂ ಕೆಲವರು ಇದ್ದರು


ಚಿಂತಾಮಣಿಯಲ್ಲಿ ತಹಸೀಲ್ದಾರ್ ಆಗಿದ್ದ ಶ್ರೀನಿವಾಸ ಐಯ್ಯಂಗಾರ್ ಬಹಳ ಶಿಸ್ತಿನ ಮನುಷ್ಯ. ಅದೇ ತಾನೇ ಮುಗಿದ ಎರಡನೇ ವಿಶ್ವ ಮಹಾಯುದ್ಧದ ಪರಿಣಾಮವಾಗಿ ಎಲ್ಲೆಲ್ಲೂ ಬಡತನ. ಗಾಯದ ಮೇಲೆ ಬರೆ ಎಳೆದಂತೆ 'ಬರ 'ದ ಭೀಕರ ಕರಿ ಛಾಯೆ. ಆ ಸಮಯದಲ್ಲಿ ಎಲ್ಲೆಲ್ಲೂ ಹಸಿವಿನ ಹಾಹಾಕಾರವನ್ನು ಹತ್ತಿಕ್ಕಲು ಬೀದಿಗೊಂದು 'ಗಂಜೀ ಕೇಂದ್ರ' ತೆರೆಯಲ್ಪಟ್ಟಿತ್ತು. ಸ್ಥಳೀಯ ತಹಸೀಲ್ದಾರರಿಗೆ ಎಲ್ಲ ಕಡೆಯೂ ಸಮರ್ಪಕವಾಗಿ ಗಂಜಿ ವಿತರಣೆಯಾಗುತ್ತಿದ್ದೆಯೇ ಎಂದು ನೋಡುವ ಉಸ್ತುವಾರಿ.

ಹೀಗಿರುವಾಗ ಒಂದು ದಿನ ಮುಂಜಾನೆ ೫ ಗಂಟೆಗೆ ಮನೆ ಬಿಟ್ಟು, ಕುದುರೆ ಹತ್ತಿ ಸುತ್ತಮುತ್ತಲ ಹಳ್ಳಿಗಳನ್ನು ಪರಿವೇಕ್ಷಿಸಲು ಹೊರಟರು.  ಎಲ್ಲೂ ಕೊರತೆಯಿಲ್ಲದಂತೆ ಗಂಜಿ ವಿತರಣೆಯಾಗುತ್ತಿದೆಯೇ ಎಂದು ವಿಚಾರಿಸಿ, ಸರಿ ಸುಮಾರು ೧೧ ಗಂಟೆಗೆ ಚಿಂತಾಮಣಿಗೆ ಬಂದು ಊರೆಲ್ಲ ಒಂದು ಗಸ್ತು ಹೊಡೆದು, ಮನೆಗೆ ಹಿಂತಿರುಗಿದರು. ಸ್ನಾನ ಸಂಧ್ಯಾವಂದನೆ ಮುಗಿಸಿ ದೇವರ ಪೂಜೆಯಾದ ನಂತರ ಊಟಕ್ಕೆ ಕುಳಿತಾಗ, ಎಲೆಯಲ್ಲಿ ಮಲ್ಲಿಗೆಯಂತೆ ಅರಳಿ ಕುಳಿತಿರುವ 'ನೆಲ್ಲೂರು ಸಣ್ಣ ' ಅಕ್ಕಿಯ ಅನ್ನದ ಗೋಪುರ ನೋಡಿದಾಕ್ಷಣ ಹೌಹಾರಿದರು.

