ಗೋಪಿಯ ವಿರಹ ಗೀತೆ

ಬೃಂದಾವನದಲ್ಲಿ ಶ್ರೀ ಕೃಷ್ಣನ ಸಾನ್ನಿಧ್ಧ್ಯವೇ ಎಲ್ಲರಿಗೂ ಚೈತನ್ಯದಾಯಕವಾಗಿತ್ತು. ಗೋಪಾಲಕರು , ಗೋವುಗಳು, ಗೋಪಿಕಾಸ್ತ್ರೀಯರು, ದೊಡ್ಡವರು, ಚಿಕ್ಕವರು, ಕಡೆಗೆ ಗಿಡ, ಮರ, ಹೂವು ಹಣ್ಣು ಕಾಯಿ ಎಲ್ಲಕ್ಕೂ ಕೃಷ್ಣನ ಉಪಸ್ಥಿತಿ, ಜೀವಿಕೆಗೆ ಸ್ಪೂರ್ತಿ ನೀಡುತ್ತಿತ್ತು. ಒಂದು ಕ್ಷಣವೂ ಕೃಷ್ಣನನ್ನು ಅಗಲಿ ಇರಲು ಆಗುತ್ತಿರಲಿಲ್ಲ. ಯಶೋದೆ ಮತ್ತು ಗೋಪಿಕಾಸ್ತ್ರೀಯರಿಗಂತೂ ಅವನ ಅಗಲಿಕೆ ಸಹಿಸಲಸದಳ. ವಿರಹವನ್ನು ತಾಳಲಾರದ ಒಬ್ಬ ಗೋಪಿಕೆಯ ಅಳಲು ಮತ್ತೊಬ್ಬಳಿಗೆ ಹೇಗೆ ನಿವೇದನೆಯಾಗುತ್ತದೆಂದು ಈ ಪದ್ಯದಲ್ಲಿ ಕಾಣುತ್ತದೆ.
ಕೇಳೆ ಸಖೀ ವಿರಹದಾ ಕಥೆಯಾ
ಕೃಷ್ಣನಗಲಿಕೆಯಾ ವ್ಯಥೆಯಾ " ಕೇಳೆ ಸಖೀ"
ಬೃಂದಾವನದಾ ಹಾದಿಗಳೆಲ್ಲವು
ಕಲರವವಿಲ್ಲದೆ ಮೌನವಾಗಿವೆ
ವೇಣುಗಾನದ ಮಾರ್ದನಿಯಿಲ್ಲದೆ
ನಲಿಯುವ ಮನಸು ಮೂಕವಾಗಿದೆ
ಅರಿಯುವನೇನೆ ವಾರಿಜಾಕ್ಷನು
ತಳಮಳಿಸುವ ಈ ಮನದ ವ್ಯಥೆಯಾ " ಕೇಳೆ ಸಖೀ"
ಅವನೊಡನಾಟದಿ ಅರಳುವ ಹೂಗಳು
ಪೇಲವಗೊಂಡು ಮುದುಡಿ ನಿಂತಿವೆ
ಕೃಷ್ಣನ ಕರಗಳ ಸ್ಪರ್ಶಕೆ ಮಿಡಿದು
ಪುಳಕಗೊಳ್ಳುವ ಗೋಗಳು ನೊಂದಿವೆ
ಕೇಳುವನೇನೆ ಕಂಜದಳಾಕ್ಷನು
ಕನಲುವ ಮನದಾ ಮಿಡಿತವನು " ಕೇಳೆ ಸಖೀ"
ಝುಳು ಝುಳು ಹರಿವ
ಯಮುನೆಯ ಹರಿವು
ಸ್ತಬ್ಧವಾಗಿ ನಿಂತಿಹುದಲ್ಲೇ
ಕರುಡುಗಟ್ಟಿದಾ ವಿರಹದ ನೋವೆಲ್ಲಾ
ಕಣ್ಣೀರಾಗಿ ಹರಿದಿದೆಯಲ್ಲೇ
ಮಿಡಿಯುವನೇನೆ ಮುರಳೀ ಲೋಲನು
ಮೋಹನ ಮುರಳೀ ಗಾನದಿಂದ " ಕೇಳೆ ಸಖೀ"
ಈ ಹಾಡನ್ನು ನೀವು "ಬಾಗೇಶ್ರೀ" ರಾಗದಲ್ಲಿ ಹಾಡಿದರೆ, ಹಾಡಿನ ಮೂಲ ಭಾವ ಸೂಕ್ತವಾಗಿ ವ್ಯಕ್ತಪಡಿಸಬಹುದು ಎಂದು ನನ್ನ ನಂಬಿಕೆ.