" ಲಕ್ಷ್ಮೀ " ಎಂದು ತಮ್ಮ ಪತ್ನಿಯನ್ನು ಕರೆದರು. ಆ ಕರೆಗೆ ಹೆದರಿ ಹೌಹಾರಿ ಅಡುಗೆ ಮನೆಯಿಂದ ಓಡಿಬಂದ ಹೆಂಡತಿಯನ್ನು ಕುರಿತು " ಎಲ್ಲಿಯದು ಈ ಅಕ್ಕಿ" ಎಂದು ಗುಡುಗಿದರು. ತಡವರಿಸುವ ದನಿಯಲ್ಲಿ ಆಕೆ '' ಪೇಟೆ ಅಂಗಡಿ ರಂಗನಾಥ ಶೆಟ್ಟರು ೩ ಕೆ.ಜಿ ಅಕ್ಕಿ ಕಳುಹಿಸಿ ಕೊಟ್ಟಿದ್ದರು"ಎಂದ ಒಡನೆಯೇ ಶ್ರೀನಿವಾಸಚಾರ್ಯರು ಉತ್ತರಾಪೋಷಣ ತೆಗೆದುಕೊಂಡು '' ಈ ಅನ್ನವನ್ನು ಮತ್ತು ಅವರು ಕಳುಹಿಸಿದ ಅಕ್ಕಿಯನ್ನು ಅವರ ಮನೆಗೆ ಕಳುಹಿಸಿಕೊಡು, ಇಷ್ಟವಾಗದಿದ್ದರೆ ನೀನೂ ಅವರ ಮನೆಗೇ ಹೋಗಿಬಿಡು. ಊರಲೆಲ್ಲಾ ಹಸಿವಿನಿಂದಿರುವವರು ಗಂಜಿ ಕುಡಿಯುತ್ತಿದ್ದರೆ,ಇಂತಹ ಅನ್ನ ನನ್ನ ಗಂಟಲಲ್ಲಿ ಇಳಿಯುವುದಿಲ್ಲ" ಎಂದು ಹೇಳಿ ಉತ್ತರೀಯವನ್ನು ಹೊದ್ದು ಹೊರಟೇ ಬಿಟ್ಟರಂತೆ. ನಿಸ್ವಾರ್ಥ ಸೇವಾ ಮನೋಭಾವದ ಇಂತಹ ಮಹನೀಯರು ಇಂದು ಎಲ್ಲಿದ್ದಾರೋ ?

ರವಿ ತಿರುಮಲೈ

Monday, 5 October 2015

ಮೋಕ್ಷ

ಮೋಕ್ಷ 
     
ಭಾರತೀಯ ತತ್ವಶಾಸ್ತ್ರದ ಅನುಸಾರ,ಪ್ರಪಂಚವನ್ನು ಸಂಸಾರ ಎಂದರೆ ನೋವು ಮತ್ತು ಸಂಕಷ್ಟಗಳ ಸುಳಿ ಎಂದು ಕರೆದಿದ್ದಾರೆ. "ಸಂಸಾರ" ಎಂಬ ಸಂಸೃತ ಪದದ ಅರ್ಥ, ಬೇರೆ ಬೇರೆ ಲೋಕಗಳಲ್ಲಿ ಆತ್ಮದ ನಿರಂತರ ಪಯಣ ಅಥವಾ ಪರ್ಯಾಯವಾಗಿ ಜನನ ಮರಣಗಳ ನಿರಂತರ ಚಕ್ರ ಎಂದರ್ಥ. ಅಲಂಕಾರಿಕವಾಗಿ "ಸಂಸಾರ ಸಾಗರ"ಅಥವಾ "ಭವ ಸಾಗರ" ಎಂದೂ "ಪ್ರಾಪಂಚಿಕ ವ್ಯವಹಾರಗಳ ಕಡಲು" ಎಂದೂ ಕರೆದಿದ್ದಾರೆ. ಮಾನವನಿಗೆ ಇದನ್ನು ದಾಟಲು ಆತ್ಮಜ್ಞಾನ ಉಂಟಾಗಬೇಕು ಅಥವಾ ಪರಮಾತ್ಮನ ಕೃಪೆಯಾಗಬೇಕು. 

'ಆತ್ಮ'ವು ಗೊತ್ತು ಗುರಿಯಿಲ್ಲದ, ನಿರಂತರ ಜೀವನ್ಮರಣಗಳ ಸಂಕೋಲೆಯಲ್ಲಿ ಸಿಲುಕಿ, ತೊಳಲಿ, ಬಳಲಿ ಗಮ್ಯವನ್ನು ಸೇರಲಾಗದೆ, ಅನ೦ತಾನಂದವನ್ನು ಪಡೆಯದೆ,ಮತ್ತೆ ಮತ್ತೆ ಹುಟ್ಟಲು,ನಾಶವಾಗುತ್ತದೆ. ಈ ಭವಸಾಗರವನ್ನು ದಾಟಲು ಆತ್ಮ ಮಾಡುವ ಪ್ರಯತ್ನಗಳನ್ನೇ ವಸ್ತುವಾಗಿಟ್ಟುಕೊಂಡು ಸಾವಿರಾರು ಶ್ಲೋಕಗಳು ಮತ್ತು ಕಥೆ ಪುರಾಣಗಳ ಸಾಹಿತ್ಯ ನಮಗೆ ವಿಫುಲವಾಗಿ ಸಿಗುತ್ತದೆ. 

ಕೆಲವರಿಗೆ ಇಂದ್ರಿಯ ಸುಖ ಭೋಗಗಳಲ್ಲೇ ಆನಂದ ಸಿಗುತ್ತದೆ ಎಂಬ ಭ್ರಮೆ. ಮತ್ತೆ ಕೆಲವರಿಗೆ ಹಣ, ಹೆಸರು, ಅಧಿಕಾರ, ಅಂತಸ್ತು ಮುಂತಾದವುಗಳಲ್ಲಿ ಆನಂದ ಉಂಟೆಂದು ಭ್ರಾಂತಿ. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಸಾಹಿತ್ಯ,ವಿಜ್ಞಾನ,ಗ್ರಂಥಾಭ್ಯಾಸದಲ್ಲೇ ಆನಂದ. ಆದರೆ ಈ ಎಲ್ಲ ರೀತಿಯ ಜ್ಞಾನವು ಮಾನವನಿಗೆ ಈ ಜನನ ಮರಣದ ಚಕ್ರದಿಂದ  ಮುಕ್ತಿ ಕೊಡುವುದಿಲ್ಲ. 

ಮುಕ್ತಿ ಎಂದರೇನು?

ಹಾಗಾದರೆ ಮುಕ್ತಿ ಎಂದರೇನು? ಏನು ಮಾಡುವುದರಿಂದ ಮನುಷ್ಯ 'ಮುಕ್ತ' ನಾಗುತ್ತಾನೆ. ಈ ಪ್ರಶ್ನೆಗೆ ಭಾರತೀಯ ತತ್ವ ಶಾಸ್ತ್ರದ ಬೇರೆ ಬೇರೆ ಶಾಖೆಗಳು ಬೇರೆ ಬೇರೆ ಉತ್ತರಗಳನ್ನು ನೀಡಿವೆ. ಎಲ್ಲಾ ಮೀಮಾಂಸೆಗಳೂ ಭಿನ್ನ ಭಿನ್ನವಾಗಿದ್ದರೂ, 'ಜೀವಿ' ಮೌಡ್ಯವನ್ನು ತೊರೆದು ಪರಮಾತ್ಮ ವಸ್ತುವಿನ ಸತ್ಯ ಸ್ವರೂಪವನ್ನು ಅರಿತಾಗ ಜೀವಿಗೆ ಮುಕ್ತಿ ಎಂಬ ವಿಚಾರದಲ್ಲಿ ಎಲ್ಲ ಶಾಖೆಗಳಲ್ಲೂ ಏಕೀಭಾವವುಂಟು.   

ಹಾಗಾದರೆ ಮೌಡ್ಯವೆಂದರೇನು? ಆತ್ಮದ ಸ್ವರೂಪವೇನು? ಆತ್ಮ ಸ್ವರೂಪದ ಜ್ಞಾನ ಉಂಟಾಗದಂತೆ ಈ ಮನಸ್ಸು-ಬುಧ್ಧಿಗಳಿಗೆ ಈ ಮೌಡ್ಯವು ಹೇಗೆ ಮತ್ತು ಏಕೆ ಕವಿಯುತ್ತದೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನೀಯುತ್ತಾ ಬೇರೆ ಬೇರೆ ಬೋಧಕರು, ಆಚಾರ್ಯರು ಮತ್ತು ಮತ ಪ್ರತಿಪಾದಕರು ತಮ್ಮದೇ ರೀತಿಯಲ್ಲಿ ಈ ಪ್ರಶ್ನೆಗಳಿಗೆ ವ್ಯಾಖ್ಯಾನ ಮಾಡಿದ್ದಾರೆ. ಹಾಗಾಗಿ ಆತ್ಮಜ್ಞಾನವನ್ನು ಪಡೆದು ಮೋಕ್ಷ ಸಾಧಿಸಲಿಕ್ಕೂ ಸಹ ಮಾರ್ಗಗಳು ವಿಭಿನ್ನವಾಗಿ ಕಾಣುತ್ತವೆ. 

ದ್ವೈತ ಸಿಧ್ಧಾಂತದ ಪ್ರಕಾರ ಮುಕ್ತಿ: 

ಈ ಸ್ಥೂಲ ಶರೀದಲ್ಲಿರುವತನಕ ಆತ್ಮಕ್ಕೆ ಮುಕ್ತಿಯಿಲ್ಲ. ಆತ್ಮ ಶರೀರ ತ್ಯಜಿಸಿದರೆ ಮುಕ್ತಿ. ಆದರೆ ಮನಸ್ಸು ಬುಧ್ಧಿಗಳನ್ನು ಶುಧ್ಧಗೊಳಿಸುವ ಪ್ರಕ್ರಿಯೆಗೆ ಶರೀರವು ಬೇಕೇ ಬೇಕು. ಶರೀರದ ಮಾಧ್ಯಮದಿಂದ ಮನಸ್ಸು ಬುಧ್ಧಿಗಳನ್ನು ಶುಧ್ಧೀಕರಿಸಿದರೆ,'ಜೀವಿ' ಮೋಕ್ಷಕ್ಕೆ ಪಾತ್ರನಾಗುತ್ತಾನೆ. ಸಾಧಕ ಅನುಸರಿಸಬೇಕಾದ ಆಧ್ಯಾತ್ಮಿಕ ನಿಯಮಗಳು ಮತ್ತು ಗ್ರಂಥಾದೇಶಗಳು ಯಾವುವೆಂದರೆ, ಮನಸ್ಸು, ಬುದ್ಧಿ, ಕರ್ಮ ಮತ್ತು ವಾಕ್ಕಿನ ಬಾಹ್ಯ ಮತ್ತು ಆಂತರಿಕ ಶುಧ್ಧಿ, ನೈತಿಕತೆ ಮತ್ತು ಶುದ್ಧತೆಯಿಂದ ಕೂಡಿದ, ಅಹಿಂಸೆಯನ್ನು ಪಾಲಿಸುತ್ತಾ  ವಿಷಯಗಳಿಗೆ ಅಂಟದ  ಸರಳವಾದ  ಜೀವನ ನಡೆಸುವುದು, ತಾನು ನಂಬಿದ ದೈವದಲ್ಲಿ  ಸಂಪೂರ್ಣ ಶರಣಾಗತಿ, ತಾಳ್ಮೆ, ಭಕ್ತಿ ಪೂರಿತ ಪೂಜೆ ಮತ್ತು ಧ್ಯಾನ ಇತ್ಯಾದಿ. ಆದರೆ ಇಂತಹ ಅತೀ ಕಷ್ಟಕರವಾದ ಜೀವನ ಶೈಲಿಯನ್ನು ಪಾಲಿಸುತ್ತಾ ಹೋದರೆ ದೈವ ಕೃಪಯಿಂದ, ಜೀವನಿಗ ಮುಕ್ತಿ ಸಿಗಬಹುದು.  ಜೀವಿಗೆ ಸಿಗುವ ಮುಕ್ತಿಯು ನಾಲ್ಕು ವಿಧವಾಗಿರುತ್ತದೆನ್ನುತ್ತದೆ ದ್ವೈತ ಸಿಧ್ಧಾಂತ. ಅವುಗಳಾವುದೆಂದರೆ : 

ಸಾಲೋಕ್ಯ - ಇಷ್ಟದೇವತಾ ಲೋಕವನ್ನು ಸೇರಿ ಆನಂದಿಸುವುದು. 
ಸಾಮೀಪ್ಯ - ಪರಮಾತ್ಮ ವಸ್ತುವಿನ ಹತ್ತಿರವಿದ್ದು ಆನಂದಿಸುವುದು. 
ಸಾರೂಪ್ಯ - ದೇವತಾರೂಪವನ್ನೇ ಪಡೆದು ಆನಂದಿಸುವುದು. 
ಸಾಯುಜ್ಯ - ಪರಮಾತ್ಮ ವಸ್ತುವನ್ನೇ ಸೇರಿ ಆನಂದಿಸುವುದು.  

ವಿಶಿಷ್ಟಾದ್ವೈತದ ಪ್ರಕಾರ ಮುಕ್ತಿ : 

ವೇದಾಂತದ ಈ ಶಾಖೆಯೂ ಜೀವಿಗೆ ದೇಹಸಂಬಂಧವಿರುವವರೆಗೂ ಮುಕ್ತಿ ಇಲ್ಲ ಎಂಬುದನ್ನು ನಂಬುತ್ತದೆ. ಮೃತ್ಯುವಿನ ನಂತರವೇ ಜೀವನಿಗೆ ಮುಕ್ತಿ ಎನ್ನುತ್ತದೆ ವಿಶಿಷ್ಟಾದ್ವೈತ. ಹೆಚ್ಚೂ ಕಡಿಮೆ, ಮೋಕ್ಷದ ತತ್ವ, ದ್ವೈತ ಸಿಧ್ಧಾಂತದ ರೀತಿಯೇ ಇದೇ. ಆದರೆ ಈ ಶಾಖೆ ಮುಕ್ತಿಯ ಬೇರೆ ಬೇರೆ ಸ್ತರಗಳನ್ನು ಸೂಚಿಸಿಲ್ಲ. ಜೀವವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುತ್ತಾ, ಪರಮಾತ್ಮನಿಗೆ ಸಂಪೂರ್ಣ ಶರಣಾಗತನಾದರೆ, ಮುಕ್ತಿ ಪಡೆದು, ಶ್ರೀಮನ್ಮಹಾವಿಷ್ಣುವಿನ ವೈಕುಂಠವನ್ನು ಸೇರಿ ತನ್ನ ಇಷ್ಟದೇವತಾ ಸೇವೆಯಲ್ಲಿ ನಿರಂತರ ಆನಂದವನ್ನು ಪಡೆಯುತ್ತದೆ ಎಂದು ಹೇಳುತ್ತದೆ ವಿಶಿಷ್ಟಾದ್ವೈತ. ಅಲ್ಲಿ ಜೀವಿಯು ಸೃಷ್ಟಿ, ಸ್ಥಿತಿ ಮತ್ತು ಲಯದಂತಹ ಗುಣಗಳನ್ನು ಹೊರತು, ಮಿಕ್ಕೆಲ್ಲ ದೈವ ಶಕ್ತಿಯನ್ನು ಪಡೆದು ಕೊಳ್ಳುತ್ತದೆ. ಮುಕ್ತಿಗೆ ಭಕ್ತಿಯೋಗವೊಂದೇ ಮಾರ್ಗವೆನ್ನುತ್ತದೆ ವಿಶಿಷ್ಟಾದ್ವೈತ. ಕರ್ಮ ಮತ್ತು ಜ್ಞಾನಯೋಗಗಳು ಕೇವಲ ಸಾಧಕನನ್ನು ಭಕ್ತಿ ಯೋಗಕ್ಕೆ ಸೇರಿಸುವ ಸಾಧನಗಳೆಂದು ಅಭಿಪ್ರಾಯಪಡುತ್ತದೆ, ವಿಶಿಷ್ಟಾದ್ವೈತ.  
  
ಆದ್ವೈತದ ಪ್ರಕಾರ ಮುಕ್ತಿ :

ಜೀವಿಗೆ ತನ್ನ ಸ್ವ-ರೂಪವನ್ನು ಅರಿತುಕೊಳ್ಳಲು ಬಾಧಕವಾಗಿ, ಕಾರ್ಮೋಡದಂತೆ ಆವರಿಸಿರುವ 'ಅಜ್ಞಾನ ಮತ್ತು ಅವಿದ್ಯೆ'ಯನ್ನು ತೊಡೆದುಕೊಂಡಾಗಲೇ ಜೀವಿಗೆ ಸಂಸಾರ ಸಾಗರದಿಂದ ಮುಕ್ತಿ ಎನ್ನುತ್ತದೆ ಅದ್ವೈತ ಸಿಧ್ಧಾಂತ. ಅವಿದ್ಯೆಯ ಕಾರಣದಿಂದಾಗಿ ಮತ್ತು ಪ್ರಪಂಚದ ಸಂಪರ್ಕದಿಂದಾಗಿ, ಒಂದೇ ಆಗಿರುವ ಜೀವಾತ್ಮ ತನ್ನನ್ನು ತಾನೇ ಬೇರೆ ಎಂದು ಗುರುತಿಸಿಕೊಂಡು,ಜನನ ಮರಣಗಳ ಸುಳಿಯಲ್ಲಿ ಸಿಕ್ಕು ತೊಳಲಾಡುತ್ತದೆ. 

ಚತುರ್ವಿಧ ಯೋಗದಿಂದ ವ್ಯಕ್ತಿ ವಸ್ತು ವಿಶ್ಲೇಷಣಾ ಮತ್ತು ತಾರತಮ್ಯ ಜ್ಞಾನದಿಂದ, ತ್ಯಾಗವನ್ನು ಅಭ್ಯಸಿಸುತ್ತಾನೆ. ತ್ಯಾಗದಿಂದ ಮನದ ಕಶ್ಮಲಗಳೆಲ್ಲ ತೊಲಗಿ ಶುದ್ಧವಾಗುತ್ತದೆ. ಶುದ್ಧಮನಸ್ಸು, ಪರಬ್ರಹ್ಮವಸ್ತುವಿನಲ್ಲಿ ಆಳವಾದ ಧ್ಯಾನದಲ್ಲಿ ತನ್ನನ್ನು ತೊಡಗಿಸಿಕೊಂಡು, ಆತ್ಮಜ್ಞಾನವನ್ನು ಅಥವಾ ಬ್ರಹ್ಮ ಜ್ಞಾನವನ್ನು ಪಡೆದುಕೊಂಡು, ಅವಿದ್ಯೆ ಮತ್ತು ಅಜ್ಞಾನವನ್ನು ತೊಲಗಿಸಿಕೊಂಡು, ಪರಬ್ರಹ್ಮ ವಸ್ತುವಿನೊಡನೆ, ಏಕತ್ವವನ್ನು ಅನುಭವಿಸುತ್ತಾ, ಆ  ಪರಮಾತ್ಮ ವಸ್ತುವಿನೊಡನೆ ಏಕೀಭಾವವನ್ನು ಅನುಭವಿಸುತ್ತಾ, ಸಂಪೂರ್ಣ ಜ್ಞಾನ ಮತ್ತು ಆನಂದವನ್ನು ಅನುಭವಿಸುತ್ತಾನೆ. 

ಸಾಂಖ್ಯ ತತ್ವಶಾಸ್ತ್ರ  ಸಿದ್ಧಾಂತದ ಪ್ರಕಾರ ಮುಕ್ತಿ ಅಥವಾ ಮೋಕ್ಷ 

ಈ ಶಾಖೆಯು ಎರಡು ಸಂಪೂರ್ಣ ಸತ್ಯಗಳನ್ನು ಅಧಾರವನ್ನಾಗಿ ಇಟ್ಟುಕೊಂಡಿದೆ. ಒಂದು ಆತ್ಮ ಅಥವಾ ಚೇತನದ ರೂಪದಲ್ಲಿರುವ ಚೇತನಾತ್ಮಕ ಪುರುಷ ಮತ್ತು ಎರಡು, ಉನ್ನತ ವಿಕಸಿತ ಸ್ಥರದಲ್ಲಿರುವ  ಜಡ ಪ್ರಕೃತಿ. ಇಲ್ಲಿ ಪುರುಷ ಎಂದರೆ ಶುದ್ಧ ಚೇತನ, ಆದರೆ ಅವಿವೇಕದ ಕಾರಣ ಅದು ತಪ್ಪಾಗಿ ತನ್ನನ್ನು ತಾನು, ಈ ಜಗತ್ತಿನೊಂದಿಗೆ, ಅಂದರೆ ಜಡ ಪ್ರಕೃತಿಯೊಂದಿಗೆ, ಗುರುತಿಸಿಕೊಂಡು, ಪ್ರಕೃತಿ ಸಂಬಂಧದಿಂದ ಸಂತೋಷ, ಆನಂದ, ನೋವು, ಸಂಕಟ ಮುಂತಾದ ಭಾವಗಳನ್ನು ಅನುಭವಿಸುತ್ತದೆ. ತಾನು ಈ ಪ್ರಕೃತಿಯಿಂದ ಭಿನ್ನ ಎನ್ನುವ ಜ್ಞಾನ ಪ್ರಾಪ್ತಿಯಾದಾಗ, ಆತ್ಮ ಮುಕ್ತಿಯನ್ನು ಪಡೆಯುತ್ತದೆ.  ಯಾವ ಜ್ಞಾನದಿಂದ, ಚೇತನ ಯುಕ್ತಾಯುಕ್ತತೆಯನ್ನರಿತು, ಜಗತ್ತಿನೊಂದಿಗಿನ ಮಮಕಾರದ ಭಾವದಿಂದ ಹೊರಬರುತ್ತದೋ ಅದು 'ವಿವೇಕ ಜ್ಞಾನ'.  ಎಂದು, ಜೀವ ತನ್ನನ್ನು ತಾನು ಪ್ರಕೃ ತಿಯೊಂದಿಗಲ್ಲದೆ,   ಪ್ರಕೃತಿಯಲ್ಲಿ ಹಲವಾರು ನಾಮ ರೂಪಗಳೊಂದಿಗೆ ಪ್ರಕಟವಾಗಿರುವ 'ಪುರುಷ' ನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತದೋ, ಅಂದು ಜೀವನಿಗೆ ಮುಕ್ತಿ ಸಿಗುತ್ತದೆ. 'ಪ್ರಕೃತಿ ಮತ್ತು ಪುರುಷ' ನ ನಡುವಿನ ಅಂತರವನ್ನು ನಿಚ್ಚಳವಾಗಿ ಅರಿತಾಗ 'ಜೀವ'ನಿಗೆ ಪರಮಾನಂದವುಂಟಾಗುತ್ತದೆ. ಹೀಗೆ ಸಾಂಖ್ಯ ಶಾಸ್ತ್ರವು  ಜ್ಞಾನಯೋಗ ಮತ್ತು  ಕರ್ಮಯೋಗಗಳ ಮೂಲಕ 'ಮುಕ್ತಿ', ಎಂದು ಪ್ರತಿಪಾದಿಸುತ್ತದೆ.ಅಂತಹ ಮುಕ್ತಿ 'ಜೀವ'ನಿಗೆ ನೋವು ಮತ್ತು ಸಂಕಟದಿಂದ ಸಂಪೂರ್ಣ ಬಿಡುಗಡೆಯನ್ನು ನೀಡುತ್ತದೆ. ಅಂತಹ ಸ್ಥಿತಿಗೆ ' ಕೈವಲ್ಯ'ವೆಂದು ಹೆಸರು.  ಅದ್ವೈತ ಸಿದ್ಧಾಂತದಲ್ಲಿ ಪ್ರತಿಪಾದಿಸಿದಂತೆ, ಸಾಂಖ್ಯ ಸಿದ್ಧಾಂತವೂ ಜೀವಂತವಾಗಿರುವಾಗಲೇ ಮುಕ್ತ  ಸ್ಥಿತಿಯನ್ನು ಒಪ್ಪಿಕೊಳ್ಳುತ್ತದೆ. ಅದು 'ಜೀವನ್ಮುಕ್ತ' ಸ್ಥಿತಿ, ಎಂದರೆ ಜೀವಂತವಾಗಿರುವಾಗಲೇ ' ಮುಕ್ತ'ವಾದ ಸ್ಥಿತಿ.


ಶ್ರೀಮದ್ಭಗವದ್ಗೀತೆಯಲ್ಲಿ (೧೩-
 ೨)  "ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ। ಏತದ್ಯೋ ವೇತ್ತಿ ತಂ  ಪ್ರಾಹು: ಕ್ಷೇತ್ರಜ್ಞ ಇತಿ ತದ್ವಿದಃ ।।" ಎನ್ನುತ್ತಾನೆ ಶ್ರೀ ಕೃಷ್ಣ. ಎಂದರೆ ನಿಜವಾದ ಜ್ಞಾನವೆಂದರೆ ' ಕ್ಷೇತ್ರದ ಜ್ಞಾನ' ಎಂದರೆ 'ನೆಲೆ' ಯ ಜ್ಞಾನ. ಯಾರು 'ಚೇತನ ಮತ್ತು ಜಡ' ದ ಜ್ಞಾನವನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸದ ನಿಚ್ಚಳವಾದ ಜ್ಞಾನವನ್ನು ಹೊಂದಿರುತ್ತಾನೋ, ಅವನನ್ನು 'ಕ್ಷೇತ್ರಜ್ಞ'  ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಯಾವುದನ್ನು 'ವಸ್ತು' ವೆಂದು ರೂಪ ಮತ್ತು ಹೆಸರುಗಳಿಂದ ಗುರುತಿಸುತ್ತಾರೋ ಅದನ್ನು ' ಕ್ಷೇತ್ರ'ವೆಂದೂ ಮತ್ತು ಯಾವುದು ಈ ಕ್ಷೇತ್ರದ ಒಳಗೂ ಹೊರಗೂ ವ್ಯಾಪಕವಾಗಿದೆಯೋ ಮತ್ತು ಯಾವುದರ ಸಹಾಯದಿಂದಲೇ ನಾವು ಕ್ಷೇತ್ರವನ್ನು ಅರಿಯಲಾಗುವುದೋ, ಅದನ್ನು ' ಕ್ಷೇತ್ರಜ್ಞ' ಎನ್ನಲಾಗಿದೆ.  

ಸಾಧಕನು, ರೂಪ ಮತ್ತು ನಾಮಗಳನ್ನು ಹೊಂದಿದ ದೇಹದಲ್ಲಿದ್ದರೂ, ತನ್ನ ಮತ್ತು ತಾನಿರುವ ದೇಹದ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಸ್ಫುಟವಾಗಿ ಅರಿತಾಗ ಮತ್ತು ತನ್ನನ್ನು ತಾನು ಚೇತನವೆಂದು ಅರಿತಾಗ, 'ಆತ್ಮಜ್ಞಾನಿ'ಯಾಗುತ್ತಾನೆ. ಅಂತಹ ಆತ್ಮಜ್ಞಾನದಿಂದ ಸಾಧಕ ' ಮುಕ್ತ'ನಾಗುತ್ತಾನೆ, ಯೋಗಿ'ಎನಿಸಿಕೊಳ್ಳುತ್ತಾನೆ.    

ರವಿ ತಿರುಮಲೈ 

Friday, 21 August 2015

ನಾನು - ನೀನು

ನಾನು ನಾನೇ, ನೀನು ನೀನೇ
ನಾನು, ನೀನು ಬೇರಲ್ಲದಿದ್ದರೂ 
ನೀನು ನಾನಾಗಲೊಲ್ಲೆ 
ನಾನು ನೀನಾಗಲಾರೆ

ನನ್ನಿಂದಲೇ ನೀನಾದರೂ  
ನನ್ನಿಂದ ತೀರ ಬೇರಾದೆ 
ನಿನಗೆ ನಾನಾಗಲು 
ಅದೇಕೋ ಮನಸೇ ಬಾರದಿದೆ 

ನಿನ್ನ ಆಸೆಗಳೇ ಬೇರೆ 
ನನ್ನ ಆಶಯಗಳೇ ಬೇರೆ 
ನೀನವುಗಳಿಗೆಲ್ಲ ಅಂಟಿದ್ದೀಯೆ 
ನಾ ಅಂಟನೆಲ್ಲಾ ಮೆಟ್ಟಿ ನಿಂತಿದ್ದೇನೆ 

ನಾನು ಸತ್ಯ, ನೀನು ಮಿಥ್ಯ 
ನನಗರಿವುಂಟು,ನಿನಗರಿವಿಲ್ಲ 
ನಿನಗರಿವುಂಟಾಗುವವರೆಗೆ 
ಕಾಯದೆ, ಬೇರೆ ದಾರಿಯೆನಗಿಲ್ಲ 

ತೊಳೆದುಕೋ ಅಂಟನ್ನು 
ಬಿಡಿಸಿಕೊ ನಂಟನ್ನು 
ಬಂದು ಸೇರು ನನ್ನ 
ಅಳಿಸಿಹಾಕು ನಿನ್ನ 

ನಾ ನೀನಾಗಲು ಸಾಧ್ಯವೇ ಇಲ್ಲ 
ನೀ ನಾನಾದರೆ, 'ಸಾಧನೆ'ಯೇ ಎಲ್ಲ 
ನೀ, ಎನ್ನೊಳಗೆ  ಸೇರೆ 
ನಾನು ನೀನು ಒಂದಾದರೆ

ಅಂದೇ ಮುಕ್ತಿ,  ನನಗೂ,  ನಿನಗೂ  

ರವಿ ತಿರುಮಲೈ 

Wednesday, 8 April 2015

ಮಂದ ಮತಿಯೂ ನಾನು


ಮಂದ ಮತಿಯು ನಾನು
ನಿನ್ನರಿಯೆ ಸಾಧ್ಯವೇನು
ಮಹಾ ಮಹಿಮನೂ ನೀನು
ಮತಿಭ್ರಾಂತನೂ ನಾನು ।।ಮಂದ ಮತಿಯು।।

ನಾನೇ ಎಲ್ಲ ಗೈವೆನೆಂದು
ನೆನೆದು ನಲಿವ ನರನು ನಾನು
ಎಲ್ಲಕ್ಕೆಲ್ಲಕು ನೀನೆ ಮೂಲ-
ವೆಂಬ ತತ್ವ ಅರಿವಯದವನು ।।ಮಂದ ಮತಿಯು।।

ಆರು ದುಷ್ಟರನಾಶ್ರಯಿಸಿ
ಭ್ರಾಂತಿಯಿಂದ ಬಾಳ ನಡೆಸಿ
ಮಿತ್ಯ ಬಿಡದೆ ಸತ್ಯದೆಡೆಗೆ
ದಿಟ್ಟ ನಡೆಯಲಿಡಲಾರೆನು ।।ಮಂದ ಮತಿಯು।।

ಸತಿ ಸುತರೆ ಸತ್ಯವೆಂದು
ಈ ಜನುಮವೇ ನಿತ್ಯವೆಂದು
ಭ್ರಮೆಯ ಭಾವದಿಂದಲೇ
ಬದುಕ ದೂಡುತಿಹೆನು ನಾನು ।।ಮಂದ ಮತಿಯು।।

ಸೃಷ್ಟಿಕರ್ತನೂ ನೀನು
ಸೃಷ್ಟಿಯೊಂದಂಶ ನಾನು
ಕಷ್ಟದಲ್ಲಷ್ಟೆ ನಿನ್ನ ನೆನೆವ
ಹೀನ ಮನುಜ ನಾನು ।।ಮಂದ ಮತಿಯು।।

ದೇವ ದೇವ ಪೊಡಮೊಡುವೆ
ವರವನೆಂದು ಎನಗೆ ಕೊಡುವೆ
ರತಿ ಪತಿ ಪಿತನೆ ನಿನ್ನ
ಪಾದ ಬಿಡದೆ ನಂಬುವಂತೆ ।।ಮಂದ ಮತಿಯು।।